ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟ ಕಡೆಯ ಕಾರ್ಯಕ್ರಮವಾಯ್ತು...!

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಕಾಲೇಜು ಪ್ರಾಂಶುಪಾಲರ ವೇದಿಕೆ ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರ ಪಾಲಿಗೆ ಕಡೆಯ ಸಾರ್ವಜನಿಕ ಕಾರ್ಯಕ್ರಮವಾಯಿತು.

ಹನ್ನೊಂದನೇ ಪಂಚವಾರ್ಷಿಕ ಯೋಜನೆ ಅವಧಿಯ ನೀತಿಗಳ ಕುರಿತು ಈ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಉಡುಪಿಯಿಂದ ಬೆಳಿಗ್ಗೆ ಬೆಂಗಳೂರಿಗೆ ಬಂದ ಸಚಿವ ಆಚಾರ್ಯ ಅವರು ಸರ್ಕಾರಿ ವಿಜ್ಞಾನ ಕಾಲೇಜು ತಲುಪುವಾಗ ಮಧ್ಯಾಹ್ನ 12.40 ಆಗಿತ್ತು.

ಎನ್‌ಸಿಸಿ ಕೆಡೆಟ್‌ಗಳಿಂದ ಗೌರವರಕ್ಷೆ ಸ್ವೀಕರಿಸಿದರು. ಆ ವೇಳೆಗೆ ಅಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳು ಉಡುಪಿ ಬಳಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ಇತ್ತೀಚೆಗೆ ನಡೆದ `ಸ್ಟ್ರಿಂಗ್ ಝೂಕ್ ಐಲ್ಯಾಂಡ್ ಫೆಸ್ಟ್~ ಕುರಿತು ಆಚಾರ್ಯ ಅವರ ಪ್ರತಿಕ್ರಿಯೆ ಕೇಳಲು ಮುಂದಾದರು.

 `ಈಗಾಗಲೇ ತಡವಾಗಿದೆ. ಕಾರ್ಯಕ್ರಮದ ಉದ್ಘಾಟನೆ ಆಗಲಿ. ಆಮೇಲೆ ಖಂಡಿತ ನಿಮ್ಮ ಜೊತೆ ಮಾತನಾಡುತ್ತೇನೆ~ ಎಂದು ವೇದಿಕೆಯತ್ತ ಮುನ್ನಡೆದರು.

`ಸಾರ್, ಕಾಫಿ  ಅಥವಾ ಟೀ ಬೇಕಾ~ ಎಂದು ಕಾಲೇಜಿನ ಸಿಬ್ಬಂದಿ ಕೇಳಿದಾಗ, `ವೇದಿಕೆಯ ಮೇಲೆಯೇ ತನ್ನಿ, ಅಲ್ಲೇ ತೆಗೆದುಕೊಳ್ಳುತ್ತೇನೆ~ ಎಂದು ಉತ್ತರಿಸಿದರು. ವೇದಿಕೆಯತ್ತ ಮುನ್ನಡೆಯುತ್ತಿದ್ದಾಗ ಸುಸ್ತಾದವರಂತೆ ಕಂಡರು. ವೇದಿಕೆಯನ್ನು ಹತ್ತುವಾಗ ತೀವ್ರವಾಗಿ ಬಳಲಿದರು. ಅವರನ್ನು ಕುರ್ಚಿ ಮೇಲೆ ಕೂರಿಸಲಾಯಿತು.
ಈ ಸಂದರ್ಭದಲ್ಲಿ `108~ ಅಂಬುಲೆನ್ಸ್ ವಾಹನಕ್ಕೆ ದೂರವಾಣಿ ಕರೆ ಮಾಡಿ ತಿಳಿಸಲಾಯಿತು.
 
ಆದರೆ ಅವರು ನೂರೆಂಟು ಪ್ರಶ್ನೆಗಳನ್ನು ಕೇಳಿದರೇ ಹೊರತು, ತ್ವರಿತವಾಗಿ ವಾಹನ ಕಳುಹಿಸಲಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಎಂ. ಮಹದೇವರಾಜು ಅವರು ತಿಳಿಸಿದರು. ಕಾಲೇಜು ಸಿಬ್ಬಂದಿ ಪಕ್ಕದ ಮಾರ್ಥಾಸ್ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಕರೆದೊಯ್ಯೋಣ ಎಂದು ಸಲಹೆ ಮಾಡಿದರು.

ಅದಕ್ಕೆ ಓಗೊಡದೆ, ಆಚಾರ್ಯರನ್ನು ಅವರದೇ ಕಾರಿನಲ್ಲಿ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವ ವೇಳೆಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT