ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರಣಿ ಕೊಲೆಗಳಿಗೆ `ಅಪಘಾತ' ಎನ್ನಬಹುದೆ?

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಆತ ದೀಪಕ್, ಮುಖ್ಯಮಂತ್ರಿಯ ಮಗ. ತಲೆಯಲ್ಲಿ ಮದ ಏರುವುದಕ್ಕೆ ಇಷ್ಟು ಸಾಲದೆಂಬಂತೆ ಮದ್ಯ, ಮಾದಕ ವಸ್ತುಗಳ ಚಟವಿದೆ. ಈ ದೀಪಕ್ ಒಂದು ಮಧ್ಯರಾತ್ರಿ ಮತ್ತಿನಲ್ಲಿ, ಮಸ್ತಿನಲ್ಲಿ ಕಾರು ಓಡಿಸುತ್ತಾನೆ. ಜತೆಗೆ ಗೆಳೆಯರು. ಅಂಕೆಯಿಲ್ಲದ ಕಾರು ರೊಯ್ಯನೆ ಫುಟ್‌ಪಾತ್ ಏರುತ್ತದೆ. ಅದು ಬರೀ ಫುಟ್‌ಪಾತ್ ಆಗಿರುವುದಿಲ್ಲ.

ದಿನವಿಡೀ ದುಡಿದು ಬೆವರು ಸುರಿಸಿದ ಕೂಲಿ ಕಾರ್ಮಿಕರು ರಾತ್ರಿ ಹೊತ್ತು ಹಾಯಾಗಿ ಮಲಗುವ ತಾಣವದು. ಸಿಹಿ ಕನಸಿನಲ್ಲಿದ್ದವರ ದೇಹಗಳು ಛಿದ್ರಛಿದ್ರವಾಗಿ ಹಾರಾಡುತ್ತವೆ. ಮೂವರ ಸಾವು. ಒಬ್ಬನಿಗೆ ಗಾಯ. ಪತ್ರಿಕೆಯಲ್ಲಿ ಸುದ್ದಿಯಾಗುತ್ತದೆ. ಮುಂದೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪತ್ರಕರ್ತ ಸೇರಿ ಆರೋಪಿಯನ್ನು ಪತ್ತೆ ಹಚ್ಚುತ್ತಾರೆ. ನಂತರ ನಡೆಯುವುದು ರಾಜಕೀಯ, ಇನ್ಸ್‌ಪೆಕ್ಟರ್‌ಗೆ ವರ್ಗಾವಣೆ. ಪತ್ರಕರ್ತನ ವರದಿ ಸಂಪಾದಕರ ಕ.ಬು.ಗೆ ಸೇರುತ್ತದೆ.

ಇದು ನಡೆದದ್ದು 1985ರಲ್ಲಿ. ಸಿನಿಮಾ ಪರದೆಯ ಮೇಲೆ. ದಿ. ಶಂಕರನಾಗ್ ಈ ಚಿತ್ರವನ್ನು ಯಾವುದೇ ಮುಂದಾಲೋಚನೆಯಿಂದ ಮಾಡಿದುದಲ್ಲ. ಕೆಲ ದಿನಗಳ ಹಿಂದೆ ಮುಂಬೈಯಲ್ಲಿ ನಡೆದ ಭೀಕರ ಘಟನೆ ಅವರಿಗೆ ಸ್ಫೂರ್ತಿಯಾಗಿತ್ತು. ಶಂಕರನಾಗ್ `ಆಕ್ಸಿಡೆಂಟ್' ಚಿತ್ರದ ಮೂಲಕ ಕಣ್ಣಿಗೆ ರಾಚುವಂತೆ ಅದರ ಪ್ರತ್ಯಕ್ಷ ದರ್ಶನ ಮಾಡಿಸಿಕೊಟ್ಟಿದ್ದರು.

ಅದಾಗಿ 8 ವರ್ಷಗಳಾಗಿರಬೇಕು. ಅದೇ ಮಧ್ಯರಾತ್ರಿ ಸಮಯ. ಮುಂಬೈಯ ರಸ್ತೆ ಬದಿ ಗೊರಕೆ ಹೊಡೆಯುತ್ತಿದ್ದ ಕೂಲಿಗಳ ಮೇಲೆ ಕಾರೊಂದು ಎರಗಿತು. ಕಾರು ಓಡಿಸುತ್ತಿದ್ದಾತ ಪುರು ಎಂಬ ಬೆಳಕಿಗೆ ಬರಲಾಗದ ಚಿತ್ರನಟ. ಹಿಂದಿ ಚಿತ್ರನಟ ರಾಜಕುಮಾರ್ ಸುಪುತ್ರ ಅಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಇದೊಂದು `ಹಿಟ್ ಅಂಡ್ ರನ್' ಕೇಸ್. ಮೂವರು ಖತಂ! ಪುರುಗೆ `ಅಜಾಗರೂಕತೆಯಿಂದ ವಾಹನ ಚಾಲನೆ'ಗಾಗಿ ನ್ಯಾಯಾಲಯ ರೂ 950 ದಂಡ ವಿಧಿಸುತ್ತದೆ! ಪುರು, ಸತ್ತವರ ಕುಟುಂಬಕ್ಕೆ ರೂ 30,000 ಕೊಟ್ಟು `ಮಹಾದಾನಿ' ಅನಿಸಿಕೊಳ್ಳಲು ಪ್ರಯತ್ನಿಸುತ್ತಾನೆ!

1999 ರಲ್ಲಿ ಮುಂಬೈಯಲ್ಲಿ ಮತ್ತೊಮ್ಮೆ ನಡೆದ ಘಟನೆ ಇದು. ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಕಾರೊಂದು ಏರಿ ಬಂದು ಇಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಮುಂಬೈ ಮಾಯಾನಗರಿಯ ಹೀರೊ ಒಬ್ಬ ಈ ಘಟನೆಯ ವಿಲನ್ ಆಗಿದ್ದ. ಪೊಲೀಸರ ಕುಟುಂಬಕ್ಕೆ `ತುಂಬಲಾರದ ನಷ್ಟ'! ನಮ್ಮ ಹೀರೊಗೆ ರೂ 950 (ದಂಡ) `ನಷ್ಟ'!!

2002, ಸೆಪ್ಟೆಂಬರ್ 28ರ ರಾತ್ರಿ ನಟ ಸಲ್ಮಾನ್ ಖಾನ್‌ಗೆ `ಐಶ್ವರ್ಯ' ತಲೆಗೇರಿ ಗರಬಡಿದಿತ್ತು. ಕುಡಿದು ಲ್ಯಾಂಡ್ ಕ್ರೂಸರ್‌ನ ಸ್ಟೇರಿಂಗ್ ಹಿಡಿದು ಆಕ್ಸಿಲರೇಟರ್ ಒತ್ತಿದ. `ಕಟ್' ಅನ್ನುವವರು ಯಾರೂ ಇರಲಿಲ್ಲ. ಬಾಂದ್ರದ ಹಿಲ್ ರೋಡ್‌ನಲ್ಲಿರುವ ಬೇಕರಿಯೊಂದರ ಬಳಿ ಸಾಲಾಗಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಕ್ರೂಸರ್ ಹಾದುಹೋಯಿತು. ಒಬ್ಬ ಪ್ರಾಣಬಿಟ್ಟ. ಉಳಿದವರ ಕೈಕಾಲು ಮುರಿಯಿತು. ಬಡ ಬಿಹಾರಿಗಳಿರಬೇಕು. ಅದಕ್ಕಿಂತಲೂ ಹೆಚ್ಚಾಗಿ ಸಲ್ಮಾನ್ ಖಾನ್ ಪರದೆಯಲ್ಲಿ ಬರುವಾಗ ಸಿಳ್ಳೆ ಹಾಕುವವರಿಬಹುದು! ಇದು ನಡೆದು 11 ವರ್ಷಗಳಾಯಿತು. ವಿಚಾರಣೆ ಈಚೆಗಷ್ಟೇ ಮುಗಿಯಿತು. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ 80 ಬಾರಿ ಆತನಿಗೆ ಆದೇಶ ಹೊರಡಿಸಿತ್ತು.

ಇದು ಬರೀ ಮುಂಬೈ ಮಹಾನಗರದ ಕತೆಯೆಂದು ತಿಳಿದುಕೊಳ್ಳಬೇಡಿ. 2009ರಲ್ಲಿ ಕಾರ್ತಿಕ್ ಸೋಮಯ್ಯ ಎಂಬಾತ ಬೆಂಗಳೂರಿನಲ್ಲಿ ಇಂತಹುದೇ ಕೃತ್ಯ ಎಸಗ್ದ್ದಿದ ಆರೋಪಕ್ಕೊಳಗಾಗಿದ್ದರು! ಇಂದಿರಾನಗರದ ನೂರಡಿ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ `ವಾಕ್' ಹೋಗುತ್ತಿದ್ದ ನಾಲ್ವರ ಮೇಲೆ ಕಾರು ಓಡಿಸಿದ್ದ ಆರೋಪಕ್ಕೊಳಗಾಗಿದ್ದರು.

ಯಮರಾಯ ಯಾವ ರೂಪದಲ್ಲಿ ಬರುತ್ತಾನೆ ಎಂದು ಹೇಳುವುದಕ್ಕಾಗಲ್ಲ. ಕಳೆದ ವಾರ ಬೊಮ್ಮನಹಳ್ಳಿ ರಸ್ತೆ ಬದಿ ರಾತ್ರಿ ಹನ್ನೊಂದು ಗಂಟೆಗೆ ತರಕಾರಿ ಮಾರುವವರು, ಗಿರಾಕಿಗಳಿದ್ದರು. ಕೃಷ್ಣಪ್ಪ ಎಂಬ ಮುನಿಸಿಪಾಲಿಟಿ ಮಾಜಿ ಅಧ್ಯಕ್ಷ ನಲವತ್ತು ಲಕ್ಷ ರೂಪಾಯಿ ಬೆಲೆಯ `ಲ್ಯಾಂಡ್ ರೂವರ್'ನಲ್ಲಿ ಈ ಬಡಪಾಯಿಗಳ ಮೇಲೆ ನುಗ್ಗಿಯೇಬಿಟ್ಟರು ಎಂಬ ಆರೋಪ ಈ ಬಗೆಯ ಘಟನಾವಳಿಗಳಿಗೆ ಹೊಸ ಸೇರ್ಪಡೆ. ನಾಲ್ಕು ಜನರ ಸಾವು! ಹಲವರಿಗೆ ಗಾಯ!

ಇಂತಹ ಆಘಾತಕಾರಿ ಘಟನೆ ಆದಾಗಲೆಲ್ಲಾ `ಆಕ್ಸಿಡೆಂಟ್' ಸಿನಿಮಾ ಧುತ್ತನೆ ಕಣ್ಣೆದುರು ಓಡುತ್ತದೆ. ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ ಆ ದೃಶ್ಯಗಳು ಅನೇಕ ಪ್ರಶ್ನೆಗಳನ್ನೂ ಮುಂದಿಡುತ್ತವೆ. ಮುಖ್ಯವಾಗಿ ಪಾನಮತ್ತನಾಗಿ ವಾಹನ ಚಲಾಯಿಸಿ ನಾಲ್ಕೈದು ಮಂದಿಯ ಪ್ರಾಣ ತೆಗೆದರೆ ಅದನ್ನು ಒಂದು ಅಪಘಾತವೆಂದಷ್ಟೇ ಕರೆಯುವುದು ಎಷ್ಟು ಸಮಂಜಸ? ವಾಹನ ಅಪಘಾತವೆಂದರೆ ಚಾಲಕನ ಕೈಮೀರಿಯೋ, ಅಜಾಗರೂಕತೆಯಿಂದಲೋ ಸಂಭವಿಸುವ ಅನಿರೀಕ್ಷಿತ ಘಟನೆ. ಇದು ಮದ್ಯ ಸೇವನೆಯಿಂದಲೇ ಆಗಬೇಕೆಂದೇನಿಲ್ಲ. ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು ಎಂಬ ಸಾರಿಗೆ ನಿಯಮ ಇರುವುದು ಇಂತಹ ಘಟನೆ ಸಂಭವಿಸದಿರಲೆಂದೇ ಅಲ್ಲವೆ? ಅದಾಗ್ಯೂ ಅಮಲೇರಿದ ಚಾಲಕನಿಂದ ಆದರೆ ಅದು ಹತ್ಯೆ ಅಲ್ಲದೆ ಇನ್ನೇನು? ಹೌದು, ಇದಕ್ಕೆ `ಸರಣಿ ಕೊಲೆ' ಎಂದೇ ಕರೆಯಬೇಕು!
ಇಂತಹ ಅಪಘಾತಗಳಿಗೆ ಕಾರಣರಾಗುವವರು ಸರಣಿ ಕೊಲೆ ಆರೋಪಿ ಆಗಬೇಕಿದ್ದರೆ ಓಬೀರಾಯನ ಕಾಲದ ಐಪಿಸಿ ಸೆಕ್ಷನ್ 304 ಬದಲಾಗಬೇಕು.

ಕೊಲೆ ಮಾಡುವ ಉದ್ದೇಶವಿರದಿದ್ದರೂ ವ್ಯಕ್ತಿಯ ಸಾವಿಗೆ ಹೊಣೆಗಾರ ಎಂದು ಹೇಳುವ ಸೆಕ್ಷನ್ 304ಎ, ಒಬ್ಬ ಪಾನಮತ್ತ ಚಾಲಕನ ಕೃತ್ಯಕ್ಕೆ ಅನ್ವಯವಾಗಬಾರದು. ಈ ಸೆಕ್ಷನ್ ಲಾಭ ಪಡೆಯಲು ಒಬ್ಬ ವ್ಯಕ್ತಿಯ ಮೇಲೆ ಉದ್ದೇಶಪೂರ್ವಕವಾಗಿಯೇ ವಾಹನ ಚಲಾಯಿಸಿ ಕೊಲೆ ಮಾಡುವವರಿದ್ದಾರೆ. ಯಾಕೆಂದರೆ  ಈ ಅಪರಾಧಕ್ಕೆ ಅಪರಾಧಿಗೆ ಬರೀ ಎರಡು ವರ್ಷ ಜೈಲುವಾಸ!

ಈಚೆಗೆ ಅತ್ಯಾಚಾರ ಎಸಗಿದವರ ಮೇಲೆ ಕಠಿಣ ಶಿಕ್ಷೆಗೆ ಕಾನೂನಿಗೆ ತಿದ್ದುಪಡಿ ಮಾಡಿದಂತೆ ಅಧಿಕಾರದಲ್ಲಿರುವವರು ಮನಸ್ಸು ಮಾಡಬೇಕು. ಲ್ಯಾಂಡ್ ರೂವರ್‌ನ ಚಕ್ರಗಳಿಗೆ ಸಿಕ್ಕಿ ಸತ್ತ ಬಡಪಾಯಿಗಳ ಕುಟುಂಬದ ಬಗ್ಗೆ ಒಂದಿಷ್ಟು ಸಹಾನುಭೂತಿ ಇದ್ದರೂ ಸಾಕು ಸೆಕ್ಷನ್ 304ಕ್ಕೆ ಒಂದು ಕಠಿಣ ರೂಪ ಕೊಡಬಹುದು.

ಸರ್ಕಾರ ಇಂತಹ ಅಸಹಾಯಕ ಕುಟುಂಬಗಳಿಗೆ ಪರಿಹಾರಧನ ಕೊಡುವ ಅಥವಾ ಅಪರಾಧಿಯಿಂದ ಕೊಡಿಸುವ ಮಾತೇ ಆಡುವುದಿಲ್ಲ. ಹೋಗಲಿ, ಕೊನೇಪಕ್ಷ ಈ ಪ್ರಕರಣಗಳನ್ನು ತೀವ್ರಗತಿಯಲ್ಲಿ ಇತ್ಯರ್ಥಗೊಳಿಸಿ ಕೋರ್ಟ್ ತೀರ್ಪು ನೀಡಿದರೂ ಮೃತರ ಆತ್ಮಕ್ಕೆ ಶಾಂತಿ ಸಿಗಬಹುದು. ಅದಕ್ಕಿಂತ ಹೆಚ್ಚಾಗಿ ಮೃತರ ಕುಟುಂಬಕ್ಕೆ ಸಮಾಧಾನವಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT