ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ತರ್, ಮದುವೆ-ಮಕ್ಕಳು

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಭಾಗ-3
 
ಸಂಬಂಧಗಳ ಬಗ್ಗೆ ಕೆಲವು ಮಾತುಗಳನ್ನು ಯಾವ ಆತ್ಮಸಮರ್ಥನೆಯೂ ಇಲ್ಲದಂತೆ ನಾನು ಹೇಳಲು ಪ್ರಯತ್ನಿಸಬೇಕು. ನಾನು ಮದುವೆಯಾಗಿ ಐವತ್ತು ವರ್ಷ ಆಯಿತು. ಸಾಮಾನ್ಯವಾಗಿ ನನ್ನ ಹೆಂಡತಿ `ನಾನಿವರ ಜೊತೆ ಐವತ್ತು ವರ್ಷ ಬದುಕಿದೆ' ಎಂದು ಹೇಳುತ್ತಾಳೆ. ಅಂದರೆ ಐವತ್ತು ವರ್ಷದ ಸಾಧನೆ ಮಾಡಿದ್ದೇನೆ, ಬಹಳ ಕಷ್ಟಪಟ್ಟಿದ್ದೇನೆ ಎಂಬುದು ಅವಳ ಮಾತಿನ ಒಳ ಅರ್ಥ.

ಇದೇ ಮಾತನ್ನು ನಾನೂ ಹೇಳಬಹುದು. ನಾನೂ ಹಾಗೆಂದುಕೊಳ್ಳುತ್ತೇನೆ ಎನ್ನುವುದು ಅವಳಿಗೆ ಗೊತ್ತಿದೆ. ಪರಸ್ಪರ ನಾವು ಹೀಗೆಂದುಕೊಳ್ಳುವಾಗ ನಮ್ಮಲ್ಲಿ ಕಹಿ ಏನೂ ಇಲ್ಲ. ಕಹಿ ಹೊರಟು ಹೋದಾಗ ಉತ್ಕಟವಾದ ಪ್ರೀತಿ ಕೂಡ ಹೊರಟು ಹೋಗುತ್ತದೆ. ಬಹುಶಃ ವಿವಾಹ ಸಂಬಂಧದಲ್ಲಿ ಗಂಡು ಹೆಣ್ಣಿನ ನಡುವೆ ಸಂಸಾರದ ಚೌಕಟ್ಟಿನಲ್ಲಿ ಒಂದು ಹಂತದಲ್ಲಿ ಪರಸ್ಪರ ಹೊಂದಿಕೊಳ್ಳುವುದಷ್ಟೇ ಉಳಿದಿರುತ್ತದೆ, ಇಲ್ಲಿ ಪ್ರೀತಿಯ ನೆನಪಿರುತ್ತದೆ ಅಷ್ಟೆ.

ನನಗೂ ಇಂಥ ನೆನಪುಗಳಿವೆ: ನನ್ನ ಹೆಂಡತಿ ಹಾಸನದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದಾಗ ಎರಡು ಜಡೆಯ ಹುಡುಗಿ, ನನ್ನ ಬಳಿ ಮನೆಪಾಠಕ್ಕೆ ಬಂದಳು. ಯಾವುದೋ ಒಂದು ಸಭೆಯಲ್ಲಿ ಸಿನಿಮಾ ಗೀತೆಯನ್ನು ಹಾಡಿದಳು, ಆ ಹಾಡು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು, ಈಗಲೂ ಬಹಳ ಒಳ್ಳೆಯ ಕಂಠ ಅವಳದ್ದು. ನಾನು ಅವರದೊಂದು ತರಗತಿಯಲ್ಲಿ ಪ್ರಶ್ನೆಗೆ ಉತ್ತರ ಬರೆಯಲು ಕೊಟ್ಟಿದ್ದೆ.

ಪ್ರಶ್ನೆ ಏನೆಂದರೆ, `ನೀವು ಮೆಚ್ಚುವ ಅಥವಾ ಮೆಚ್ಚದಿರುವ ಯಾವ ವ್ಯಕ್ತಿಯ ಬಗ್ಗೆಯಾದರೂ ಒಂದು ಚಿತ್ರಣ ಬರೆಯಿರಿ' ಎಂದು. ಇವಳು ಅದರಲ್ಲಿ ನನ್ನ ಬಗ್ಗೆ ಬರೆದಿದ್ದಳು, ನನ್ನನ್ನು ತಮಾಷೆ ಮಾಡಿ ಬರೆದಿದ್ದಳು. ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದ ರೀತಿ, ನನ್ನ ಹಾವಭಾವಗಳ ಬಗ್ಗೆ ಗೇಲಿ ಮಾಡಿ ಬರೆದಿದ್ದಳು. ಒಬ್ಬ ಪ್ರಥಮ ಪಿಯುಸಿ ಹುಡುಗಿ ಹೀಗೆ ತನ್ನ ಅಧ್ಯಾಪಕನ ಬಗ್ಗೆಯೇ ಬರೆದಿರುವುದು ನನ್ನಲ್ಲಿ ಈ ಎರಡು ಜಡೆಯ ಹುಡುಗಿ ಬಗ್ಗೆ ಕುತೂಹಲದ ಜೊತೆಗೆ ಆಸಕ್ತಿ ಕೆರಳಿಸಿತು.

ಪುಟ್ಟ ಹುಡುಗಿ ನನ್ನ ಬಗ್ಗೆ ಇಷ್ಟು ಸ್ವಾತಂತ್ರ್ಯ ಪಡೆದು ಹೇಳಿದಳಲ್ಲ ಎನ್ನುವುದೇ ನನಗೆ ಪ್ರೇಮಲೋಕದೊಳಗೆ ಮೊದಲನೆ ಬಾಗಿಲು ತೆರೆದ ಅನುಭವವಾಯಿತು. ನನಗೆ ಆರಾಧನಾ ಭಾವದ ಹೆಣ್ಣು ಬೇಕಿರಲಿಲ್ಲ, ಸಂಗಾತಿ ಬೇಕಿದ್ದಳು. ನೆವಕ್ಕೆ ಪಾಠಕ್ಕೆಂದು ಬಂದವಳಲ್ಲಿ ಪ್ರೀತಿ ಹುಟ್ಟಿತು. ಹದಿನಾರೊ ಹದಿನೇಳೊ ವಯಸ್ಸಿನ ಬಾಲಕಿ. ನಾನು ಅವಳ ಜೊತೆ ದೈಹಿಕ ಸಂಬಂಧ ಬೆಳೆಸಲಿಲ್ಲ.

ಲೋಕದ ಮರ್ಜಿ ಅದರ ಸರಿ ತಪ್ಪು, ಕೆಟ್ಟದು ಒಳ್ಳೆಯದು ಯಾವುದೂ ಪೂರ್ತಿಯಾಗಿ ಗೊತ್ತಿರದ ವಯಸ್ಸು ಅವಳದ್ದು. ಏನೂ ಗೊತ್ತಿಲ್ಲದ ಮುಗ್ಧತೆಯಲ್ಲೆ ನನ್ನೊಡನೆ ಅವಳು ವ್ಯವಹರಿಸುತ್ತಿದ್ದಳು. ನನ್ನನ್ನು ತನ್ನ ಮನೆಗೆ ಕರೆಯುತ್ತಿದ್ದಳು. ಅವರ ಮನೆಗೆ ಹೋದಾಗಲೆಲ್ಲ ನನಗೆ ಒಂದು ಬೇರೆಯೇ ಆದ ವಿಚಿತ್ರ ಲೋಕದೊಳಗೆ ಪ್ರವೇಶಿಸುತ್ತಿದ್ದ ಅನುಭವವಾಗುತ್ತಿತ್ತು. ಒಂದು ಘಟನೆ ನನಗೆ ಈಗಲೂ ನೆನಪಿದೆ. ನಾನು ಮೊಟ್ಟೆ ತಿನ್ನಲು ಆಸೆ ಪಟ್ಟು ಎಸ್ತರ್‌ಗೆ ಹೇಳಿದೆ, ಅವರ ತಾಯಿ ಆಮ್ಲೆಟ್ ಮಾಡಿದ್ದರು.

ಒಂದು ತಟ್ಟೆಯಲ್ಲಿ ನಾಲ್ಕೈದು ಆಮ್ಲೆಟ್‌ಗಳನ್ನು ಮಾಡಿಕೊಂಡು ತಂದು ನನ್ನ ಮುಂದಕ್ಕೆ ಹಿಡಿದರು. ಅದರಲ್ಲಿ ಒಂದನ್ನು ತೆಗೆದುಕೊಳ್ಳಬೇಕೆಂದು ನನಗೆ ಗೊತ್ತಿಲ್ಲ, ನಾನು ಇಡೀ ತಟ್ಟೆಯನ್ನೇ ಅವರ ಕೈಯಿಂದ ತೆಗೆದುಕೊಂಡೆ. ಅವರಿಗೆ ನಗು ತಡೆಯಲಾಗಲಿಲ್ಲ, ನಗುತ್ತ ಅವರು `ಇಡೀ ತಟ್ಟೆ ಅಲ್ಲ, ಅದರಲ್ಲಿ ಒಂದನ್ನು ಅಥವಾ ಎರಡನ್ನೊ ತಗೊಬೇಕು' ಎಂದರು. ನನಗೆ ಬಹಳ ನಾಚಿಕೆಯಾಯಿತು, ಅವರು ಹೇಳಿದಂತೆ ಒಂದನ್ನು ತೆಗೆದುಕೊಂಡೆ. ಬ್ರಾಹ್ಮಣ ಹುಡುಗನಾದ ನಾನು ಕ್ರಿಶ್ಚಿಯನ್ ಜಗತ್ತಿಗೆ ಎಷ್ಟು ಪರಕೀಯನಾಗಿದ್ದೆ ಎಂಬುದಕ್ಕೆ ಇದು ಉದಾಹರಣೆ.

ಅವರ ಮನೆಯವರೆಲ್ಲ ನನ್ನನ್ನು ಕಂಡರೆ ಇಷ್ಟಪಡುತ್ತಿದ್ದರು. ಬೇರೆಯ ಹುಡುಗರಂತೆ ಎಸ್ತರ್ ನನ್ನ ಬಳಿ ಮನೆಪಾಠಕ್ಕೆ ಬರುತ್ತಿದ್ದಳು. ಬೇರೆಯ ಹುಡುಗರು ಪಾಠಕ್ಕೆ ಪ್ರತಿಯಾಗಿ ನನಗೆ ಹಣವನ್ನು ಕೊಟ್ಟರೆ ಎಸ್ತರ್‌ನಿಂದ ನನ್ನ ಪಾಠಕ್ಕೆ ಪ್ರತಿಯಾಗಿ ಸಿಕ್ಕಿದ್ದು ಮುಗ್ಧವಾದ ಪ್ರೀತಿ. ಆ ದಿನಗಳಲ್ಲಿ ನನಗೆ ಮೀನು ಸಾಕುವುದು ಬಹಳ ಪ್ರಿಯವಾದ ಸಂಗತಿಯಾಗಿತ್ತು. ಗಾಜಿನ ಪಾತ್ರೆಯೊಂದರಲ್ಲಿ ನನ್ನ ವಿದ್ಯಾರ್ಥಿಯೊಬ್ಬ ತಂದು ಕೊಟ್ಟ ಹಾಸನದ ಕೆರೆಯ ಮೀನನ್ನೆ ಬಿಟ್ಟುಕೊಂಡಿದ್ದೆ.

ಆಗೀಗ ಮೀನುಗಳು ಮತ್ತು ಅವುಗಳ ಆಟ, ಚಲನವಲನವನ್ನು ತತ್ಪರವಾಗಿ ನೋಡುವುದು ನನ್ನ ಪ್ರಿಯ ಕೆಲಸವಾಗಿತ್ತು. ನಾನು ಹೀಗೆ ಮೈಮರೆತು ಒಂದು ವಿಷಯದಲ್ಲಿ ಮಗ್ನವಾಗುವುದನ್ನು ಕಂಡಾಗ ಎಸ್ತರ್‌ಗೆ ಕೆಟ್ಟ ಕೋಪ ಬರುತ್ತಿತ್ತು. `ಏನ್ರಿ ಮಾಡ್ತಿದಿರ? ಅದನ್ನೇ ನೋಡ್ತಾ ಕೂತ್ಕೊಂಡು... ಇಲ್ಲಿ ಬಂದು ಪಾಠ ಮಾಡಬಾರದ?' ಅನ್ನುತ್ತಿದ್ದಳು. ಆಗಲೂ ಅವಳು ಮಾತಿನಲ್ಲಿ ನಿಷ್ಠುರ ಹುಡುಗಿ.
ನನ್ನ ಜೊತೆ ನಮ್ಮಜ್ಜಿಯ ತಂಗಿಯೊಬ್ಬರಿದ್ದರು.

ಅವರು ನನ್ನ ಮತ್ತು ಎಸ್ತರ್ ನಡುವಿನ ಮಾತು, ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನಮ್ಮಿಬ್ಬರ ಆತ್ಮೀಯತೆಯಿಂದಾಗಿ ಕೆಲವೊಮ್ಮೆ ಇಬ್ಬರಿಗೂ ಒಟ್ಟಿಗೆ ಊಟ ಬಡಿಸುತ್ತಿದ್ದರು. ನನ್ನ ತಮ್ಮ ನಮ್ಮಿಬ್ಬರ ಪ್ರೇಮಕ್ಕೆ ಸಹಕಾರಿಯಾಗಿದ್ದ. ಒಂದು ದಿನ ನನ್ನ ಚಿಕ್ಕಮ್ಮ ನನಗೆ ಬಹಳ ಕೋಪ ಬರುವ ಹಾಗೆ ಮಾತಾಡಿದರು. ಅವರು ನನ್ನ ಕಿವಿಯ ಹತ್ತಿರ ಬಂದು `ಏ ಅನಂತು ಬೇಕಾದ್ರೆ ಆ ಹುಡುಗಿನ ಇಟ್ಟುಕೊಂಡು ಬಿಡು, ಮದುವೆ ಗಿದುವೆ ಆಗೋಕ್ಕೆ ಹೋಗ್ಬೇಡ' ಅಂದರು.

ನನಗೆ ವಿಚಿತ್ರವಾಗಿ ಕೋಪ ಬಂದು `ನೀವು ಆ ರೀತಿ ಮಾತಾಡಬಾರದು ಚಿಕ್ಕಿ' ಅಂದು ಸುಮ್ಮನಾಗಿಬಿಟ್ಟೆ. ಆಗಿನ್ನೂ ನನ್ನ ತಂಗಿಗೆ ಮದುವೆಯಾಗಿರಲಿಲ್ಲ. ನಾನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ಅವಳಿಗೆ ಸಂಬಂಧ ಹುಡುಕುವುದು ಕಷ್ಟ ಎಂದು ನನಗೆ ಗೊತ್ತಿತ್ತು. ನಾನು ಎಸ್ತರನ್ನು ಮದುವೆಯಾಗುವುದೆಂದು ಆಗಾಗಲೇ ನಿರ್ಧರಿಸಿದ್ದರಿಂದ ನಮ್ಮ ಮದುವೆಯಾಗಲು ನನ್ನ ತಂಗಿಯ ಮದುವೆಯಾಗಲೇಬೇಕಿತ್ತು.

ಇದಾದ ಕೆಲವು ದಿನಗಳಲ್ಲೆ ನನ್ನ ತಂಗಿಗೆ ಮದುವೆ ಗೊತ್ತಾಗಿದೆಯೆಂದು ಅಪ್ಪ ತಿಳಿಸಿದರು. ಅಪ್ಪನ ಹತ್ತಿರ ಮದುವೆ ಮಾಡುವಷ್ಟು ಹಣವಿರಲಿಲ್ಲ ಎಂದು ನನಗೆ ತಿಳಿದಿತ್ತು. ಅದಕ್ಕಾಗಿ ನಾನು ಯೋಚಿಸಿ ತುಂಬ ಟ್ಯೂಷನ್ ಹೇಳಿ ಸ್ವಲ್ಪ ಹಣ ಸಂಪಾದನೆ ಮಾಡಿದೆ. ಹಾಸನದಲ್ಲಿ ಒಬ್ಬ ಮುಸಲ್ಮಾನರ ಬಟ್ಟೆ ಅಂಗಡಿಯೊಂದಿತ್ತು. ಅವರು ಅಸಲು ಬೆಲೆಗೆ ನನಗೆ ಮದುವೆಗೆ ಬೇಕಾದ ಬಟ್ಟೆಗಳನ್ನು ಒದಗಿಸಿಕೊಟ್ಟರು.

ಆ ಅಂಗಡಿ ಮಾಲೀಕರ ಮಗ ನನ್ನ ಬಳಿ ಮನೆಪಾಠಕ್ಕೆ ಬರುತ್ತಿದ್ದರಿಂದ ನನ್ನ ಮೇಲೆ ಅವರಿಗೊಂದು ವಿಶ್ವಾಸವಿತ್ತು. ನಮ್ಮಪ್ಪ ಅವಸರದಲ್ಲಿ ಒಂದು ಹುಡುಗನನ್ನ ತಾವೇ ನೋಡಿ ನಿರ್ಧರಿಸಿ ನನ್ನ ತಂಗಿಗೆ ಗೊತ್ತುಮಾಡಿಬಿಟ್ಟಿದ್ದರು. ನಾನು ಒಮ್ಮೆ ಊರಿಗೆ ಹೋದಾಗ ನನ್ನ ತಂಗಿ ಏನೋ ಅನಾರೋಗ್ಯದಿಂದ ಒದ್ದಾಡಿಕೊಳ್ಳುತ್ತಿದ್ದಳು. ನಾನು ಅವಳ ಪಕ್ಕ ಕುಳಿತು ಪ್ರೀತಿಯಿಂದ `ಏನೇ ಕುಮಾರಿ ಏನಾಗಿದೆಯೆ?' ಅಂದದ್ದೆ ಅವಳಿಗೆ ದುಃಖ ತಡೆಯಲಾಗದೆ `ನನಗೆ ಈ ಸಂಬಂಧದಲ್ಲಿ  ಸಂತೋಷವಿಲ್ಲ' ಎಂದಳು.

 ಆಗಾಗಲೆ ಮಾತುಕೊಟ್ಟಾಗಿತ್ತು, ನೆಂಟರಿಷ್ಟರಿಗೆಲ್ಲ ವಿಷಯ ತಿಳಿದು ಹೋಗಿತ್ತು. ಲಗ್ನಪತ್ರಿಕೆ ಬರೆಸಿ ಹಂಚುವುದೊಂದು ಕೆಲಸ ಮಾತ್ರ ಬಾಕಿಯಿತ್ತು. ನನ್ನ ಅಮ್ಮನಿಗೆ ಅವಳ ಮಾತು ಕೇಳಿ ಬಹಳ ಗಾಬರಿ, ಭಯವಾಯಿತು. ಮುಂದೇನು ಮಾಡುವುದೆಂದು ತೋಚದೆ ಅವರು ದಿಕ್ಕೆಟ್ಟಂತಾದರು.

ಆಗ ನಾನು ಬಲವಾಗಿ ನನ್ನ ತಂಗಿಯ ಜೊತೆ ನಿಂತು `ಇದರಲ್ಲಿ ಮರ‌್ಯಾದೆ ಪ್ರಶ್ನೆ ಏನೂ ಇಲ್ಲ, ಕುಮಾರಿಗೆ ಇಷ್ಟವಿಲ್ಲದ ಈ ಮದುವೆ ನಡೆಯಕೂಡದು' ಎಂದೆ. ಅಪ್ಪನಿಗೆ ನನ್ನ ಈ ಮಾತಿನಿಂದ ರೋಷ ಬಂತು. ನಾನು ಹೀಗೆ ಹೇಳಿದ್ದೆ ಅವರು ಉಪ್ಪರಿಗೆಯ ಮೆಟ್ಟಿಲನ್ನು ಧಡಧಡನೆ ಹತ್ತಿ ಧಡಧಡ ಇಳಿದು ಬಂದು `ನನ್ನನ್ನು, ನನ್ನ ಮರ‌್ಯಾದೆಯನ್ನು ನೀನು ನಾಶಮಾಡುತ್ತಿದ್ದೀಯ' ಎಂದರು. ಅದಕ್ಕೆ ನಾನು ಅವರಿಗೆ `ಅಪ್ಪ ಹಾಗೆಲ್ಲ ಏನೂ ಇಲ್ಲ, ಈ ಮದುವೆಗೆ ನನ್ನ ಮಗನ ವಿರೋಧವಿದೆ ಅಂತ ಹೇಳಿಬಿಡಿ ಕೇಳಿದವರಿಗೆ' ಎಂದೆ.

ಅಪ್ಪನಿಗೆ ನನ್ನ ಮೇಲೆ ವಿಶ್ವಾಸವೂ ಇತ್ತು, ಜೊತೆಗೆ ಮಗಳ ಜೀವನ ತನ್ನ ನಿರ್ಧಾರದಿಂದ ಹಾಳಾಗಬಾರದು ಎನ್ನಿಸಿತು. ಅವರು ನನ್ನ ಮಾತಿಗೆ ಒಪ್ಪಿ ಮದುವೆಯನ್ನು ರದ್ದು ಮಾಡಿದರು. ಎಲ್ಲೋ ಒಂದು ಕಡೆ ಅಪ್ಪನ ಬದುಕಿನ ಬಹುಪಾಲು ಮುಖ್ಯ ವಿಷಯದ ನಿರ್ಧಾರದಲ್ಲಿ ಈ ಬಗೆಯ ಒತ್ತಾಯ ಅಗತ್ಯವಾಗಿತ್ತು. ಇದನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದೆ. ನನ್ನ ಆ ದಿನದ ಈ ಕಟು ನಿರ್ಧಾರದ ಬಗ್ಗೆ ನನಗೆ ಈಗಲೂ ಸಂತೋಷವಿದೆ.

ಕೆಲ ದಿನಗಳ ನಂತರ ಬೇರೊಂದು ಸಂಬಂಧವನ್ನು ನೋಡಿ ತಂಗಿಯ ಮದುವೆ ಮಾಡಿದೆವು. ಅವಳು ಈಗಲೂ ಸುಖವಾಗಿ ಸಂಸಾರ ತೂಗಿಸುತ್ತ ನಾಲ್ಕು ಮಕ್ಕಳ ತಾಯಿಯಾಗಿದ್ದಾಳೆ. ಅವಳನ್ನು ಮತ್ತೂರಿಗೆ ಮದುವೆ ಮಾಡಿಕೊಟ್ಟದ್ದು. ಅದು ಬಹುಪಾಲು ಸಂಸ್ಕೃತವನ್ನೇ ಆಡುಭಾಷೆಯಾಗಿ ಬಳಸುತ್ತೇವೆಂದು ಹೆಮ್ಮೆ ಪಡುವ ಜನರ ಊರು. ನನ್ನ ತಂಗಿಯ ಮಗಳು ಬಹಳ ಸೊಗಸಾಗಿ ಕುಮಾರವ್ಯಾಸನ ಭಾರತವನ್ನು ವಾಚನ ಮಾಡುತ್ತಾಳೆ. ನನ್ನ ಭಾವ ಮತ್ತೂರಿನ ಶಿವಳ್ಳಿ ಸ್ಮಾರ್ತ ಬ್ರಾಹ್ಮಣ. ನನ್ನ ತಂದೆ ಶಿವಳ್ಳಿ ವೈಷ್ಣವ ಬ್ರಾಹ್ಮಣರು.

ಒಂದು ಉಪಜಾತಿಯಲ್ಲಿ ಸಂಬಂಧವನ್ನು ಬೆಳೆಸುವಷ್ಟು ಉದಾರತೆ ಅಪ್ಪನಿಗೆ ಆಗಲೇ ಇತ್ತು ಎಂಬುದನ್ನು ನಾನಿಲ್ಲಿ ನೆನೆಯಬೇಕು.ಇವೆಲ್ಲದರಿಂದ ಎಸ್ತರಳನ್ನು ಮದುವೆಯಾಗಲು ನಾನು ಬಹಳ ದಿನ ಕಾಯಬೇಕಾಯಿತು. ಹಾಸನದಲ್ಲಿ ಸ್ವಲ್ಪ ಕಾಲ ಉಪನ್ಯಾಸಕನಾಗಿ ಆನಂತರ ನಾನು ಮೈಸೂರಿಗೆ ಬಂದೆ. ಆಗ ನನ್ನಮ್ಮ ನನ್ನ ಜೊತೆ ಇದ್ದರು. ನಮ್ಮಿಬ್ಬರ ಸಂಬಂಧದ ಬಗ್ಗೆ ತಿಳಿದದ್ದೆ ಅಮ್ಮನಿಗೆ ಒಂದು ಬಗೆಯ ಮನೋವ್ಯಾಧಿ ಶುರುವಾಯಿತು.

ಇದ್ದಕ್ಕಿದ್ದ ಹಾಗೆ ಎಚ್ಚರ ತಪ್ಪಿ ಬಿದ್ದು ಬಿಡುತ್ತಿದ್ದರು, ಏನೋ ನೋವು ಎನ್ನುತ್ತ ಬಡಬಡಿಸುತ್ತಿದ್ದರು. ಡಾಕ್ಟರಿಗೆ ತೋರಿಸಿದಾಗ ಇದು ಮನಸ್ಸಿನ ಖಾಯಿಲೆ ಎಂದರು. ಅಮ್ಮ ತುಂಬ ಕಷ್ಟಪಟ್ಟರು ಈ ಸಮಯದಲ್ಲಿ. ನನಗೆ ಬಾಲ್ಯದಿಂದಲೂ ಅಮ್ಮನ ಮೇಲೆ ತುಂಬ ಪ್ರೀತಿ. ಚಿಕ್ಕಂದಿನಲ್ಲಿ ಕಕ್ಕಸ್ಸಿಗೆಂದು ಅವಳು ಗುಡ್ಡಕ್ಕೆ ಹೋದಾಗ ಅವಳಿಗಾಗಿ `ಏ ಅಮ್ಮ ಎಲ್ಲಿ ಸತ್ತಿಯೇ?' ಎಂದು ಕೂಗಿಕೊಳ್ಳುತ್ತಿದ್ದೆ. ಅವಳು ಓಗೊಟ್ಟು ನನಗೆ ಉತ್ತರಿಸುವವರೆಗೂ ಅಳುತ್ತಿದ್ದೆ. ಈಗ ಅವಳು ನನ್ನ ವಿಷಯಕ್ಕಾಗಿ ಹೀಗೆ ನೊಂದುಕೊಳ್ಳುತ್ತಿದ್ದುದನ್ನು ನನ್ನಿಂದ ಸಹಿಸಲಾಗುತ್ತಿರಲಿಲ್ಲ, ನನ್ನ ಮನಸ್ಸಿನಲ್ಲಿ ಕೆಟ್ಟ ತೊಳಲಾಟ ಶುರುವಾಯಿತು.

ಅಲಿ ಅಕ್ಬರ್‌ಖಾನ್‌ರ ಬಳಿ ಹಲವು ವರ್ಷಗಳಿದ್ದು ಸರೋದ್ ಕಲಿತು ರಾಜೀವ ಮೈಸೂರಿಗೆ ವಾಪಸ್ ಬಂದಿದ್ದ. ಡಾಕ್ಟರೇಟ್ ಮಾಡುವ ಮನಸ್ಸು ಮಾಡಿದ್ದ, ಅವನು ನನಗೆ ಹೆಚ್ಚು ಹತ್ತಿರವಾದದ್ದು ಈ ದಿನಗಳಲ್ಲಿ. ನನಗೆ ಧೈರ್ಯ ತುಂಬಿ ಎಸ್ತರಳನ್ನು ಮದುವೆ ಮಾಡಿಕೊಳ್ಳಲು ಹೇಳಿದ್ದು ಅವನೇ. ನನ್ನ ಸ್ಥಿತಿಯನ್ನು ನೋಡಿ `ನೀನು ಏನಾದರೂ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಎಲ್ಲ ಒಡೆದು ಹೋಗುತ್ತೆ, ಯಾವುದೂ ಉಳಿಯೋದಿಲ್ಲ ಅನಂತ್' ಎಂದ. ರಾಜೀವ್ ಕೂಡ ಮದುವೆಯಾದದ್ದು ನಾವು ಮದುವೆಯಾದ ಆಸುಪಾಸಿನಲ್ಲಿ. ರಾಜೀವ್ ಮದುವೆ ಆಗಿದ್ದವರ ಹೆಸರು ಮಾಧವಿ ಅಂತ.

ಅವರಿಗೆ ರಾಜೀವನಿಗಿಂತ ಸ್ವಲ್ಪ ಹೆಚ್ಚು ವಯಸ್ಸು, ಆಕೆಗೆ ಮೊದಲ ಸಂಬಂಧದಿಂದ ಒಬ್ಬ ಮಗನೂ ಇದ್ದ. ದೊಡ್ಡ ಮನೆತನದ ಹೆಂಗಸು. ತುಂಬ ಸುಂದರವಾಗಿದ್ದರು, ಆದರೆ ರಾಜೀವನಿಗಿಂತ ವಯಸ್ಸಾಗಿತ್ತು. ಆಗ ನಮಗೆ ಪೋಲಂಕಿ ರಾಮಮೂರ್ತಿ ಹತ್ತಿರದ ಸ್ನೇಹಿತ. ಸಿಳ್ಳೆಯಲ್ಲೆ ಸಿನಿಮಾ ಹಾಡುಗಳನ್ನು ತನಗೇ ಹಾಡಿಕೊಳ್ಳುವ ಭಾವಜೀವಿ. ಪ್ರಚಂಡ ಪ್ರತಿವಾದಿ.

ರಾಮಮೂರ್ತಿ ಅನುರಾಧಳನ್ನು ಪ್ರೀತಿಸಿ ಮುಂದೆ ಮದುವೆಯಾದ. ಆಗ ರಾಜೀವ ರಾಮಮೂರ್ತಿಗೆ `ಏನೊ ನೀನು ರೂಮಲ್ಲಿ ಕೂತುಕೊಂಡು ಸಿಳ್ಳೆ ಹೊಡೆದೇ ಅಷ್ಟು ಚೆಂದದ ಹುಡುಗಿಯನ್ನ ಮದುವೆಯಾಗಿಬಿಟ್ಟೆ. ನಾನು ಸರೋದ್ ನುಡಿಸಿ ಕಷ್ಟಪಟ್ಟು, ನನಗಿಂತ ವಯಸ್ಸಾದವಳನ್ನ ಮದುವೆಯಾದೆ' ಎನ್ನುತ್ತಿದ್ದ. ಇದು ಆಗ ನಮ್ಮ ನಡುವೆ ಇದ್ದ ಪಾಪ್ಯುಲರ್ ಜೋಕ್.

ಎಸ್ತರ್ ಕಡೆಯಿಂದಾಗಲಿ, ಅವರ ಮನೆಯವರ ಕಡೆಯಿಂದಾಗಲಿ ತನ್ನನ್ನು ತಕ್ಷಣವೆ ಮದುವೆಯಾಗಬೇಕೆಂಬ ಒತ್ತಡವೇನೂ ನನ್ನ ಮೇಲಿರಲಿಲ್ಲ. ಆಗಾಗಲೆ ಎಸ್ತರ್ ಬಿ.ಎಸ್‌ಸಿ. ಓದಲು ಬೆಂಗಳೂರಿನ ಕಾಲೇಜೊಂದನ್ನು ಸೇರಿದ್ದಳು. ಆಗೀಗ ನಾನು ಅವಳನ್ನು ಅಲ್ಲಿಯೇ ಭೇಟಿಯಾಗುತ್ತಿದ್ದೆ. ನನಗೆ ನೆನಪಿರುವಂತೆ ನಾನು ಮೊದಲು ಎಸ್ತರಳನ್ನು ಅಲ್ಲಿ ಭೇಟಿಯಾದಾಗ ನೀಡಿದ ಉಡುಗೊರೆ ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ.

ಇದು ನಾನು ಅವಳಿಗೆ ನೀಡಿದ ಮೊದಲ ಉಡುಗೊರೆ. ಹೀಗೇ ಎಷ್ಟು ದಿನ ತಳ್ಳುವುದೆಂದು ಯೋಚಿಸಿ ಅಮ್ಮನನ್ನು ಒಂದು ದಿನ ಕೂರಿಸಿಕೊಂಡು `ನಾನು ಎಸ್ತರಳನ್ನು ಮದುವೆಯಾಗುತ್ತಿದ್ದೇನೆ' ಎಂದು ಖಚಿತವಾಗಿ ಹೇಳಿದೆ. ಮರುದಿನವೆ ರಿಜಿಸ್ಟರ್ ಆಫೀಸಿನಲ್ಲಿ ನೋಂದಣಿ ಮಾಡಿಸಿದೆ. ನಟ ಅಂಬರೀಷ್ ಅವರ ತಂದೆ ಆಗ ರಿಜಿಸ್ಟ್ರಾರ್ ಆಗಿದ್ದರು, ಅವರೆ ರಿಜಿಸ್ಟರ್ ಮಾಡಿದ್ದು.

ಇದರ ಪ್ರಕಾರ ಒಂದಷ್ಟು ದಿನದ ಅವಧಿಯಲ್ಲಿ ಯಾವ ತಕರಾರೂ ಇಲ್ಲದೆ ಇದ್ದರೆ ನಾನು ಮದುವೆಯಾಗಬಹುದಿತ್ತು. ಅಪ್ಪನಿಗೆ ಈ ವಿಷಯ ಗೊತ್ತಾಗಿ ಅಮ್ಮನನ್ನು ಊರಿಗೆ ಕರೆದುಕೊಂಡು ಹೋದರು. ನನ್ನ ಜೊತೆ ಇದರ ಬಗ್ಗೆ ಯಾವ ಮಾತುಕತೆಯನ್ನೂ ಆಡಲಿಲ್ಲ. ಬೇಗವಳ್ಳಿಯ ಹತ್ತಿರ ತೆಂಗಿನಕೆರೆಗೆ ಸೇರಿದಂತಿರುವ ಮಠದ ಜಮೀನನ್ನು ಗೇಣಿಗೆ ತೆಗೆದುಕೊಂಡು ಅಲ್ಲೊಂದು ಹೆಂಚು ಹೊದಿಸಿದ ಗುಡಿಸಲು ಮನೆಯಲ್ಲಿ ಇರಲು ಶುರುಮಾಡಿದರು.

ನನಗೆ ಈ ಎಲ್ಲ ಬೆಳವಣಿಗೆಯಿಂದ ಏನು ಮಾಡುವುದು ತಿಳಿಯದೆ ಕಂಗಾಲಾಗಿಬಿಟ್ಟೆ. ನಮ್ಮ ವಿವಾಹ ನೋಂದಣಿ ಆಗಿತ್ತೇ ಹೊರತು ನಾನು ಮತ್ತು ಎಸ್ತರ್ ಒಟ್ಟಿಗೆ ಇರಲಿಲ್ಲ. ಆಗ ನಾನು ಎನ್.ಸಿ.ಸಿ. ಆಫೀಸರ್ ಆಗಲು ಅರ್ಜಿ ಹಾಕಿ ಆಯ್ಕೆಯಾದೆ. ಹೈದರಾಬಾದಿನಲ್ಲಿ ಪೈಲಟ್ ಆಫೀಸರ್ ತರಬೇತಿ ಮಾಡಲು ಹೋದೆ.

ನಿತ್ಯ ಡ್ರಿಲ್ ಏರೊಪ್ಲೇನ್ ಚಾಲನೆ ಬಗ್ಗೆ ಪಾಠ, ಹವಾ ಬಗ್ಗೆ ಪಾಠ, ಕ್ರಾಸ್ ಕಂಟ್ರಿ ವಾಕಿಂಗ್, ರನ್ನಿಂಗ್, ಶೂಟಿಂಗ್ ಪ್ರಾಕ್ಟೀಸ್- ಹೀಗೆ ಶಿಸ್ತಿನ ಜೀವನಕ್ಕೆ ವಿಧೇಯನಾದೆ. ನನ್ನ ವೈಯಕ್ತಿಕ ತಳಮಳಗಳನ್ನು ಕಡೆಗಣಿಸಲು ಪ್ರಯತ್ನಿಸುತ್ತಿದ್ದೆ. ನಿತ್ಯ ಬೆಳಗ್ಗೆ ಬೇಗನೆ ಏಳಬೇಕಿತ್ತು. ದಿನವಿಡೀ ಏನಾದರೊಂದು ಕೆಲಸ ಇದ್ದೇ ಇರುತ್ತಿತ್ತು. ಮೂರು ತಿಂಗಳು ಹೀಗೆ ಇದ್ದು ವಾಪಸ್ ಬಂದೆ, ಬಂದವನೆ ಎಸ್ತರನ್ನು ಕಾನೂನಿನ ಪ್ರಕಾರ ಮದುವೆಯಾದೆ.

ಎಸ್ತರಳನ್ನು ನಾನು ಮದುವೆಯಾದದ್ದು ನನ್ನ ನೈತಿಕ ಪ್ರಜ್ಞೆಯಿಂದ ಮಾತ್ರವೆ? ಪ್ರೀತಿ ಮದುವೆಗೆ ಮುಂಚಿನಷ್ಟೇ ತೀವ್ರವಾಗಿತ್ತೆ? ಬಹಳಷ್ಟು ಪ್ರೇಮವಿವಾಹಗಳು ಹೀಗೇ ಆಗಬಹುದೆಂದು ನನ್ನ ಊಹೆ, ಆಗಬಾರದು ಎಂಬ ಆಸೆ. ಧೈರ್ಯ ಮಾಡಿ ಮದುವೆಯಾಗುವ ಹೊತ್ತಿಗೆ ಗಂಡು ಹೆಣ್ಣಿನ ನಡುವೆ ಪ್ರೀತಿಯ ತೀವ್ರತೆ ಕಳೆದುಹೋಗಿರುತ್ತದೆಯೊ ಏನೊ? ಆದರೆ ಎಸ್ತರ್‌ಗೆ ಈ ಬಗೆಯ ಸಮಸ್ಯೆಗಳಿರಲಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಬದುಕಿಗೆ ಎಸ್ತರ್ ನನಗಿಂತ ಹೆಚ್ಚು ಪ್ರಾಮಾಣಿಕಳು. ವ್ಯಾವಹಾರಿಕವಾಗಿ ಯೋಚಿಸುವವಳು. ಏಪ್ರಿಲ್ 1961ರಲ್ಲಿ ಬೆಂಗಳೂರಿನಲ್ಲಿ ಸರಳವಾಗಿ ನಮ್ಮ ಮದುವೆಯಾಯಿತು.

ಮದುವೆಯ ನಂತರ ನನಗೆ ಏನೇನೋ ಮುಜುಗರಗಳಾದವು. ನಾವು ಧಾರ್ಮಿಕ ಸಂಪ್ರದಾಯದಂತೆ ಮದುವೆಯಾಗಲಿಲ್ಲ. ಎಸ್ತರ್ ಮನೆಯಲ್ಲಿ ನಮಗೆಲ್ಲ ಊಟ ಹಾಕುವಾಗ ಸೂಟು ಬೂಟು ಹಾಕಿಕೊಂಡು ಒಬ್ಬ ಪಾದ್ರಿ ಬಂದಿದ್ದ. ಊಟಕ್ಕೆ ಮೊದಲು ಅವನು ಎದ್ದು ನಿಂತು `ಔಛಿಠಿ ್ಠ ಟ್ಟ' ಅಂದ. ತನ್ನ ಕನ್ನಡ ಬೆರೆತ ಇಂಗ್ಲಿಷಿನಲ್ಲಿ ಏನೋ ಪ್ರಾರ್ಥನೆ ಮಾಡಿದ. ನನಗೆ ಇದೆಲ್ಲ ಇರಿಸು ಮುರಿಸು ತರಿಸಿತ್ತು. ಇದು ನಾನು ಬ್ರಾಹ್ಮಣ ಜಾತಿಯವನು ಎಂಬ ಕಾರಣಕ್ಕಲ್ಲ, ಜಾತಿಯನ್ನು ಮೀರಬೇಕೆನ್ನುವ ನನ್ನ ಎಲ್ಲ ಪ್ರಯತ್ನಗಳಿಗೆ ಇದು ವಿರುದ್ಧವಾದುದಾಗಿತ್ತು.

`ನಾನಿಲ್ಲಿ ಏನು ಮಾಡುತ್ತಿದ್ದೇನೆ?' ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಿದ್ದು ನನ್ನನ್ನು ಅಲ್ಲಿಯೇ. ನನ್ನ ಸ್ನೇಹಿತರೆಲ್ಲ `ಅನಂತು ನಿನ್ನ ಹೆಸರನ್ನು ಬದಲಿಸಿಬಿಡೋಣ ಆಂಟೋನಿ ಮಾರ್ಟಿನ್ ಅಂತ' ಎಂದು ಹಾಸ್ಯ ಮಾಡಿ ನಗುತ್ತಿದ್ದರು. ಅವರೆಲ್ಲ ನನ್ನ ಮತ್ತು ಎಸ್ತರ್ ಜೊತೆ ಸ್ನೇಹದಿಂದಿದ್ದು ಹೀಗೆ ಗೇಲಿ ಮಾಡಿ ಪರಿಸ್ಥಿತಿ ಗಂಭೀರವಾಗುವುದನ್ನು ತಡೆದರು.

ನಮ್ಮ ಮದುವೆಗೆ ಸಾಕ್ಷಿಯಾಗಿ ಸಹಿ ಮಾಡಿದವನು ಟಿ.ಜಿ. ರಾಘವ. ಮದುವೆ ಆದ ಕೂಡಲೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕಿತ್ತು. ರಾಘವ ಟ್ಯೂಷನ್ ಮಾಡಿ ಸಂಪಾದಿಸಿದ ಹಣದಲ್ಲಿ ಐನೂರು ರೂಪಾಯಿ ಕೊಟ್ಟ, ಅದರಲ್ಲೆ ಬೇಕಾದ ವಸ್ತುಗಳನ್ನು ಕೊಂಡುಕೊಂಡೆವು. ಮೈಸೂರಿನಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಯನ್ನು ನಮಗೆ ಬಾಡಿಗೆಗೆ ತೇಜಸ್ವಿ ಮಾಡಿಕೊಟ್ಟರು.

ನಮ್ಮ ಮದುವೆಯ ನಂತರ ತೇಜಸ್ವಿ, ಶಾಮಣ್ಣ, ಡಾ. ಶಾಮಸುಂದರ್ (ಅರ್ಧಕೊಡ ನೀರು ಕುಡಿಯುವ ಗೆಳೆಯ!) ನಿತ್ಯ ಮನೆಗೆ ಬರುತ್ತಿದ್ದರು, ಸಾಹಿತ್ಯದ ಚರ್ಚೆ, ತೇಜಸ್ವಿಯ ಮೃಗ, ಪಕ್ಷಿ ಲೋಕದ ಅನುಭವಗಳ ಬಗ್ಗೆ ಮಾತುಕತೆ, ತೇಜಸ್ವಿ-ಶಾಮಣ್ಣರ ನಡುವಿನ ಹುಡುಗಾಟಿಕೆಗಳು ನಮ್ಮ ನಡುವೆ ಸದಾ ಇರುತ್ತಿದ್ದವು. ಅಭ್ಯಾಸಗತವಾದ ನಮ್ಮ ಲೋಕದೃಷ್ಟಿಯನ್ನೆ ಬದಲಾಯಿಸಬಲ್ಲ ತೇಜಸ್ವಿ ತಮಾಷೆಗಳು ಹುಬ್ಬುಗಂಟಿನ ನನ್ನ ಆ ದಿನಗಳಲ್ಲಿ ನನ್ನ ಪಾಲಿಗೆ ಕಷಾಯಗುಣ ಪಡೆದಿದ್ದವು.

ಈ ಸಮಯದಲ್ಲಿ ನಾನು ಸಾಕಷ್ಟು ಬರೆದೆ ಮತ್ತು ಓದಿದೆ. ನನಗೆ ಆಗ ಸಂಬಳ ರೂ.250. ಪೈಲಟ್ ಆಫೀಸರ್ ಆಗಿ ನನಗೆ ಬರುತ್ತಿದ್ದ 50 ರೂಪಾಯಿಯನ್ನ ಅಮ್ಮನಿಗೆ ಕಳಿಸುತ್ತಿದ್ದೆ. ಅಪ್ಪ ನನ್ನಿಂದ ಏನೂ ತೆಗೆದುಕೊಳ್ಳುತ್ತಿರಲಿಲ್ಲ. ತಿಂಗಳ ಖರ್ಚಿಗೆ ಹಣ ಸಾಕಾಗದಾಗ ನಾನು ಪೋಲಂಕಿ ರಾಮಮೂರ್ತಿಯಿಂದ 50 ರೂಪಾಯಿ ಸಾಲ ಪಡೆದು ಸಾಧ್ಯವಾದಾಗ ಹಿಂದಕ್ಕೆ ಕೊಡುತ್ತಿದ್ದೆ. ಎಲ್ಲ ಮನೆಕೆಲಸವನ್ನೂ ಎಸ್ತರ್ ಮಾಡುತ್ತಿದ್ದಳು.

ನನ್ನ ಬಿಳಿ ಅಂಗಿಗಳು ಅಪ್ಪಟ ಬಿಳಿಯಾಗಿ ಕಾಣುತ್ತಿದ್ದುದು ಎಸ್ತರ್ ಕಲ್ಲಿನ ಮೇಲೆ ಬಟ್ಟೆ ಒಗೆಯುತ್ತಿದ್ದ ಆ ಕಾಲದಲ್ಲಿ ಮಾತ್ರ. ನಮ್ಮದು ಪುಟ್ಟ ಮನೆ. ಈ ಮನೆಯಲ್ಲೇ ನನ್ನ ಸೋಷಲಿಸ್ಟ್ ಗೆಳೆಯ ಕಾಳೇಗೌಡರ ಮಂಡ್ಯದ ಸಂಬಂಧಿ ಬೋರೇಗೌಡ ಎಂಬ ವಿದ್ಯಾರ್ಥಿಯೂ ಇರುತ್ತಿದ್ದ. ವಾರಕ್ಕೊಮ್ಮೆ ತನ್ನ ಹಳ್ಳಿಗೆ ಹೋದವನು ಬೆಣ್ಣೆ ಮೊಟ್ಟೆ ತಂದು ಬರುತ್ತಿದ್ದ. ಅವನು ಈಗಲೂ ನನ್ನ ಇನ್ನೊಬ್ಬ ತಮ್ಮನಂತೆಯೇ ಇದ್ದಾನೆ, ಊರಿನಲ್ಲಿ ರೈಸ್‌ಮಿಲ್ ನಡೆಸಿಕೊಂಡು ಅನುಕೂಲವಾಗಿದ್ದಾನೆ. ಎಸ್ತರ್‌ನ್ನ ಈಗ ಅಜ್ಜನಾಗಿರುವ ಅವನು ಕರೆಯೋದು `ಸಿಸ್ಟರ್' ಎಂದು.

ರಾಜೀವನ ಅತ್ತೆ ಪೇಂಟರ್ ಆಗಿದ್ದರು. ನಾನು `ಕಾಫಿಹೌಸ್'ಗೆ ನಿತ್ಯ ಸಂಜೆ ಹೋಗುವಾಗ ಬಸುರಿಯಾಗಿದ್ದ ಎಸ್ತರನ್ನು ಸೈಕಲ್ ಮೇಲೆ ಕೂರಿಸಿಕೊಂಡು ಬಂದು ರಾಜೀವನ ಮನೆಯಲ್ಲಿ ಬಿಟ್ಟು ಹಿಂದಿರುಗುವಾಗ ಮನೆಗೆ ವಾಪಸ್ ಕರೆದುಕೊಂಡು ಬರುತ್ತಿದ್ದೆ. ಅವಳ ಜೊತೆಗೆ ರಾಜೀವನ ಹೆಂಡತಿ ಮಾಧವಿಯೂ ಆಗ ಗರ್ಭಿಣಿಯಾಗಿದ್ದರು, ತಾಯಿ ಶ್ರಿಮತಿ ವೆಂಕಟೇಶರೂ ಇರುತ್ತಿದ್ದರು. ಮಾಧವಿಗೆ ಮೊದಲ ಸಂಬಂಧದ ಎತ್ತರದ ಚೆಲುವ ಮಗನಿದ್ದ. ನನ್ನ ಮಗ ಹುಟ್ಟಿದ ಒಂದೆರಡು ದಿನಗಳಲ್ಲಿ ಮಾಧವಿ-ರಾಜೀವರಿಗೂ ಮಗ ಹುಟ್ಟಿದ.

ಕಾಫಿಹೌಸ್‌ನಲ್ಲಿ ಅಡಿಗರ ಜೊತೆ ಭೇಟಿ, ನಿನ್ನೆ ಎತ್ತಿ ಮುಗಿಸದ್ದನ್ನು ಇವತ್ತು ಮತ್ತೆ ಎತ್ತಿ ಸತತವಾಗಿ ನಡೆಯುತ್ತಿದ್ದ ಚರ್ಚೆಗಳು ನನ್ನ ಹಲವು ಬರವಣಿಗೆಗಳಿಗೆ ಪ್ರೇರಕವಾಗಿದ್ದವು. ಬೈ ಟು ಕಾಫಿಗಳ ನಡುವೆ, ಸಿಗರೇಟ್ ಹೊಗೆಯಲ್ಲಿ ಆವೃತರಾಗಿ ನಮ್ಮದೇ ಒಂದು ಲೋಕವನ್ನು ಈ ಸ್ನೇಹಶೀಲ ಕಾಫಿ ಹೌಸ್‌ನಲ್ಲಿ ನಿರ್ಮಿಸಿಕೊಂಡಿದ್ದೆವು.

ಆದರೆ ಇದು ಯಾವಾಗ ಅಸಾಧ್ಯವಾಯಿತು ಹೇಳುವೆ, ಸಾಹಿತ್ಯದಲ್ಲಿ ಆಧುನಿಕತೆಯನ್ನು ತರುತ್ತಿದ್ದ ನಾವು ಆ ಕಾಲದಲ್ಲಿ ಆಧುನಿಕವೆಂದು ನಾವು ತಿಳಿದಿದ್ದ ಜ್ಯೂಕ್ ಬಾಕ್ಸ್ ಕಾಫಿ ಹೌಸಿಗೆ ಕಾಲಿಟ್ಟಿತು. ಅದರ ಏರು ದನಿಯ ಸದ್ದಿನ ಗೌಜಿಗೆ ಆಕರ್ಷಿತರಾಗಿ ಯುವಜನರು ಕಾಫಿಹೌಸನ್ನು ತುಂಬತೊಡಗಿದರು. ಆಧುನಿಕತೆಯೇ ಆಧುನಿಕ ಸಾಹಿತ್ಯ ಚರ್ಚೆಯ ಬೆತ್ತದ ಸುಖಾಸನಗಳನ್ನು ನಮ್ಮಿಂದ ದೋಚಿತು.

ನಾವು ಪಾರ್ಕ್‌ಗಳ ಮರಗಳ ಬುಡ ಹುಡುಕಿದೆವು. ಕಾಫಿಯಿಲ್ಲದೆ ನಮ್ಮ ಚರ್ಚೆಗಳು ಕುಂದಿದವು. ಬಿಯರ್ ಪಬ್ಬಿಗೆ ಹೋಗೋಣವೆಂದರೆ ನಮ್ಮಲ್ಲಿ ಕಾಸಿಲ್ಲ. ಅಡಿಗರು ನವ್ಯರಾದರೂ ಕುಡಿಯುವವರಲ್ಲ, ಕುಡಿದವರಂತೆ ಮಾತಾಡುತ್ತಿದ್ದ ಬೇಂದ್ರೆ ಲೋಕದವರು.

ಮದುವೆಯ ನಂತರವೂ ನಾನು ಸಸ್ಯಾಹಾರಿಯಾಗಿದ್ದೆ. ಎಸ್ತರ್‌ಗೆ ಮೀನು ಬಹಳ ಇಷ್ಟ, ಬಸುರಿನಲ್ಲಿ ತುಂಬ ತಿನ್ನಲು ಆಸೆ ಪಡುತ್ತಿದ್ದಳು, ರೈಲ್ವೆ ಸ್ಟೇಷನ್ ಹತ್ತಿರ ಬಹಳ ಚೆನ್ನಾಗಿ ಮೀನನ್ನು ಹುರಿಯುತ್ತಿದ್ದ ಹೋಟೆಲೊಂದಿತ್ತು. ಅಲ್ಲಿಂದ ಅವಳಿಗೆ ಇಷ್ಟವಾದ್ದನ್ನು ಕಟ್ಟಿಸಿಕೊಂಡು ಬರುತ್ತಿದ್ದೆ. ಅವಳು ಒಬ್ಬಳೇ ತಿನ್ನಬೇಕೆಂದು ಬೇಸರ ಮಾಡಿಕೊಳ್ಳುತ್ತಿದ್ದಳು, ಆಗ ನಾನೂ ತಿನ್ನಲು ಶುರುಮಾಡಿದೆ. ಸಂತೋಷಕರ ಒಂದು ವರ್ಷದ ದಾಂಪತ್ಯದಲ್ಲಿ ಮಗ ಶರತ್ 6 ನವೆಂಬರ್ 1962ರಂದು ಹುಟ್ಟಿದ.

ಅವನಿಗೆ ಹುಟ್ಟಿದ ಕೆಲವು ದಿನಗಳಲ್ಲೆ ವೂಪಿಂಗ್ ಕಾಫ್ ಎಂಬ ಭಯಂಕರ ಕೆಮ್ಮು ಶುರುವಾಯಿತು. ಆ ವಯಸ್ಸಿನಲ್ಲಿ ವೂಪಿಂಗ್ ಕೆಮ್ಮು ಶುರುವಾದರೆ ಮಗು ಬದುಕುವುದೇ ಕಷ್ಟ ಎಂದರು. ಕುವೆಂಪು ಅವರಿಗೆ ಔಷಧಿ ಕೊಡುತ್ತಿದ್ದ ಡಾ. ಕಿಣಿ ಎಂಬುವವರು ಆಗ ಮೈಸೂರಿನಲ್ಲೆ ಇದ್ದರು. ಬಹಳ ಒಳ್ಳೆಯ ಡಾಕ್ಟರು ಅವರು. ಅವರು ಅವನಿಗೆ ಔಷಧ ಕೊಟ್ಟ ಮೇಲೆ ನಿಧಾನವಾಗಿ ಅವನ ಕೆಮ್ಮು ಇಳಿಯಿತು.

ಶರತ್ ಅನಾರೋಗ್ಯವಾಗಿದ್ದಾಗಲೆ ಲೋಹಿಯಾ ನಮ್ಮ ಮನೆಗೆ ಬಂದಿದ್ದು. ನಮ್ಮ ಜೊತೆ ಒಂದಷ್ಟು ಹೊತ್ತು ಕಳೆದು ಊಟ ಮಾಡಿದರು. ಊಫಿಂಗ್ ಕೆಮ್ಮಿನ ಬಗ್ಗೆ ಎಲ್ಲ ವಿಷಯಗಳನ್ನೂ ಕೇಳಿ ತಿಳಿದುಕೊಂಡರು. ನನ್ನ ಜೊತೆ ಎಷ್ಟೋ ಅಷ್ಟೇ ಎಸ್ತರ್ ಜೊತೆ ಅಡಿಗೆ ಮನೆಯಲ್ಲೇ ನಿಂತು ಮಾತಾಡಿದರು.

ಈ ಬಾರಿ ಬಂದಾಗ ಲೋಹಿಯಾರನ್ನು ಕೃಷ್ಣರಾಜ ಸಾಗರ್ ಹೋಟೇಲ್‌ನಲ್ಲಿ ಇಳಿಸಿದ್ದರು. ಅವರ ಜೊತೆ ಬೆಳಗಿನ ಉಪಹಾರಕ್ಕೆಂದು ಶಾಂತವೇರಿ ನನ್ನನ್ನು ಕರೆದುಕೊಂಡು ಹೋದರು. ಲೋಹಿಯಾ ತುಂಬಾ ಸಜ್ಜನಿಕೆಯ ಮಾತುಗಾರ. ಮತ್ತು ಮಾತಾಡುವುದರಲ್ಲಿ ಖುಶಿ ಇದ್ದವರು. ಊಟದ ಹೊತ್ತಿನಲ್ಲಿ ಅವರಷ್ಟು ಉಪಚಾರ ಮಾಡುವವರನ್ನು ಕಾಣುವುದು ಅಪರೂಪ. ಮೊದಲು ನನಗೆ ಅವರು ಪಪ್ಪಾಯಿಯನ್ನು ಒತ್ತಾಯಪಡಿಸಿ ಹೊಟ್ಟೆತುಂಬಾ ತಿನ್ನಿಸಿದರು.

ಸಸ್ಯಾಹಾರಿಯಾದರೂ ಲೋಹಿಯಾ ಮೊಟ್ಟೆಯೊಂದನ್ನು ಮಾತ್ರ ತಿನ್ನುತ್ತಿದ್ದರು. ನನಗೂ ಅವರಿಗೂ ಆಮ್ಲೆಟ್, ಬ್ರೆಡ್‌ನ್ನು ತರಿಸಿದರು. ಭಾಷೆ ಬಗ್ಗೆ ನಮ್ಮ ಮಾತು ತಿರುಗಿತು. ಲೋಹಿಯಾ ಹೇಳಿದರು- `ನೀನೊಬ್ಬ ಲೇಖಕ. ಇದನ್ನು ಬರೆದು ಪ್ರಚಾರ ಮಾಡಬೇಕು ನೀನು. ನಾವೆಲ್ಲಾ ಇಂಗ್ಲೀಷ್‌ನ್ನು ಗ್ರಹಿಕೆಯ ಭಾಷೆಯಾಗಿ ಕಲಿಯಬೇಕು. ಆದರೆ ಅಭಿವ್ಯಕ್ತಿ ಭಾಷೆಯಾಗಿ ಅಲ್ಲ.

ವೇದೋಪನಿಷತ್ತುಗಳನ್ನು ಸಂಸ್ಕೃತದಿಂದ ಇಂಗ್ಲೀಷ್‌ಗೆ ಭಾಷಾಂತರ ಮಾಡಿದ  ಮ್ಯಾಕ್ಸ್ ಮುಲ್ಲರ್ ಸಂಸ್ಕೃತದಲ್ಲಿ ಮಾತನಾಡುವ ಶಕ್ತಿ ಪಡೆದಿದ್ದನೋ ಇಲ್ಲವೋ. ಆದರೆ ಅವನ ಗ್ರಹಿಸುವ ಶಕ್ತಿಯಿಂದ ಎಂಥಾ ಕೆಲಸವನ್ನು ಅವನು ಮಾಡುವುದು ಸಾಧ್ಯವಾಯಿತು! ಹಾಗೇ ನಮಗೆ ಯುರೋಪ್ ಗ್ರಹಿಕೆಗೆ ಬೇಕು. ಅಭಿವ್ಯಕ್ತಿಗೆ ಮಾತ್ರ ನಮ್ಮ ನಮ್ಮ ಭಾಷೆಗಳೇ ಬೇಕು. ಆದರೆ ನಿನಗೊಂದು ಸಲಹೆ- ಕನ್ನಡವನ್ನು ನೀವು ಗ್ರಾಜುಯೇಶನ್ ಶಿಕ್ಷಣ ಮಟ್ಟಕ್ಕೆ ಬಳಸಿ. ಪೋಸ್ಟ್ ಗ್ರಾಜುಯೇಶನ್ ಹಂತಕ್ಕೆ ಬಂದಾಗ ಹಿಂದಿಯನ್ನು ಬಳಸಬೇಕೆಂದು ನಾನು ಸೂಚಿಸುತ್ತೇನೆ'.

ನನಗಾಗ ಥಟ್ಟನೆ ಹೊಳೆದಿದ್ದನ್ನು ಹೇಳಿದೆ `ಸರ್, ಒಂದು ಭಾಷೆ ಪೋಸ್ಟ್ ಗ್ರಾಜುಯೇಶನ್ ಅಧ್ಯಯನಕ್ಕೆ ಸಲ್ಲದು ಎನ್ನಿಸಿದರೆ ಅದು ಪ್ರೈಮರಿ ಅಧ್ಯಯನಕ್ಕೂ ಸಲ್ಲದು ಎಂದು ತಿಳಿಯಬೇಕು'. ನನಗಾದ ಆಶ್ಚರ್ಯವೆಂದರೆ ಇದನ್ನು ಕೇಳಿಸಿಕೊಂಡ ಲೋಹಿಯಾ ಯಾವ ಪ್ರತಿವಾದವನ್ನು ಹೂಡಲಿಲ್ಲ. ನನ್ನ ಮಾತನ್ನು ಒಪ್ಪಿಕೊಂಡು ಹೇಳಿದರು `ನಿನ್ನ ಮಾತನ್ನು ಒಪ್ಪುವೆ.

ಇಂಡಿಯಾಕೊಂದು ಸಾಮಾನ್ಯ ಭಾಷೆ ಇರಬೇಕು. ಆದರೆ ಅದು ಇಂಗ್ಲೀಷ್ ಆಗಿರಬಾರದೆಂದು ನಾನು ಇದನ್ನು ಹೇಳಿದೆ. ನಿನ್ನ ಮಾತನ್ನು ನಾನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ. ಭಾರತ ಬಹುಭಾಷಿಕ ದೇಶವಾಗಿದೆ. ಎಲ್ಲಾ ಭಾಷೆಗಳೂ ಇಲ್ಲಿ ರಾಷ್ಟ್ರಭಾಷೆಗಳೇ ಆಗಿವೆ. ವಿಶ್ವಸಂಸ್ಥೆಯಲ್ಲಿ ಇರುವಂತೆ ನಮ್ಮ ಎಲ್ಲಾ ಪ್ರಾಂತಗಳಿಂದ ಬಂದ ಜನ ದೆಹಲಿಯಲ್ಲಿ ಕೂಡುವಂತಾದರೆ ಭಾಷೆಯಿಂದ ಭಾಷೆಗೆ ಅನುವಾದ ಮಾಡಲು ಹಲವರು ಇರಬೇಕು. ಆಗ ಸ್ವರಾಜ್ಯ ಎನ್ನುವುದು ಎಲ್ಲಾ ಭಾಷೆಗಳಲ್ಲಿ ನೈಜವಾಗುತ್ತದೆ'.
(ಮುಂದುವರೆಯುವುದು)


ಯು.ಆರ್. ಅನಂತಮೂರ್ತಿ ಅವರ ಆತ್ಮಕಥೆ `ಸುರಗಿ'ಯನ್ನು ಅಕ್ಷರರೂಪಕ್ಕೆ ತಂದವರು ಜ.ನಾ. ತೇಜಶ್ರೀ. ಹೆಗ್ಗೋಡಿನ `ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT