ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಮ್ಮಗೆ ಅಗ್ರಸ್ಥಾನ ನೀಡಿ: ಸಿಪಿಕೆ ಒತ್ತಾಯ

Last Updated 10 ಜನವರಿ 2012, 8:30 IST
ಅಕ್ಷರ ಗಾತ್ರ

ಚಾಮರಾಜನಗರ (ಸಿದ್ಧಲಿಂಗಯತಿ ವೇದಿಕೆ): `ನಾಡಿನಲ್ಲಿ ಕನ್ನಡ ಮಾತೆಗೆ ಹಿಂಬಾಗಿಲಿನ ಪ್ರವೇಶ ನೀಡಲಾಗುತ್ತಿದೆ. ಇದು ತಲೆತಗ್ಗಿಸುವ ವಿಚಾರ. ಮುಂಬಾಗಿಲಿನ ಮೂಲಕ ಕನ್ನಡದ ಪ್ರವೇಶ ವಾಗಬೇಕು. ಹಿತ್ತಿಲು ಬಾಗಿಲಿನಿಂದ ಅನ್ಯಭಾಷೆಗಳು ಪ್ರವೇಶಿಸಿದರೆ ಅಡ್ಡಿಯಿಲ್ಲ. ಅವುಗಳಿಗೆ ಮನೆಯ ಮೂಲೆಯೊಂದರಲ್ಲಿ ಸ್ಥಾನ ನೀಡಿ. ಆದರೆ, ಮಾತೃಭಾಷೆಗೆ ಅಗ್ರಸ್ಥಾನ ನೀಡಬೇಕು~ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಪ್ರತಿಪಾದಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ನಡೆದ ಚಾಮರಾಜನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಅಪಾಯ ಎದುರಾಗಿದೆ. ಭಾಷೆ ಅಳಿದುಹೋಗುವ ಸ್ಥಿತಿಗೆ ಬರಬಾರದು. ಕನ್ನಡವೇ ಧರ್ಮವಾಗಬೇಕು. ಆಗ ಅದು ನಮ್ಮನ್ನು ಕಾಪಾಡುತ್ತದೆ. ಮಾತೃಭಾಷೆ ಆತ್ಮದ ಅಮೃತ ಕಳಸ ಇದ್ದಂತೆ. ಅದನ್ನು ನಾವೆಲ್ಲರೂ ರಕ್ಷಿಸಬೇಕಿದೆ. ಕನ್ನಡದೊಂದಿಗೆ ಎಲ್ಲ ಭಾಷೆ ಕಲಿಯಬೇಕು ಎಂದರು.

ಯಾವುದೇ, ಭಾಷೆ ಇನ್ನೊಂದು ಭಾಷೆಯನ್ನು ಒಡೆಯುವುದಿಲ್ಲ. ಭಾಷೆಗೆ ಜನರನ್ನು ಕೂಡಿಸುವ ಸತ್ವವಿದೆ. ರಾಜಕೀಯ ಜನರ ಮನಸ್ಸನ್ನು ಒಡೆಯುತ್ತದೆ. ಇಂಗ್ಲಿಷ್ ಭಾಷಾ ವ್ಯಾಮೋಹದಿಂದ ಕನ್ನಡಕ್ಕೆ ಕಂಟಕ ಎದುರಾಗಿದೆ. ಕನ್ನಡ ಸಾಹಿತ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. 14ನೇ ಶತಮಾನದಲ್ಲಿ ಆಂಗ್ಲ ಭಾಷಾ ಸಾಹಿತ್ಯ ಪ್ರಾರಂಭವಾಯಿತು. ಆದರೆ, ಕನ್ನಡಕ್ಕೆ ಪ್ರಾಚೀನ ಇತಿಹಾಸವಿದೆ. 12ನೇ ಶತಮಾನದಲ್ಲಿಯೇ ವಚನ ಸಾಹಿತ್ಯ ವಿಶ್ವಕ್ಕೆ ಅನುಪಮ ಕೊಡುಗೆ ನೀಡಿದೆ ಎಂದು ಹೇಳಿದರು.

ಕನ್ನಡ ಪರಂಪರೆಯ ಪ್ರಜ್ಞೆ ಕಡಿಮೆಯಾಗಿದೆ. ಪ್ರಸ್ತುತ ಪ್ರಾಚೀನ ಸಾಹಿತ್ಯ ಯಾರಿಗೂ ಬೇಕಿಲ್ಲ. ಕೆಲವರಿಗೆ ಸಾಹಿತ್ಯವೇ ಅಪಥ್ಯವಾಗಿದೆ. ಸಮಾಜದ ಪರಿವರ್ತನೆಯಲ್ಲಿ ಸಾಹಿತ್ಯ ಪ್ರಧಾನವಾದುದು. ಕತ್ತಲೆಯಲ್ಲಿರುವ ಜನರಿಗೆ ಬೆಳಕು ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂದು ನುಡಿದರು.

ಸಮಾಜದಲ್ಲಿ ಜಾತಿಯತೆ ಬಲವಾಗಿ ಬೇರುಬಿಡುತ್ತಿದೆ. ಮಡೆಸ್ನಾನದಂತಹ ಮೌಢ್ಯಗಳು ಜೀವಂತವಾಗಿವೆ. ಇಂತಹ ಮೂಢನಂಬಿಕೆ ನಿರ್ಮೂಲನೆಯಾಗಬೇಕಿದೆ. ಸಮಾಜ ಸ್ಥಾವರವಾಗಿದ್ದು, ಚಲನಶೀಲತೆ ಕಳೆದುಕೊಂಡಿದೆ. ಅದಕ್ಕೆ ನಾವು ಜಂಗಮದ ರೂಪ ನೀಡಬೇಕು. ಇದಕ್ಕೆ ಭಾಷೆ ಮತ್ತು ಸಾಹಿತ್ಯದ ಆಶ್ರಯಬೇಕಿದೆ ಎಂದು ವಿಶ್ಲೇಷಿಸಿದರು.

`ರಾಜ್ಯದಲ್ಲಿ ಪ್ರಥಮ ಬಾರಿಗೆ ತಲಕಾಡಿನಲ್ಲಿ ನಡೆದ ತಿ.ನರಸೀಪುರ ತಾಲ್ಲೂಕು ಸಮ್ಮೇಳನದ ಅಧ್ಯಕ್ಷನಾಗಿದ್ದೆ. ಹೀಗಾಗಿ, ತಾಲ್ಲೂಕು ಸಮ್ಮೇಳನ ಉದ್ಘಾಟಿಸುವ ಅರ್ಹತೆ ನನಗಿದೆ ಎಂದ ಅವರು, ಸಾಹಿತ್ಯ ಎಲ್ಲರಿಗೂ ಬೇಕಿದೆ. ಕನ್ನಡ ಮತ್ತು ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ಗಡಿ ಭಾಗದಲ್ಲಿ ಕನ್ನಡ ಡಿಂಡಿಮ ಮೊಳಗಬೇಕು~ ಎಂದು ಆಶಿಸಿದರು.

ಸಮಾಜದಲ್ಲಿ ಆಲಸ್ಯ ಮತ್ತು ಅಸೂಯೆ ತಾಂಡವವಾಡುತ್ತಿವೆ. ರಣರಂಗದ ಮಧ್ಯದಲ್ಲಿ ನಾವಿದ್ದೇವೆ. ಗಾಂಧೀಜಿಯ ಆಶಯದಂತೆ ನಾವೆಲ್ಲರೂ ಸರ್ವೋದಯದ ತತ್ವದಡಿ ಸಾಗಬೇಕಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ಮಾತನಾಡಿ, `ಜಿಲ್ಲೆಯಲ್ಲಿ 26 ದತ್ತಿ ಕಾರ್ಯಕ್ರಮಗಳ ಮೂಲಕ ಕನ್ನಡ ಪರಂಪರೆ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ~ ಎಂದು ಹೇಳಿದರು.

ಸಮಾರಂಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸೆಲ್ವಿಬಾಬು, ತಾ.ಪಂ. ಅಧ್ಯಕ್ಷೆ ಪದ್ಮಾ ಚಂದ್ರು, ಉಪಾಧ್ಯಕ್ಷ ಪಿ. ಮಹಾಲಿಂಗಸ್ವಾಮಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಕೆಂಪನಪುರ ಸಿದ್ದರಾಜು ಇತರರು ಹಾಜರಿದ್ದರು. ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ `ಕನ್ನಡ ವ್ಯಾಕರಣ ಸೂತ್ರಗಳು~ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT