ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ನೋಡಿದಲ್ಲಿ ತ್ರಿವರ್ಣ ಬಾವುಟ

Last Updated 30 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಸಂಪೂರ್ಣವಾಗಿ ತ್ರಿವರ್ಣ ಧ್ವಜಗಳಿಂದಲೇ ಅಲಂಕರಿಸಿಕೊಂಡಿದ್ದ ಪ್ರೇಕ್ಷಕರ ದಂಡು ಬುಧವಾರ ಬೆಳಗಿನಿಂದಲೇ ಪಿಸಿಎ ಕ್ರೀಡಾಂಗಣಕ್ಕೆ ಲಗ್ಗೆ ಇಡಲು ಆರಂಭಿಸಿತ್ತು. ಕೈಯಲ್ಲಿ ಪ್ಲೇಕಾರ್ಡ್‌ಗಳು, ಪೋಸ್ಟರ್‌ಗಳು ದೊಡ್ಡ ಪ್ರಮಾಣದಲ್ಲೇ ಕಂಡುಬಂದವು. ಹಾಗಾಗಿ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪ್ರತಿ ಕ್ಷಣವೂ ರೋಚಕವಾಗಿತ್ತು. ಅಲ್ಲಿ ನಿರಾಸೆಗೆ ಕಿಂಚಿತ್ ಅವಕಾಶ ಇರಲಿಲ್ಲ. ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಆಟಗಾರರನ್ನು ಅಭಿನಂದಿಸಲು ಕ್ರೀಡಾಂಗಣಕ್ಕೆ ಬಂದಾಗ ಮೇರೆ ಮೀರಿದ ಉತ್ಸಾಹ ಕಂಡಬಂತು. ಎಲ್ಲೆಡೆ ವಿದ್ಯುತ್ ಸಂಚಾರವಾಯಿತು.

ಪ್ರೇಕ್ಷಕರು ಉಭಯ ದೇಶಗಳ ರಾಷ್ಟ್ರಗೀತೆ  ಮೊಳಗುತ್ತಿದ್ದಾಗ ಟಿವಿ ಕ್ಯಾಮರಾಗಳೆಲ್ಲ ತಮ್ಮತ್ತ ನೋಡುವಂತೆ ಮಾಡಿದರು. ಮೊದಲಿಗೆ ಪಾಕ್ ರಾಷ್ಟ್ರಗೀತೆ ತೇಲಿಬಂದಾಗ ಆ ದೇಶದ ಅಭಿಮಾನಿಗಳು ಅದಕ್ಕೆ ದನಿಗೂಡಿಸಿದರು. ನಂತರ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಪ್ರೇಕ್ಷಕರ ಗ್ಯಾಲರಿಗಳಿಂದ ಆ ಗೀತೆ ಜೋರಾಗಿಯೇ ಮಾರ್ದನಿಸಿತು. ಕೇಳುಗರಿಗೆ ರೋಮಾಂಚನ ಉಂಟುಮಾಡಿತು.

ಮಂಗಳವಾರ ರಾತ್ರಿ ಗುಡುಗು ಮತ್ತು ಮಳೆಯಿಂದ ನಡುಗಿಹೋಗಿದ್ದ ಮೊಹಾಲಿ, ಬುಧವಾರ ಬೆಳಿಗ್ಗೆ ಆಕಳಿಸಿ, ಮೈಮುರಿದು ಎದ್ದಾಗ ಫಳ-ಫಳ ಹೊಳೆಯುವ ಸೂರ್ಯ ಶುಭೋದಯ ಹೇಳಿದ್ದ. ಬಹು ನಿರೀಕ್ಷಿತ ಪಂದ್ಯಕ್ಕೆ ಇದರಿಂದ ಅಭಯ ಸಂದೇಶ ಸಿಕ್ಕಿತು. ಪಂದ್ಯ ಆರಂಭವಾಗಲು ಕೆಲವು ಗಂಟೆಗಳು ಬಾಕಿಯಿದ್ದಾಗ ಕ್ರೀಡಾಂಗಣ ಭದ್ರ ಕೋಟೆಯ ಸೋಗು ತೊಟ್ಟಿತು.

ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯ ಅತಿಥಿಗಳಿಗೆ ವ್ಯವಸ್ಥೆ ಮಾಡಿದ್ದ ಗ್ಯಾಲರಿ ಸುತ್ತ ನೂರಾರು ಕಮಾಂಡೋಗಳು ಸುತ್ತವರಿದಿದ್ದರು. ಗಣ್ಯರು ಆಗಮಿಸುವ ಮುನ್ನವೇ ಟಿಕೆಟ್ ಹೊಂದಿದ ಪ್ರೇಕ್ಷಕರು ಕ್ರೀಡಾಂಗಣ ಪ್ರವೇಶಿಸಬೇಕು ಎಂಬ ಸಲಹೆಯನ್ನು ಮೊದಲೇ ನೀಡಲಾಗಿತ್ತು. ಕ್ರೀಡಾಂಗಣದ ಸುತ್ತ ಭಾರಿ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಪಾಕಿಸ್ತಾನದ ಬೆಂಬಲಿಗರು ಧ್ವಜಗಳನ್ನು ಬೀಸುತ್ತಿದ್ದುದು ಅಲ್ಲಲ್ಲಿ ಕಂಡುಬಂತು.

ಫಟಾಫಟ್ ತ್ರಿವರ್ಣ ಧ್ವಜ ಬರೆಯುವ ಕಲಾವಿದರಿಗೆ ಸುಗ್ಗಿಯೋ ಸುಗ್ಗಿ. ತ್ರಿವರ್ಣ ಬಾವುಟಗಳೂ ಭಾರಿ ಸಂಖ್ಯೆಯಲ್ಲಿ ಬಿಕರಿಯಾದವು. ಪಿಸಿಎ ಕ್ರೀಡಾಂಗಣದ ದ್ವಾರಗಳು ಪ್ರೇಕ್ಷಕರಿಗೆ ತೆರೆದಾಗ ಬೆಳಿಗ್ಗೆ 10 ಗಂಟೆ ಆಗಿತ್ತು. ‘ಮುಖದ ಮೇಲೆ ತ್ರಿವರ್ಣ ಧ್ವಜ ಪಡೆಯಲು ಒಬ್ಬರಿಗೆ ರೂ. 500 ಪಡೆಯಲಾಗುತ್ತಿದೆ, ನಿಜ. ಆದರೆ, ಈ ದಿನದ ಮಟ್ಟಿಗೆ ಅದೇನು ದೊಡ್ಡ ಬಾಬತ್ತಲ್ಲ’ ಎಂದು ಕ್ರೀಡಾಂಗಣ ಒಳ ಪ್ರವೇಶಿಸಲು ತವಕದಿಂದ ಕಾಯುತ್ತಿದ್ದ ವ್ಯಾಪಾರಿ ಯೋಗಿಂದರ್ ಭಾಟಿಯಾ ಹೇಳಿದರು. ತ್ರಿವರ್ಣ ಧ್ವಜವನ್ನು ರೂ. 500ರಿಂದ 2,500ರವರೆಗೆ ಮಾರಾಟ ಮಾಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT