ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿವಿಗೆ ರೂ. 50 ಕೋಟಿ ಅನುದಾನ

Last Updated 6 ಜನವರಿ 2012, 9:05 IST
ಅಕ್ಷರ ಗಾತ್ರ

ಧಾರವಾಡ: `ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಯುನಿವರ್ಸಿಟೀಸ್ ವಿತ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಅವಾರ್ಡ್ ನೀಡಿದ್ದು, ಇದರಿಂದ 50 ಕೋಟಿ ರೂಪಾಯಿ ಅನುದಾನ ದೊರೆಯಲಿದೆ” ಎಂದು ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅವಾರ್ಡ್ ದೊರೆತ ಬಗ್ಗೆ ಇಂದು ಬೆಳಿಗ್ಗೆ ಅಧಿಕೃತ ಪತ್ರ ಬಂದಿದೆ. ಯುಜಿಸಿ ನೀಡುವ ಈ ಅನುದಾನವನ್ನು ಸಂಶೋಧನೆಗೆ ಹಾಗೂ ಕವಿವಿ ಆವರಣದ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.

ಐದು ವರ್ಷದ ಅವಧಿಗೆ ಈ ಅನುದಾನ ದೊರೆಯಲಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆ ಆಗಲಿದೆ. ಕ್ಯಾನ್ಸರ್ ನಿರೋಧಕ ಕುರಿತ ಸಂಶೋಧನೆಗೆ (ಎಂಟಿ ಟ್ಯೂಮರ್) ಹೆಚ್ಚಿನ ಆದ್ಯತೆ ನೀಡಿದ್ದು, ಈ ಕುರಿತು ಯುಜಿಸಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಜೀವರಸಾಯನಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಜಿನೆಟಿಕ್ಸ್, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳಲ್ಲಿ ಈ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಇದಕ್ಕಾಗಿ 25.9 ಕೋಟಿ ರೂ. ಬಜೆಟ್ ತಯಾರಿಸಲಾಗಿದೆ ಎಂದು ಹೇಳಿದರು.

`ಕವಿವಿಯಲ್ಲಿ ಕಳೆದ 15 ವರ್ಷಗಳಿಂದ ಎಂಟಿ ಟ್ಯೂಮರ್ ಕುರಿತು ಸಂಶೋಧನೆ ನಡೆಯುತ್ತಿದೆ~ ಎಂದು ರಸಾಯನಶಾಸ್ತ್ರದ ಡಾ. ಸ್ವಾಮಿ ತಿಳಿಸಿದರು. ಗಣಿತಶಾಸ್ತ್ರದಲ್ಲಿಯೂ ಸಂಶೋಧನೆ ನಡೆಸಲಾಗುತ್ತಿದ್ದು, ಸಾಮಾಜಿಕ ವಿಜ್ಞಾನದಲ್ಲೂ ಸಂಶೋಧನಾ ಕೆಲಸ ನಡೆಯುತ್ತಿದೆ. ಈ ಕುರಿತು ಸಹ ಪ್ರಸ್ತಾವದಲ್ಲಿ ತಿಳಿಸಲಾಗಿತ್ತು ಎಂದು ಪ್ರೊ. ವಾಲೀಕಾರ ಹೇಳಿದರು.

ಕವಿವಿ ಆವರಣ ಅಭಿವೃದ್ಧಿಗಾಗಿ 27.4 ಕೋಟಿ ರೂ. ಬಜೆಟ್ ತಯಾರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ 2.30 ಕೋಟಿ ರೂ., ಪ್ರಯೋಗಾಲಯಗಳ ಹಾಗೂ ಇತರೆ ಉಪಕರಣಗಳ ಖರೀದಿಗೆ 15.45 ಕೋಟಿ ರೂ., ಸಾಫ್ಟವೇರ್ ಅಭಿವೃದ್ಧಿಗೆ 70 ಲಕ್ಷ ರೂಪಾಯಿ ಸೇರಿದಂತೆ ಸೋಲಾರ ಸೌಲಭ್ಯ, ಯುಟಿಲಿಟಿ ಕೇಂದ್ರ ಅಭಿವೃದ್ಧಿಗೆ ಈ ಅನುದಾನ ಬಳಸಲಾಗುವುದು ಎಂದರು.

ಕವಿವಿಯ ಸಂಶೋಧನಾ ಕ್ಷೇತ್ರಕ್ಕೆ ಅನುದಾನದ ಕೊರತೆ ಇಲ್ಲ. ಯುಜಿಸಿಯಿಂದ ಸಾಕಷ್ಟು ಅನುದಾನ ದೊರೆತಿದೆ ಎಂದ ಅವರು, ಕವಿವಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಯುನಿವರ್ಸಿಟೀಸ್ ವಿತ್ ಪೊಟೆನ್ಷಿಯಲ್ ಎಕ್ಸಲೆನ್ಸ್ ಅವಾರ್ಡ್ ಪಡೆಯಲು ದೇಶದ 36 ವಿಶ್ವವಿದ್ಯಾಲಯಗಳು ಪ್ರಸ್ತಾವ ಸಲ್ಲಿಸಿದ್ದವು. ಯುಜಿಸಿ ರಚಿಸಿದ ತಜ್ಞರ ಸಮಿತಿಯೊಂದು ಎಲ್ಲ ವಿವಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದರಲ್ಲಿ 10 ವಿಶ್ವವಿದ್ಯಾಲಯಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ನವದೆಹಲಿಯಲ್ಲಿ ಎಲ್ಲ 10 ವಿವಿಗಳ ಕುಲಪತಿಗಳಿಂದ ವಿವರ ಪಡೆದ ನಂತರ ಅಂಕಗಳು ಹಾಗೂ ಶ್ರೇಣಿಯ ಆಧಾರದ ಮೇಲೆ ಆರು ವಿವಿಗಳನ್ನು ಆಯ್ಕೆ ಮಾಡಲಾಯಿತು ಎಂದರು.

ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಕ್ರಮ: ಕವಿವಿಯಲ್ಲಿರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. 147 ಸ್ನಾತಕೋತ್ತರ ಹಾಗೂ 67 ಸ್ನಾತಕ ಕಾಲೇಜುಗಳಲ್ಲಿ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುವ ವಿಶ್ವಾಸವಿದ್ದು, ಶೀಘ್ರದಲ್ಲಿಯೇ ಈ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು. ಕುಲಸಚಿವರಾದ ಪ್ರೊ. ಜೆ.ಎಸ್.ಭಟ್, ಪ್ರೊ. ಎಸ್.ಬಿ.ಹಿಂಚಿಗೇರಿ, ವಿತ್ತಾಧಿಕಾರಿ ರಾಜಶ್ರೀ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT