ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕ್ಷೇತ್ರಕ್ಕೆ ಇದು ಎರಡನೇ ಚುನಾವಣೆಯಷ್ಟೇ!

Last Updated 21 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ಷೇತ್ರಗಳ ಪುನರ್‌ ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ರಾಜಧಾನಿಯ ಹೃದಯ ಭಾಗದ ಜೊತೆಗೆ ಹೊರವಲಯದ ಗ್ರಾಮೀಣ ಪ್ರದೇಶವನ್ನೂ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ.

ಆಡಳಿತ ಯಂತ್ರದ ಕೇಂದ್ರ ಬಿಂದುವಾದ ವಿಧಾನಸೌಧ, ವಿಕಾಸಸೌಧ ಅಷ್ಟೆ ಅಲ್ಲದೆ ಶಾಸಕರ ಭವನ, ಹೈಕೋರ್ಟ್, ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಪ್ರಮುಖ ಪ್ರದೇಶಗಳು ಇದರ ವ್ಯಾಪ್ತಿ ಯಲ್ಲಿ ಸೇರಿರು­ವುದರಿಂದ ಕೇಂದ್ರ  ಲೋಕಸಭಾ ಕ್ಷೇತ್ರ  ಗಮನ ಸೆಳೆದಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಮೂರು ಮತ್ತು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ 5 ವಿಧಾನ­ಸಭಾ ಕ್ಷೇತ್ರಗಳನ್ನು 2008ರಲ್ಲಿ ಬೇರ್ಪ­ಡಿಸಿ, ಹೊಸದಾಗಿ ರಚನೆಯಾದ ಬೆಂಗ­ಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಸೇರಿಸ­ಲಾಯಿತು. ಇದರ ಬೆನ್ನಿಗೇ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ 2ರಿಂದ 3ಕ್ಕೆ ಏರಿತು.

ಈಗ ಕೇಂದ್ರ ಕ್ಷೇತ್ರದ ವ್ಯಾಪ್ತಿಗೆ ಬರುವ ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ವಿಧಾನ­ಸಭಾ ಕ್ಷೇತ್ರಗಳು ಹಿಂದೆ  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿದ್ದವು. ಇನ್ನು ಶಿವಾಜಿನಗರ, ಸಿ.ವಿ.ರಾಮನ್‌ನಗರ, ಸರ್ವಜ್ಞನಗರ, ಶಾಂತಿನಗರ, ಮಹದೇವಪುರ ಕ್ಷೇತ್ರಗಳು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು.

ಈಗ ಕೇಂದ್ರ ವ್ಯಾಪ್ತಿಯಲ್ಲಿರುವ ಕೆಲ ಪ್ರದೇಶಗಳು ಹಿಂದೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದವು ಎನ್ನುತ್ತಾರೆ ಈ ಕ್ಷೇತ್ರವನ್ನು ಚೆನ್ನಾಗಿ ಬಲ್ಲ ರಾಜಕೀಯ ಮುಖಂಡರು.

ಬೆಂಗಳೂರಿನ ಕೇಂದ್ರ ಪ್ರದೇಶಗಳನ್ನು ಈ ಕ್ಷೇತ್ರ ಹೆಚ್ಚಾಗಿ ಒಳಗೊಂಡಿದೆ. ಆದರೆ ನಗರವಾಸಿಗಳಿಗಿಂತ ಕೊಳೆ-­ಗೇರಿ­ಗಳು, ಬಡವರು ಮತ್ತು ಅಲ್ಪಸಂಖ್ಯಾತ ಸಮು­ದಾಯದ ಮತದಾರರು ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಕ್ಷೇತ್ರಗಳ ಪುನರ್‌ ವಿಂಗಡಣೆ ನಂತರ 2009ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಈ ಕ್ಷೇತ್ರದ ಮೊದಲ ಸಂಸದ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿಯ ಪಿ.ಸಿ.­ಮೋಹನ್‌ ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಎರಡನೇ ಬಾರಿಗೆ ಈ ಕ್ಷೇತ್ರದ ಟಿಕೆಟ್‌ ಕೈತಪ್ಪಿದೆ. ಕಳೆದ ಬಾರಿಯೂ ಅವರು ಸೆಂಟ್ರಲ್‌ ಕ್ಷೇತ್ರದಿಂದ ಕಣಕ್ಕೆ ಇಳಿ­ಯಲು ಬಯಸಿದ್ದರು. ಆದರೆ, ಪಕ್ಷದ ಹೈಕಮಾಂಡ್‌ ಬೆಂಗಳೂರು ಉತ್ತರ­ದಿಂದ ಸ್ಪರ್ಧಿಸಲು ಅವಕಾಶ ನೀಡಿತ್ತು.

ಈ ಬಾರಿ ಮತ್ತೆ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ಗಾಗಿ ಷರೀಫ್‌ ತೀವ್ರ ಯತ್ನ ನಡೆಸಿ­ದರೂ ಫಲ ನೀಡಿಲ್ಲ. ಎಐ­ಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೃಪಾ­ಕಟಾಕ್ಷ­ದಿಂದಾಗಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.
2004ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಚ್‌.ಟಿ.ಸಾಂಗ್ಲಿಯಾನ 2009ರಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು.

ಅಲ್ಲದೆ ಷರೀಫ್‌ ಅವರೊಂದಿಗೆ ಪೈಪೋಟಿ ನಡೆಸಿ ಬೆಂಗಳೂರು ಉತ್ತರ ಕ್ಷೇತ್ರದ ಬದಲು, ಸೆಂಟ್ರಲ್ ಕ್ಷೇತ್ರ­ದಿಂದ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಚುನಾವಣೆಯಲ್ಲಿ ಸೋಲಿನ ರುಚಿ ಉಂಡರು. ಈ ಬಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯದ ಕಾರಣ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿ­ಟ್ಟಿದ್ದಾರೆ. ಜೆಡಿಎಸ್‌ಗೆ ಕರೆತಂದು, ಸೆಂಟ್ರಲ್‌ನಿಂದ ಕಣಕ್ಕೆ ಇಳಿಸಲು ಆ ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ.

ಈ ಮಧ್ಯೆ ಪಕ್ಷ ತೊರೆಯದಂತೆ ಅವರ ಮನವೊಲಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ.ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಂ ಹೆಸರೂ ಈ ಕ್ಷೇತ್ರದಿಂದ ಕೇಳಿ­ಬರುತ್ತಿದೆ. ಆದರೆ, ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸದ್ಯದ ಮಟ್ಟಿಗೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಆಮ್‌ ಆದ್ಮಿ ಪಕ್ಷದಿಂದ ಇನ್ಫೊಸಿಸ್‌ನ ಮಾಜಿ ಸಿಎಫ್ಒ ವಿ.ಬಾಲಕೃಷ್ಣನ್‌ ಕಣಕ್ಕೆ ಇಳಿಯಲಿದ್ದಾರೆ. ರಿಜ್ವಾನ್‌, ಬಾಲಕೃಷ್ಣನ್‌ ಹೊಸ ಮುಖಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT