ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹದ ಚಿಲುಮೆ ಈ ಶತಾಯುಷಿ ಅಜ್ಜ

Last Updated 14 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಶತಾಯುಷಿಯಾದರೂ ಸವೆಯದ ಜೀವನೋತ್ಸಾಹ, ಕುಂದದ ಕಲೆ- ಕೈಚಳಕ, ಇಳಿವಯಸ್ಸಿನಲ್ಲೂ ದಣಿವರಿಯದ ದುಡಿಮೆ, ನವಪೀಳಿಗೆಗೆ ಕಲೆಯನ್ನೇ ಬಳುವಳಿಯಾಗಿ ನೀಡ ಬಯಸುವ ಹೆಬ್ಬಯಕೆ, ಅರವತ್ತಕ್ಕೇ ಅರಳು ಮರಳು ಎನ್ನುವ ಮಾತಿಗೆ ಅಪವಾದ ಈ ಹಿರಿಜೀವ....!

ಹೌದು, ಮೂಲತಃ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಶತಾಯುಷಿ ಶಂಕರ ಕಾಡಪ್ಪ ಬಸಗೌನ್ನವರ ಅವರು ಕಸದಿಂದ ರಸವನ್ನು ತಗೆಯುವ ವಿಶಿಷ್ಠ ಕಲಾವಿದ. ನಿರುಪಯುಕ್ತವಾದ ರಸಗೊಬ್ಬರ ಚೀಲಗಳ ಎಳೆಗಳನ್ನೇ ಬಿಡಿಸಿಕೊಂಡು ಹಗ್ಗ, ಜಾನುವಾರುಗಳಿಗೆ ಹಾಕುವ ಬಾಯ್ಜಾಳಿಗೆ (ಮುಸಕಿ), ಸಪ್ಪತ್ತಿಗೆ (ಎತ್ತುಗಳ ಕೊರಳಿಗೆ ನೊಗವನ್ನು ಕಟ್ಟಲು ಬಳಸುವ ವಸ್ತು), ಕವಣೆ, ವಿಭೂತಿ ಬುಟ್ಟಿ ಮೊದಲಾದ ಕಲಾತ್ಮಕ ವಸ್ತುಗಳನ್ನು ತಯಾರಿಸುವದಿವರ ಕಲೆ ಮತ್ತು ಶ್ರಮ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿದೆ.

ತಮ್ಮ 20ನೇ ವಯಸ್ಸಿನಿಂದಲೇ ಇಂತಹ ವಸ್ತುಗಳ ತಯಾರಿಕೆ ಕಲೆಯನ್ನು ಕರಗತ ಮಾಡಿಕೊಂಡಿರುವ ಈ ಅಜ್ಜ, ದಿನವಿಡಿ ದಣಿವರಿಯದೇ ಆ ಕೆಲಸದಲ್ಲಿ ತೊಡಗುವ ಶ್ರಮಜೀವಿಯೂ ಹೌದು. ಮನೆ ಅಥವಾ ದನದ ಕೊಟ್ಟಿಗೆಯಲ್ಲಿ ಬಿಸಾಕುವ ಪ್ಲಾಸ್ಟಿಕ್ ಚೀಲ ಅಥವಾ ತೆಂಗಿನ ಕಾಯಿಯ ಜುಟ್ಟು (ನಾರು) ಮೊದಲಾದ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಅತ್ಯಾಕರ್ಷಕವಾದ ಕೃಷಿ ಸಲಕರಣೆಗಳನ್ನು ತಯಾರಿಸುವಲ್ಲಿ ಅವರು ಸಿದ್ಧಹಸ್ತರು. 

ಚಿಗರೆ ಕೊಂಬಿನ ಹಿಡಿಕೆಯನ್ನು ಒಳಗೊಂಡಿರುವ ಚಬಕವನ್ನು ಆಕರ್ಷಕವಾಗಿ ತಯಾರಿಸುತ್ತಾರೆ. ಇಂತಹ ಚಬಕವನ್ನು ಕುದುರೆ ಅಥವಾ ಎತ್ತಿನ ಗಾಡಿಗಳ ಶರ್ಯತ್ತಿನಲ್ಲಿ ಸ್ಪರ್ಧಾಳುಗಳು ಬಳಸುತ್ತಾರೆ ಎನ್ನುತ್ತಾರೆ ಶಂಕರ ಬಸಗೌನ್ನವರ. ಹಳೆಯ ಸೀರೆಗಳನ್ನು ಹರಿದು ಕೈಯಿಂದ ಹಗ್ಗ ಹೊಸೆಯುವದರಲ್ಲಿಯೂ ಪರಿಣಿತರು.   

ಹಿತಮಿತವಾದ ಆಹಾರ ಮತ್ತು ಜೀವನ ವಿಧಾನವೇ ಅವರ ಶತಾಯುಷ್ಯದ ಗುಟ್ಟಾಗಿದೆ. ದಿನವೂ ಬೆಳಿಗ್ಗೆ ತಂಗಳ ರೊಟ್ಟಿ ಮತ್ತು ಖಾರದ ಪುಡಿಗೆ ಒಂದಿಷ್ಟು ಶೇಂಗಾ ಎಣ್ಣೆ ಬೆರೆಸಿಕೊಂಡು ತಿನ್ನುತ್ತಾರೆ. ರಾತ್ರಿ ಒಂದಿಷ್ಟು ಅನ್ನ, ಸಾಂಬಾರು, ಅರ್ಧ ರೊಟ್ಟಿ ಮಾತ್ರ ಸೇವಿಸುತ್ತಾರೆ. ದಿನವಿಡಿ 2-3 ಬಾರಿ ಚಹಾ ಸೇವಿಸುವುದಾಗಿ ಅವರು ಹೇಳುತ್ತಾರೆ. ಹಲ್ಲುಗಳು ಗಟ್ಟಿಮುಟ್ಟಾಗಿವೆ. ಸೂಜಿಗೆ ದಾರ ಪೂಣಿಸುವಷ್ಟು ದೃಷ್ಟಿಯೂ ಸ್ಪಷ್ಟವಾಗಿವೆ.
ಜೀವನದ ಮುಸ್ಸಂಜೆಯಲ್ಲೂ ಕಲೆಯನ್ನು ಕೈ ಬಿಡದೇ ಮುಂದಿನ ಪೀಳಿಗೆಗೂ ಅದನ್ನು ಪರಿಚಯಿಸುವ ಪಣ ತೊಟ್ಟಿರುವ ಶಂಕರ ಬಸಗೌನ್ನವರ ಅವರಂತಹ ಹತ್ತು ಹಲವು ಕಲಾವಿದರ ಕಲೆಯ ವಾರಸುದಾರಿಕೆಯನ್ನು ಮುಂದುವರೆಸಿಕೊಂಡು  ಯುವ ಜನಾಂಗದ ಜವಾಬ್ದಾರಿಯಲ್ಲವೇ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT