ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್... ಐವಿಎಲ್...ಈಗ ಕೆಬಿಎಲ್

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ `ಇಂಡಿಯನ್ ಪ್ರೀಮಿಯರ್ ಲೀಗ್~ ಎಂಬ ಮಾಯೆಯ ಬೆನ್ನತ್ತಿ ಹೋಗುತ್ತಿದೆ ಕ್ರೀಡಾಲೋಕ. ಈ ಆಟಕ್ಕೆ ಸಿಕ್ಕ ಮನ್ನಣೆ ಅಪಾರ. ಹೊಸ ಪ್ರತಿಭೆಗಳ ಶೋಧಕ್ಕೂ ಇದು ನೆರವಾಗಿದೆ.

ಆದ್ದರಿಂದ ಚುಟುಕು ಆಟದ ಮಾದರಿಯತ್ತ ಒಲವು ಹೆಚ್ಚಾಗುತ್ತಿದೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನ ಸವಿ ಮಾತ್ರ ಅನುಭವಿಸುತ್ತಿದ್ದ ಕ್ರೀಡಾಪ್ರೇಮಿಗಳಿಗೆ ಐಪಿಎಲ್ ಮಾಡಿದ ಮೋಡಿ ಮೆಚ್ಚುವಂತದ್ದು.

ಇದರ ಮುಂದುವರಿದ ಭಾಗವಾಗಿ ಚಾಂಪಿಯನ್ಸ್ ಲೀಗ್‌ಗೂ ಸಹ ಹೆಚ್ಚಿನ ಪ್ರಾಮುಖ್ಯತೆ ಲಭಿಸುತ್ತಿದೆ. ಇದಾದ ನಂತರ ಈಗ ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್    (ಕೆಬಿಎಲ್) ಸರದಿ.

ಐಪಿಎಲ್ ಆಟಗಾರರಿಗೆ ಯಾವಾಗ ಖ್ಯಾತಿ ಸಿಕ್ಕಿತೋ, ಹಣದ ಹೊಳೆ ಹರಿಯಿತೋ ಆಗ ಕೆಲವರಿಗೆ ಇದ್ದ ನೋವೆಲ್ಲಾ ಮಾಯವಾಯಿತು.

ಗಾಯದ ಸಮಸ್ಯೆ ಹೇಳಿಕೊಂಡು ರಾಷ್ಟ್ರೀಯ ತಂಡದಿಂದ ದೂರವಿದ್ದವರು ದಿಢೀರನೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. 50 ಓವರ್‌ಗಳ ಕ್ರಿಕೆಟ್‌ನ ಸೊಬಗಿಗೆ ದಕ್ಕೆ ತರುವಂಥಹ ಜನಪ್ರಿಯತೆ, ಆಕರ್ಷಣೆ, ಹಣ ಇದಕ್ಕೆ ಹರಿದು ಬಂದಿದೆ.

ಈಗಲೂ ಬರುತ್ತಿದೆ. ಅದಕ್ಕಾಗಿಯೇ ಆಟಗಾರರು ದೇಶವನ್ನು ಪ್ರತಿನಿಧಿಸಲು ಗಾಯದ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ ಚುಟುಕು ಆಟಕ್ಕೆ ಮಾತ್ರ ಯಾವುದೇ ಸಮಸ್ಯೆ ಇಲ್ಲವಂತೆ!
 
ಚುಟುಕು ಆಟದ ಮಾದರಿಗೆ ಸಿಕ್ಕ ಜನಪ್ರಿಯತೆಯಿಂದ ಕುಸ್ತಿ ಹಾಗೂ ವಾಲಿಬಾಲ್ ಸಹ ಇದೇ ಮಾದರಿಯಲ್ಲಿ ಹೆಜ್ಜೆ ಹಾಕಿದವು. ಇದೇ ವರ್ಷದಲ್ಲಿ ನಡೆದ ಇಂಡಿಯನ್ ವಾಲಿ ಲೀಗ್ (ಐವಿಎಲ್) ಚೊಚ್ಚಲ ಆವೃತ್ತಿ ನಡೆದದ್ದು ಅದಕ್ಕೆ ಸಾಕ್ಷಿ.

ಐವಿಎಲ್‌ನ ಮೊದಲ ಆವೃತ್ತಿಯಲ್ಲಿ ಆರು ತಂಡಗಳ 90 ಆಟಗಾರರು ಭಾಗವಹಿಸಿದ್ದರು. ಆದರೆ, ಈ ಸಲ ನಡೆಯುವ ಐವಿಎಲ್‌ಗೆ ಮತ್ತಷ್ಟು ತಂಡಗಳು ಸೇರ್ಪಡೆಯಾಗಲಿವೆ. ಅದೇ ರೀತಿ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಸಹ ಈ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಚೊಚ್ಚಲ ಕೆಬಿಎಲ್ ನವೆಂಬರ್ 5ರಿಂದ ಆರಂಭವಾಗಲಿದೆ.

ಐಪಿಎಲ್, ಐವಿಎಲ್‌ನ ಎಲ್ಲಾ ಪಂದ್ಯಗಳು ಕೇವಲ ಉದ್ಯಾನ ನಗರಿಯಲ್ಲಿ ಮಾತ್ರ ನಡೆದವು. ಈ ಆಟದ ಮೋಜು ಸವಿಯಲು ಬೆಂಗಳೂರಿನ ಜನರಿಗೆ ಮಾತ್ರ ಸಾಧ್ಯವಾಯಿತು.

ಇದರಿಂದ ನಿರಾಸೆ ಅನುಭವಿಸಿದ್ದು ಸಾಕಷ್ಟು ಅಭಿಮಾನಿಗಳು. ಆದ್ದರಿಂದ ಈ ಸಲದ ಕೆಬಿಎಲ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿಲ್ಲ.

ಮಂಡ್ಯ, ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಬೆಳಗಾವಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ಸಿದ್ದಗೊಳ್ಳುತ್ತಿದೆ. ಇದರಿಂದ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಬ್ಯಾಡ್ಮಿಂಟನ್ ಪ್ರೀತಿ ಹೆಚ್ಚಾಗಲು ಸಾಧ್ಯವಾಗಬಹುದು.

ಚೊಚ್ಚಲ ಆವೃತ್ತಿಯಲ್ಲಿ  ಎಂಟು ತಂಡಗಳು ಪಾಲ್ಗೊಳ್ಳಲಿದ್ದು, 128 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಐಪಿಎಲ್‌ನಲ್ಲಿ ಆಟಗಾರರನ್ನು ಹರಾಜು ಮಾಡುವಂತೆ ಇಲ್ಲಿಯು ಹರಾಜು ಮಾಡಲಾಗುತ್ತದೆ ಒಟ್ಟು ಎಂಟು ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸುತ್ತಾರೆ. ಕನಿಷ್ಠ 2.50 ಲಕ್ಷ ರೂ. ಯಿಂದ ಮೂರು ಲಕ್ಷದವರೆಗೂ ಆಟಗಾರರನ್ನು ಕೊಂಡುಕೊಳ್ಳಲಾಗುತ್ತದೆ.
 
ಅನೂಪ್ ಶ್ರೀಧರ್, ರೋಹನ್ ಕ್ಯಾಸ್ಟೆಲಿನೊ, ಆದಿತ್ಯ ಪ್ರಕಾಶ್, ಗುರು ಪ್ರಸಾದ್, ಜಗದೀಶ್ ಯಾದವ್, ಜಿ. ನಿಶ್ಚಿತಾ ಹಾಗೂ ಸಿಂಧು ಭಾರದ್ವಾಜ್ ಸೇರಿದಂತೆ ಇತರ ಪ್ರಮುಖ ಆಟಗಾರರು ಕೆಬಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಅರವಿಂದ್ ಭಟ್, ಅಂತರರಾಷ್ಟ್ರೀಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಸಹ ಆಡುವ ವಿಷಯ ಖಚಿತ ಪಡಿಸಿದ್ದಾರೆ. ಇದರಿಂದ ಇವರು ಅಭಿಮಾನಿಗಳ ಸಂಭ್ರಮಕ್ಕೆ ರಂಗು ತುಂಬಲಿದ್ದಾರೆ.

ಐಪಿಎಲ್, ಚಾಂಪಿಯನ್ಸ್ ಲೀಗ್ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದು ಪಕ್ಕಾ ವ್ಯವಹಾರ ಎನ್ನುವುದರಲ್ಲಿಯೂ ಯಾವ ಸಂಶಯವಿಲ್ಲ. ಇದಕ್ಕೆ ಬಣ್ಣದ ಲೋಕದ ತಾರೆಯರು ಪ್ರವೇಶ ಮಾಡಿದ್ದು, ಇನ್ನೂ ಹೆಚ್ಚಿನ ರಂಗು ಬರಲು ಕಾರಣ.

ಫ್ರಾಂಚೈಸಿಗಳ ತಾಳಕ್ಕೆ ಆಟಗಾರರು ಕುಣಿಯುತ್ತಿದ್ದಾರೋ, ಆಟಗಾರರಿಗೆ ತಕ್ಕಂತೆ ಫ್ರಾಂಚೈಸಿಗಳು ಕೇಳುತ್ತಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಆದರೆ ಚೊಚ್ಚಲ ಬ್ಯಾಡ್ಮಿಂಟನ್ ಲೀಗ್‌ಗೆ ಇಂಥದ್ದೊಂದು ಯಶಸ್ಸು ಸಾಧ್ಯನಾ ಎನ್ನುವ ಪ್ರಶ್ನೆಗೆ ಭವಿಷ್ಯದ ದಿನಗಳಲ್ಲಿ ಉತ್ತರ ಸಿಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT