ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ: ಲಕ್ಷಾಂತರ ರೂಪಾಯಿ ನಷ್ಟ

Last Updated 13 ಡಿಸೆಂಬರ್ 2013, 6:57 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ವಿವಿಧೆಡೆ ಕಾಡಾನೆಗಳ  ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತದ ಬೆಳೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.

ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೇಹಳ್ಳ, ಸಿಂಕೇರಿ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಮೂರು ಕಾಡಾನೆಗಳು ಭತ್ತ, ಕಾಫಿ, ಏಲಕ್ಕಿ, ಬಾಳೆ ಬೆಳೆಗಳನ್ನು ಹಾನಿ ಮಾಡಿವೆ.  ಗ್ರಾಮದ ಬಿ.ಎಸ್‌.­ ಕೃಷ್ಣಮೂರ್ತಿ, ವಿರೂಪಾಕ್ಷ, ಬಿ.ಟಿ. ಮೋಹನ್‌, ಸ್ವಾಮಿ ಇವರಿಗೆ ಸಂಬಂಧಿಸಿದ ಕೊಯ್ಲು ಹಂತಕ್ಕೆ ಬಂದಿರುವ ಸುಮಾರು ₨ 80 ಸಾವಿರಕ್ಕೂ ಹೆಚ್ಚು ಮೌಲ್ಯದ ಭತ್ತದ ಬೆಳೆ ಹಾಗೂ ಸುಮಾರು 2 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಏಲಕ್ಕಿ ಹಾಗೂ ಕಾಫಿ ಬೆಳೆಯನ್ನು ಹಾಳು ಮಾಡಿರುವುದಾಗಿ ಗ್ರಾಮದ ರೈತ ಬಿ.ಎಸ್‌. ಕೃಷ್ಣಮರ್ತಿ ’ಪ್ರಜಾವಾಣಿ’ಗೆ ಹೇಳಿದರು.

ತಾಲ್ಲೂಕಿನ ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಳ್ಳಿ, ಬಣಾಲು ಗ್ರಾಮಗಳಲ್ಲಿ ಎರಡು ಮರಿ ಆನೆಗಳೂ ಸೇರಿದಂತೆ ಸುಮಾರು 8 ಕಾಡಾನೆಗಳು ದಾಳಿ ನಡೆಸಿವೆ.

ಗ್ರಾಮದ ಬಿ.ಎಸ್‌. ಮಂಜುನಾಥ್‌, ಬಿ.ಎಸ್‌. ಸುರೇಶ್‌, ಜಗನ್ನಾಥ್, ಮಂಜುನಾಥ್‌, ರಾಮೇಗೌಡ, ರವಿ, ಮುತ್ತಣ್ಣ, ವಿಕ್ರಂ, ವಿಜಯ್‌ಕುಮಾರ್‌, ಸತೀಶ್‌, ಪುಟ್ಟಸ್ವಾಮಯ್ಯ ಸೇರಿದಂತೆ ಗ್ರಾಮದ ಬಹುತೇಕ ರೈತರ ಭತ್ತದ ಬೆಳೆಯನ್ನು ಕಾಡಾನೆಗಳು ಹಾಳು ಮಾಡಿವೆ ಎಂದು ದೇವಲಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ  ಎಂ.ಪಿ. ಕೃಷ್ಣೇಗೌಡ ತಿಳಿಸಿದ್ದಾರೆ.

ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾನಹಳ್ಳಿ ಹಾಗೂ ಕೆ. ಮಂಚಳ್ಳಿ ಗ್ರಾಮದಲ್ಲಿ ಒಂದು ವಾರದಿಂದ ಕಾಡಾನೆಗಳ ಹಿಂಡು ಸುಮಾರು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಹಾಳು ಮಾಡಿವೆ. 

ಕತ್ತಲಾಗುತ್ತಿ­ದ್ದಂತೆಯೇ ಭತ್ತದ ಗದ್ದೆಗಳಿಗೆ ಇಳಿಯುವ ಆನೆಗಳು ಇಡೀ ಗದ್ದೆ ಬಯಲಿನಲ್ಲಿ ಅಡ್ಡಾದಿಡ್ಡಿ ಓಡಾಡುವ ಮೂಲಕ ಭತ್ತದ ಬೆಳೆಯನ್ನು ನಾಶ ಮಾಡಿದ್ದು, ರೈತರ ಕಣ್ಣಲ್ಲಿ ನೀರು ತರಿಸಿವೆ. ಹಗಲು ಹೊತ್ತಿನಲ್ಲಿ ಕಾಫಿ ತೋಟಗಳಲ್ಲಿ ತಂಗುವ ಈ ಆನೆಗಳು ಕಾಫಿ ಗಿಡಗಳನ್ನು ಬೇರು ಸಮೇತ ಕಿತ್ತು  ನಾಶ ಗೊಳಿಸುತ್ತಿವೆ ಎಂದು ಕ್ಯಾನಹಳ್ಳಿ ಗ್ರಾಮದ ರೈತ ಕೆ.ಜಿ. ಸುಬ್ರಹ್ಮಣ್ಯ ಬೇಸರದಿಂದ ಹೇಳುತ್ತಾರೆ.

ಕೆ.ಮಂಚಳ್ಳಿ ಗ್ರಾಮದ ನಂದನ್‌­ಗೌಡ, ಎಚ್‌.ಎಸ್‌.­ಚಂದ್ರೇಗೌಡ, ಪೊನ್ನಮ್ಮ, ಬಿ.ಎಂ.ದೇವರಾಜ್‌ ಸೇರಿದಂತೆ ಎಲ್ಲಾ ರೈತರ ಭತ್ತದ ಬೆಳೆ ಆನೆಗಳ ದಾಳಿಗೆ ತುತ್ತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT