ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ `ಹುಸಿ' ಶಿಲಾನ್ಯಾಸ...

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇಲಾಖೆಗಳಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಅಗ್ರಸ್ಥಾನ.ಜಿಲ್ಲಾ ಕ್ರೀಡಾಂಗಣ ಇದ್ದರೂ ತರಬೇತುದಾರರಿಲ್ಲ. ಮೂರು ವರ್ಷಗಳಿಂದಲೂ ಈ ಇಲಾಖೆಗೆ ಕಾಯಂ ಸಹಾಯಕ ನಿರ್ದೇಶಕರಿಲ್ಲ.  ಪ್ರಭಾರ `ಅಧಿಕಾರಿ'ಗಳೇ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೇವಲ ಇಬ್ಬರು ಕಾಯಂ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಪೋರ್ಟ್ ಕೌನ್ಸಿಲ್‌ನಿಂದ ನೇಮಕಗೊಂಡಿರುವ ಅರೆಕಾಲಿಕ ಅಥ್ಲೆಟಿಕ್ಸ್ ತರಬೇತುದಾರರು ಇದ್ದಾರೆ, ನಿಜ. ಆದರೆ ಇತರೆ ಕ್ರೀಡೆಗಳ ಬಗ್ಗೆ ಯುವ ಆಟಗಾರರಿಗೆ ತರಬೇತಿ ನೀಡುವವರು ಇಲ್ಲವೇ ಇಲ್ಲ.

ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಆದರೆ ಇಲ್ಲಿ ಬ್ಯಾಡ್ಮಿಂಟನ್ ಹೊರತುಪಡಿಸಿ ಬೇರೆ ಯಾವುದೇ ಒಳಾಂಗಣ ಕ್ರೀಡೆಗಳಿಗೂ ಅವಕಾಶ ಇಲ್ಲ. ಜಿಮ್ ಇದ್ದರೂ ಅದು ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಒಳಾಂಗಣ ಕ್ರೀಡಾಂಗಣ ನಿರ್ವಹಣೆಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಅದನ್ನು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯೇ (ಯುಡಿಬಿಎ) ಭರಿಸುತ್ತಿದೆ. ಇದೇ ಕಾರಣಕ್ಕೆ ಒಳಾಂಗಣ ಕ್ರೀಡಾಂಗಣ ಯುಡಿಬಿಎ ವಶದಲ್ಲಿದ್ದು ಅವರ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಎರಡು ವರ್ಷಗಳ ಹಿಂದೆ  ಉದ್ಘಾಟನೆಯಾಗಿರುವ ಒಳಾಂಗಣ ಕ್ರೀಡಾಂಗಣ ಕಳಪೆ ಕಾಮಗಾರಿಯಿಂದ ಕೂಡಿದೆ. ಈಗಾಗಲೇ ನೆಲಹಾಸು ಹಲವು ಕಡೆ ಕಿತ್ತು ಹೋಗಿದೆ. ಬ್ಯಾಡ್ಮಿಂಟನ್ ಕೋರ್ಟ್ ಸಹ ಈಗಾಗಲೇ ಹಲವು ಬಾರಿ ರಿಪೇರಿ ಕಂಡಿದೆ !

ಸುಮಾರು ಮೂರೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿ ವರುಷಗಳು ಉರುಳಿವೆ. ಆದರೆ  ಕಾಮಗಾರಿ ಆರಂಭವಾಗಿಲ್ಲ. ಈಜುಕೊಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಖುದ್ದು ಕ್ರೀಡಾ ಸಚಿವರು ಭರವಸೆ ನೀಡಿ ಹೋಗಿದ್ದರು. ಆದರೆ ಈವರೆಗೆ ಹಣ ಬಿಡುಗಡೆಯಾಗಿಲ್ಲ !

ಸಿಂಥೆಟಿಕ್ ಟ್ರ್ಯಾಕ್ ಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಇದೀಗ ಸರ್ಕಾರ ಸ್ಪಂದಿಸಿದಂತಿದೆ. ಕಾಮಗಾರಿಯೂ ಆರಂಭವಾಗಿದೆ.  ಅನುಭವಿ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಪ್ರಕಾರ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಮುಗಿಯಲು ಇನ್ನೊಂದು ವರ್ಷಕ್ಕೂ ಹೆಚ್ಚು ಸಮಯ ಬೇಕು.  ಟ್ರ್ಯಾಕ್‌ನ ಕಾಮಗಾರಿ ನಡೆಯುತ್ತಿರುವುದರಿಂದ ಕ್ರೀಡಾಂಗಣದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸದ್ಯಕ್ಕೆ ಇಲ್ಲಿ ಕ್ರೀಡಾಂಗಣವೂ ಇಲ್ಲ, ತರಬೇತುದಾರರೂ ಇಲ್ಲ. ಒಟ್ಟಾರೆ ಕ್ರೀಡಾ ಚಟುವಟಿಕೆಗಳೇ ಇಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT