ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆ ಕೆಲಸಕ್ಕೆ ಹೊಸಬರು –ಹಳಬರು ಎಂದೇನಿಲ್ಲ

Last Updated 12 ಏಪ್ರಿಲ್ 2014, 6:15 IST
ಅಕ್ಷರ ಗಾತ್ರ

ಕೋಲಾರ: ಲೋಕಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿರುವ ಪ್ರಮುಖ ಪಕ್ಷಗಳ ಘಟಾನುಘಟಿ ಸ್ಪರ್ಧಿಗಳ ಎದುರು ಮೊದಲ ಬಾರಿಗೆ ಸ್ಪರ್ಧಿ­ಸುತ್ತಿರುವ ಜೆಡಿಎಸ್‍ ಅಭ್ಯರ್ಥಿ ಕೆ.ಕೇಶವ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‍ ಉದ್ಯಮಿ. ಕ್ಷೇತ್ರಕ್ಕೆ ಅಪರಿ­ಚಿತರು ಮತ್ತು ರಾಜಕಾರಣಕ್ಕೆ ಹೊಸ­ಬರು ಎಂಬ ಆಕ್ಷೇಪ ಅವರ ಮುಂದೆ ಇದೆ. ಆರಂಭದಲ್ಲಿ ಪಕ್ಷದೊಳಗೇ ಕಂಡು ಬಂದ ವಿರೋಧವನ್ನು ಸಮಾ­ಧಾನ­ಗೊಳಿಸಲಾಗಿದೆ ಎಂದು ಹೇಳುವ ಅವರು ಕಾಂಗ್ರೆಸ್‌ ಅನ್ನು ಮಣಿಸು­ವುದೇ ನನ್ನ ಗುರಿ ಎನ್ನುತ್ತಾರೆ.
‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಭಾಗ ಇಲ್ಲಿದೆ.

*ಮೊದಲ ಬಾರಿಗೆ ಲೋಕಸಭೆ  ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಏನನ್ನಿಸಿದೆ?
ಒಳ್ಳೆ ಕೆಲಸ ಮಾಡಲು ಹೊಸಬರು ಮತ್ತು ಹಳಬರು ಎಂಬುದೇನಿಲ್ಲ. ಒಳ್ಳೆ ಕೆಲಸ ಮಾಡುವವರಿಗೆ ಅನುಭವ ಇರಲೇ­ಬೇಕು ಎಂದು ಯಾರೂ ಹೇಳಿಲ್ಲ. ಜನರಿಗೆ ಒಳ್ಳೆಯದನ್ನು ಮಾಡ­ಬೇಕು ಎಂಬ ಮನಃಸ್ಥಿತಿ ನನಗಿದೆ. ಹತ್ತಾರು ವರ್ಷ ಅಧಿಕಾರ ಹೊಂದಿ­ದ್ದರೂ ಎದುರಾಳಿ ಅಭ್ಯರ್ಥಿ ಏನು ಮಾಡಿಲ್ಲವೋ ಅದನ್ನು ಮಾಡಬೇಕು ಎಂಬ ಕಾರಣದಿಂದಲೇ ಸ್ಪರ್ಧಿಸುತ್ತಿ­ದ್ದೇನೆ.

*ನಿಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು?
ಕಾಂಗ್ರೆಸ್‌ ಮತ್ತು ಆ ಪಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪನವರೇ ನನ್ನ ಪ್ರತಿಸ್ಪರ್ಧಿ. ಏಕೆಂದರೆ ಅವರು ಆರು ಬಾರಿ ಆಯ್ಕೆಯಾಗಿದ್ದರೂ ಕ್ಷೇತ್ರಕ್ಕೇ ಯಾವೊಂದು ಕೊಡುಗೆ­ಯನ್ನೂ ಕೊಟ್ಟಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.

*ಚುನಾವಣೆಯಲ್ಲಿ ನಿಮ್ಮ ಮುಂದೆ ಇರುವ ಸವಾಲುಗಳೇನು?
ಕಾಂಗ್ರೆಸ್‌ ಅಭ್ಯರ್ಥಿ ಮುನಿಯಪ್ಪ ಹಲವು ವರ್ಷಗಳಿಂದ ಚುನಾವಣೆ ಎದುರಿಸಿ ನಿಷ್ಣಾತರಾಗಿದ್ದಾರೆ. ಅವರು ರೂಪಿಸುವ ಕುತಂತ್ರಗಳನ್ನು ಮಣಿಸು­ವುದು ನನ್ನ ಪಾಲಿನ ಸವಾಲು. ಜೆಡಿಎಸ್‌ ಪಕ್ಷದ ಪ್ರಣಾಳಿಕೆ­ಯೊಂದಿಗೆ ಜನರ ಮಧ್ಯೆ ಹೋಗಬೇಕಾ­ಗಿ­ರುವುದು ಎರಡನೇ ಸವಾಲು.

* ನೀವು ಕ್ಷೇತ್ರಕ್ಕೆ ಅಪರಿಚಿತರು ಎಂಬ ಆಕ್ಷೇಪದ ಕುರಿತು ಏನು ಹೇಳುವಿರಿ?
ನರೇಂದ್ರ ಮೋದಿಯವರಾಗಲೀ ಸೋನಿಯಾ ಗಾಂಧಿಯವರಾಗಲೀ ಕೋಲಾರದ ಜನಕ್ಕೆ ಪರಿಚಿತರೇನಲ್ಲ. ನಾನು ಇದುವರೆಗೆ ರಾಜಕಾರಣ ಮಾಡದೇ ಇರುವುದರಿಂದ ಜನರ ನಡುವೆ ಗುರುತಿಸಿಕೊಂಡಿಲ್ಲ.

ಕ್ಷೇತ್ರದ ಶಾಸಕ ಆರ್‌.ವರ್ತೂರು ಪ್ರಕಾಶ್‌ ಮೊದಲ ಬಾರಿಗೆವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜನರಿಗೆ ಪರಿಚಿತರೇನೂ ಆಗಿರಲಿಲ್ಲ. ಒಮ್ಮೆ ಜನರ ಕೆಲಸಗಳನ್ನು ಮಾಡಲಾರಂಭಿ­ಸಿದರೆ ಗುರುತಿಸಿಕೊಳ್ಳಲು ಬೇರೆ ಯಾವುದೇ ಅರ್ಹತೆಯೂ ಬೇಕಾಗಿಲ್ಲ. ನಾನು ಕ್ಷೇತ್ರಕ್ಕೆ ಅಪರಿಚಿತ ಎಂದು ಹಳಿಯುವುದು ಸರಿಯಲ್ಲ.

*ನಿಮ್ಮ ವಿರುದ್ಧ ಹಲವು ವಂಚನೆ ಪ್ರಕರಣಗಳಿವೆ ಎಂದು ಇತರೆ  ಪಕ್ಷಗಳು ಪ್ರಚಾರದಲ್ಲಿ ಆರೋಪಿಸುತ್ತಿರುವ ಕುರಿತು  ಏನು ಹೇಳುವಿರಿ?
ಗುರುತರವಾದ ಯಾವುದೇ ಆರೋಪವೂ ನನ್ನ ಮೇಲೆ ಇಲ್ಲ. ಅಂಥ ಪ್ರಕರಣಗಳೂ ದಾಖಲಾಗಿಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿ ರಾಜ್ಯ, ಹೊರರಾಜ್ಯಗಳಲ್ಲಿ ಜಮೀನು ಖರೀದಿಸಿ, ಬಡಾವಣೆಗಳನ್ನು ನಿರ್ಮಿ­ಸುವುದು ನಮ್ಮ ಉದ್ಯಮದ ಕಾರ್ಯ. ಆ ಸಂಬಂಧ ಹಲವು ದೂರು ದಾಖ­ಲಾ­ಗಿವೆ ಅಷ್ಟೆ. ಅವು ನ್ಯಾಯಾ­ಲಯ­ದಲ್ಲಿ ಇತ್ಯರ್ಥವಾಗು­ತ್ತವೆ. ಆದರೆ ಎದುರಾಳಿಗಳು ಅಂಥ ವಿಷಯವನ್ನು ಬಳಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ.

*ಪಕ್ಷದೊಳಗಿನ  ಭಿನ್ನಾಭಿ­­ಪ್ರಾಯದ ಕುರಿತು?
ಅಭ್ಯರ್ಥಿಯಾಗಿ ನನ್ನ ಆಯ್ಕೆ ಅವಿರೋಧವಾಗಿ ನಡೆದಿದೆ. ಆರಂಭ­ದಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿತ್ತು. ಆದರೆ ಈಗ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ನಡೆಸು­ತ್ತಿದ್ದಾರೆ. ಚುನಾವಣೆ ಮುಗಿಯುವ ಹೊತ್ತಿನಲ್ಲಿ ಭಿನ್ನಾಭಿಪ್ರಾಯದ ಪ್ರಸ್ತಾವವೇ ಸರಿಯಾದುದಲ್ಲ.

*ಮತದಾರರು ನಿಮಗೆ ಏಕೆ ಮತ  ಕೊಡಬೇಕು?
ಕಾಂಗ್ರೆಸ್‌ ಪಕ್ಷವನ್ನು ಸೋಲಿಸ­ಬೇಕಾದರೆ ನನಗೆ ಮತ ಕೊಡಿ ಎಂದು ಜನರನ್ನು ಕೇಳುತ್ತಿದ್ದೇನೆ. ಇಲ್ಲಿವರೆಗೆ ಕಾಂಗ್ರೆಸ್‌ ಪಕ್ಷ, ಅಭ್ಯರ್ಥಿ ಜನರಿಗಾಗಿ ಏನು ಮಾಡಿಲ್ಲವೋ ನನಗೆ ಅವಕಾಶ ಕೊಟ್ಟರೆ ಮಾಡುತ್ತೇನೆ. ಜಿಲ್ಲೆ ನೀರಿನ ಸಮಸ್ಯೆ ನೀಗಿಸುವುದು, ಯುವಜನರಿಗೆ ಉದ್ಯೋಗ ದೊರಕಿಸುವುದು ನನ್ನ ಆದ್ಯತೆ.

ಕೆ.ಕೇಶವ (42)

ಪಕ್ಷ: ಜೆಡಿಎಸ್‌
ವಿದ್ಯಾರ್ಹತೆ: ಬಿ.ಎ.,
ವಾಸ: ಬೆಂಗಳೂರು
ವೃತ್ತಿ: ರಿಯಲ್ ಎಸ್ಟೇಟ್‌ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT