ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಹೊಳೆ ನಿವಾಸಿಗಳ ಸ್ಥಳಾಂತರಕ್ಕೆ ಯೋಜನೆ ಸಿದ್ಧ

Last Updated 10 ಜನವರಿ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: `ದೇವಾಲಯಗಳ ತೊಟ್ಟಿಲು' ಖ್ಯಾತಿಯ ಪ್ರವಾಸಿ ತಾಣ ಐಹೊಳೆಯ ರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಲ್ಲಿನ ನಿವಾಸಿಗಳನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಒಂದೆರಡು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.

ಬಾದಾಮಿ ಚಾಲುಕ್ಯರ ಕಾಲದ ಇತಿಹಾಸ ಪ್ರಸಿದ್ಧ ಐಹೊಳೆಯು ಕಿಕ್ಕಿರಿದ ಸಾಲು ಮನೆಗಳು, ಮನೆಗಳಿಗೆ ಹೊಂದಿಕೊಂಡಿರುವ ಪುರಾತನ ದೇವಾಲಯಗಳಿಂದ ಅಕ್ಷರಶಃ ಕಿಷ್ಕಿಂಧೆಯಂತಾಗಿ ತನ್ನ ಮೆರುಗು ಕಳೆದುಕೊಂಡಿದೆ.

ಐಹೊಳೆಯಲ್ಲಿರುವ ಪಾರಂಪರಿಕ ಸ್ಮಾರಕಗಳಾದ ವಿಶ್ವವಿಖ್ಯಾತ ದುರ್ಗಾ ದೇವಾಲಯ, ಲಾಡ್‌ಖಾನ್,  ರಾವಳಪಡಿ ಗುಹಾಂತರ, ಹುಚ್ಚುಮಲ್ಲಿ ದೇವಾಲಯ, ಗಳಗನಾಥ ದೇವಾಲಯ, ಜೈನ, ಬೌದ್ಧ, ಶೈವ, ವಿಷ್ಣು, ಸೂರ್ಯ ಸೇರಿದಂತೆ ಒಟ್ಟು 122 ದೇವಾಲಯಗಳು ಸಾರ್ವಜನಿಕರ ಮನೆಗಳ ನಡುವೆ, ಸಂದಿ-ಗೊಂದಿಯಲ್ಲಿ ಸಿಲುಕಿಕೊಂಡು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.
ಇತಿಹಾಸ ಪ್ರಜ್ಞೆಯ ಕೊರತೆಯಿಂದ ಸ್ಥಳೀಯರು ಬಹುಕಾಲದಿಂದ ದೇವಾಲಯಗಳಲ್ಲೇ ಉಳಿದು ಕೊಳ್ಳುವುದು, ಆಡು, ಕುರಿ, ಹಸು, ಎತ್ತುಗಳನ್ನೂ ಸಹ ದೇವಾಲಯದ ಆವರಣದೊಳಗೆ ಕಟ್ಟಿಹಾಕುವುದು ರೂಢಿಯಾಗಿತ್ತು. ಅಲ್ಲದೇ, ಕೆಲವರು ದೇವಾಲಯದ ಅಮೂಲ್ಯ ವಸ್ತುಗಳನ್ನೇ ಹೊತ್ತೊಯ್ದು ತಮ್ಮ ಮನೆಗಳ ಗೋಡೆ, ಮೆಟ್ಟಿಲುಗಳಿಗೆ ಅಳವಡಿಸಿಕೊಂಡಿರುವುದನ್ನು ಮನಗಂಡು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗ್ರಾಮದಲ್ಲಿ ಯಾವುದೇ ತರಹದ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿತ್ತು. ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ಬಂಧದಿಂದ ತೀವ್ರ ಸಮಸ್ಯೆಗೆ ಒಳಗಾಗಿದ್ದ ಸ್ಥಳೀಯರು ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದರು.

ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಐಹೊಳೆ ಸ್ಥಳಾಂತರಕ್ಕೆ ಇದೀಗ ಒಪ್ಪಿಗೆ ಸಿಕ್ಕಲು ಮುಖ್ಯಕಾರಣ `ಐಹೊಳೆ ಅಳಿಯ' ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (ಪತ್ನಿ ಶಿಲ್ಪಾ ತವರೂರು). ಜೊತೆಗೆ ಇಲ್ಲಿನ ಶಾಸಕ ವೀರಣ್ಣ ಚರಂತಿಮಠ ಅವರು ಸಿ.ಎಂ. ಅವರಿಗೆ ಹೆಚ್ಚಿನ ಒತ್ತಡ ತಂದು ಸ್ಥಳಾಂತರ ಕಾರ್ಯಕ್ಕೆ ಚಾಲನೆಗೆ ಕಾರಣರಾಗಿದ್ದಾರೆ.

ಭೂಸ್ವಾಧೀನ:ರೂ 50.41 ಕೋಟಿ ಮೊತ್ತದಲ್ಲಿ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಒಂದೆರಡು ವರ್ಷಗಳಲ್ಲಿ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ' ಎಂದು ಐಹೊಳೆ ಗ್ರಾಮ ಸ್ಥಳಾಂತರ ಕುರಿತು `ಪ್ರಜಾವಾಣಿ'ಗೆ ಗುರುವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಹೇಳಿದರು.

`ಐಹೊಳೆಯಲ್ಲಿರುವ 942 ಮನೆಗಳನ್ನು (ಅಂದಾಜು 5 ಸಾವಿರ ಜನಸಂಖ್ಯೆ) ಸ್ಥಳಾಂತರ ಮಾಡುವ ಸಂಬಂಧ ಅಗತ್ಯವಿರುವ 282 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ವಾರದೊಳಗೆ 4/1 ನೋಟಿಫಿಕೇಶನ್ ಹೊರಡಿಸಲಾಗುವುದು' ಎಂದರು.

ಗ್ರಾಮಸ್ಥರಿಗೆ ಹರ್ಷ: `ಐಹೊಳೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ, ಹಳೆ ಮನೆ ದುರಸ್ತಿ, ಹೊಸ ಮನೆ ಕಟ್ಟುವುದು ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಪುರಾತತ್ವ ಇಲಾಖೆ ನಿರ್ಬಂಧ ವಿಧಿಸಿರುವುದರಿಂದ ಇಲ್ಲಿಯ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು' ಎಂದು ಐಹೊಳೆ ಗ್ರಾಮ ಸ್ಥಳಾಂತರ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಕುರಿ ಹೇಳಿದರು.

`ಬಿದ್ದುಹೋದ ಮನೆಗಳನ್ನು ಸರಿಪಡಿಸಿಕೊಳ್ಳುವುದಕ್ಕೂ ಅವಕಾಶ ಇರದ ಕಾರಣ ಐಹೊಳೆ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ 1997ರಿಂದ ಹೋರಾಟ ನಡೆಸಲಾಗುತ್ತಿತ್ತು. ಇದೀಗ ಸರ್ಕಾರ ಸ್ಥಳಾಂತರಕ್ಕೆ ಮುಂದಾಗಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ' ಎಂದರು.

ಭೂ ಸ್ವಾಧೀನಕ್ಕೆ ವಿರೋಧ: ಪುನರ್ವಸತಿಗೆ ಅಗತ್ಯವಿರುವ 282 ಎಕರೆ ಭೂಮಿಯನ್ನು ಕೊಡಲು ರೈತರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸ್ಥಳಾಂತರ ಕಾರ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಿಲ್ಪಕಲೆಯ ತವರೂರಾಗಿರುವ ಐಹೊಳೆ ಪಾರಂಪರಿಕ ಸ್ಮಾರಕಗಳನ್ನು `ವಿಶ್ವಪರಂಪರೆ' ಪಟ್ಟಿಗೆ ಸೇರಿಸಬೇಕು ಎಂದು ಪ್ರಾಚ್ಯವಸ್ತು ಇಲಾಖೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT