ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಾರ್ಡ್‌ರೋಬ್ ಕಥೆ-ವ್ಯಥೆ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಿಕ್ಷಕರೊಬ್ಬರು ನಿವೃತ್ತಿ ಸಂದರ್ಭದಲ್ಲಿ ಎಲ್ಲ ಹಣವನ್ನೂ ಸೇರಿಸಿದರೂ 30x40 ಅಡಿ ಉದ್ದಗಲದ ನಿವೇಶನದಲ್ಲಿ 16 ಚದರಡಿ ವಿಸ್ತಾರದ ಡ್ಯುಪ್ಲೆಕ್ಸ್ ಮನೆ ಪೂರ್ಣಗೊಳಿಸಲಾಗಲಿಲ್ಲ. ಅನಿವಾರ್ಯವಾಗಿ ಅವರು 15 ವರ್ಷಗಳ ಹಿಂದೆ ಖರೀದಿಸಿದ್ದ, 20x30 ಅಡಿ ನಿವೇಶನದಲ್ಲಿದ್ದ ಪುಟ್ಟ ಮನೆಯನ್ನು ರೂ.15 ಲಕ್ಷಕ್ಕೆ ಮಾರಾಟ ಮಾಡಿದರು. ನಂತರವಷ್ಟೇ ಅವರಿಗೆ ತಮ್ಮ ಹಾಗೂ ಕುಟುಂಬದ ಎಲ್ಲ ಸದಸ್ಯರ ಕನಸಿನಂತೆ `30/40 ಅಡಿ ನಿವೇಶನದ ದೊಡ್ಡ ಮನೆ' ಪೂರ್ಣಗೊಳಿಸಿ ವಾಸಕ್ಕೆ ಹೋಗಲು ಸಾಧ್ಯವಾಯಿತು.

ಗೃಹಪ್ರವೇಶಕ್ಕೆ ಬಂದವರೆಲ್ಲರೂ ಮನೆಯನ್ನು ಒಳಹೊರಗಿನಿಂದ, ಎಲ್ಲ ಮಗ್ಗಲುಗಳಿಂದ ಇಣುಕಿಣುಕಿ ನೋಡಿ, `ಬಿಡಿ ಮೇಷ್ಟ್ರೇ, ಏನೇ ಆದ್ರೂ ಬಹಳ ಚೆಂದವಾಗಿ ಮನೆ ಕಟ್ಸಿದ್ದೀರಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ಮಾತ್ರ `ಎಲ್ಲ ಬಾಗಿಲು, ಕಿಟಕಿಗೂ ತೇಗದ ಮರವನ್ನೇ ಹಾಕ್ಸಿದ್ದೀರಿ. ಇಡೀ ಮನೆಗೆ ಭಿನ್ನ ಬಣ್ಣಗಳ ಗ್ರ್ಯಾನೈಟ್ ಟೈಲ್ಸನ್ನೇ ಹಾಕ್ಸಿದ್ದೀರಿ. ಹಜಾರ, ಅಡುಗೆ ಮನೆ, ಮೂರು ರೂಮ್‌ಗಳು, ಅದರಲ್ಲಿ ಎರಡಕ್ಕೆ ಅಟ್ಯಾಚ್ ಬಾತ್‌ರೂಮು... ಎಲ್ಲ ಚೆನ್ನಾಗಿದೆ ಮೇಷ್ಟ್ರೆ.

ಆದ್ರೆ.... ಯಾಕೆ ಒಂದ್ ರೂಮಿಗೂ ವಾರ್ಡ್ ರೋಬ್ ಮಾಡಿಸಿಲ್ಲ'? ಎಂದು ಮಾತಿನ ಕೊನೆಗೆ ಪ್ರಶ್ನೆ ಎಸೆದು ಮುಖ ಮುಖ ನೋಡಿಕೊಂಡರು. ಮೇಷ್ಟ್ರಿಗೂ ಆ ಕೊನೆ ಮಾತಿಗೆ ಪ್ರತಿಕ್ರಿಯಿಸೋದು ಕಷ್ಟವಾಯಿತು.

ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ವಾಸಕ್ಕೆ ಹೊಸ ಮನೆಗೇ ಸ್ಥಳಾಂತರಗೊಂಡ ಕೆಲವೇ ತಿಂಗಳಲ್ಲಿ ಮಗನ ಮದುವೆಯೂ ನಿಶ್ಚಯವಾಯಿತು. ವರನ ಕಡೆಯವರೇ ಆದರೂ ಮದುವೆಗೆ ಮತ್ತೆ ರೂ.5-6 ಲಕ್ಷ ವೆಚ್ಚ ಮಾಡಬೇಕಾಯಿತು. ಅಲ್ಲಿಗೆ ಹೊಸ ಮನೆಯ ಮೂರೂ ಕೊಠಡಿಗಳಲ್ಲಿ ಒಂದಕ್ಕೂ ವಾರ್ಡ್‌ರೋಬ್ ಮಾಡಿಸುವುದು ಕಷ್ಟವಾಯಿತು.

ಈ ಮಧ್ಯೆ, `ಬಂದವರೆಲ್ಲ ಮನೆ ನೋಡಿ ಚೆನ್ನಾಗಿದೆ ಅಂತಾರೆ. ಕೊನೆಗೆ ಮಾತ್ರ, ಅದೇಕೆ ಒಂದ್ ರೂಮಿಗೂ ವಾರ್ಡ್‌ರೋಬ್ ಮಾಡಿಸಿಲ್ಲ ಎಂದು ಪ್ರಶ್ನಿಸ್ತಾರೆ. ಉತ್ತರಿಸಲು ಕಷ್ಟವಾಗುತ್ತಿದೆ. ಒಂದಕ್ಕಾದರೂ ವಾರ್ಡ್‌ರೋಬ್ ಮಾಡಿಸಬೇಕು' ಎಂದು ಮನೆಯಲ್ಲಿ ಪತ್ನಿ, ಮಕ್ಕಳು ಮೆಲ್ಲಗೆ ವರಾತ ಶುರು ಹಚ್ಚಿದರು. ಮೇಷ್ಟ್ರಿಗೆ ಕಷ್ಟಕ್ಕಿಟ್ಟುಕೊಂಡಿತು.

ಮನೆ ಪೂರ್ಣಗೊಳಿಸಲೇ ಕಷ್ಟವಾಗಿತ್ತು. ಜತೆಗೆ ಗೃಹಪ್ರವೇಶದ ಖರ್ಚು. ತಿಂಗಳು ಕಳೆದೇ ಇಲ್ಲ ಎನ್ನುವಷ್ಟರಲ್ಲಿ ಹಿರಿ ಮಗನ ಮದುವೆ ವೆಚ್ಚ. ಒಂದೇ ಎರಡೇ? ಈಗ ಒಂದು ವಾರ್ಡ್‌ರೋಬ್ ಎಂದರೆ ಏನಿಲ್ಲವೆಂದರೂ ರೂ.70-80 ಸಾವಿರ ಖರ್ಚಾಗುತ್ತೆ. ಬರೋ ಪಿಂಚಣಿ ಹಣ ಮನೆ ಖರ್ಚಿಗೆ ಸಾಕಾಗುತ್ತಿದೆ. ವಾರ್ಡ್‌ರೋಬ್‌ಗೆ ಅಷ್ಟು ಹಣ ಎಲ್ಲಿಂದ ತರೋದು? ಇದು ಮೇಷ್ಟ್ರ ಪ್ರಶ್ನೆ.

ಆದರೆ, ಕಿರಿ ಮಗ ಬಿಡಲಿಲ್ಲ. ಪೀಠೋಪಕರಣ ಸಿದ್ಧಪಡಿಸುವ ಕಾರ್ಪೆಂಟರ್(ಮನೆ ಬಾಗಿಲು-ಕಿಟಕಿ ಕೆಲಸ ಮಾಡುವ ಕಾರ್ಪೆಂಟರ್‌ಗಿಂತ ಇವರು ತುಸು ಭಿನ್ನ. ಪೀಠೋಪಕರಣ ತಯಾರಿಕೆಯಲ್ಲಿ ಹೆಚ್ಚು ಕುಶಲತೆ ಪಡೆದಿರುತ್ತಾರೆ) ಪತ್ತೆ ಹಚ್ಚಿ ಕರೆತಂದೇ ಬಿಟ್ಟ. ಮನೆ, ಮೂರೂ ಕೊಠಡಿಗಳನ್ನೆಲ್ಲ ಕಣ್ಣಲ್ಲೇ ಹಾಗೇ ಅಳೆದು ತೂಗಿದ ಕಾರ್ಪೆಂಟರ್ ಮಾತಿಗೆ ಕುಳಿತ. ಮೇಷ್ಟ್ರು, `ನೋಡ್ರಿ ಸದ್ಯಕ್ಕೆ ನಮಗೆ ಒಂದ್ ರೂಮಿಗಷ್ಟೇ ವಾರ್ಡ್‌ರೋಬ್ ಸಾಕು. ವಾಲ್ ಟು ವಾಲ್ ವಾರ್ಡ್‌ರೋಬ್ ಎಷ್ಟಾಗುತ್ತೆ? ನಿಮ್ಮ ಕೂಲಿ ಎಷ್ಟು ಹೇಳಿ?' ಎಂದರು.

ಅಷ್ಟರಲ್ಲಾಗಲೇ ಮನೆ ಮಂದಿಯ ಮನಸ್ಸಿನ ಭಾವನೆಗಳನ್ನು, ಸುಂದರ ಮನೆಯ ಒಳಹೊರಗನ್ನೂ ಅಳೆದಿದ್ದ ಕಾರ್ಪೆಂಟರ್ ಮಹಾಶಯ, `ಸಾರ್ ಹೆಚ್ಚೇನೂ ಆಗಲ್ಲ. ಎಲ್ಲಾ ಸೇರಿ ಒಂದೈವತ್ತು ಸಾವಿರ ರೂಪಾಯಿ ಆಗ್ಬಹುದು. ನೀವೇನ್ ವರಿ ಮಾಡ್ಕೋಬೇಡಿ. ಕಡಿಮೆ ದುಡ್ಡಲ್ಲೇ ಚೆಂದಾಗಿ ವಾರ್ಡ್‌ರೋಬ್ ಮಾಡ್ಕೊಡ್ತೀನಿ' ಎಂದು ಬಣ್ಣದ ಮಾತುಗಳನ್ನಾಡಿದ.

ವೃತ್ತಿ ಬದುಕಿನಲ್ಲಿ ಸಾವಿರಾರು ಮಕ್ಕಳಿಗೆ ಪಾಠ ಹೇಳಿ ಅನುಭವ ಪಡೆದಿದ್ದ ಮೇಷ್ಟ್ರಿಗೂ ಕಾರ್ಪೆಂಟರ್ ಮಾತಿನಲ್ಲಿ ಅನುಮಾನಿಸುವಂತಹದ್ದೇನೂ ಕಾಣಿಸಲಿಲ್ಲ. ಆಸಾಮಿ ನಂಬಬಹುದು ಎನಿಸಿತು. ಮನೆಯವರ ಮುಖವನ್ನೂ ನೋಡಿದ್ರು. ಅವರೂ ಮೇಷ್ಟ್ರು ಮುಖವನ್ನೇ ಕುತೂಹಲದಿಂದ ಇಣುಕ್ತಿದ್ರು.

`ಐವತ್ ಸಾವಿರ ಆಗೋದಾದ್ರೆ ಮಾಡಿಸ್ಬಹುದು' ಎಂದು ಮೇಷ್ಟ್ರು ಒಪ್ಪಿಗೆ ಕೊಟ್ಟೇಬಿಟ್ರು. ಅಷ್ಟಕ್ಕೇ ಕಾದಿದ್ದಂತೆ ಇದ್ದ ಕಾರ್ಪೆಂಟರ್, ಬೇಕಾದ ಸಾಮಾನುಗಳ ಪಟ್ಟಿ ಹೇಳಿದ. ಕಿರಿ ಮಗ ಬರೆದುಕೊಂಡ. ಅಲ್ಲಿಗೆ ಒಂದು ಹಂತ ಮುಗಿಯಿತು.
ಆದರೆ, ಆ ಸಾಮಗ್ರಿಗಳ ಖರೀದಿಗೆ ಹೋದಾಗಲೇ ಸಮಸ್ಯೆಯ ಇನ್ನೊಂದು ಮುಖದ ಪರಿಚಯವಾಯಿತು. ಪ್ಲೈವುಡ್‌ಗಳಲ್ಲಿಯೇ ಹಲವಾರು ಬ್ರಾಂಡ್‌ಗಳಿದ್ದವು. ಫಾರ್ಮಿಕಾ ಗುಣಮಟ್ಟ ಆಧರಿಸಿ ಬೆಲೆಯಲ್ಲಿಯೂ ಭಾರಿ ವ್ಯತ್ಯಾಸವಿದ್ದಿತು. ಬಾಗಿಲುಗಳನ್ನು ಜೋಡಿಸಲು ಹಿಂಜಸ್ ಅಲ್ಯುಮಿನಿಯಂದಿರಲೋ? ಉಕ್ಕಿನದಿರಲೋ?

ಹಿತ್ತಾಳೆಯದಿರಲೋ? ಎಂಬ ಪ್ರಶ್ನೆ ಎದುರಾಯಿತು. ಇಂತಹುದನ್ನೆಲ್ಲ ಒಂದೇ ಬಾರಿ ಮಾಡಿಸಲು ಆಗೋದು. ಒಳ್ಳೆಯದೇ ಹಾಕಿಸಿ ಎಂದು ಕಾರ್ಪೆಂಟರ್ ಕಿವಿಕಚ್ಚಿದ. ಹೀಗೆ ಒಳ್ಳೆಯ ಐಟಂ ಆಯ್ಕೆ ಮಾಡುತ್ತಾ ಹೋದಂತೆಲ್ಲಾ ವೆಚ್ಚವೂ ಹೆಚ್ಚುತ್ತಾ ಹೋಯಿತು. ಇನ್ನು ಗೋಂದು,  ಮೊಳೆ, ಸ್ಕ್ರೂಗಳು ಎಂದು ಸಣ್ಣ ಸಣ್ಣ ವಸ್ತುಗಳ ಖರೀದಿಗೇ ಸಾಕಷ್ಟು ಹಣ ಕೈಬಿಟ್ಟಿತು.

ವಾರ್ಡ್‌ರೋಬ್ ಮಾಡಿದ್ದಕ್ಕೆ ಚದರಡಿ ಲೆಕ್ಕದಲ್ಲಿ ಕಾರ್ಪೆಂಟರ್ ಕೂಲಿ. ನಂತರ ಅದಕ್ಕೆ ಲಪ್ಪ ಮೆತ್ತಿಸಿ ಅಂತಿಮ ಸ್ಪರ್ಶ ನೀಡಲು ಬೇರೆಯದೇ ವ್ಯಕ್ತಿಯನ್ನು ಕರೆಸಬೇಕಾಯಿತು. ಹೀಗೆ ಒಂದಕ್ಕೆ ಇನ್ನೊಂದು ಹೊಸ ಖರ್ಚು ಸೇರುತ್ತಾ ಹೋಗಿ ವಾರ್ಡ್‌ರೋಬ್ ಪೂರ್ಣಗೊಂಡಾಗ ಒಟ್ಟು 85,000 ರೂಪಾಯಿ ಕೈಬಿಟ್ಟಿತ್ತು. ಅಂದರೆ, ಮೊದಲ ಅಂದಾಜಿಗಿಂತ ಶೇ 70ರಷ್ಟು ಅಧಿಕ ವೆಚ್ಚ!

ವಾರ್ಡ್‌ರೋಬೇನೋ ಪೂರ್ಣಗೊಂಡು ಮನೆ ಮಂದಿಯೆಲ್ಲರ  ಬಟ್ಟೆಗಳನ್ನೂ ಸುರಕ್ಷಿತವಾಗಿ ಇಡಲು ಸ್ಥಳಾವಕಾಶವಾಯಿತು. ಮೇಷ್ಟ್ರು ಪತ್ನಿಯೂ ರೇಷ್ಮೆ ಸೀರೆಗಳನ್ನು ಹ್ಯಾಂಗರ್‌ನಲ್ಲಿ ತೂಗಿಬಿಟ್ಟರು. ಮಕ್ಕಳೂ ತಮ್ಮ ಬಟ್ಟೆಗಳಿಗೆ ಜಾಗ ಮಾಡಿಕೊಂಡರು. ಆದರೆ, ಮೇಷ್ಟ್ರು ಜೇಬು ಖಾಲಿ ಯಾಗಿತ್ತು, ಹುಬ್ಬು ಗಂಟು ಹಾಕಿಕೊಂಡಿತ್ತು!
ನಂತರ ಮನೆಗೆ ಬಂದ ಅತಿಥಿಗಳಿಗೆ ವಾರ್ಡ್‌ರೋಬ್ ತೋರಿಸಿ ಬಣ್ಣಿಸುವುದು ಮನೆ ಮಂದಿ ಖುಷಿಯ ವಿಚಾರವಾಯಿತು.

`ಖರ್ಚು ಎಷ್ಟಾಯಿತು?' ಎಂದು ಕೇಳಿದಾಗ ಮೆಲ್ಲಗೆ `ರೂ. 85 ಸಾವಿರ ಆಯಿತು' ಎಂದು ಪಿಸುಗುಟ್ಟುವುದು ಮಾಮೂಲಾ ಯಿತು. ಮೇಷ್ಟ್ರು ಮಾತ್ರ, `ಮನೆ ಕಟ್ಟುವುದು, ಪೀಠೋಪಕರಣ ಮಾಡಿಸುವುದು ಎಲ್ಲವೂ ಹೊಸ ಅನುಭವವನ್ನು ಕಟ್ಟಿಕೊಡುತ್ತಾ, ಹೊಸ ಪಾಠಗಳನ್ನು ಕಲಿಸಿ ಕೊಡುತ್ತಾ ಹೋಗುತ್ತವೆ. ಆದರೆ, ಶುಲ್ಕ ಮಾತ್ರ ವಿಪರೀತ' ಎಂದು ಹಲಬುತ್ತಾ ವಾರ್ಡ್‌ರೋಬ್‌ನತ್ತ ನೋಡುವು ದನ್ನೇ ಬಿಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT