ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಕಾಣಿ

Last Updated 11 ಜನವರಿ 2012, 6:45 IST
ಅಕ್ಷರ ಗಾತ್ರ

ಬೆಳಗಾವಿ: “ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಸಾಂಸ್ಕೃತಿಕ ಪರಿಸರದಲ್ಲಿ ನೋಡದಿದ್ದರೆ, ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ” ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಅಭಿಪ್ರಾಯಪಟ್ಟರು.

ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿರಸಂಗಿ ಲಿಂಗರಾಜ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, “ಇಂದು ಕೆಲವರು ಕನ್ನಡ ಭಾಷೆಯನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿರು ವುದು ವಿಷಾದನೀಯ. ಒಂದು ಸಾವಿರ ವರ್ಷಗಳ ಹಿಂದೆ ಕನ್ನಡ ಭಾಷೆಯ ಸಬಲೀಕರಣಕ್ಕಾಗಿ ಶ್ರಮಿಸಿದ ನೃಪತುಂಗ ಚಕ್ರವರ್ತಿ, ಇದಕ್ಕೆ ಸಾಂಸ್ಕೃತಿಕ ಪರಂಪರೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದರು.
 
ಇಂದಿನ ಸಂದರ್ಭದಲ್ಲಿ ಕನ್ನಡ ಕಟ್ಟುವ ಬಿಡಿ ಬಿಡಿ ಪ್ರಯತ್ನಗಳನ್ನು ಒಟ್ಟುಗೂಡಿಸಿ ಸಮಗ್ರ ದೃಷ್ಟಿಕೋನದಿಂದ ಡಾ. ಎಂ.ಎಂ. ಕಲಬುರ್ಗಿಯವರು ಆ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಕಲಬುರ್ಗಿಯವರು ಸಮಾಜ ಮುಖಿ ಸಂಶೋಧನೆ ಕೈಗೊಂಡರು. ದಮನಕ್ಕೆ ಒಳಗಾದ ಸಮುದಾಯಕ್ಕೆ ಧ್ವನಿ ನೀಡಿದರು” ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿದ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ, “ಶಿಕ್ಷಣ ತಜ್ಞರು ಪ್ರಸಿದ್ಧಿಯ ಹವ್ಯಾಸ ಬೆಳೆಸಿಕೊಳ್ಳಬಾರದು. ಪ್ರಸಿದ್ಧಿಯ ಬೆನ್ನು ಹತ್ತಿದರೆ, ಅಂತರ್ಮುಖತೆ ಕಳೆದು ಕೊಂಡು ಉತ್ತಮ ಶಿಕ್ಷಣ ತಜ್ಞನಾಗಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಪ್ರಚಾರಗಳಿಂದ ವಿಮುಖರಾಗಿರಬೇಕು” ಎಂದು ಸಲಹೆ ನೀಡಿದರು.

“ಸತ್ತ ಬಳಿಕವೂ ಅವರ ಹೆಸರು ಬದುಕುಳಿಯುವುದೇ ಜೀವಂತಿಕೆ ಯಾಗಿದೆ. ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು ಈ ಸಾಲಿಗೆ ಸೇರುತ್ತಾರೆ” ಎಂದ ಅವರು, “ನೃಪತುಂಗ ಕನ್ನಡ ನಾಡಿನ ಸಾಂಸ್ಕೃತಿಕ ಚಕ್ರವರ್ತಿಯಾದರೆ, ಪುಲಕೇಶಿ ರಾಜಕೀಯ ಚಕ್ರವರ್ತಿಯಾಗಿದ್ದಾನೆ. ಸಾಂಸ್ಕೃತಿಕ ಕರ್ನಾಟಕವನ್ನು ಕಟ್ಟಿದವರಲ್ಲಿ ನೃಪತುಂಗ ಮೊದಲ ವ್ಯಕ್ತಿಯಾಗಿದ್ದಾನೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಶಿವಾನಂದ ಕೌಜಲಗಿ ವಹಿಸಿದ್ದರು. ಲಿಂಗರಾಜ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ತಟವಟಿ ಸ್ವಾಗತಿಸಿದರು. ಡಾ. ಎಸ್.ಎಸ್. ಮಸಳಿ, ಪ್ರೊ. ಎಸ್.ವಿ. ದಳವಾಯಿ ಹಾಜರಿದ್ದರು.

ಲಿಂಗರಾಜ ಮಹಾವಿದ್ಯಾಲಯ ಹಾಗೂ ಆರ್‌ಎಲ್‌ಎಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT