ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಪ್ರವೇಶದ ಕನಸು ಜೀವಂತ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಆತಿಥೇಯ ಭಾರತದ ಮಹಿಳಾ ಹಾಕಿ ತಂಡಕ್ಕೆ ಶುಕ್ರವಾರ ಸಂಜೆ ನಿಗಿನಿಗಿ ಕೆಂಡದ ರಾಶಿಯ ಮೇಲೆ ಓಡಾಡಿ ಗೆದ್ದ ಅನುಭವ!

ಶುಕ್ರವಾರ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ `ಮಾಡು ಇಲ್ಲವೇ ಮಡಿ~ ಪಂದ್ಯದಲ್ಲಿ ವೀರಾವೇಶದಿಂದ ಹೋರಾಡಿದ ಭಾರತದ ವನಿತೆಯರು 1-0ಯಿಂದ ಇಟಲಿಯನ್ನು ಸೋಲಿಸಿ  ಫೈನಲ್‌ಗೆ ಲಗ್ಗೆಯಿಟ್ಟರು.

ಶನಿವಾರ ಇದೇ ಮೈದಾನದಲ್ಲಿ ನಡೆಯಲಿರುವ  ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ 32 ವರ್ಷಗಳ ಕನಸು ನನಸಾಗುತ್ತದೆ. 1980ರ ಒಲಿಂಪಿಕ್ಸ್ ನಂತರ ಭಾರತ ಅರ್ಹತೆ ಗಳಿಸುತ್ತದೆ.

ಪಂದ್ಯದ 55ನೇ ನಿಮಿಷದಲ್ಲಿ ಎದುರಾಳಿಗಳಿಗೆ ಅಚ್ಚರಿ ಮೂಡಿಸುವಂತೆ ಬಂದ ಗೋಲು ಆತಿಥೇಯರ ಗೆಲುವಿಗೆ ಕಾರಣವಾಯಿತು. ಪೆನಾಲ್ಟಿ ಕಾರ್ನರ್‌ನಲ್ಲಿ ಜಸ್ಜೀತ್ ಮಾಡಿದ ಫ್ಲಿಕ್ ಅನ್ನು ಇಟಲಿ ಗೋಲ್‌ಕೀಪರ್ ಲಿಲ್ಲಿಯು ರಾಬರ್ಟಾ ಎಡಬದಿಗೆ ಚುರುಕಿನಿಂದ ಚಲಿಸಿ ಬ್ಲಾಕ್ ಮಾಡಿದರು. ಅವರ ಕಾಲಿನ ಪ್ಯಾಡ್‌ಗೆ ಬಡಿದ ಚೆಂಡು ಬಲಬದಿಗೆ ಗಾಳಿಯಲ್ಲಿ ಎಗರಿತು. ಗೋಲುಪೆಟ್ಟಿಗೆಯ ದ್ವಾರದಲ್ಲಿಯೇ ಇದ್ದ ರಿತು ರಾಣಿ ಸ್ಟಿಕ್ ಅನ್ನು ತುಸು ಎತ್ತಿ ಚೆಂಡಿಗೆ ಮುಟ್ಟಿಸಿದಾಗ ಅದು ಗೋಲುಪೆಟ್ಟಿಗೆ ಸೇರಿತು. ಅಪಾಯದ ಮಟ್ಟದಿಂದ ಎತ್ತರಕ್ಕೆ ರೀತು ರಾಣಿ ಸ್ಟಿಕ್ ಪ್ರಯೋಗಿಸಿದ್ದಾರೆ ಎಂಬ ಎದುರಾಳಿ ಆಟಗಾರ್ತಿಯರ ಅಪೀಲ್ ಅನ್ನು ಪರಿಶೀಲಿಸಿದ ಅಂಪೈರ್ ಫ್ರಾನ್ಸ್‌ನ ಅಡೈಂಡೋ ಕೇರ್ ಮತ್ತು ಗ್ರೇಟ್‌ಬ್ರಿಟನ್‌ನ ವಿಲ್ಲೋಕ್ಸ್ ಅನ್ನಾಬೆಲ್ಲೆ ಗೋಲು ಎಂದು ಘೋಷಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿಗಳ ಸಂತಸದ ಕೇಕೆ, ಘೋಷಣೆಗಳು ಮುಗಿಲುಮುಟ್ಟಿದವು.

ಆತಂಕದ ಕ್ಷಣಗಳು: ಕಳೆದ ಬುಧವಾರ ಲೀಗ್ ಸುತ್ತಿನ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಸೋತು ಮೂರನೇ ಸ್ಥಾನಕ್ಕೆ ಕುಸಿದಿದ್ದ ಅಸುಂತಾ ಲಕ್ರಾ ಬಳಗಕ್ಕೆ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡವಿತ್ತು. ಆದರೆ ಎರಡನೇ ಸ್ಥಾನದಲ್ಲಿದ್ದ ಎದುರಾಳಿ ಇಟಲಿ ತಂಡಕ್ಕೆ ಪಂದ್ಯ ಡ್ರಾ ಮಾಡಿಕೊಂಡರೂ ಫೈನಲ್‌ನಲ್ಲಿ ಆಡುವ ಅವಕಾಶ ಸಿಗುತ್ತಿತ್ತು.

ಆದ್ದರಿಂದಲೇ ಪಂದ್ಯದ ಮೊದಲ 55 ನಿಮಿಷಗಳಲ್ಲಿ ಭಾರತದ ಸುಮಾರು 23 ದಾಳಿಗಳನ್ನು ತಡೆದ ಇಟಲಿ ರಕ್ಷಣಾ ಪಡೆಯ ಆಟಗಾರ್ತಿಯರು ತಿರುಗಿ ದಾಳಿ ನಡೆಸಿದ್ದು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT