ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ ತೊಳೆದುಕೊಳ್ಳಿ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆಯ ಮಟ್ಟದಲ್ಲಿಯೇ ಎದುರಾಗಿರುವ ಬಿಕ್ಕಟ್ಟು ಹಿನ್ನಡೆಯಾಗಿ ಪರಿಣಮಿಸಿದೆ. ಭಾರತೀಯ ಜನತಾ ಪಕ್ಷದ ಐದು ವರ್ಷಗಳ ಆಳ್ವಿಕೆಯಲ್ಲಿನ ಭ್ರಷ್ಟಾಚಾರವನ್ನೇ ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿಯೇ ಭ್ರಷ್ಟಾಚಾರದ ಆರೋಪವನ್ನು ಎದುರಿಸುವಂತಾಗಿದೆ. `ಅಭ್ಯರ್ಥಿಗಳ ಆಯ್ಕೆಗೆ ಹಣವೇ ಮುಖ್ಯ ಮಾನದಂಡವಾಗಿದೆ. ಪ್ರಾಮಾಣಿಕ ಮತ್ತು ಕಳಂಕರಹಿತ ನಾಯಕರನ್ನು ಕಡೆಗಣಿಸಿ ಧನವಂತ ಕುಬೇರರಿಗೆ ಟಿಕೆಟ್ ನೀಡಲಾಗಿದೆ' ಎನ್ನುವುದು ನಿಷ್ಠಾವಂತ ಕಾಂಗ್ರೆಸಿಗರ ದೂರು.

ಈಗಾಗಲೇ ಬಿಡುಗಡೆಗೊಂಡಿರುವ ಪಟ್ಟಿಯಲ್ಲಿ ಇರುವ ಮತ್ತು ಇಲ್ಲದ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅತೃಪ್ತ ಕಾಂಗ್ರೆಸ್ ನಾಯಕರ ಆರೋಪವನ್ನು  ತಳ್ಳಿಹಾಕಲಾಗುವುದಿಲ್ಲ. ಟಿಕೆಟ್ ನೀಡುವಾಗ ನಿರ್ದಿಷ್ಟ ಮಾನದಂಡವನ್ನು ಅನುಕರಿಸಲಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆ ನಡೆಸಬೇಕಾದ ಅಗತ್ಯ ಇಲ್ಲ. ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಅಡ್ಡಮತದಾನ ನಡೆಸಿದ ಶಾಸಕರಿಗೆ ಟಿಕೆಟ್ ನೀಡಿರುವುದನ್ನು ನೋಡಿದರೆ ತಪ್ಪು ಆಯ್ಕೆಗಳು ಸರಿಯಾದ ಮಾಹಿತಿಯ ಕೊರತೆಯಿಂದ ನಡೆದುದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ವಿಳಂಬವಾಗಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಆರೋಪಗಳ ಪರಿಶೀಲನೆಗೆ ಸಮಿತಿಯನ್ನು ರಚಿಸಲು ಹೊರಟಿರುವುದು ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿರುವುದನ್ನು ಒಪ್ಪಿಕೊಂಡಂತಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡ ರಾಹುಲ್‌ಗಾಂಧಿ ರಾಜಕೀಯವನ್ನು ಶುದ್ಧೀಕರಿಸಲು ಹೊರಟಿರುವ ಕಾಲದಲ್ಲಿಯೇ ಪಕ್ಷದೊಳಗೆ ಇಂತಹ ಭಾನಗಡಿಗಳು ನಡೆದಿರುವುದು ವಿಪರ್ಯಾಸ. `ಹೈಕಮಾಂಡ್ ಸಂಸ್ಕೃತಿಯನ್ನು ಕಿತ್ತೊಗೆಯುವ' ಇಲ್ಲವೆ `ಸ್ಥಳೀಯ ಮಟ್ಟದಲ್ಲಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ' ರಾಹುಲ್ ಗಾಂಧಿಯವರ ಆಶಯಗಳಿಗೆ ತದ್ವಿರುದ್ಧವಾದ ಬೆಳವಣಿಗೆಗಳು ಪಕ್ಷದಲ್ಲಿ ನಡೆದಿರುವುದು ಅವರ ಅಭಿಪ್ರಾಯವನ್ನು ಪಕ್ಷದ ನಾಯಕರು ಗಂಭೀರವಾಗಿ ಸ್ವೀಕರಿಸಿಲ್ಲ ಎನ್ನುವುದನ್ನು ತೋರಿಸುತ್ತದೆ. ತಾವು ಮಾಡಿದ ನೀತಿ ಪಾಠಕ್ಕೆ ಬದ್ಧವಾಗಿದ್ದರೆ ತಕ್ಷಣ ರಾಹುಲ್‌ಗಾಂಧಿ ಮಧ್ಯಪ್ರವೇಶಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಟಿತ ಪಟ್ಟಿಯನ್ನು ಪುನರ್‌ಪರಿಶೀಲನೆಗೊಳಪಡಿಸಬೇಕು. ಈ ಪಟ್ಟಿಯಲ್ಲಿ ದುಡ್ಡಿನ ಮೂಲಕ ಟಿಕೆಟ್ ಖರೀದಿಸಿರುವವರ ಹೆಸರುಗಳಿದ್ದರೆ ಅವುಗಳನ್ನು ವಾಪಸು ಪಡೆಯಬೇಕು. ಟಿಕೆಟ್‌ಗಾಗಿ ದುಡ್ಡು ನೀಡಿರುವುದು ಮತ್ತು ಪಡೆದಿರುವುದು ಕಂಡುಬಂದರೆ ಅಂತಹವರ  ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಬೇಕು. ಇತಿಹಾಸವನ್ನು ನೋಡಿದರೆ ತನಿಖಾ ಸಮಿತಿಗಳು ಬೀಸೋ ದೊಣ್ಣೆಯಿಂದ ಪಾರಾಗುವ ಪ್ರಯತ್ನ ಮಾತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಈಗ ನಡೆಯಬೇಕಾಗಿರುವುದು ತನಿಖೆಗಿಂತಲೂ ಮುಖ್ಯವಾಗಿ ಸಮರ್ಥ,ಕಳಂಕರಹಿತ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆ. ಜಾರಿಯಲ್ಲಿರುವ ಚುನಾವಣಾ ಕಾನೂನಿನ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿನ ಅಕ್ರಮಗಳು ಸೇರಿಲ್ಲದಿರುವುದು ರಾಜಕೀಯ ಪಕ್ಷಗಳಿಗೆ ಅನುಕೂಲವಾಗಿದೆ. 

ರಾಜಕೀಯ ಪಕ್ಷಗಳು ಸ್ವಇಚ್ಛೆಯಿಂದ ಈ ರೀತಿಯ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗದು. ಆದುದರಿಂದ ಅಭ್ಯರ್ಥಿಗಳ ಆಯ್ಕೆಯೂ ಸೇರಿದಂತೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ ನಡೆಯುವ ಎಲ್ಲ ರಾಜಕೀಯ ಚಟುವಟಿಕೆಗಳು ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರುವಂತೆ ಮಾಡಲು ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡಬೇಕಾದ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT