ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪನ್ನ ಹಕ್ಕುಸ್ವಾಮ್ಯಕ್ಕೆ ಒತ್ತು ನೀಡಿ: ಡಿಸಿ

Last Updated 23 ಮಾರ್ಚ್ 2011, 9:50 IST
ಅಕ್ಷರ ಗಾತ್ರ

ಮಂಡ್ಯ: ಹೊಸ ಉತ್ಪನ್ನಗಳ ತಯಾರಿಕೆಯೊಂದಿಗೆ ಆ ಉತ್ಪನ್ನದ ಹಕ್ಕುಸ್ವಾಮ್ಯ ಪಡೆಯುವ ಬಗೆಗೂ ಉದ್ಯಮಿಗಳು ಚಿಂತನೆ ನಡೆಸಬೇಕು. ಈ ವಿಷಯದಲ್ಲಿ ಆದಷ್ಟು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಸಲಹೆ ಮಾಡಿದರು. ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆಯು ಮಂಗಳವಾರ ಮಂಡ್ಯದಲ್ಲಿ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕು ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಯು ಮುಖ್ಯವಾಗಲಿದೆ ಎಂದರು.

ನವೀನ ಉತ್ಪನ್ನಗಳ ಬಳಕೆಯು ಉತ್ಪಾದಕ ರಲ್ಲಿ ಮಾತ್ರವೇ ಸಿಗುವಂತೆ, ಅನ್ಯರು ನಕಲು ಮಾಡದಂತೆ ತಡೆಯಲು ಹಕ್ಕುಸ್ವಾಮ್ಯ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಬಾಸುಮತಿ ಅಕ್ಕಿಗೆ ವಿದೇಶಿ ಕಂಪೆನಿಯೊಂದು ಹಕ್ಕು ಸ್ವಾಮ್ಯ ಪಡೆದುದನ್ನು ಉಲ್ಲೇಖಿಸಿದ ಅವರು, ಇಂದು ತಂತ್ರಜ್ಞಾನ ಮುಂದುವರಿದಿದೆ. ಯಾವುದೇ ವಸ್ತುವಿನ ನಕಲು ಅಷ್ಟೇ ತ್ವರಿತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಇದನ್ನು ತಡೆಯಲು ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ ಅಗತ್ಯ ಎಂದರು.

ಉದ್ಯಮಿಗಳಿಗೆ ಈ ವಿಷಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ. ಇಂಥ ಕೆಲಸ ಒಂದು ದಿನದಲ್ಲಿ ಪೂರ್ಣಗೊಳ್ಳು ವಂಥದಲ್ಲ. ಆದರೆ, ಆ ನಿಟ್ಟಿನಲ್ಲಿ ಇದೊಂದು ಉತ್ತಮ ಆರಂಭ ಎಂದು ಅಭಿಪ್ರಾಯಪಟ್ಟರು. ಯಾವುದೇ ಹೊಸ ಅನ್ವೇಷಣೆಯ ಹಿಂದೆ ದೀರ್ಘ ಪರಿಶ್ರಮ ಇರುತ್ತದೆ. ಅದನ್ನು ಇನ್ನೊಬ್ಬ ನಿರಾಯಾಸವಾಗಿ ನಕಲು ಮಾಡಿದರೆ ಪರಿಶ್ರಮ ವ್ಯರ್ಥ ಆಗಲಿದೆ. ಮಂಡ್ಯದ ಬಂಡೂರು ಕುರಿ ತಳಿ ಸೇರಿದಂತೆ ಪ್ರತಿ ಹೊಸದು ಬ್ರಾಂಡ್ ಆಗಲಿದೆ ಎಂಬುದನ್ನು ಉಲ್ಲೇಖಿಸಿದರು.

ಜಿಲ್ಲೆಯ ವಿವಿಧ ಉದ್ದಿಮೆದಾರರು ಭಾಗವಹಿಸಿದ್ದು, ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ, ಅದರ ಅನ್ಯಯ ಹಕ್ಕುಸ್ವಾಮ್ಯ ಪಡೆಯುವ ಬಗೆ, ಅನುಸರಿಸಬೇಕಾದ ಕ್ರಮ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಶಿವಕುಮಾರ್, ಸಣ್ಣ, ಸೂಕ್ಮ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ರಂಗರಾಮು, ನಿರ್ದೇಶಕ ಎಸ್.ಎಂ. ಜಮಖಂಡಿ, ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಜಂಟಿ ನಿರ್ದೇಶಕ ಸುಜ್ಞಾನಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT