ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ತೋಟದೊಳಗೊಂದು ಮನೆ...

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

`ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗ-ಖಗಗಳಿಗೆ ಅಂಜಿದೊಡೆಯೆಂತಯ್ಯ' ಎಂದವಳು ವಚನಗಾರ್ತಿ ಅಕ್ಕಮಹಾದೇವಿ. ಆದರೆ ಇಂದು ನಗರದೊಳಗೊಂದು ಮನೆ ಮಾಡಿದರೆ ಎದುರಿಸಬೇಕಾದ ಅಡ್ಡಿ ಆತಂಕ, ರಸ್ತೆ ವಿಸ್ತರಣೆ ಭಯ, ಶಬ್ದ -ವಾಯು ಮಾಲಿನ್ಯದಿಂದ ದೂರವಾಗಿರಬೇಕಾದರೆ `ಬೆಟ್ಟದ ಮನೆ'ಯೇ ಚೆಂದ.

ಮನೆ ಸುತ್ತ ಕಾಫಿ ತೋಟ, ಅಂಗಳದಲ್ಲಿ ತರಕಾರಿ, ಹೂವು, ಹಣ್ಣಿನ ಗಿಡ ಬೆಳೆಸಿದರೇ ಮನಸಿಗೆ ಮುದ. ಈಗ ನನ್ನ ಮನೆ `ಗುಡಿಸಲು' ಸ್ಥಿತಿಯಲ್ಲಿದ್ದರೂ ಕಾಫಿ ತೋಟದ ತಂಪಾದ ಸುಂದರ ವಾತಾವರಣದ ನಡುವೆ ಇದೆ.
ಇಲ್ಲಿ ಕಾಡುಕೋಳಿ ಬಳಗ, ಜೋಡಿ ಸೊರೆಹಕ್ಕಿ ಹಿಂಡು, ವಸಂತ ಕಾಲದ ಮಾವಿನ ಚಿಗುರನ್ನು ಸವಿದು ಸಂಭ್ರಮಿಸುವ ಕೋಗಿಲೆ, ಮಳೆರಾಯನ ಕೂಗಿ ಕರೆಯುವ ಕೆಂಬೂತ -ಕಪ್ಪೆ ಸಮೂಹವೂ ಇವೆ. ಇದು ನನ್ನಂತಹ ಕವಿ ಮನಸಿನ ಯುವಕನಿಗೆ ಬಡತನವನ್ನು ಮರೆಸುವ ಜೀವಂತಿಕೆಯ ತಾಣವಾಗಿದೆ.

ನನ್ನ ಕನಸಿನ ಮನೆಯೂ ಹೀಗೆ ಇರಬೇಕೆಂದು ಭಾವಿಸುವವನು ನಾನು. ಅಲ್ಪ ಬದಲಾವಣೆಗಳೊಂದಿಗೆ ಕಾಂಕ್ರೀಟೀಕರಣಗೊಂಡರೂ ಅದು ನೆಲಹಾಸು, ಗೋಡೆಗಷ್ಟೇ ಸೀಮಿತ. ಮನೆಯ ಮಾಡು ಹೆಂಚಿನದೇ ಆಗಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರ `ನನ್ನ ಮನೆ' ಕವಿತೆ ಓದಿ ಸಂಭ್ರಮಿಸುವ ನಾವು ನಿಜ ಜೀವನದಲ್ಲೇಕೆ `ಕನಸಿನ ಮನೆ' ಎಂದ ಕೂಡಲೇ `ಕಾಂಕ್ರೀಟ್ ಕಾಡು ಬೇಕು' ಎಂದುಕೊಳ್ಳುತ್ತೇವೆಯೋ ಅರ್ಥವಾಗದು.

ಅಮ್ಮ ಯಾವಾಗಲೂ ಹೇಳುತ್ತಿರುತ್ತಾಳೆ, `ನೀನು ಯಾವ ಹುಡುಗಿಯನ್ನಾದರೂ ಪ್ರೀತಿಸು-ವರಿಸು. ಆಕೆ `ಬೆಟ್ಟದ ಮನೆ' ಇಷ್ಟಪಡುವ ಹುಡುಗಿಯೇ ಆಗಿರಲಿ' ಎಂದು. ಅಮ್ಮನ ಕಾಳಜಿಯ ಹಿಂದಿನ ಉದ್ದೇಶ ನನಗೂ ಅರ್ಥವಾಗಿದೆ. ಕನಸಿನ ಮನೆ ಇದ್ದರಷ್ಟೇ ಸಾಲದು, ಅದನ್ನು ಘೋಷಿಸಿ ಪ್ರೀತಿಸುವ ಮನಸುಗಳೂ  ಮುಖ್ಯ. ಗುಡಿಸಲಿನಲ್ಲೂ ಗುಲಾಬಿ ಹೂವು ಅರಳುತ್ತವೆ. ನೆಮ್ಮದಿಯ ಬದುಕು ನಮ್ಮದಾಗುತ್ತದೆ.              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT