ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲದ ಮೇಲೆ `ಕೈ' ಕಣ್ಣು

Last Updated 26 ಏಪ್ರಿಲ್ 2013, 6:40 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಏರುತ್ತಿದೆ. 2008ರ ಚುನಾವಣೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ರಾಮಣ್ಣ ಲಮಾಣಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಯಶ್ರೀ ಹಳ್ಳೆಪ್ಪನವರ ಈ ಬಾರಿ ಬಿಎಸ್‌ಆರ್ ಕಾಂಗ್ರೆಸ್ ಹುರಿಯಾಳು. ಸಿದ್ದರಾಮಯ್ಯ ಅವರ ಪರಮಶಿಷ್ಯ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಕಂಡರೂ ಕೊನೆ ಎರಡು ದಿನಗಳ ಪ್ರಯತ್ನದ ಮೂಲಕ ಗೆಲುವಿನ ಚಿತ್ರಣ ಬದಲಾಗಬಹುದೆಂಬ ಲೆಕ್ಕಚಾರವಿದೆ. ಈ ಕ್ಷೇತ್ರದಲ್ಲಿ ಲಂಬಾಣಿ ಹಾಗೂ ಲಿಂಗಾಯತ ಮತಗಳು ಅಧಿಕ ಸಂಖ್ಯೆಯಲ್ಲಿದ್ದು, ಕುರುಬ ಸಮುದಾಯದ ಮತಗಳೇ ನಿರ್ಣಾಯಕ.

ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಹೊತ್ತಿಕೊಂಡಿರುವ ಶಿರಹಟ್ಟಿ, ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಕ್ಷೇತ್ರದ ಜನರಿಗೆ ಮೂಲ ಸೌಲಭ್ಯಗಳು ಇನ್ನೂ ದೊರೆತಿಲ್ಲ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಬೀಸಿದ ಅಲೆ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಅವರ ಪ್ರಭಾವದಿಂದ ಬಿಜೆಪಿ ಗೆಲುವಿನ ಬಾವುಟ ಹಾರಿಸಿತು. ಅಲ್ಲದೇ ಶಿರಹಟ್ಟಿ ಮಾಜಿ ಶಾಸಕ ಲಕ್ಷ್ಮೇಶ್ವರದ ಗಂಗಣ್ಣ ಮಹಾಂತಶೆಟ್ಟರ ಸಹ ರಾಮಣ್ಣ ಲಮಾಣಿ ಪರವಾಗಿ ಪ್ರಚಾರ ಮಾಡಿ ಗೆಲುವಿಗೆ ಶ್ರಮಿಸಿದ್ದರು.

ಈಗ ಬಿಎಸ್‌ಆರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಗಂಗಣ್ಣ ಅವರು ಪಕ್ಷದ ಅಭ್ಯರ್ಥಿ ಜಯಶ್ರೀ ಗೆಲುವಿಗೆ ಪಣ ತೊಟ್ಟಿದ್ದಾರೆ. ಜೆಡಿಎಸ್‌ನಿಂದ ಗುರಪ್ಪ ವಡ್ಡರ, ಕೆಜೆಪಿಯಿಂದ ಲಂಬಾಣಿ ಸಮುದಾಯದ ಶೋಭಾ ಲಮಾಣಿ ಹಾಗೂ ಪಕ್ಷೇತರರು ಸೇರಿ 11 ಮಂದಿ ಕಣದಲ್ಲಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೇಶ್ವರದ ಜಿ.ಎಸ್.ಗಡ್ಡದೇವರ ಮಠ, ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಗಂಗಣ್ಣ ಮಹಾಂತ ಶೆಟ್ಟರ. ಈ ಮೂರು ಪಕ್ಷಗಳ ಅಧ್ಯಕ್ಷರು ಶಿರಹಟ್ಟಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಕಾರಣ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಅವಿರತ ಪ್ರಯತ್ನ ನಡೆಸುತ್ತಿದ್ದರೆ.

ತಾವು ಮಾಡಿದ ಕೆಲಸ, ಅನುದಾನ ಸದ್ಬಳಕೆ, ಸರ್ಕಾರದ ಸಾಧನೆ ಹಾಗೂ ಹಿಂದುಳಿದ ವರ್ಗಗಳ ಬೆಂಬಲ ನೆಚ್ಚಿಕೊಂಡು ರಾಮಣ್ಣ ಲಮಾಣಿ  ಮತಯಾಚಿಸುತ್ತಿದ್ದಾರೆ. ಕೆಜೆಪಿ ಅಭ್ಯರ್ಥಿ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ರಾಮಣ್ಣ ಗೆಲುವಿಗೆ ಅಡ್ಡಗಾಲು ಆಗುವ ಸಾಧ್ಯತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂಡರಗಿ ತಾಲ್ಲೂಕಿನ ರಾಮಕೃಷ್ಣಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಅವರು `ಅಪರಿಚಿತರು' ಎಂಬ ಭಾವನೆ ಮೂಡಿದೆ. ಆದರೂ ಕ್ಷೇತ್ರ ವ್ಯಾಪ್ತಿಯ ಮುಂಡರಗಿ ತಾಲ್ಲೂಕಿನ ಮತದಾರರು ಬೆಂಬಲಕ್ಕೆ ನಿಂತಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಲಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಜನರಿಗೆ ತಿಳಿಸಿ ರಾಮಕೃಷ್ಣ ಸಹ ಮತಬೇಟೆಯಲ್ಲಿ ತೊಡಗಿದ್ದಾರೆ.

ಪರಿಶಿಷ್ಟ ಪಂಗಡದ ಹೊಳೆ ಇಟಿಗಿಯ ಸಣ್ಣವೀರಪ್ಪ ಹಳ್ಳೆಪ್ಪನವರ ಅವರ ಸೊಸೆ ಜಯಶ್ರೀ ಪರಿಶಿಷ್ಟ ಜಾತಿಗೆ ಸೇರಿದವರು. ಕಳೆದ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರು. ಈ ಬಾರಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಪಕ್ಷದ ಸಂಸ್ಥಾಪಕ ಶ್ರೀರಾಮುಲು ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ.ಉಳಿದಂತೆ ಜೆಡಿಎಸ್, ಕೆಜೆಪಿ ಸೇರಿದಂತೆ ಪಕ್ಷೇತರರು ಪೈಪೋಟಿ ನೀಡಲು    ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT