ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಎಂಸಿ ವಿರುದ್ಧ ತನಿಖೆ ಆರಂಭ

Last Updated 27 ಅಕ್ಟೋಬರ್ 2011, 18:35 IST
ಅಕ್ಷರ ಗಾತ್ರ

ಹೈದರಾಬಾದ್:  ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಈ ಗಣಿಧಣಿ ಮಾಲೀಕತ್ವದ ಓಎಂಸಿ ಗಣಿ ಕಂಪೆನಿ ಕಬ್ಬಿಣದ ಅದಿರು ರಫ್ತು ಮಾಡಿರುವ ಪ್ರಮಾಣದ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆ.

ಕೋಟ್ಯಂತರ ರೂಪಾಯಿಗಳ ಮೌಲ್ಯದ ಕಬ್ಬಿಣದ ಅದಿರು ಆಂಧ್ರಪ್ರದೇಶದ ವಿವಿಧ ಬಂದರುಗಳ ಮೂಲಕ ರಫ್ತಾಗಿರುವ ಹಿನ್ನೆಲೆಯಲ್ಲಿ ಗುರುವಾರ ನೆಲ್ಲೂರು ಜಿಲ್ಲೆಗೆ ಬಂದ ಸಿಬಿಐ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ ನೇತೃತ್ವದ ತನಿಖಾ ತಂಡವು, ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪೆನಿ (ಓಎಂಸಿ) ಅತ್ಯಧಿಕ ಪ್ರಮಾಣದಲ್ಲಿ ರಫ್ತು ಮಾಡಿರುವ ಕೃಷ್ಣಪಟ್ನಂ ಬಂದರಿನಲ್ಲಿ ತನಿಖೆಯನ್ನು ಆರಂಭಿಸಿದೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಲಕ್ಷ್ಮೀನಾರಾಯಣ, ಕಬ್ಬಿಣದ ಅದಿರನ್ನು ಆಂಧ್ರದ ಅನೇಕ ಬಂದರುಗಳಿಂದ ರಫ್ತು ಮಾಡಿದ್ದರೂ ಸಹ ಕೃಷ್ಣಪಟ್ನಂ ಬಂದರಿನಲ್ಲೇ ಹೆಚ್ಚಿನ ರಫ್ತು ನಡೆಸಿರುವುದರಿಂದ ಈ ಬಂದರು ಆಡಳಿತವು ನಿಯಮಗಳನ್ನು ಯಾವ ರೀತಿಯಲ್ಲಿ ಅನುಸರಿಸಿದೆ ಮತ್ತು ಈ ಬಂದರಿನಲ್ಲಿ ಎಷ್ಟು ಪ್ರಮಾಣದ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಖಾಸಗಿ ಬಂದರಿನ ಮೂಲಕ ಓಎಂಸಿಯು ಕಬ್ಬಿಣದ ಅದಿರು ರಫ್ತು ಮಾಡಿರುವ ಕುರಿತು ವಾಣಿಜ್ಯ ಸುಂಕ ಅಧಿಕಾರಿಗಳಿಂದ ತನಿಖಾ ಸಂಸ್ಥೆ ಮಾಹಿತಿ ಕಲೆ ಹಾಕುತ್ತಿದೆ. ನೈಜ ವಿವರ ಪಡೆಯಲು ತನಿಖಾ ತಂಡ ಕೃಷ್ಣಪಟ್ನಂ ವಾಣಿಜ್ಯ ಸುಂಕ ಕಚೇರಿಗೂ ಭೇಟಿ ನೀಡಿದೆ. ಬಂದರು ಆಡಳಿತ ಈಗಾಗಲೇ ಕೆಲವು ದಾಖಲೆಪತ್ರಗಳನ್ನು ಕಳುಹಿಸಿಕೊಟ್ಟಿದ್ದು, ಅವುಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ತನಿಖೆಗಾಗಿ ಇಲ್ಲಿಗೆ ಬಂದಿರುವುದಾಗಿ ಅವರು ಹೇಳಿದರು.

ಅಕ್ರಮ ಗಣಿಗಾರಿಕೆಯ ಬಗ್ಗೆಯೇ ತನಿಖೆಯನ್ನು ಕೇಂದ್ರೀಕರಿಸಲಾಗಿದ್ದು, ಕರ್ನಾಟಕ ಲೋಕಾಯುಕ್ತರು ಸಲ್ಲಿಸಿರುವ ವರದಿಯಲ್ಲಿ ಕೃಷ್ಣಪಟ್ನಂ ಬಂದರಿನಲ್ಲೇ ಹೆಚ್ಚಿನ ಕಬ್ಬಿಣದ ಅದಿರು ರಫ್ತಾಗಿರುವುದಾಗಿ ತಿಳಿಸಿರುವುದರಿಂದ ಅಲ್ಲೇ ತನಿಖೆ ಆರಂಭಿಸಲಾಗಿದೆ. ತನಿಖೆಯು ಅಂತಿಮ ಹಂತವನ್ನು ತಲುಪಿದ್ದು, ಆದಷ್ಟು ಬೇಗ ಸಂಬಂಧಿಸಿದ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.

ಈಗಾಗಲೇ ತನಿಖಾ ತಂಡವು ಸಂಬಂಧಿಸಿದ ಬಂದರು ಆಡಳಿತಗಳಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಕೆಲವು ಬಂದರುಗಳು ಸೂಕ್ತ ದಾಖಲೆಗಳನ್ನು ನೀಡಿದ್ದು, ಕೃಷ್ಣಪಟ್ನಂ ಬಂದರಿನಲ್ಲಿನ ಕೆಲವು ದಾಖಲುಪತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.

ಕರ್ನಾಟಕ ಲೋಕಾಯುಕ್ತವು ತನ್ನ ವರದಿಯಲ್ಲಿ, 2006-07ರಿಂದ ಏಳು ಬಂದರುಗಳ ಮೂಲಕ ರಫ್ತು ಮಾಡಿರುವ ಒಟ್ಟು 3,31,04,866 ಟನ್‌ಗಳ ಕಬ್ಬಿಣದ ಅದಿರಿನ ಪೈಕಿ, 1,11,70,994 ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕೃಷ್ಣಪಟ್ನಂ ಬಂದರಿನ ಮೂಲಕವೇ ರಫ್ತು ಮಾಡಿರುವುದನ್ನು ದಾಖಲಿಸಿದೆ.

ನಿರ್ದಿಷ್ಟವಾಗಿ 2008-09ರಲ್ಲಿ 25 ಲಕ್ಷ ಟನ್‌ಗಳು, 2009-10ರಲ್ಲಿ 51 ಲಕ್ಷ ಟನ್‌ಗಳು ಹಾಗೂ 2010ರ ಜುಲೈವರೆಗೆ 25.68 ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿದೆ. ಉಳಿದ 17.55 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ರಮ ಕಬ್ಬಿಣದ ಅದಿರನ್ನು ಆಂಧ್ರ ಸರ್ಕಾರಿ ಒಡೆತನದ ಕಾಕಿನಾಡ ಆ್ಯಂಕೋರೇಜ್ ಬಂದರು ಮತ್ತು ಕಾಕಿನಾಡ ಸಮುದ್ರದ ಬಂದರು ಆಡಳಿತ ನಡೆಸುತ್ತಿರುವ ಕಾಕಿನಾಡ ಆಳನೀರು ಬಂದರಿನ ಮೂಲಕ ರಫ್ತು ಮಾಡಿರುವುದಾಗಿ ತಿಳಿಸಿದೆ.

ಬಹುತೇಕ ಈ ಮೂರು ವರ್ಷಗಳ ಅವಧಿಯಲ್ಲಿ ಲಾರಿಗಳು ಮತ್ತು ಇತರ ಭಾರಿ ವಾಹನಗಳ ಮೂಲಕ ಅಪಾರ ಪ್ರಮಾಣದ ಕಬ್ಬಿಣದ ಅದಿರು ಸಾಗಾಟವಾಗಿವೆ. ಬಳ್ಳಾರಿಯಿಂದ ಸಮೀಪದ ಕೃಷ್ಣಪಟ್ನಂ ಬಂದರು ಮತ್ತು ದೂರದ ಕಾಕಿನಾಡ ಹಾಗೂ ವಿಶಾಖಪಟ್ಟಣ ಬಂದರಿನಲ್ಲಿ (ಅನಂತಪುರ ಮತ್ತು ಕಡಪಾ ಮೂಲಕ) ಕಬ್ಬಿಣದ ಅದಿರು ರಫ್ತಾಗಿವೆ ಎಂದು ಹೇಳಿದೆ.

ಕರ್ನಾಟಕ ಗಡಿಯ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಮತ್ತು ಅವರ ಬಾವ ಶ್ರೀನಿವಾಸ ರೆಡ್ಡಿ ಅವರನ್ನು ಕಳೆದ ಸೆಪ್ಟೆಂಬರ್ 5ರಂದು ಸಿಬಿಐ ಬಂಧಿಸಿದ್ದು, ಈಗ ಚಂಚಲ್‌ಗುಡ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಅಕ್ರಮ ಗಣಿಗಾರಿಕೆಯ ಬಗ್ಗೆ 2009ರಲ್ಲಿ ಆಂಧ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದ್ದು, ಆನಂತರ ಸುಪ್ರೀಂಕೋರ್ಟ್ ಕೂಡಾ ಕರ್ನಾಟಕದಲ್ಲೂ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ತನಿಖೆ ಮುಂದುವರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT