ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಮಾಡಿಗೆ ಸೋಲು: ಕ್ರೀಡಾರಂಗದಲ್ಲಿ ಮಿಶ್ರ ಪ್ರತಿಕ್ರಿಯೆ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುರೇಶ್ ಕಲ್ಮಾಡಿ ಸೋಲು ಕಾಣುತ್ತಿದ್ದಂತೆ, ಕ್ರೀಡಾರಂಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. `ಕಲ್ಮಾಡಿ ಕ್ರೀಡಾರಂಗವನ್ನು ಬಿಟ್ಟು ರಾಜಕೀಯದತ್ತ ಆಸಕ್ತಿ ವಹಿಸಲಿ' ಎಂದು ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಹೇಳಿದ್ದಾರೆ.

`ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟನೆಯ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊತ್ತಿದ್ದ ಕಲ್ಮಾಡಿ ಚುನಾವಣೆಗೆ ಸ್ಪರ್ಧಿಸಬಾರದಿತ್ತು. ಅವರು ಕ್ರೀಡಾ ಆಡಳಿತವನ್ನು ಮರೆತು ರಾಜಕೀಯ ರಂಗದಲ್ಲಿ ತೊಡಗಿಕೊಳ್ಳಲಿ. ಯಾವುದೇ ಕಾರಣಕ್ಕೂ ಕ್ರೀಡಾರಂಗದತ್ತ ತಲೆ ಹಾಕುವುದು ಬೇಡ' ಎಂದು `ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ನುಡಿದಿದ್ದಾರೆ.

`ಕಲ್ಮಾಡಿಗೆ ಕ್ರೀಡೆಯ ಗಂಧಗಾಳಿಯೂ ಗೊತ್ತಿಲ್ಲ. ಅಂಥವರು ಅಥ್ಲೀಟ್‌ಗಳಿಗೆ ಏನು ಸಹಾಯ ಮಾಡಲು ಸಾಧ್ಯ' ಎಂದು ಖಾರವಾಗಿ ಪ್ರಶ್ನಿಸಿರುವ ಅವರು, `ಇವರಿಂದ ಅಥ್ಲೀಟ್‌ಗಳಾದರೂ ಏನು ನಿರೀಕ್ಷೆ ಮಾಡಲು  ಸಾಧ್ಯ. ಕಲ್ಮಾಡಿ ಅಧಿಪತ್ಯಕ್ಕೆ ಅಂತ್ಯ ಕಂಡಿದ್ದು ಸ್ವಾಗತಾರ್ಹ ವಿಚಾರ' ಎಂದರು.

ಪುಣೆಯಲ್ಲಿ ಸೋಮವಾರ ನಡೆದ ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಲ್ಮಾಡಿ ಸೋಲು ಅನುಭವಿಸಿದ್ದು, ಕತಾರ್‌ನ ದಹ್ಲಾನ್ ಅಲ್ ಹಮಾದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆದರೆ, ಕಲ್ಮಾಡಿ ಚುನಾವಣೆಯಲ್ಲಿ ಸೋಲು ಕಂಡಿದ್ದಕ್ಕೆ ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್ ಗುರ್ಬಚನ್ ಸಿಂಗ್ ರಾಂಧವ ಬೇಸರ ವ್ಯಕ್ತಪಡಿಸಿದ್ದಾರೆ. `ತುಂಬಾ ಪ್ರಾಮಾಣಿಕವಾಗಿ ಮಾತನಾಡುತ್ತಿದ್ದೇನೆ. ಭಾರತದ ಅಥ್ಲೀಟ್‌ಗಳಿಗೆ ಸುರೇಶ್ ಕಲ್ಮಾಡಿ ಸಾಕಷ್ಟು ಸಹಾಯ ಮಾಡಿದ್ದಾರೆ. ಅಭಿವೃದ್ಧಿಗೂ ಕಾರಣರಾಗಿದ್ದಾರೆ. ಅವರು ಸೋಲು ಕಂಡಿದ್ದು ಬೇಸರ ಮೂಡಿಸಿದೆ' ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

`ಅವರನ್ನು ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಈ ಸೋಲಿನ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಆದರೆ, ಭಾರತದ ಅಥ್ಲೀಟ್‌ಗಳು ಅವರನ್ನು ಕಳೆದುಕೊಂಡರು. ಕಲ್ಮಾಡಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದಾರೆ' ಎಂದು 1962ರ ಎಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಗುರ್ಬಚನ್ ಅಭಿಪ್ರಾಯ ಪಟ್ಟರು.

`ಕ್ಲೀನ್ ಸ್ಪೋರ್ಟ್ಸ್ ಆಫ್ ಇಂಡಿಯಾದ' ಸಂಚಾಲಕ ಬಿ.ವಿ.ಪಿ. ರಾವ್, `ಕ್ರೀಡಾ ಆಡಳಿತದಲ್ಲಿ ಮುನ್ನುಗ್ಗಲು ಸಾಕಷ್ಟು ಆಸಕ್ತರು ಮುಂದೆ ಬರುತ್ತಿದ್ದಾರೆ. ಅವರಿಗೆ ಅವಕಾಶ ಮಾಡಿಕೊಡುವುದು ಮುಖ್ಯ' ಎಂದು ಹೇಳಿದರು. ಇದರ ಜೊತೆಗೆ ಕಲ್ಮಾಡಿ ಸೋಲು ಕಂಡಿದ್ದಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಮಾಜಿ ಲಾಂಗ್‌ಜಂಪ್ ಸ್ಪರ್ಧಿ ಅಂಜು ಬಾಬಿ ಜಾರ್ಜ್, `ಇದೊಂದು ಕಹಿ ಸುದ್ದಿ. ಅವರೊಬ್ಬ ಅನುಭವಿ ಕ್ರೀಡಾಡಳಿತಗಾರ. ಏಷ್ಯಾ ಅಥ್ಲೆಟಿಕ್ಸ್ ಸಂಸ್ಥೆಗೆ ಬಹಳ ವರ್ಷಗಳಿಂದ ಅವರು ಅಧ್ಯಕ್ಷರಾಗಿದ್ದರು. ಅವರಂತಹ ಮತ್ತೊಬ್ಬ ವ್ಯಕ್ತಿಯನ್ನು ಹುಡುಕುವುದು ಕಷ್ಟ' ಎಂದೂ ಅಂಜು ನುಡಿದರು.

`ಇದೊಂದು ಆಘಾತಕಾರಿ ಸುದ್ದಿ. ಭಾರತದ ಅಥ್ಲೆಟಿಕ್ ರಂಗಕ್ಕೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ' ಒಲಿಂಪಿಯನ್ ಕೃಷ್ಣಾ ಪೂನಿಯಾ ಪತಿ ವೀರೇಂದ್ರ ಪೂನಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT