ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬ್ರಾಣಿ ಯೋಜನೆಗೆ ಸಹಕಾರ ಅಗತ್ಯ

Last Updated 5 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಚನ್ನಗಿರಿ: ಹದಿನೆಂಟು ವರ್ಷಗಳ ನಿರಂತರ ಹೋರಾಟದ ಫಲವಾಗಿ ಈ ಏತ ನೀರಾವರಿ ಯೋಜನೆ ಲೋಕಾರ್ಪಣೆಯಾಗಿದೆ. ಆದರೆ, ತಾಂತ್ರಿಕ ದೋಷದ ಕಾರಣದಿಂದ ಕೆರೆಗಳು ತುಂಬಲು ತಡವಾಗುತ್ತಿದೆ. ಅದಕ್ಕಾಗಿ ರೈತರು ಸಂಪೂರ್ಣ ಸಹಕಾರವನ್ನು ನೀಡಿ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತರಿಗೆ ಕರೆ ನೀಡಿದರು.

ಪಟ್ಟಣದ `ತುಮ್ಕೊಸ್~ ಸಭಾಂಗಣದಲ್ಲಿ ಉಬ್ರಾಣಿ ಮತ್ತು ಕಸಬಾ ಹೋಬಳಿಗಳ ಹಾಗೂ ತರೀಕೆರೆ ತಾಲ್ಲೂಕು ಅಮೃತಾಪುರ ಏತ ನೀರಾವರಿ ಯೋಜನೆಯ ರೂಪುರೇಷೆಗಳ ಬಗ್ಗೆ ಬುಧವಾರ ನಡೆದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚನ್ನಗಿರಿ ತಾಲ್ಲೂಕಿನ 89 ಹಾಗೂ ತರೀಕೆರೆ ತಾಲ್ಲೂಕಿನ 57 ಕೆರೆಗಳು ಈ ಯೋಜನೆಯಿಂದ ತುಂಬಬೇಕಾಗಿದೆ. ರೈತರು ವಾಲ್ವ್‌ಗಳನ್ನು ಹಾಳು ಮಾಡುತ್ತಿರುವುದರಿಂದ ಕೆರೆಗಳು ಸಕಾಲಕ್ಕೆ ತುಂಬುತ್ತಿಲ್ಲ. ಅದೇ ರೀತಿ ನೀರು ಬಳಕೆದಾರರ ಸಮಿತಿಗಳನ್ನು ಕಡ್ಡಾಯವಾಗಿ ಒಂದು ವಾರದೊಳಗೆ ರಚಿಸಿಕೊಳ್ಳಬೇಕು. ಮನುಷ್ಯನ ಸ್ವಾರ್ಥ ಎಂಬ ಕೆರೆ ಯಾವತ್ತು ತುಂಬುವುದಿಲ್ಲ. ಕೆರೆಗಳನ್ನು ತುಂಬಿಸುವ ಬಗ್ಗೆ ರೈತರಿಗೆ ಮನದಟ್ಟು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದಕ್ಕೂ ಸಹನೆಯಿಂದ ರೈತರು ಸಹಕಾರ ನೀಡಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಅನೇಕ ವರ್ಷಗಳ ಕಾಲ ಈ ಕೆರೆಗಳು ತುಂಬಿರುವುದಿಲ್ಲ. ಈಗ ಕೆರೆಗಳಿಗೆ ನೀರು ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭೂಮಿ ನೀರನ್ನು ಹೀರಿಕೊಳ್ಳುತ್ತಿದೆ. ಯಾವುದೇ ಸಮಸ್ಯೆಗೂ ಪರಿಹಾರ ಇದೆ. ಮಾತುಕತೆಯ ಮೂಲಕ ಎಲ್ಲಾ ಸಮಸ್ಯೆ  ಬಗೆಹರಿಸಿಕೊಳ್ಳೋಣ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ತರೀಕೆರೆ ಶಾಸಕ ಸುರೇಶ್, ಮಾಜಿ ಶಾಸಕ ವಡ್ನಾಳ್ ರಾಜಣ್ಣ, `ತುಮ್ಕೊಸ್~ ಅಧ್ಯಕ್ಷ ಶಿವಕುಮಾರ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಈಶ್ವರಪ್ಪ, ಲೋಕೇಶಪ್ಪ, ಶಿವಲಿಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT