ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮೊತ್ತ ಹೆಚ್ಚಿಸಲು ಒತ್ತಾಯ

Last Updated 15 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಕ್ರಿಕೆಟ್ ಮತ್ತು ಸಿನಿಮಾ ತಾರೆಯರಿಗೆ ಪ್ರಶಸ್ತಿಯೊಂದಿಗೆ ಲಕ್ಷಾಂತರ ರೂಪಾಯಿಗಳನ್ನು ನೀಡಲಾಗುತ್ತದೆ. ಆದರೆ ಸಂಗೀತ, ನೃತ್ಯ, ನಾಟಕ ಕಲಾವಿದರಿಗೆ ಮಾತ್ರ ಬರೀ ಹಣ್ಣು-ಹಂಪಲುಗಳನ್ನು ನೀಡಿ ಪ್ರಶಸ್ತಿ ನೀಡುವುದು ಸರಿಯಲ್ಲ. ಬರುವ ವರ್ಷದಿಂದ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು’ ಎಂದು ನಗರ ಕಮಿಷನರ್ ಶಂಕರ್ ಬಿದರಿ ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ 2010-11ನೇ ಸಾಲಿನ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕರ್ನಾಟಕ ಸರ್ಕಾರಕ್ಕೆ ಬಡತನ ಬಂದಿಲ್ಲ. ಈ ಕೂಡಲೇ ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ’ ಎಂದರು.

‘ಪ್ರಶಸ್ತಿ ಸ್ವೀಕರಿಸಲು ರಾಜ್ಯದ ಮೂಲೆ ಮೂಲೆಗಳಿಂದ ಕಲಾವಿದರು ಬಂದಿದ್ದಾರೆ. ಅಕಾಡೆಮಿ ನೀಡಿದ ಹಣ್ಣು-ಹಂಪಲು ತಮ್ಮ ಊರಿಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಏನಾಗುತ್ತವೆ ಎಂಬುದು ಅವರಿಗೂ ತಿಳಿದಿದೆ. ಬಹಳಷ್ಟು ಕಲಾವಿದರು ಬಡತನದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಗಮನಿಸಿ ಪ್ರಶಸ್ತಿ ಮೊತ್ತದಲ್ಲಿ ಏರಿಕೆ ಮಾಡಬೇಕು’ ಎಂದು ಹೇಳಿದರು.
ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಅಕಾಡೆಮಿ ಅಧ್ಯಕ್ಷ ಪಂ.ನರಸಿಂಹಲು ವಡವಾಟಿ, ‘ಕಲಾವಿದರಿಗೆ ಪ್ರಶಸ್ತಿಯೊಂದಿಗೆ ಸಾಕಷ್ಟು ನಗದು ನೀಡದಿರುವ ಕುರಿತು ನಮಗೂ ನೋವಿದೆ. ಈ ಕೂಡಲೇ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡುವ ಕುರಿತಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಪ್ರಸ್ತಾವನೆಯ ಪ್ರತಿಯೊಂದನ್ನು ಬಿದರಿ ಅವರಿಗೂ ನೀಡುತ್ತೇವೆ’ ಎಂದು ಹೇಳಿದರು.

ಪ್ರಶಸ್ತಿ ವಿತರಿಸಿದ ಹಿರಿಯ ರಂಗ ಕಲಾವಿದೆ ಡಾ.ಬಿ.ಜಯಶ್ರೀ ಮಾತನಾಡಿ, ‘ಪ್ರಶಸ್ತಿ ಆಯ್ಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗದಂತೆ, ಅರ್ಹ ಕಲಾವಿದರನ್ನೇ ಅಕಾಡೆಮಿ ಗುರುತಿಸಿದೆ. ಇದಕ್ಕಾಗಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನಾರ್ಹರು. ಈ ಕಲಾವಿದರನ್ನು ಅಭಿನಂದಿಸುವ ಮೂಲಕ ನನ್ನನ್ನೇ ಅಭಿನಂದಿಸಿಕೊಂಡಂತಾಗಿದೆ’ ಎಂದರು. ಪ್ರಶಸ್ತಿ ಸ್ವೀಕರಿಸಿದವರ ಪರವಾಗಿ ಕಲಾವಿದೆ ಡಾ.ಚೂಡಾಮಣಿ ನಂದಗೋಪಾಲ್ ಮಾತನಾಡಿ, ಕೇವಲ ಕಲೆಯನ್ನೇ ನೆಚ್ಚಿ ಕಲಾವಿದನೊಬ್ಬ ಸಾಧನೆ ಮಾಡುತ್ತಾನೆ. ಇದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವುದು ಮಾನವ ಸೇವೆ. ಈ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದ್ದು, ನಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಬಲವಂತರಾವ್ ಪಾಟೀಲ ಸ್ವಾಗತಿಸಿದರು. ಇದಕ್ಕೂ ಮುನ್ನ ಖ್ಯಾತ ಹಿಂದುಸ್ತಾನಿ ಗಾಯಕ ಡಾ.ನಾಗರಾಜರಾವ್ ಹವಾಲ್ದಾರ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ಎರಡು ಹಂತಗಳಲ್ಲಿ ನೀಡಿದ್ದು, ‘ಗೌರವ ಪ್ರಶಸ್ತಿ’ಯು ರೂ 10 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ‘ವಾರ್ಷಿಕ ಪ್ರಶಸ್ತಿ’ಯು ರೂ 5 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು  
ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ

ಡಾ.ಚೂಡಾಮಣಿ ನಂದ ಗೋಪಾಲ್-ಬೆಂಗಳೂರು (ಭರತನಾಟ್ಯ), ಸೋಹನ್‌ಕುಮಾರಿ- ಬೆಂಗಳೂರು (ಸುಗಮ ಸಂಗೀತ)

ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ
ಕರ್ನಾಟಕ ಸಂಗೀತ- ಆರ್.ಕೆ.ಪದ್ಮನಾಭ-ಬೆಂಗಳೂರು (ಹಾಡುಗಾರಿಕೆ), ಎನ್.ಬಾಲಾಜಿ ಸಿಂಗ್-ಕೋಲಾರ (ಮೃದಂಗ), ಅಣ್ಣು ದೇವಾಡಿಗ-ಧರ್ಮಸ್ಥಳ (ನಾದಸ್ವರ), ಡಿ.ರಾಮು- ಮೈಸೂರು (ಕ್ಲಾರಿಯೋನೆಟ್).
ಹಿಂದುಸ್ತಾನಿ ಸಂಗೀತ- ದೊಡ್ಡ ಬಸವಾರ್ಯ ಮಲಕಾಪುರ-ಬಳ್ಳಾರಿ, ಮಾಧವರಾವ್ ಇನಾಂದಾರ್-ಕೊಪ್ಪಳ, ನೀಲಾ ಎಂ.ಕೊಡ್ಲಿ-ಧಾರವಾಡ, ಡಾ.ಹನುಮಣ್ಣ ನಾಯಕ ದೊರೆ (ಎಲ್ಲರೂ ಗಾಯನ).
ನೃತ್ಯ-ರಾಜೇಂದ್ರ ಮತ್ತು ನಿರುಪಮ- ಬೆಂಗಳೂರು (ಕಥಕ್), ಬಿ.ಕೆ.ಶ್ಯಾಮಪ್ರಸಾದ್-ಬೆಂಗಳೂರು (ಭರತನಾಟ್ಯ), ಮಂಜುಳಾ ಪರಮೇಶ್-ಬೆಂಗಳೂರು (ಭರತನಾಟ್ಯ)
ಸುಗಮ ಸಂಗೀತ-ಎಂ.ಎಸ್.ಕಾಮತ್-ಮಂಗಳೂರು, ಜಯವಂತ ಎಸ್.ಕೊಪರ್ಡೆ-ಬಾಗಲಕೋಟೆ
ಕಥಾ ಕೀರ್ತನ-ಬೇಲೂರು ಭಾಗೀರಥಿ ಭಾಸ್ಕರ್-ಹಾಸನ
ಗಮಕ-ಲಲಿತಾನಂಜುಂಡಯ್ಯ- ಮೈಸೂರು
ಹೊರನಾಡ ಕನ್ನಡ ಕಲಾವಿದ ಕರ್ನಾಟಕ ಸಂಗೀತ-ಕಲ್ಮಾಡಿ ಸದಾಶಿವ ಆಚಾರ್ಯ-ಕಾಸರಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT