ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಂದ ಅಧಿಕಾರಿಗಳಿಗೆ ದಿಗ್ಬಂಧನ

Last Updated 21 ಡಿಸೆಂಬರ್ 2012, 6:12 IST
ಅಕ್ಷರ ಗಾತ್ರ
ಬೆಳಗಾವಿ: ಅವ್ಯವಸ್ಥೆಯ ಆಗರವಾಗಿದ್ದ ಬೆಳಗಾವಿಯ ವಿಭಾಗೀಯ ಮಟ್ಟದ ಯುವಜನ ಮೇಳ ನಿಗದಿಯಂತೆ ಎರಡು ದಿನ ಕೂಡ ನಡೆಯದೇ ಒಂದೇ ದಿನಕ್ಕೆ ಮೊಟಕುಗೊಂಡಿತು.
 
ಯುವಜನ ಮತ್ತು ಕ್ರೀಡಾ ಇಲಾಖೆ ಮೇಳವನ್ನು ಎರಡು ದಿನ ನಡೆಸಲು ಉದ್ದೇಶಿಸಿತ್ತು. ಆದರೆ ಕಲಾವಿದರಿಗೆ ಊಟ-ವಸತಿಗೆ ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಬುಧವಾರದಂದೇ (ಡಿ.19) ಮುಕ್ತಾಯವಾಯಿತು.
 
ಬೆಳಗಾವಿ ವಿಭಾಗದ ವಿಜಾಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿಂದ ಯುವ ಕಲಾವಿದರು ಪ್ರತಿಭೆ ಪ್ರದರ್ಶಿಸಲು ಉತ್ಸಾಹದಿಂದ ಇಲ್ಲಿಗೆ ಆಗಮಿಸಿದ್ದರು. ಆದರೆ ಸೂಕ್ತ ವಸತಿ ಸೌಕರ್ಯ ಕಲ್ಪಿಸದ ಕಾರಣ ಅವರು ಕಾರ್ಯಕ್ರಮ ನಡೆದ ಕುಮಾರಗಂಧರ್ವ ರಂಗಮಂದಿರದಲ್ಲಿಯೇ ರಾತ್ರಿ ಕಳೆಯಬೇಕಾಯಿತು. 
 
`ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾರ್ಯಕ್ರಮದ ಪಟ್ಟಿ ತಯಾರಿಸಿದ್ದಾರೆ. ಮೇಳವನ್ನು ಒಂದೇ ದಿನಕ್ಕೆ ಮೊಟಕುಗೊಳಿಸಿ ಉಳಿದ ಕಲಾವಿದರಿಗೆ ಅವಕಾಶವನ್ನೂ ನೀಡಲಿಲ್ಲ' ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾನಗೋಡದ ಯುವಕ ರೈತ ಸಂಘದ ಗಣೇಶ ನಾಯ್ಕ ದೂರಿದರು. 
 
`35 ವರ್ಷದ ಒಳಗಿನವರಿಗೆ ಮಾತ್ರ ಮೇಳದಲ್ಲಿ ಭಾಗವಹಿಸಲು ಅವಕಾಶ ವಿದೆ. ಆದರೆ ವಯೋಮತಿ ಮೀರಿದ ಹಿರಿಯರಿಗೂ ಅವಕಾಶ ನೀಡುವ ಮೂಲಕ ಆಯೋಜಕರು ಯುವ ಕಲಾ ವಿದರಿಗೆ ಅನ್ಯಾಯ ಮಾಡಿದ್ದಾರೆ. ವಿಜಾಪುರ ಜಿಲ್ಲೆಯ ದೊಡ್ಡಾಟ ತಂಡ ದಲ್ಲಿ ಹಿರಿಯರು ಭಾಗವಹಿಸಿದ್ದರು. ಈ ಕುರಿತು ನಿರ್ಣಾಯಕರನ್ನು ಪ್ರಶ್ನಿಸಿದ ನಂತರ ಆ ತಂಡವನ್ನು ಸ್ಪರ್ಧೆಯಿಂದ ಕೈಬಿಡುವುದಾಗಿ ತಿಳಿಸಿದರು. ಆದರೆ ಆ ತಂಡಕ್ಕೆ ಪ್ರಶಸ್ತಿ ಘೋಷಿಸಿ ಅರ್ಹರನ್ನು  ಆಯೋಜಕರು ವಂಚಿಸಿದ್ದಾರೆ. ಪ್ರತಿಭೆ ಪ್ರದರ್ಶಿಸಲು ರಾಣೆಬೆನ್ನೂರಿನ ತಂಡಕ್ಕೆ ಅವಕಾಶವೇ ಸಿಗಲಿಲ್ಲ' ಎಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೆಡಿಗೊಂಡ ಗ್ರಾಮದ ಕಲ್ಮೇಶ್ವರ ದೊಡ್ಡಾಟ ಮಂಡಳಿಯ ಗಂಗಾಧರ ಹಿರೇಮಠ ಹೇಳುತ್ತಾರೆ. 
 
ಅಧಿಕಾರಿಗಳಿಗೆ ದಿಗ್ಬಂಧನ: ದೊಡ್ಡಾಟ ವಿಭಾಗದಲ್ಲಿ ವಿಜಾಪುರ ತಂಡಕ್ಕೆ ಪ್ರಥಮ ಬಹುಮಾನವನ್ನು  ಘೋಷಿಸುತ್ತಿದ್ದಂತೆಯೇ ಉಳಿದ ಜಿಲ್ಲೆಗಳ ಕಲಾವಿದರು ವೇದಿಕೆ ಏರಿ ಗಲಾಟೆ ಆರಂಭಿಸಿದರು. ವಿಜಾಪುರ ತಂಡದಲ್ಲಿ ಹಿರಿಯರು ಪಾಲ್ಗೊಂಡಿದ್ದರು ಎಂದು ಆರೋಪಿಸಿ, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವ ರಾಜ ಕಂಬಿ ಹಾಗೂ ಉದ್ಯೋಗ ವಿನಿಮಯ ಕಚೇರಿಯ ಉಪನಿರ್ದೇಶಕಿ ಸಾಧನಾ ಪೋಟೆ ಅವರು ವೇದಿಕೆಯಿಂದ ಕೆಳಗಿಳಿಯಲು ಪ್ರಯಾಸ ಪಡಬೇಕಾಯಿತು. 
 
`ಯುವಜನ ಮೇಳವು ನಿಗದಿಯಂತೆ ನಡೆದಿದೆ. ಬುಧವಾರ ಇಡೀ ದಿವಸ ಹಾಗೂ ರಾತ್ರಿ ವಿವಿಧ ಕಲಾಪ್ರಕಾರಗಳ ಸ್ಪರ್ಧೆಗಳು ನಡೆದವು. ಡೊಳ್ಳು ಕುಣಿತ ವಿಭಾಗದ ಸ್ಪರ್ಧೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾನಗೋಡದ ಯುವಕ ರೈತ ಸಂಘದ ತಂಡವನ್ನು ಆಹ್ವಾನಿಸಿದರೂ ಸಕಾಲಕ್ಕೆ ಆಗಮಿಸಲಿಲ್ಲ. ದೊಡ್ಡಾಟ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ. ಕಲಾವಿದರ ಜನ್ಮದಿನಾಂಕ ಪರಿಶೀಲಿಸಿ ಪ್ರಶಸ್ತಿ ನೀಡಲಾಗುವುದು' ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಸವರಾಜ ಎಚ್. ಹೇಳಿದರು. 
 
`ಎಲ್ಲ ಕಲಾವಿದರಿಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊಸ ವಸತಿಗೃಹಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಉತ್ತಮ ರೀತಿಯಲ್ಲಿಯೇ ಊಟ ನೀಡಲಾಗಿತ್ತು. ಕೆಲವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ' ಎಂದು   ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT