ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಕೊರತೆ:ನಿರುದ್ಯೋಗ ಭೀತಿ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮಂಡ್ಯ: `ಸಕ್ಕರೆ' ಜಿಲ್ಲೆಯ ಖ್ಯಾತಿಯ ಮಂಡ್ಯದಲ್ಲಿ ಕಬ್ಬಿನ ಕೊರತೆಯಿಂದಾಗಿ ಸಕ್ಕರೆ ಕಾರ್ಖಾನೆಗಳು ಹಾಗೂ ಆಲೆಮನೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಪರಿಣಾಮ 50 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್‌ನಂತೆ ನೀರು ಹರಿದು ಹೋಗುತ್ತಿದೆ. ಕಾವೇರಿ ಉಸ್ತುವಾರಿ ಸಮಿತಿ ನಿರ್ದೇಶನದಂತೆ ತಿಂಗಳಪೂರ್ತಿ ನೀರು ಹರಿಸಿದರೆ, ಆಲೆಮನೆಗಳಿಗೆ ಅರೆಯಲು ಕಬ್ಬಿಲ್ಲದೆ ಬೀಗ ಹಾಕಬೇಕಾಗುತ್ತದೆ ಎನ್ನುತ್ತಾರೆ ಆಲೆಮನೆ ನಡೆಸುತ್ತಿರುವ ಎಸ್.ಕೃಷ್ಣ.

ಮಂಡ್ಯ ಜಿಲ್ಲೆಯಲ್ಲಿ ಮೇ ತಿಂಗಳಿನಿಂದ ಜನವರಿವರೆಗೂ ಕಬ್ಬಿನ ನಾಟಿ ಮಾಡಲಾಗುತ್ತದೆ. ನಂತರ ಮೂರು ವರ್ಷಗಳ ಕಾಲ ಕೂಳೆ ಬಿಡಲಾಗುತ್ತದೆ. ಕಬ್ಬನ್ನು ನಾಟಿ ಮಾಡಿದ 12 ರಿಂದ 14 ತಿಂಗಳ ಅವಧಿಯಲ್ಲಿ ಕಟಾವು ಮಾಡಲಾಗುತ್ತದೆ.

ಪ್ರತಿ ವರ್ಷ ಕೆಆರ್‌ಎಸ್ ಜಲಾಶಯದಿಂದ ಜುಲೈನಿಂದ ಡಿಸೆಂಬರ್ ವರೆಗೆ ನಿರಂತರವಾಗಿ, ನಂತರ ಜನವರಿಯಿಂದ ಜೂನ್ ವರೆಗೂ ತಿಂಗಳಲ್ಲಿ 10 ದಿನಗಳ ಕಾಲ ನೀರು ಬಿಡಲಾಗುತ್ತದೆ. ಆದರೆ, ಈ ಬಾರಿ ನೀರಿನ ಕೊರತೆಯಿಂದಾಗಿ ಕೆಲವೇ ದಿನಗಳಲ್ಲಿ ನೀರು ಸ್ಥಗಿತವಾಗಲಿದೆ. ಮುಂದೆ ಜೂನ್‌ನಲ್ಲಿ ಮಳೆಯಾಗಿ ಜಲಾಶಯದ ನೀರಿನ ಮಟ್ಟ 110 ಅಡಿ ಬಂದ ನಂತರವಷ್ಟೇ, ನೀರು ಹರಿಸಲಾಗುವುದು ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.
ಜಲಾಶಯದ ಮಟ್ಟ 95 ಅಡಿಗೆ ಕುಸಿದಿದೆ. ಕೇವಲ 11 ಟಿಎಂಸಿ ಅಡಿಯಷ್ಟು ಮಾತ್ರ ನೀರು ಬಾಕಿ ಇದ್ದು, ಇನ್ನೂ ಹತ್ತು ದಿನಗಳವರೆಗೆ ಮಾತ್ರ ಕಾಲುವೆಗೆ ನೀರು ಹರಿಸಬಹುದಾಗಿದೆ. ಜನವರಿ ನಂತರದಲ್ಲಿ ಕಟಾವು ಆಗಬೇಕಿದ್ದ ಕಬ್ಬು ಒಣಗಿ ಹೋಗಲಿದೆ.

ಜಿಲ್ಲೆಯಲ್ಲಿ ಜುಲೈನಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸುವ ಸಕ್ಕರೆ ಕಾರ್ಖಾನೆಗಳು, ಮಾರ್ಚ್ ಅಂತ್ಯದವರೆಗೂ ಕಾರ್ಯ ನಿರ್ವಹಿಸುತ್ತವೆ. ಈ ಬಾರಿ ಜನವರಿ ನಂತರ ಕಾರ್ಖಾನೆಗಳಿಗೆ ಕಬ್ಬಿನ ಕೊರತೆಯಾಗಲಿದೆ ಎನ್ನುತ್ತಾರೆ ಕಾರ್ಖಾನೆಯ ಅಧಿಕಾರಿಯೊಬ್ಬರು.

ಜಿಲ್ಲೆಯಲ್ಲಿ 1,500ಕ್ಕೂ ಹೆಚ್ಚು ಆಲೆಮನೆಗಳಿದ್ದು, ಬಹುತೇಕ ಆಲೆಮನೆಗಳು ವರ್ಷ ಪೂರ್ತಿ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಕಬ್ಬಿನ ಕೊರತೆಯಿಂದ ಅವು ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಆಲೆಮನೆಗಳು ಬಂದ್
ಮೊದಲೇ ಕಬ್ಬಿನ ಕೊರತೆ ಇದೆ. ಈಗಿರುವ ಕಬ್ಬಿನಲ್ಲಿಯೇ ಮುಂದಿನ ಸಲದ ನಾಟಿಗೆ ಶೇ 30ರಷ್ಟು ಕಬ್ಬು ಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಕಬ್ಬು ಸಿಗುವುದಿಲ್ಲ. ಆಲೆಮನೆಗಳು ಬಂದ್ ಆಗುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕಬ್ಬಿನ ಕಟಾವು ಮಾಡುತ್ತಿದ್ದ ಸಾವಿರಾರು ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗುತ್ತದೆ ಎನ್ನುತ್ತಾರೆ ಎಸ್.ಕೃಷ್ಣ.

ಕೆಆರ್‌ಎಸ್ ಜಲಾಶಯದಲ್ಲಿ ನೀರು ಬರಿದಾಗುವುದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ದುಡಿಯವ ಕೈಗಳು ಉದ್ಯೋಗ ಕಳೆದುಕೊಳ್ಳಲಿವೆ. ಆದ್ದರಿಂದ, ಸರ್ಕಾರ ಕೂಡಲೇ ಮುಂದಿನ ಜೂನ್‌ವರೆಗೂ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ   ನರಸರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT