ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಯಾತ್ರೆಗೆ ತಡೆ: ಬಿಜೆಪಿ ಖಂಡನೆ

Last Updated 23 ಜನವರಿ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀನಗರದ ಲಾಲ್ ಚೌಕ್‌ನಲ್ಲಿ ಇದೇ 26ರಂದು ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದ ಕೇಂದ್ರ ಸರ್ಕಾರದ ಕ್ರಮ ದುರದೃಷ್ಟಕರ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೇಕರ್  ಭಾನುವಾರ ಇಲ್ಲಿ ಬಣ್ಣಿಸಿದರು.ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಸರ್ಕಾರ ಪ್ರತ್ಯೇಕತಾವಾದಿಗಳ ಒತ್ತಡಕ್ಕೆ ಶರಣಾಗಿದೆ, ‘ರಾಷ್ಟ್ರಧ್ವಜ ಹಾರಿಸುವುದರಿಂದ ಭೇದ ಕಲ್ಪಿಸಿದಂತಾಗುತ್ತದೆಯೇ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

 ‘ಏಕತಾ ಯಾತ್ರೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಚೋದನಕಾರಿ ಎಂದು ಕರೆದಿರುವುದು ತಪ್ಪು, ಇದರಲ್ಲಿ ಪ್ರಚೋದನೆ ನೀಡುವಂಥದ್ದು ಏನಿದೆ’ ಎಂದು ಪ್ರಶ್ನಿಸಿದರು.

ರಾಷ್ಟ್ರಧ್ವಜಾರೋಹಣಕ್ಕಾಗಿ ರೈಲಿನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದ ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ. ಇದು ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತಿದೆ. ಏನೇ ಆದರೂ 26ರಂದು ತ್ರಿವರ್ಣಧ್ವಜವನ್ನು ಶ್ರೀನಗರದ ಲಾಲ್‌ಚೌಕನಲ್ಲಿ ಹಾರಿಸಿಯೇ ಸಿದ್ಧ ಎಂದರು.

 ಸಿಎಂ ಖಂಡನೆ: ರಾಷ್ಟ್ರಧ್ವಜಾರೋಹಣಕ್ಕಾಗಿ ಶ್ರೀನಗರಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಮಹಾರಾಷ್ಟ್ರದಲ್ಲಿ ತಡೆದು ವಾಪಸ್ ಕಳುಹಿಸಿರುವುದನ್ನು ಖಂಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಈ ಕುರಿತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ಅವರಿಗೆ ಪತ್ರ ಬರೆಯಲಾಗುವುದು’ ಎಂದು ಹೇಳಿದ್ದಾರೆ.

 ರಾಜ್ಯ ಬಿಜೆಪಿ ಖಂಡನೆ: ಶ್ರೀನಗರಕ್ಕೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಮಹಾರಾಷ್ಟ್ರದಲ್ಲಿ ತಡೆದು ವಾಪಸ್ ಕಳುಹಿಸಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕ ‘ಹಣವನ್ನು ಪೂರ್ತಿಯಾಗಿ ಪಾವತಿ ಮಾಡಿದ ಯಾತ್ರಿಗಳನ್ನು ಜಮ್ಮುವಿಗೆ ಕರೆದೊಯ್ಯದಿರುವುದು ವಂಚನೆಗೆ ಸಮ’ ಎಂದು ಹೇಳಿದೆ. ‘ಈ ಸಂಬಂಧ ರೈಲ್ವೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಮಾಧ್ಯಮ ಮುಖ್ಯಸ್ಥ ಎಸ್.ಪ್ರಕಾಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT