ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೇನು ಹೇಳುತ್ತಾರೆ?

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಮಹಿಳೆಯರ ವಿರುದ್ದ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಅವರು ತೊಡುತ್ತಿರುವ ತುಂಡುಡುಗೆಗಳೇ ಕಾರಣ ಎಂಬ ಅಭಿಪ್ರಾಯ ಹೊಸತೇನಲ್ಲ.  ಇದಕ್ಕೆ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ ಅವರೂ ದನಿಗೂಡಿಸಿದ್ದಾರೆ. ಆದರೆ ಹೆಣ್ಣು ಧರಿಸುವ ಬಟ್ಟೆಗೂ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ ಮಹಿಳೆಯರು. ವಸ್ತ್ರಸಂಹಿತೆ ಜಾರಿಯಾದ ಮಾತ್ರಕ್ಕೆ ಆಕೆಯ ಮೇಲೆ ನಡೆಯುವ ಅತ್ಯಾಚಾರಗಳು ಕಡಿಮೆಯಾಗುತ್ತದೆ ಎಂಬ ಮಾತನ್ನು ಅವರು ಒಪ್ಪಲು ತಯಾರಿಲ್ಲ. ಈ ಬಗ್ಗೆ ಕೆಲವು ಅಭಿಪ್ರಾಯಗಳು ಇಲ್ಲಿವೆ.

`ದೌರ್ಜನ್ಯ ಮನದ ಸ್ಥಿತಿ~

ಸಂದರ್ಭ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಧರಿಸುವ ಯಾವುದೇ ಉಡುಪು ಅಸಭ್ಯವಲ್ಲ.  `ಸಭ್ಯತನ~ದ ಬಟ್ಟೆಯಲ್ಲಿದ್ದಾಗಲೂ ರಸ್ತೆಯಲ್ಲಿ ನಡೆದು ಹೋಗುವ ಸಂದರ್ಭದಲ್ಲಿ  ಕೆಟ್ಟ ದೃಷ್ಟಿಯಲ್ಲಿ ನೋಡುವವರನ್ನು ಗಮನಿಸಿದ್ದೇನೆ. ಗ್ರಾಮೀಣ ಭಾಗದಲ್ಲಿ  ಸೀರೆ ಉಡುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವ ಬಹುತೇಕ ಪ್ರಕರಣಗಳು ಕಣ್ಮುಂದಿವೆ. ಹೀಗಿದ್ದಾಗ ದೌರ್ಜನ್ಯವೆಂಬುದು ಮನಸ್ಥಿತಿಯಲ್ಲಿದೇ ಹೊರತು ಉಡುವ ಉಡುಪಿನಲ್ಲಿ ಅಲ್ಲ. 
 -ಜಯಲಕ್ಷ್ಮಿ, ವಿದ್ಯಾರ್ಥಿನಿ

ಮನಸ್ಸಿಗೆ ಕಡಿವಾಣ ಬೇಕು

ಸಚಿವರು ಈ ಹೇಳಿಕೆ ನೀಡಿದ ಮರುದಿನವೇ 10 ವರ್ಷದ ಬಾಲಕಿಯ ಮೇಲೆ 80 ವರ್ಷದ ಮುದುಕನೊಬ್ಬ ಅತ್ಯಾಚಾರ ಮಾಡಿರುವ ವರದಿ ಪತ್ರಿಕೆಗಳಲ್ಲಿತ್ತು. 10 ವರ್ಷದ  ಮಗು ತನ್ನ ಯಾವ ಉಡುಪಿನಿಂದ ಮುದುಕನನ್ನು ಉದ್ರೇಕಗೊಳಿಸಲು ಸಾಧ್ಯವಿದೆ? ದೌರ್ಜನ್ಯದ ಮನಸ್ಥಿತಿಗೆ ಲಿಂಗಭೇದವಿಲ್ಲ.  ಅದು ದುರ್ಬಲ ಮನಸ್ಸುಗಳಲ್ಲಿ ಹುಟ್ಟುವುದರಿಂದ ಮನಸ್ಥಿತಿಗೆ ಕಡಿವಾಣ ಹಾಕಬೇಕಿದೆ. ಮಹಿಳೆಯರು ಧರಿಸುವ ಉಡುಪಿನಿಂದ ಪುರುಷರ ಕಾಮನೆಗಳು ಹೆಚ್ಚುತ್ತವೆ ಎಂಬ ಮಾತನ್ನು  ಒಪ್ಪಲು ಸಾಧ್ಯವಿಲ್ಲ. 
 -ಅಂಜಲಿ ರಾಮಣ್ಣ, ಲೇಖಕಿ

ಸಂಸ್ಕೃತಿಗೆ ತಕ್ಕ ಉಡುಗೆ ಇರಲಿ
ಹೆಣ್ಣುಮಕ್ಕಳು ಅಸಭ್ಯವಾಗಿರುವ ಉಡುಪನ್ನು ಧರಿಸಕೂಡದು. ಆತ್ಮಬಲವನ್ನು ಹೆಚ್ಚಿಸುವಂತಹ ಉಡುಪುಗಳು ನಿಜಕ್ಕೂ ಸಭ್ಯ. ಇತರರ ಆತ್ಮವಿಶ್ವಾಸವನ್ನೇ ಕುಂದಿಸುವಂತಹ ಉಡುಪುಗಳಿಗೆ ಭಾರತೀಯ ಸಮಾಜದಲ್ಲಿ ಮಾನ್ಯತೆಯಿಲ್ಲ. ನಮ್ಮ ಉಡುಪು ನಮ್ಮಿಚ್ಚೆಯಂತೆ ಇರಬೇಕು ಎನ್ನುವ ಅಭಿಪ್ರಾಯದ ನಡುವೆಯೂ ಸಂಸ್ಕೃತಿಯ ಆಶಯವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ. ದೇಹ ಪ್ರದರ್ಶಿಸುವ ಯಾವುದೇ ಉಡುಪು ಸ್ತ್ರೀ ಸಂಕುಲದ ನಿಂದನೆಗೆ ದಾರಿಯಾಗುತ್ತದೆ. ಹಾಗಾಗಿ ಮಹಿಳೆಯರು ಧರಿಸುವ ಉಡುಪಿನಿಂದಲೂ ದೈಹಿಕ ಕಿರುಕುಳದ ಸಮಸ್ಯೆಗಳು ಹೆಚ್ಚಾಗುತ್ತಿವೆ. 
 -ಪೂರ್ಣಿಮಾ ನಾಯಕ್, ಗೃಹಿಣಿ

ಆರೋಪದಲ್ಲಿ ಸ್ವಲ್ಪ ಸತ್ಯ ಇದೆ

ಮಹಿಳೆ ಧರಿಸುವ ಅಸಭ್ಯ ಉಡುಪುಗಳು ಪುರುಷರನ್ನು ಲೈಂಗಿಕ ಕಿರುಕುಳಕ್ಕೆ ಪ್ರೇರೇಪಿಸುತ್ತವೆ ಎಂಬ ಮಾತಿನಲ್ಲಿ ಸ್ವಲ್ಪ ಸತ್ಯಾಂಶವಿದೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಇದು ನಿಜವಾಗಿಲ್ಲ. ಹಾಗೆಂದು ಹೆಣ್ಣು ಮಕ್ಕಳ ಮೇಲೆ ಪೂರ್ಣವಾಗಿ ವಸ್ತ್ರಸಂಹಿತೆ ಹೇರಿದರೆ ಅವರ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ಕಾಲೇಜು ಕಲರ್‌ಫುಲ್ ಆಗಿರಬೇಕು. ಹಾಗಾಗಿ ಸಭ್ಯತೆಯ ಎಲ್ಲೆ ಮೀರದಂತೆ ಇರುವ ಉಡುಪುಗಳನ್ನು ಧರಿಸುವುದರಲ್ಲಿ ಅಡ್ಡಿಯಿಲ್ಲ. 
 -ಮಹೇಶ್, ವಿದ್ಯಾರ್ಥಿ 
 
ಕಾಲೇಜಿನಲ್ಲಿ ವಸ್ತ್ರಸಂಹಿತೆ ಬೇಡ

ಕಾಲೇಜು ಶಿಕ್ಷಣವೆಂಬುದು ನಾಲ್ಕುಗೋಡೆ ಮಧ್ಯೆ ಇರುವ ಶಿಕ್ಷಣವಲ್ಲ. ಸ್ವಾತಂತ್ರ್ಯ ಮತ್ತು ಸಮಾನತೆ ಧೋರಣೆಯನ್ನು ಪರಸ್ಪರ ಹಂಚಿಕೊಳ್ಳಬೇಕಾದ ಕಾಲಘಟ್ಟ. ಇನ್ನೂ ಕಾಲೇಜಿನಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದರೆ ಕಾಲೇಜು ಜೀವನವೇ ನೀರಸವೆನಿಸುತ್ತದೆ. ಅವರವರ ಇಚ್ಛೆಗೆ ಅನುಸಾರವಾಗಿ ಬಟ್ಟೆ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ.
 -ಶೃತಿ, ವಿದ್ಯಾರ್ಥಿನಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT