ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ: ಸಿಐಟಿಯು ಕಾರ್ಯಕರ್ತೆಯರ ಧರಣಿ

Last Updated 20 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಕೋಲಾರ: ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಸೇವೆ ಕಾಯಂಗೊಳಿಸಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು ಎಂದ ಆಗ್ರಹಿಸಿ ಸಿಐಟಿಯು ನೇತೃತ್ವದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರು ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಸಿಐಟಿಯುಗೆ ಸಂಯೋಜನೆಗೊಂಡಿರುವ ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರು, ಆಶಾ ಕಾರ್ಯಕರ್ತೆಯರು ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ತಲುಪಿ ಧರಣಿ ಆರಂಭಿಸಿದರು.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸೇವೆ ಕಾಯಂ ಮಾಡಬೇಕು. ಅಲ್ಲಿವರೆಗೆ ಕನಿಷ್ಠ ರೂ.10 ಸಾವಿರ ವೇತನ ನೀಡಬೇಕು. ಎಲ್ಲ ನೌಕರರಿಗೆ ಪಿಂಚಣಿ, ಗ್ರಾಚ್ಯುಯಿಟಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿಗಳು ಮುಗಿದ ತಕ್ಷಣ ಹೊಸ ದಾಖಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಶೀಘ್ರ ದುರಸ್ತಿ ಮಾಡಿಸಬೇಕು. ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಬೇಕು. ಅಪೌಷ್ಟಿಕ ಮಕ್ಕಳಿಗೆ ನೀಡುವ ಕೋಳಿ ಮೊಟ್ಟೆ ಹಣವನ್ನು ಗೌರವಧನದ ಜತೆ ಪ್ರತಿ ತಿಂಗಳು ನೀಡಬೇಕು. ಅಡುಗೆ ಅನಿಲದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯನ್ನು ರಾಜ್ಯದ ಎಲ್ಲ ನಗರ ಮತ್ತು ಹಳ್ಳಿಗಳಿಗೂ ವಿಸ್ತರಣೆ ಮಾಡಬೇಕು. ಯೋಜನೆ ಕಾಯಂಗೊಳಿಸಬೇಕು. ಕೆಲಸ ಆಧಾರಿತ ಪ್ರೋತ್ಸಾಹ ಧನವನ್ನು ಹೆಚ್ಚಿಗೆ ನೀಡಬೇಕು.

ಆಶಾ ಕಾರ್ಯಕರ್ತೆಯರ ಮೇಲೆ ನಡೆಯುವ ದಬ್ಬಾಳಿಕೆ, ಶೋಷಣೆ ನಿಲ್ಲಿಸಬೇಕು. ಎಲ್ಲ ಪ್ರಾಥಮಿಕ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಕೊಠಡಿ ನೀಡಬೇಕು ಎಂದು ಆಗ್ರಹಿಸಿದರು.

ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗೆ ನೀಡಬೇಕಾದ ಹಾಲು, ಕೋಳಿ ಮೊಟ್ಟೆ ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಅಂಗನವಾಡಿ ನೌಕರರೇ ಅದನ್ನು ಭರಿಸಬೇಕು ಎಂದು ಸರ್ಕಾರ ಹೇಳುವುದು ಸರಿಯಲ್ಲ.

ಅಂಗನವಾಡಿ ಕೇಂದ್ರಗಳಿಗೆ ಸರಿಯಾಗಿ ಆಹಾರವನ್ನು ವಿತರಣೆ ಮಾಡದೇ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ಕೊಟ್ಟು ರಾಜ್ಯ ಸರ್ಕಾರ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಎಂದರು.

ಅಂಗನವಾಡಿ ನೌಕರರ ಸಂಘದ ಮುಖಂಡರಾದ ಮುನಿರಾಜಮ್ಮ, ಜಯಲಕ್ಷ್ಮೀ, ವಿ.ಮಂಜುಳಾ, ಅನಸೂಯಮ್ಮ, ಶಿಳ್ಳಂಗೆರೆ ರಾಜಮ್ಮ, ಶಾಂತಮ್ಮ, ಬಿಸಿಯೂಟ ನೌಕರರ ಸಂಘದ ಮುಖಂಡರಾದ ಸುಜಾತ, ಸಿಐಟಿಯು ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ನೇತೃತ್ವ ವಹಿಸಿದ್ದರು.

ಸಿಐಟಿಯು ಕಾರ್ಯಕರ್ತರ ಧರಣಿ
ಮಾಲೂರು: ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನಿಲ್ಲಿಸಿ ಕಾಯಂ ಮಾಡಿಕೊಳ್ಳಿ, ಅಕ್ಷರ ದಾಸೋಹ ನೌಕರರನ್ನು ಕೆಲಸದಲ್ಲಿ ಉಳಿಸಿ ಎಂದು ಆಗ್ರಹಿಸಿ ಅಂಗನವಾಡಿ ನೌಕರರ, ಆಶಾ ಕಾರ್ಯಕರ್ತೆಯರ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಸಿಐಟಿಯು ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿ ಪ್ರತಿಭಟಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಬಿ.ಎಸ್.ನಾಗರತ್ನಮ್ಮ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಪೌಷ್ಟಿಕತೆ ಮಹಿಳೆಯರನ್ನು ಮತ್ತು ಮಕ್ಕಳನ್ನು ಕಾಡುತ್ತಿದೆ. ಸರ್ಕಾರ ವೈಜ್ಞಾನಿಕ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ. ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗೆ ಹಾಲು, ಕೋಳಿ ಮೊಟ್ಟೆ ಕೊಡಬೇಕೆಂದಿದೆ. ಆದರೆ ಇದಕ್ಕೆ ಬೇಕಾಗುವ ಹಣವನ್ನು ಇದುವರೆವಿಗೂ ಬಿಡುಗಡೆ ಮಾಡದಿರುವುದರಿಂದ ಅಂಗನವಾಡಿ ನೌಕರರೇ ಇದನ್ನು ಭರಿಸಬೇಕಿದೆ.

ಅಂಗನವಾಡಿ ಕೇಂದ್ರಗಳು ಶೌಚಾಲಯ, ಕುಡಿಯುವ ನೀರು ಇಲ್ಲದೆ ಬಳಲುತ್ತಿವೆ. ಅಂಗನವಾಡಿ ನೌಕರರಿಗೆ ತಿಂಗಳ ಸಂಬಳ ಸರಿಯಾಗಿ ಸಿಗುತ್ತಿಲ್ಲ. ಕೆಲಸದಲ್ಲಿ ಭದ್ರತೆ ಇಲ್ಲದೆ ಬಳಲುವಂತಾಗಿದೆ ಎಂದು ಆರೋಪಿಸಿದ ಅವರು 36 ವರ್ಷಗಳಿಂದ ಅಂಗನವಾಡಿ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೇಲೆ ನಡೆಯುವ ಅಮಾನವೀಯ ದಬ್ಬಾಳಿಕೆ ನಿಂತಿಲ್ಲ. ಕಳಪೆ ಮಟ್ಟದ ಆಹಾರ ವಿತರಣೆ ನಿಲ್ಲಿಸಿ ಉತ್ತಮವಾದ ಆಹಾರ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನಿಲ್ಲಿಸಿ ಕೆಲಸದ ಕಾಯಂಮಾತಿ ಮತ್ತು ಕನಿಷ್ಠ ಕೂಲಿ ನೀಡಬೇಕು. ಅಕ್ಷರ ದಾಸೋಹ ನೌಕರರನ್ನು ಕೆಲಸದಲ್ಲಿ ಉಳಿಸಿ ಸೇವಾ ನಿಯಮಾವಳಿ ಹಾಗೂ ಕನಿಷ್ಠ ಕೂಲಿ ನೀಡುವಂತೆ ಒತ್ತಾಯಿಸಿದರು.

ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್ ಹನುಮಂತರಾಯ ಅವರಿಗೆ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ನೌಕರರ ಸ್ಥಳೀಯ ಸಂಘದ ಅಧ್ಯಕ್ಷೆ ಮೀನಾಕ್ಷಿ, ಖಜಾಂಚಿ ಪುಷ್ಪಾವತಮ್ಮ, ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷೆ ನಾರಾಯಣಮ್ಮ, ಕಾರ್ಯದರ್ಶಿ ಜಯಮ್ಮ, ಖಜಾಂಚಿ ಮಮತಾ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಸೇವಾ ಭದ್ರತೆಗೆ ಆಗ್ರಹ
ಬಂಗಾರಪೇಟೆ: ಸೇವಾ ಭದ್ರತೆ, ಕನಿಷ್ಠ ಕೂಲಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಅಕ್ಷರ ದಾಸೋಹ ಸಂಘದ ಗೌರವ ಅಧ್ಯಕ್ಷೆ ಎಂ.ಜಯಲಕ್ಷ್ಮಿ, ಅಧ್ಯಕ್ಷೆ ಲಲಿತಮ್ಮ, ಕಾರ್ಯದರ್ಶಿ ಎಂ.ಎನ್.ನಾಗೇಂದ್ರ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕೆ.ವಿ.ಭಾರತಿ, ಕಾರ್ಯದರ್ಶಿ ಎಸ್.ಶೋಭಾ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಮೂಲ ಸೌಕರ್ಯಕ್ಕೆ ಆಗ್ರಹ
ಬಂಗಾರಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಿಂಹ ಸೇನೆ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಅಣುಕು ಶವ ಪ್ರದರ್ಶಿಸಿ ಧರಣಿ ನಡೆಸಿದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂಲಿಕುಂಟೆ ಆನಂದ್, ತಾಲ್ಲೂಕು ಅಧ್ಯಕ್ಷ ಆರ್.ರಮೇಶ್, ಕೆಜಿಎಫ್ ಘಟಕದ ಅಧ್ಯಕ್ಷ ಎನ್.ಪ್ರವೀನ್ ಕುಮಾರ್, ಕಾರ್ಯದರ್ಶಿ ಅತ್ತಿಗಿರಿಕೊಪ್ಪ ಪ್ರಕಾಶ್, ಉಪಾಧ್ಯಕ್ಷ ಗುಟ್ಟಹಳ್ಳಿ ಪಿಳ್ಳಪ್ಪ, ಅಂಗವಿಕಲರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಬೇಕರಿ ಶ್ರೀನಿವಾಸ್, ಅಂಜಿ, ಅಯ್ಯಪ್ಪ, ವೆಂಕಟೇಶ್, ಮೈಕಲ್, ದಿನೇಶ್, ಅರುಣ್, ನಾಗಿರೆಡ್ಡಿ, ಶಾಂತಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಗುತ್ತಿಗೆ ನೌಕರರ ಧರಣಿ
ಬಂಗಾರಪೇಟೆ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಗಣಕ ಯಂತ್ರ ಸಹಾಯಕ ನೌಕರರು ಶುಕ್ರವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಯಾವುದೇ ಸೇವಾ ಭದ್ರತೆ ಇಲ್ಲ. ಕನಿಷ್ಠ ವೇತನ ಕೂಡ ಪಾವತಿಸುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ, ಪಂಚತಂತ್ರ ಯೋಜನೆ, ವಸತಿ ಯೋಜನೆ ಇನ್ನಿತರ ಎಲ್ಲ ಕೆಲಸಗಳಿಗಾಗಿ ಅವಧಿ ಮೀರಿ ದುಡಿಯುತ್ತಿದ್ದೇವೆ. ಆದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ ಎಂದು ದೂರಿದರು.

ಕನಿಷ್ಠ 10 ಸಾವಿರ ಸಂಬಳ ನೀಡಬೇಕು. ಇಎಸ್‌ಐ, ಭವಿಷ್ಯ ನಿಧಿ ಹಾಗೂ ವಿಮಾ ಪಾಲಿಸಿ ಜಾರಿಗೊಳಿಸಬೇಕು. ವೇತನ ಸಹಿತ ಹೆರಿಗೆ ರಜೆ ನೀಡಬೇಕು. ತಮ್ಮನ್ನು ಗ್ರಾಮ ಪಂಚಾಯಿತಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಗಣಕ ಯಂತ್ರ ಸಹಾಯಕ ನೌಕರರ ಸಂಘದ ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ಸಿ.ವಿ.ನಾರಾಯಣಸ್ವಾಮಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT