ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಕಡಿಯುವ ಕೂಲಿ ಕಾರ್ಮಿಕರ ಬವಣೆ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸ್ವಂತ ಊರಿದ್ದರೂ ಅಲ್ಲಿ ಅವರ ವಾಸವಿಲ್ಲ. ಊರೂರು ಅಲೆಯುತ್ತ ಕಬ್ಬು ಕಡಿಯುವುದೇ ಅವರ ಕೆಲಸ. ಆಕಾಶವೇ ಸೂರು. ನೆಲವೇ ಹಾಸಿಗೆ. ಒಂದಡೆ ನೆಲೆಸದೇ ರೈತರ ಜಮೀನಿನಲ್ಲಿರುವ ಕಬ್ಬನ್ನು ಕಡಿಯುತ್ತಾ ರಾತ್ರಿ ವೇಳೆ ರೈತರ ಹೊಲಗಳಲ್ಲಿಯೇ ಜೀವನ ನಡೆಸುವ ಹಗರಿಬೊಮ್ಮನಹಳ್ಳಿಯ ಕಟ್ಟೆಹೊಲ ತಾಂಡದ ಬಂಜಾರ ಜನಾಂಗದ ಕೂಲಿಕಾರ್ಮಿಕರ ಬದುಕಿನ ಬವಣೆ ಇದು.

ವರ್ಷದಲ್ಲಿ ಎಂಟು ತಿಂಗಳ ಕಾಲ ಸಂಚಾರದಲ್ಲಿ ಇದ್ದು ಕೊಂಡೇ ಜೀವನ ನಿರ್ವಹಣೆ ಮಾಡುವ ಇವರು ಉಳಿದ ನಾಲ್ಕು ತಿಂಗಳು ಮಾತ್ರ ಸ್ವಂತ ಊರಿನಲ್ಲಿ ನೆಲೆಸುತ್ತಾರೆ. ನೆರೆಯ ಆಂಧ್ರ, ತಮಿಳುನಾಡು, ಗೋವಾ ಹಾಗೂ ಕೇರಳ ರಾಜ್ಯಗಳಿಗೆ ಕಬ್ಬು ಕಟಾವಿಗೂ ಹೋಗುತ್ತಾರೆ. ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಹಾವೇರಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಇದೇ ಕೆಲಸ ಮಾಡುತ್ತಾರೆ.

 ಅಕ್ಟೋಬರ್ ತಿಂಗಳಿಂದ ಮೇ ತಿಂಗಳವರೆಗೂ ಸಂಚಾರದಲ್ಲಿರುವ ಇವರಲ್ಲಿ ಕೆಲವರಿಗೆ ಕಟ್ಟೆ ಹೊಲ ತಾಂಡಾದಲ್ಲಿ ಜಮೀನಿದೆ. ಆದರೆ ಇರುವ ಸ್ವಲ್ಪ ಜಮೀನಿನಲ್ಲಿ ಜೀವನ ನಡೆಸಲಾಗದೆ ಪರದಾಡುವ ಇವರಿಗೆ ರೈತರ ಕಬ್ಬು ಕಡಿಯುವುದೇ ಜೀವನಾಧಾರ.
ಕಟ್ಟೆಹೊಲ ತಾಂಡದವರೆಲ್ಲರೂ ಕಬ್ಬು ಕಡಿಯುವ ಕೆಲಸ ಮಾಡುತ್ತಾರೆ. ಇವರಲ್ಲಿ 25 ತಂಡಗಳಿವೆ. ಪ್ರತಿ ತಂಡದಲ್ಲಿ 8 ರಿಂದ 10 ಕುಟುಂಬಗಳಿವೆ. ತಂಡದಲ್ಲಿ ಸುಮಾರು 25 ಜನರಿರುತ್ತಾರೆ. ವಿಶೇಷವೆಂದರೆ ಇವರ ತಂಡಗಳಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರತಿ ಕುಟುಂಬ ಸಂಚಾರ ಮುಗಿಸಿ ಊರಿಗೆ ಬರುವಾಗ 40 ರಿಂದ 50 ಸಾವಿರ ರೂ ಗಳಿಸಿರುತ್ತದೆ.

ಮಕ್ಕಳನ್ನೂ ತಮ್ಮ ಜತೆಯಲ್ಲಿ ಕರೆದೊಯ್ಯುತ್ತಾರೆ. ಇದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರತಿ  ತಂಡಕ್ಕೂ ಒಬ್ಬ ನಾಯಕ. ಯಾವ ಊರಿನಲ್ಲಿ ಯಾವ ರೈತನ ಹೊಲದ ಕಬ್ಬು ಕಡಿಯಬೇಕು ಎಂಬುದನ್ನು ಅವನೇ ನಿರ್ಧರಿಸುತ್ತಾನೆ.
ಕಬ್ಬು ಕಡಿಯುವ ಹೊಲದಲ್ಲಿ ಚಿಕ್ಕ ಟೆಂಟ್ ಹಾಕಿಕೊಂಡು ಈ ಕುಟುಂಬಗಳು ನೆಲೆಸುತ್ತವೆ. ಕಬ್ಬು  ಕಡಿಯುವದಷ್ಟೇ ಅಲ್ಲದೆ  ಲಾರಿಗೆ ತುಂಬಿಸುವುದು ಅವರ ಕೆಲಸ. ಹೊತ್ತು ಗೊತ್ತಿಲ್ಲದೆ ಕೆಲಸ ಮುಗಿಯುವವರೆಗೆ ದುಡಿಯುತ್ತಾರೆ. ನಸುಕಿನಲ್ಲಿ ಎದ್ದು ಅಡಿಗೆ ಮಾಡಿಟ್ಟು ಬೆಳಕಾಗುವುದರೊಳಗೆ ಕಬ್ಬು ಕಡಿಯುವ ಕೆಲಸದಲ್ಲಿ  ಮಹಿಳೆಯರು ಮುಂದಾಗುತ್ತಾರೆ.

ಕಬ್ಬು ಕಡಿಯುವ ಬಂಜಾರರ ಸಮಸ್ಯೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಗೊತ್ತೇ ಇಲ್ಲ. ಸದಾ ಊರೂರು ಸುತ್ತುವ ಈ ಕೃಷಿ ಕಾರ್ಮಿಕರು ಕಾರ್ಯದ ಒತ್ತಡದಿಂದಾಗಿ ಚುನಾವಣೆ ಸಂದರ್ಭದಲ್ಲಿ ಊರಿಗೆ ಬಂದು ಮತ ಹಾಕುವುದಿಲ್ಲ. ಆಗ ಊರಲ್ಲಿ ಇದ್ದವರು ಮಾತ್ರ ಮತ ಚಲಾಯಿಸುತ್ತಾರೆ.

ಸಂಚಾರದಲ್ಲಿ ಇರುವಾಗಲೇ ಅವರು ದೀಪಾವಳಿ,ದಸರಾ ಮತ್ತಿತರ ಹಬ್ಬಗಳನ್ನು ಆಚರಿಸುತ್ತಾರೆ. ಮಳೆಗಾಲ ಸಮೀಸುತ್ತಿದ್ದಂತೆ ಸ್ವಂತ ಊರಿಗೆ ಬಂದು ಗ್ರಾಮದ ಕೃಷ್ಣ ಹಾಗೂ ದುರ್ಗಾದೇವಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಕಬ್ಬು ಕಟಾವಿಗೆ ತಮ್ಮ ಬದುಕನ್ನು ಒಡ್ಡಿಕೊಂಡಿರುವ ಈ ಕೃಷಿ ಕಾರ್ಮಿಕರು ಇನ್ನುಳಿದ ತಂಡಗಳ ಜತೆ ಸಂಪರ್ಕ ಸಾಧಿಸಲು ಮೊಬೈಲ್ ಪೋನ್ ಹೊಂದಿದ್ದಾರೆ. ಕಬ್ಬು ಕಡಿಯುವುದರಿಂದ ಈ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರೂ ಇವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಅವರದು. ಸರ್ಕಾರ ತಮ್ಮ ಆರ್ಥಿಕ ಅಭಿವೃದ್ಧಿಗೆ ನೆರವಾದರೆ ಊರಲ್ಲೇ ಇದ್ದು ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು ಎನ್ನುತ್ತಾರೆ ಇಂತಹ ತಂಡವೊಂದರ ಮುಖಂಡ ಗೊಲ್ಯಾ ನಾಯಕನ ಅಭಿಪ್ರಾಯ ಪಡುತ್ತಾರೆ.  ಈಗ ಅವರು ಹಾವೇರಿ ಜಿಲ್ಲೆಯ  ಕೊರಡೂರು ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT