ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಸಂದಣಿಯಲ್ಲಿ ಸೊರಗಿದ ಕವಿತೆ!

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ಹಿಡಿದಿಡದ ಕವಿತೆಗಳು, ಹಿಡಿತ ಬಿಟ್ಟ ಕವಿತೆಗಳು. ಕವಿಗಳಿಗೆ ಕಿವಿಯಾಗದೆ ತಮ್ಮ ತಮ್ಮೊಳಗೆ ಮಾತ­ನಾಡಿಕೊಳ್ಳುತ್ತ ಕುಳಿತ ಸಹೃದಯರು. ತಮ್ಮ ಗೆಳೆಯರ, ಸಂಬಂಧಿಕರ ಕವಿತೆ ವಾಚನ ಮುಗಿ­ದಾಕ್ಷಣ ಎದ್ದು ಹೋದವರು, ಮೊಬೈಲ್‌ನಲ್ಲಿ ಮಾತ­ನಾಡುತ್ತ ಹೊತ್ತು ಕಳೆದವರು, ಎಸ್‌ಎಂಎಸ್‌ ಕಳಿಸುತ್ತ ಆಚೆ ಹೋಗಿ ಮತ್ತೆ ಬಂದವರು... ಹೀಗೆ ಮನಕ್ಕೆ ಮುಟ್ಟದ ಕವಿತೆಗಳಿಗೆ ಚಪ್ಪಾಳೆ ತಟ್ಟದೆ ತಟಸ್ಥರಾದವರ ನಡುವೆ 33 ಕವಿಗಳ ಕವಿತೆಗಳು ಕಳೆದು ಹೋದವು.

ಇದು ಸಾಹಿತ್ಯ ಸಮ್ಮೇಳನದ ಅಂಗ­ವಾಗಿ ಸಮಾನಾಂತರ ವೇದಿಕೆ­ಯಲ್ಲಿ ಗುರುವಾರ ಕಂಡ ದೃಶ್ಯ. ಕಣಜನಹಳ್ಳಿ ನಾಗರಾಜು ಅವರು ವಾಚಿಸಿದ, ‘ಸದ್ದು­ಗಳ ಸಂತೆಯಲ್ಲಿ ಹಾಡು ಮಾರಲು ಹೋದ ಕಾಡುಕೋಗಿಲೆಯ ಕಥೆ ಏನಾಯಿತು?’ ಎಂದು ಕೇಳಿದ ಹಾಗೆ, ಬರೀ ಸದ್ದು ಮಾಡಿದ ಕವಿಗೋಷ್ಠಿ ಸಂತೆಯಲ್ಲಿ ಮನಕ್ಕೆ ಮನೋಹರವಾದ ಕವಿತೆಗಳು ಸಿಕ್ಕಿದ್ದು ಬೆರಳೆಣಿಕೆಯಷ್ಟು.

ಇದನ್ನು ವಿಸ್ತರಿಸಿ ಹೇಳಿದವರು ಅಧ್ಯಕ್ಷತೆ ವಹಿಸಿದ್ದ ಕವಿ ಅಬ್ದುಲ್‌ ರಶೀದ್. ‘ನಮ್ಮನ್ನು ದೇವರೇ ಕಾಪಾಡಬೇಕು, ಕವಿತೆಗೆ ಈ ಗತಿ ಬಂತೇ? ಎಂಬ ಎಸ್‌ಎಂಎಸ್‌ಗಳು ಬಂದವು. ಇದರೊಂದಿಗೆ ಕವಿತೆ ವಾಚಿ­ಸುವ ಮುನ್ನ ಪಕ್ಕದಲ್ಲಿ ಬಂದು ಕೂಡುತ್ತಿದ್ದ ಕವಿಗಳನ್ನು ಮಾತನಾಡಿ­ದಾಗ ಕಸಾಪ ಪದಾಧಿಕಾರಿ­ಗ­ಳು ಇಲ್ಲವೆ ನಿಕಟಪೂರ್ವ ಪದಾಧಿಕಾರಿಗಳೇ ಹೆಚ್ಚು. ಕವಿಗೋಷ್ಠಿಯಲ್ಲಿ ಅವಕಾಶ ಕೊಡಿ ಎಂಬ ಶಿಫಾರಸ್ಸಿಗೆ ಬಗ್ಗುವುದು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಕಾವ್ಯ ಉದ್ಧಾರವಾಗುವುದಿಲ್ಲ’ ಎಂದು ಅವರು ಎಚ್ಚರಿಸಿದರು.

‘ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಹೆಚ್ಚು ಪುಸ್ತಕಗಳು ಮಾರಾಟ­ವಾಗುತ್ತಿವೆ. ಎಲ್ಲ ಊರುಗಳಲ್ಲಿ ಈಗ ಕವನ ಸಂಕಲನಗಳು ಮುದ್ರಣ­ವಾಗು-­ತ್ತವೆ. ತಂತ್ರಜ್ಞಾನ ಅಬ್ಬರದಲ್ಲಿ, ಕವಿತೆ­ಗಳನ್ನು ಮುದ್ರಿಸಿ, ಭರದಿಂದ ಮಾರಾಟ ಮಾಡಿ ಓದುಗರನ್ನು ಅಟ್ಟಾಡಿಸಿ­ಕೊಂಡು ತಲುಪಿಸಲಾಗುತ್ತಿದೆ. ಇಂಥ ದಯನೀಯ ಸ್ಥಿತಿ ಓದುಗರಿಗೆ ಬೇಕೆ? ಶಾಪ ಹಾಕಿಕೊಂಡಾದರೂ ಕವಿತೆ­ಗಳನ್ನು ಕೇಳಬೇಕಾದ ಸ್ಥಿತಿ ಇದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಿ­ರುವ ಕುರಿತು ಸಂಘಟಕರನ್ನು ಕೇಳಿದೆ. ಎಲ್ಲ ಕವಿಗಳಿಗೆ ಅವಕಾಶ ಕೊಡಬೇಕು, ಜಿಲ್ಲಾವಾರು ಪ್ರಾತಿನಿಧ್ಯ ಕೊಡಬೇಕು ಎಂದರು. ಹಿಂದೆ ಬೇಂದ್ರೆ, ಕುವೆಂಪು ಮೊದಲಾದ ಕವಿಗಳು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದರೆ ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿಸುತ್ತಿತ್ತು. ಕಾವ್ಯಕ್ಕೆ ಹೊಸ ದಾರಿ ತೋರಿಸುತ್ತಿ­ದ್ದರು. ಆದರೆ, ಈಗ ಕಾವ್ಯದ ಮಾನ ಕಾಪಾಡಬೇಕಿದೆ’ ಎಂದು ಕಾಳಜಿ ವ್ಯಕ್ತಪಡಿಸಿದರು.

ದಯನೀಯ ಸ್ಥಿತಿ: ‘ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರು ಅಧ್ಯಕ್ಷತೆಯ ಭಾಷಣ ಮಾಡುವಾಗ ಗಡಿಬಿಡಿಯಲ್ಲಿದ್ದರು. ಅನಿರೀಕ್ಷಿತವಾಗಿ ನಿಲ್ಲಿಸಿದರು. ಅವರನ್ನು ಕೇಳಿದಾಗ, ಭಾಷಣ ಆರಂಭಿಸುವ ಮುನ್ನವೇ ಬೇಗ ಮುಗಿಸಿಬಿಡಿ ಎಂಬ ಸೂಚನೆಯಿತ್ತು. ಗನ್‌ಮ್ಯಾನ್‌ಗಳ ರೀತಿ ನನ್ನ ಸುತ್ತ ಯಾರೋ ಸುಳಿದಾಡು­ತ್ತಿದ್ದರು. ಮೈಕ್‌ ಸರಿ ಮಾಡುವ ನೆಪದಲ್ಲಿ ಬೇಗ ಮುಗಿಸಿ ಎಂಬ ಒತ್ತಡ ಹೇರಿದ್ದರು ಎಂಬುದನ್ನು ಹೇಳಿದಾಗ ವೇದನೆ­ಯಾಯಿತು. ಸಮ್ಮೇಳ­ನದ ಅಧ್ಯಕ್ಷ ಎನ್ನುವುದು ನಾಡಿನ ಅತ್ಯುತ್ತಮ ಗೌರವ ಸಂಕೇತ. ಬೇಗ ಮಾತು ಮುಗಿಸಿ ಎಂಬ ಸೂಚನೆ ನೀಡಿ ಎಂದು ಗಾಬರಿಪ­ಡಿಸುತ್ತೇವೆ. ಈ ದಯನೀಯ ಸ್ಥಿತಿ ಯಾಕೆ ಬಂತು?’ ಎಂದರು. ‘ಬಂಡಾಯದ ಮಾತು ಹೇಳುವ­ವರು ವಿವಿಧ ಬಣ್ಣಗಳ ಬೆಳಕಲ್ಲಿ ಮಿಂಚುತ್ತಾರೆ. ರಾಜ­ಕಾರಣಿಗಳ ಎದುರು ನಿಲ್ಲುತ್ತಾರೆ. ನಂತರ ಅಕಾಡೆಮಿ, ಪ್ರಾಧಿಕಾರದಂಥ ಆಯ­ಕಟ್ಟಿನ ಜಾಗಗಳಲ್ಲಿ ಕುಳಿತು­ಕೊಳ್ಳು­ತ್ತಾರೆ. ಬಡವರ, ಶೋಷಿತರ, ದಯ­ನೀಯರ ಬದುಕಿನ ಕುರಿತು ಮಾತ­ನಾಡು­ವವರು ನಾ.ಡಿಸೋಜ ಅವರಿಗೆ ಭಾಷಣ ಬೇಗ ಮುಗಿಸಿ ಎಂದಾಗ ಯಾಕೆ ಪ್ರತಿಭಟಿಸಲಿಲ್ಲ?’ ಎಂದು ಪ್ರಶ್ನಿಸಿದರು.

ಅಸಂಗತರಾಗಬಾರದು: ‘ಸಾಹಿತ್ಯ ಸಮ್ಮೇಳನದಿಂದ ಕನ್ನಡದ ಕಹಳೆ ಮೊಳಗುತ್ತದೆ, ರೋಮಾಂಚನ­ವಾಗು­ತ್ತದೆ ಎಂದು ಅನೇಕರು ಹೇಳಿದ್ದರು. ಆದರೆ, ಇಲ್ಲಿ ನಡೆದ ಗೋಷ್ಠಿಗಳ ಮಾತು ಕೇಳಿದಾಗ ರೋಮಾಂಚನ ಆಗಲಿಲ್ಲ. ಹಾಗೆಯೇ ಸಮ್ಮೇಳನಕ್ಕೆ ಜಾತ್ರೆಯ ಸ್ವರೂಪ ಕೊಡುವ ಅಗತ್ಯವಿಲ್ಲ. ತೂಕವಿಲ್ಲದ ಮಾತು­ಗಳಿಂದ, ಗೊಣಗುಟ್ಟುವಿಕೆಯ ಕವಿತೆ­ಗಳಿಂದ ಸಾರ್ಥಕ­ವಾಗುವುದಿಲ್ಲ. ಹೀಗೆ ಹೇಳುವ ಮೂಲಕ ವಿವಾದ ಮಾಡ­ಬೇಕೆಂಬ ಉದ್ದೇಶವಿಲ್ಲ.

ಕವಿಗೋಷ್ಠಿಗಳು ಯಾಕೆ ಸೊರಗುತ್ತವೆ ಎಂಬುದನ್ನು ಗಮನಿಸಬೇಕು. ಜನಪ್ರಿಯತೆ, ಘೋಷಣೆ, ಇಸಂಗಳ ಹಿಂದೆ ಹೊರಡು­ವವರು ಅಸಂಗತರಾ­ಗುತ್ತಾರೆ. ಕವಿ­ಗಳು, ಸಾಹಿತಿಗಳು ಅಸಂಗತರಾಗದೆ ಸಮಾಜದಲ್ಲಿಯ ಬದಲಾವಣೆ­ಗಳನ್ನು ಗಮನಿಸಬೇಕು. ಕವಿಗಳು, ಸಂಶೋಧ­ಕರು ಎಲ್ಲೂ ಹೋಗದೆ ತಮ್ಮ ಮೂಗಿನ ನೇರಕ್ಕೆ ಕವಿತೆ ಬರೆಯುವುದು, ಸಂಶೋಧನ ಪ್ರಬಂಧ ರಚಿಸುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT