ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ

Last Updated 6 ಜೂನ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪು ಹಣ ವಾಪಸ್ ತರುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದ ಯೋಗ ಗುರು ಬಾಬಾರಾಮ್‌ದೇವ್ ಅವರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ ಬಿಜೆಪಿ ಆರಂಭಿಸಿದ್ದ 24 ಗಂಟೆಗಳ ಧರಣಿಯನ್ನು ಮಳೆಯ ಕಾರಣ ಎರಡು ಗಂಟೆ ಮೊದಲೇ ಅಂತ್ಯಗೊಳಿಸಲಾಯಿತು.

ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ನಗರದ ಪುರಭವನದ ಎದುರು ಭಾನುವಾರ ರಾತ್ರಿ ಏಳು ಗಂಟೆಗೆ ಆರಂಭಿಸಿದ್ದ ಧರಣಿ ಸೋಮವಾರ ರಾತ್ರಿ ಏಳು ಗಂಟೆಗೆ ಕೊನೆಯಾಗಬೇಕಿತ್ತು. ಆದರೆ ಮಳೆ ಸುರಿಯುತ್ತಿದ್ದ ಕಾರಣ ಸಂಜೆ ಐದು ಗಂಟೆಗೆ ಧರಣಿ ನಿರತರು ಹೋರಾಟ ಅಂತ್ಯಗೊಳಿಸಿದರು.

`ಕಪ್ಪು ಹಣವನ್ನು ವಾಪಸ್ ತರಬೇಕೆಂದು ಒತ್ತಾಯಿಸಿ ಪ್ರಜಾಸತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ರಾಮ್‌ದೇವ್ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಇದಕ್ಕೆ ಕುಮ್ಮಕ್ಕು ನೀಡಿದ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು~ ಎಂದು ಈಶ್ವರಪ್ಪ ಆಗ್ರಹಿಸಿದರು.

ಟ್ರಾಫಿಕ್ ಜಾಮ್
ಬಾಬಾ ರಾಮ್‌ದೇವ್ ಅವರನ್ನು ಬೆಂಬಲಿಸಿ ವಿವಿಧ ಸಂಘಟನೆಗಳು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ, ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನದ ವೇಳೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ತೀವ್ರ ತೊಂದರೆಯಾಯಿತು.
ಪುರಭವನದ ಎದುರು, ಹಡ್ಸನ್ ವೃತ್ತ, ಕೆಂಪೇಗೌಡ ರಸ್ತೆ, ಆನಂದರಾವ್ ವೃತ್ತ, ಅಂಬೇಡ್ಕರ್ ಬೀದಿ, ಜೆ.ಸಿ.ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಸಿಟಿ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಪುರಭವನದ ಎದುರು ಪ್ರತಿಭಟನೆ ಮಾಡಿದ ಕೆಲ ಸಂಘಟನೆ ಸದಸ್ಯರು ಸ್ವಾತಂತ್ರ್ಯ ಉದ್ಯಾನದವರೆಗೂ ರ‌್ಯಾಲಿ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.



`ರಾಮ್‌ದೇವ್ ಅವರ ಸತ್ಯಾಗ್ರಹವನ್ನು ಹತ್ತಿಕ್ಕಲು ಯತ್ನಿಸಿದ ಪ್ರಕರಣ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ತುರ್ತು ಪರಿಸ್ಥಿತಿಯನ್ನು ನೆನಪಿಸಿತು. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ರಾಮ್‌ದೇವ್ ಅವರ ಬೆಂಬಲಕ್ಕೆ ಇಡೀ ದೇಶವಿದೆ. ಯುಪಿಎ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ ನಾಯಕರ ಹೆಸರುಗಳನ್ನು ಬಹಿರಂಗಪಡಿಸಬೇಕು. ಕಪ್ಪು ಹಣವನ್ನು ವಾಪಸ್ ತರಲು ಯತ್ನಿಸಬೇಕು~ ಎಂದರು.

`ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ದಮನ ಮಾಡಲು ಕಾಂಗ್ರೆಸ್ ಕೈ ಹಾಕಬಾರದು. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದರೆ ಇಡೀ ರಾಷ್ಟ್ರವನ್ನು ಅಭಿವೃದ್ಧಿ ಮಾಡಬಹುದು. ಆದ್ದರಿಂದ ಹೋರಾಟಗಾರರ ಕೈಬಲಪಡಿಸಬೇಕಿದೆ~ ಎಂದು ರಾಜ್ಯಸಭಾ ಸದಸ್ಯ ನ್ಯಾ.ಡಾ.ರಾಮಾಜೋಯಿಸ್ ಹೇಳಿದರು.

ಶಾಸಕರಾದ ಸಿ.ಟಿ.ರವಿ, ಅಪ್ಪಚ್ಚು ರಂಜನ್, ಎಸ್.ಆರ್.ವಿಶ್ವನಾಥ್ ಅವರು ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು. ಶಾಸಕರಾದ ಬಿ.ಎನ್.ವಿಜಯಕುಮಾರ್, ಎಸ್.ಕೆ.ಬೆಳ್ಳುಬ್ಬಿ ಮತ್ತಿತರ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬೃಹತ್ ಹೋರಾಟದ ಎಚ್ಚರಿಕೆ: ಅಖಿಲ ಭಾರತ ಸಾಧು ಸಮಾಜದ ವತಿಯಿಂದ ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಕ್ರಮ ಖಂಡಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಅವರು `ಕಪ್ಪು ಹಣದ ಬಗ್ಗೆ ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ತನ್ನ ನಿಲುವು ಪ್ರಕಟಿಸದಿದ್ದರೆ ಸಾದು ಸಮಾಜದ ಲಕ್ಷಾಂತರ ಸದಸ್ಯರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ~ ಎಂದು ಎಚ್ಚರಿಕೆ ನೀಡಿದರು.

`ರಾಜಕೀಯ ಮಾಡಲು ಕಪ್ಪು ಹಣ ಸಂಗ್ರಹಿಸುತ್ತಿರುವ ರಾಜಕೀಯ ಪಕ್ಷಗಳು ದೇಶವನ್ನು ಹಾಳು ಮಾಡುತ್ತಿವೆ. ಎಲ್ಲರೂ ಧರ್ಮ ಬದ್ಧ ರಾಜಕೀಯ ಮಾಡಬೇಕು. ವಿದೇಶದಲ್ಲಿ ಇಟ್ಟಿರುವ ಸಂಪೂರ್ಣ ಹಣವನ್ನು ವಾಪಸ್ ತರಬೇಕು. ರಾಮ್‌ದೇವ್ ಅವರ ಹೋರಾಟಕ್ಕೆ ಸಾಧು ಸಮಾಜದ ಸಂಪೂರ್ಣ ಬೆಂಬಲವಿದೆ~ ಎಂದು ಅವರು ಹೇಳಿದರು. ಕರ್ನಾಟಕ ಯೋಗ ಪ್ರಾಧಿಕಾರದ ಅಧ್ಯಕ್ಷ ವಿಶ್ವಯೋಗಿ ನಿರಂಜನ ಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪುರಭವನದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದ ಪ್ರತಿಭಟನಾಕಾರರು ಅಲ್ಲಿಯೂ ಪ್ರತಿಭಟನೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT