ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ ಅಕ್ಕಮಹಾದೇವಿ ಜನ್ಮಸ್ಥಳ

Last Updated 14 ಜುಲೈ 2012, 4:30 IST
ಅಕ್ಷರ ಗಾತ್ರ

ಹಸಿರು ತುಂಬಿ ಕಂಗೊಳಿಸುತ್ತಿರುವ ಉದ್ಯಾನ, ಮಕ್ಕಳಿಗಾಗಿ ಚೈಲ್ಡ್ ಪಾರ್ಕ್, ಮನಶಾಂತಿಗಾಗಿ ಧ್ಯಾನ ಕೇಂದ್ರ, ಶುಭ ಸಮಾರಂಭಗಳಿಗೆ ಕಲ್ಯಾಣ ಮಂಟಪ, ಅಸಂಘಟಿತ ಮಹಿಳೆಯರಿಗಾಗಿ ಗೃಹ ಕೈಗಾರಿಕೆ.
- ಇದು ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳದಲ್ಲಿನ ಒಂದು ನೋಟ.

ಬಸವಣ್ಣ ಅವರ ಅನುಭವ ಮಂಟಪದ ಅವಿಭಾಜ್ಯ ಅಂಗವಾಗಿದ್ದ ಶಿವಶರಣೆ ಅಕ್ಕಮಹಾದೇವಿ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ಉಡುತಡಿಯಲ್ಲಿ ಜನ್ಮತಾಳಿದಳು ಎಂದು ಹೇಳಲಾಗುತ್ತಿದ್ದು, ಅಲ್ಲಿನ ಕೌಶಿಕ ರಾಜನ ಕೋಟೆ ಎಂದು ನಂಬಲಾಗಿದ್ದ 10 ಎಕರೆ ಜಮೀನು ಕ್ರಯಕ್ಕೆ ಪಡೆದಿರುವ ಅಕ್ಕಮಹಾದೇವಿ ಸಮಿತಿ ಸರ್ಕಾರ ಹಾಗೂ ಭಕ್ತರ ಸಹಾಯದಿಂದ ಕ್ಷೇತ್ರ ಅಭಿವೃದ್ಧಿ ಪಡಿಸುತ್ತಿದೆ.

ಅಮೃತ ಶಿಲೆಯ ವಿಗ್ರಹ ಹೊಂದಿರು ಸುಂದರವಾದ ಅಕ್ಕಮಹಾದೇವಿ ದೇವಸ್ಥಾನ ಈ ಕೊಟೆಯಲ್ಲಿ ನವೀಕರಣ ಆಗಿದೆ ಹಾಗೂ ಬೆಟ್ಟದ ಮೇಲೆ ನೂತನವಾಗಿ ನಿರ್ಮಾಣ ಮಾಡಿರುವ ಅಕ್ಕಮಹಾದೇವಿಯ ಕಂಚಿನ ಪುತ್ಥಳಿಯನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ.


ಚನ್ನಮಲ್ಲಿಕಾರ್ಜುನ ದೇವರೆ ತನ್ನ ಪತಿಯೆಂದು ನಂಬಿದ ಶಿವಶರಣೆ ಅಕ್ಕಮಹಾದೇವಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು 12ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸುಧಾರಣೆ ಮಾಡಲು ಹೊರಟವರು. ಅಕ್ಕಮಹಾದೇವಿ ಅಣ್ಣ ಬಸವಣ್ಣ, ಅಲ್ಲಮಪ್ರಭು ಅವರ ಸಮಕಾಲೀನರಾಗಿದ್ದು, ವಚನಕ್ರಾಂತಿಯ ಹರಿಕಾರರಾಗಿದ್ದಾರೆ. ಕಾಮ, ಮೋಹ, ಮದ, ಮತ್ಸರ ದೂರವಿಟ್ಟು ಉಟ್ಟ ಉಡುಗೆ ಕಳಚಿಟ್ಟು ಚನ್ನಮಲ್ಲಿಕಾರ್ಜುನನ್ನು ಹುಡುಕುತ್ತಾ ಹೊರಟ ಶಿವಶರಣೆ ಅಕ್ಕಮಹಾದೇವಿ ಶ್ರೀಶೈಲದ ಕದಳಿ ಮಂಟಪದಲ್ಲಿ ಐಕ್ಯವಾಗುತ್ತಾಳೆ.

ಪ್ರಪಂಚದ ನಾನಾ ಮೂಲೆಗಳಲ್ಲಿ ಅಕ್ಕಮಹಾದೇವಿ ಭಕ್ತರಿದ್ದು, ಸ್ತ್ರೀಸಮೂಹಕ್ಕೆ ಮೇಲ್ಪಂಕ್ತಿ ಹಾಕಿದ ಮಹಾಮಹಿಳೆ. ಇಂದಿಗೂ ಸಹ ಅಕ್ಕಮಹಾದೇವಿ ಬಗ್ಗೆ ಇತಿಹಾಸ ಪುಟದಲ್ಲಿ ಸಾಕಷ್ಟು ಪ್ರಶ್ನೆಗಳು ಹಾಗೇ ಉಳಿದಿದ್ದು, ಆಕೆಯ ಬಗ್ಗೆ ಹೆಚ್ಚಿನ ಸಂಶೋಧನೆಯ ಆವಶ್ಯಕತೆ ಇದೆ ಎಂದು ಭಕ್ತರು ಹೇಳುತ್ತಾರೆ.
ದಿನನಿತ್ಯ ಸಾಕಷ್ಟು ಯಾತ್ರಿಕರು ಭೇಟಿ ನೀಡಿ ಉದ್ಯಾನದ ಸೌಂದರ್ಯ ಸವಿಯುವುದರ ಜತೆಗೆ ಅಕ್ಕಮಹಾದೇವಿ ಜೀವನ ಹಾಗೂ ವಚನ ಸಾಹಿತ್ಯದ ಬಗ್ಗೆ ಸಂಗ್ರಹ ಮಾಹಿತಿ ತಿಳಿಯುವ ಆಸಕ್ತಿ ತೊರುತ್ತಿರುವುದು ಸಂತಸದ ವಿಚಾರ ಆಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಕಳೆದ 10-15 ವರ್ಷಗಳಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸಲು ಅವಿರತವಾಗಿ ಉಡುತಡಿಯ ಅಕ್ಕಮಹಾದೇವಿ ಸಮಿತಿ ಶ್ರಮಿಸುತ್ತಿದ್ದು, ಸ್ಥಳೀಯರು ಕ್ಷೇತ್ರದಲ್ಲಿ ಇರುವ ಸೌಲಭ್ಯಗಳ ಪ್ರಯೋಜನ ಪಡೆಯುವ ಜತೆಗೆ  ಸಂಪೂರ್ಣ ಬೆಂಬಲ ಸಹ ನೀಡಬೇಕಾದ ಆವಶ್ಯಕತೆ ಇದೆ. ರೂ. 40 ಲಕ್ಷ ವೆಚ್ಚದ ನೂತನವಾದ ಕಲ್ಯಾಣಿ ಕಾಮಗಾರಿ ಚಾಲನೆಯಲ್ಲಿ ಇದೆ, ರೂ. 60 ಲಕ್ಷ ವೆಚ್ಚ ಮಾಡಿ ಯಾತ್ರೆ ನಿವಾಸ ಉದ್ಘಾಟನೆ ಮಾಡಿದ್ದು, ಬಂದ ಪ್ರವಾಸಿಗರಿಗೆ ಸಾತ್ವಿಕ ಆಹಾರದ ವ್ಯವಸ್ಥೆ ಮಾಡಬೇಕು ಎಂಬ ಅದಮ್ಯ ಆಶಯವಿದ್ದು ಕೆಲಸಗಾರರ ಸಮಸ್ಯೆ ಗಂಭೀರ ಆಗಿದೆ.

ಅಕ್ಕಮಹಾದೇವಿ ಜನ್ಮಸ್ಥಳ ಕೇವಲ ಪ್ರವಾಸೋದ್ಯಮ ತಾಣವಾಗದೆ. ಮಹಿಳೆಯ ಆರ್ಥಿಕ ಸಬಲೀಕರಣ, ಧಾರ್ಮಿಕ ಚಟುವಟಿಕೆ, ವಚನ ಸಾಹಿತ್ಯ ಸಂಶೋಧನಕ್ಕೆ ಪೂರಕವಾದ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶವನ್ನು ಸಮಿತಿ ಹೊಂದಿದೆ ಎಂದು ಮಾಜಿ ಸಚಿವೆ ಹಾಗೂ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷ್ಯೆ ಲೀಲಾದೇವಿ ಆರ್ ಪ್ರಸಾದ ಅಭಿಪ್ರಾಯ ಹಂಚಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT