ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಶೇಂಗಾ ಬೀಜ: ಕಂಗಾಲಾದ ರೈತ

Last Updated 6 ಏಪ್ರಿಲ್ 2013, 9:56 IST
ಅಕ್ಷರ ಗಾತ್ರ

ಯಾದಗಿರಿ: ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ್ದ ಶೇಂಗಾ ಬೀಜಗಳೆ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಇಳುವರಿ ಬರದೇ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ದಿಕ್ಕು ತೋಚದಂತಾಗಿದೆ.

ಕಳಪೆ ಮಟ್ಟದಿಂದ ಕೂಡಿರುವ ಶೇಂಗಾ ಬೀಜಗಳನ್ನು ಬಿತ್ತನೆ ಮಾಡಿರುವ ಸಮೀಪದ ವಡಗೇರಾದ ರೈತ ಚನ್ನಬಸಪ್ಪ, ಇದೀಗ ಇಳುವರಿ ಬಂದಿಲ್ಲ ಎಂದು ದೂರುತ್ತಿದ್ದಾರೆ. ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಿಂದ ಇಲ್ಲಿಯ ರೈತ ಸಂಪರ್ಕ ಕೇಂದ್ರಕ್ಕೆ ಟಿಎಂವಿ-2 ಎಂಬ ಹೆಸರಿನ ಶೇಂಗಾ ಬೀಜಗಳನ್ನು ಸರಬರಾಜು ಮಾಡಿದ್ದರು. ರೈತ ಚನ್ನಬಸ್ಸಪ್ಪ ಲಕ್ಷಾಂತರ ಸಾಲ ಸೋಲ ಮಾಡಿ, ಹೊಲದಲ್ಲಿ ಕೊಳವೆಬಾವಿ ಕೊರೆಸಿದ್ದು, ಶೇಂಗಾ ಬೀಜಗಳನ್ನು ವಡಗೇರಾದ ರೈತ ಸಂಪರ್ಕ ಕೇಂದ್ರದಿಂದ  ಕ್ವಿಂಟಲ್‌ಗೆ ರೂ. ಸಾವಿರದಂತೆ ಖರೀದಿಸಿದ್ದರು.

4 ಎಕರೆ 28 ಗುಂಟೆಯಲ್ಲಿ ಬೇಸಿಗೆ ಹಂಗಾಮಿ ಶೇಂಗಾ ಬಿತ್ತನೆಯನ್ನು ಕಳೆದ ಜನವರಿಯಲ್ಲಿ ಮಾಡಿದ್ದರು. ಬಿತ್ತನೆ ಮಾಡಿ ಸುಮಾರು ಮೂರು ತಿಂಗಳಾಗುತ್ತಾ ಬಂದರೂ ಇದುವರೆಗೆ ಶೇಂಗಾ ಬಳ್ಳಿಯಲ್ಲಿ ಕಾಯಿಯ ಇಳುವರಿ ಬರುತ್ತಿಲ್ಲ. ಕಳೆದ ವರ್ಷ ಯಾದಗಿರಿಯ ಮಾರುಕಟ್ಟೆಯಲ್ಲಿ ಶೇಂಗಾ ಬೀಜಗಳನ್ನು ಖರೀದಿಸಿ ಬಿತ್ತನೆಯನ್ನು ಮಾಡಿದ್ದು, ಚೆನ್ನಾಗಿ ಇಳುವರಿ ಬಂದಿತ್ತು ಎಂದು ರೈತ ಚನ್ನಬಸಪ್ಪ ಹೇಳುತ್ತಾರೆ.

ಇಲ್ಲಿಯ ರೈತ ಸಂಪರ್ಕ ಕೇಂದ್ರದಿಂದ ಖರೀದಿಸಿದ ಬೀಜಗಳನ್ನು ಬಿತ್ತನೆ ಮಾಡಿದ್ದು, ಶೇಂಗಾ ಬಳ್ಳಿ ಹಚ್ಚ ಹಸಿರಿನಿಂದ ಕೂಡಿದೆ. ಆದರೆ ಕಿತ್ತು ನೋಡಿದರೆ, ಶೇಂಗಾ ಕಾಯಿಗಳೇ ಇಲ್ಲ. ಕೆಲವೊಂದು ಶೇಂಗಾ ಬಳ್ಳಿಗೆ ಸಣ್ಣ ಕಾಯಿಗಳಾಗಿವೆ. ಅವುಗಳಲ್ಲಿ ಕಾಳುಗಳೂ ಇಲ್ಲ. ಕೇವಲ ಹಾಲಿನಂತಹ ಬೆಳ್ಳನೆಯ ದ್ರವ ಬರುತ್ತದೆ. ಈಗಾಗಲೇ ಕಾಯಿಗಳಾಗಿ ಬಳ್ಳಿ ಒಣಗಿ, ಶೇಂಗಾ ರಾಶಿ ಮಾಡಬೇಕಾಗಿತ್ತು. ಆದರೆ ಕಳಪೆ ಬೀಜಗಳಿರುವುದರಿಂದ ಇಳುವರಿಯಾಗದೇ  ಸಾಲದ ಸೂಲಕ್ಕೆ ಸಿಲುಕಿದ್ದೇನೆ. ಈಗಾಗಲೇ ಶಹಾಪುರದ ಸಹಾಯಕ ಕೃಷಿ ನಿರ್ದೇಶಕರಿಗೂ ದೂರು ಸಲ್ಲಿಸಿದ್ದೇನೆ ಎಂದು ಚನ್ನಬಸಪ್ಪ ಹೇಳುತ್ತಾರೆ.

ಈ ಬಗ್ಗೆ ಇಲ್ಲಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಕೇಳಿದರೆ, ಈ ಹೋಬಳಿಯಲ್ಲಿ ಸುಮಾರು 106 ಕ್ವಿಂಟಲ್ ಶೇಂಗಾ ಬೀಜಗಳನ್ನು ಮಾರಾಟ ಮಾಡಲಾಗಿದೆ. ಯಾರಿಂದಲೂ ದೂರು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದು, ಶೇಂಗಾ ಇಳುವರಿ ಏಕೆ ಆಗಿಲ್ಲ ಎಂಬುದನ್ನು ತಿಳಿಯಲು ಕೃಷಿ ವಿಜ್ಞಾನಿಗಳನ್ನು ಕರೆಸುತ್ತಿದ್ದೇವೆ. ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎಂದು ಹೇಳುತ್ತಾರೆ.

ಈ ಭಾಗದಲ್ಲಿ ಸಕಾಲದಲ್ಲಿ ಮಳೆಯಾಗುವುದಿಲ್ಲ. ಆರ್ಥಿಕವಾಗಿ ರೈತರು ಬಲಿಷ್ಠರಲ್ಲ. ಹೊಲದಲ್ಲಿ ಬಿತ್ತನೆ ಮಾಡಬೇಕಾದರೆ ಸಾಲ ಮಾಡಬೇಕಾಗುತ್ತದೆ. ಕಳಪೆ ಬೀಜದಿಂದ ರೈತರು ಕಂಗಾಲಾಗುವುದನ್ನು ತಡೆಯಲು ಕೃಷಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT