ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾವೇರಿ ಐತೀರ್ಪು ಪ್ರಕಟಣೆಯಿಂದ ಹಾನಿ'

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿದರೆ, ಬೆಂಗಳೂರಿನ ಶೇಕಡ 66ರಷ್ಟು ಭಾಗಕ್ಕೆ ನೀರಿನ ಕೊರತೆ ಎದುರಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದರು.

`ಅಷ್ಟೇ ಅಲ್ಲ, ಕಾವೇರಿ ಕಣಿವೆಯ ಹಲವು ಪ್ರದೇಶಗಳಿಗೂ ನೀರಿನ ಕೊರತೆ ಎದುರಾಗಲಿದೆ' ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿ ಐತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಅರ್ಜಿ ಇತ್ಯರ್ಥ ಆಗುವವರೆಗೂ ಐತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಬಾರದು. ಇದನ್ನೇ ರಾಜ್ಯದ ಸರ್ವಪಕ್ಷ ನಿಯೋಗ ಕೇಂದ್ರದ ಎದುರು ಪ್ರತಿಪಾದಿಸಬೇಕು. ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ರಾಜ್ಯದ ಕೈಬಿಡಲಾರರು ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವಿನ ರಾವಿ - ಬಿಯಾಸ್ ನದಿ ನೀರಿನ ಹಂಚಿಕೆ ವಿವಾದ ಕುರಿತ ಐತೀರ್ಪಿಗೆ ಸಂಬಂಧಿಸಿದ ವಿಶೇಷ ಮೇಲ್ಮನವಿ ಸುಪ್ರೀಂ ಕೋರ್ಟ್ ಮುಂದಿರುವ ಕಾರಣ, ಐತೀರ್ಪು ಬಂದು 18 ವರ್ಷ ಆಗಿದ್ದರೂ ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. ಇದೇ ಮಾದರಿಯ ಎಸ್‌ಎಲ್‌ಪಿ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದ ಕಾರಣ ಕೃಷ್ಣಾ ನದಿ ನ್ಯಾಯಮಂಡಳಿ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರ ನಿರಾಕರಿಸಿತ್ತು ಎಂದು ವಿವರಿಸಿದರು.

ದೆಹಲಿಗೆ ಶೀಘ್ರವೇ ರಾಜ್ಯದ ನಿಯೋಗ
ಬೀದರ್: `ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಪಕ್ಷಪಾತ ಮಾಡುತ್ತಿದೆ. ರಾಜ್ಯದ ವಿರೋಧ ಕಡೆಗಣಿಸಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ಅಧಿಸೂಚನೆ ಹೊರಡಿಸಿದರೆ ಜನರು ಕಾಂಗ್ರೆಸ್ ಪಕ್ಷನ್ನು ಕ್ಷಮಿಸುವುದಿಲ್ಲ' ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಸೋಮವಾರ ಇಲ್ಲಿ ಎಚ್ಚರಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, `ರಾಜ್ಯದ ತಕರಾರು ಅರ್ಜಿ ಇತ್ಯರ್ಥ ಆಗುವವರೆಗೂ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸದಂತೆ ಒತ್ತಾಯಿಸಲು ದೆಹಲಿಗೆ ಶೀಘ್ರವೇ ನಿಯೋಗವನ್ನು ಕರೆದೊಯ್ಯಲಾಗುವುದು' ಎಂದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಎಂದಿಗೂ ರಾಜ್ಯವನ್ನು ಬೆಂಬಲಿಸಿಯೇ ಇಲ್ಲ. ರಾಜ್ಯದಲ್ಲಿ ಮುಂಗಾರು ಅವಧಿ ಮುಗಿದಿದೆ. ತಮಿಳುನಾಡಿನಲ್ಲಿ ಇನ್ನೂ ಮಳೆ ಸುರಿಯುವ ಅವಕಾಶವಿದೆ. ಹೀಗಾಗಿ, ಕೇಂದ್ರ ಈಗಿನ ಬೆಳವಣಿಗೆಯನ್ನು ತಡೆಯಬಹುದಿತ್ತು. ಆದರೆ, ಅಂಥ ಯಾವುದೇ ಯತ್ನ ಕೇಂದ್ರದಿಂದ ಆಗಲಿಲ್ಲ ಎಂದರು. ಈಗ ಐತೀರ್ಪಿನ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದರೆ ಮಾತ್ರವೇ ರಾಜ್ಯಕ್ಕೆ ಉಳಿವು. ಹೀಗಾಗಿ, ಸರ್ವಪಕ್ಷಗಳ ನಿಯೋಗವು ಕೇಂದ್ರದ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ವಿವರಿಸಿದರು.

ಗೋಹತ್ಯೆ ನಿಷೇಧ ಮಸೂದೆ: ಗೋಹತ್ಯೆ ನಿಷೇಧ ಮಸೂದೆ ಈ ಹಿಂದೆಯೇ ಮಂಡನೆಯಾಗಿ ರಾಜ್ಯಪಾಲರ ಅಂಕಿತಕ್ಕೆ ಹೋಗಿತ್ತು. ರಾಷ್ಟ್ರಪತಿಗಳ ಬಳಿ ಕಳಿಸಿದಾಗ `ಎಮ್ಮೆ' ಎಂಬ ಪದವನ್ನು ತೆಗೆಯಬೇಕು ಎಂಬುದು ಸೇರಿದಂತೆ ಕೆಲ ಸಲಹೆ ನೀಡಿ ಹಿಂದಕ್ಕೆ ಕಳುಹಿಸಿದ್ದರು. ಸಲಹೆಯನ್ನು ಪಾಲಿಸಿ ಮತ್ತೆ ಸದನದ ಅನುಮೋದನೆ ಪಡೆಯಲಾಗಿದೆ. ಹೀಗಾಗಿ, ಅಂಕಿತ ದೊರೆಯುವ ವಿಶ್ವಾಸವಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT