ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರವಳ್ಳಿ ಪುಳಿಯೋಗರೆ ಮೀಮಾಂಸೆ

Last Updated 3 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

‘ನನಗೆ ಬಿರಿಯಾನಿ ಮಾಡಲು ಬರುವುದಿಲ್ಲ. ಪುಳಿಯೋಗರೆ ಮಾಡಲು ಬರುತ್ತದೆ. ಅದಕ್ಕೇ ನಾನು ಅದನ್ನೇ ಮಾಡ್ತೀನಿ’. ತಾವೇಕೆ ಏಕರೂಪದ (ಕಲಾತ್ಮಕ) ಚಿತ್ರಗಳಿಗಷ್ಟೇ ನಿಷ್ಠನಾಗಿರುವುದು ಎನ್ನುವುದನ್ನು ಗಿರೀಶ ಕಾಸರವಳ್ಳಿ ಅವರು ಬಣ್ಣಿಸಿದ್ದು ಹೀಗೆ.

ಇತ್ತೀಚೆಗೆ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಅಭಿನಂದನೆ ಸ್ವೀಕರಿಸಿದ ನಂತರ, ಮಾತನಾಡಲು ಕೊಂಚ ತಡವರಿಸಿದ ಗಿರೀಶ್- ಭಾವುಕತೆಯಿಂದ ಹೀಗಾಗುತ್ತಿದೆ ಎಂದರು.

‘ನನ್ನ ಸಿನಿಮಾಗೆ ಪ್ರಶಸ್ತಿ ಬಂದಾಗ ಆಗುವ ಆನಂದ ನನಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾದಾಗ ಆಗಲಿಲ್ಲ. 20 ವರ್ಷದ ನಂತರ ಕನ್ನಡ ಚಿತ್ರೋದ್ಯಮದವರಿಗೆ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿಯಾಗುತ್ತದೆ. ನನಗಿಂತ ಅರ್ಹರಿದ್ದ ಅನೇಕರಿಗೆ ಬಂದಿಲ್ಲ ಎಂಬ ಕೊರಗು ನನಗಿದೆ. ಯಾಕಿಂಥ ತಾರತಮ್ಯ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ನಾಮ ನಿರ್ದೇಶನ ಮಾಡುತ್ತಿಲ್ಲ ಎನಿಸಿದೆ. ಈ ವರ್ಷ ಬಂದ ಪ್ರಶಸ್ತಿ ಹೊಸ ಹಾದಿ ನಿರ್ಮಿಸಲಿ’.

‘ಕನ್ನಡ ಚಿತ್ರರಂಗ ಆರ್ಥಿಕವಾಗಿ ಬಡವಾಗಿತ್ತು ಅಷ್ಟೇ. ಪ್ರತಿಭೆಯಲ್ಲಿ ಎಂದೂ ಬಡತನ ಇರಲಿಲ್ಲ. ನಾನು ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಬೇಕೆಂಬ ನಿರ್ಧಾರಕ್ಕೆ ಬದ್ಧನಾಗಿದ್ದಕ್ಕೆ ಸಿಕ್ಕ ಫಲ ಈ ಪದ್ಮಶ್ರೀ. ಪೂನಾದಲ್ಲಿ ಸಿನಿಮಾ ಕೋರ್ಸ್ ಕಲಿಯುವಾಗ ಕೆನಡಾದ ಮೇಷ್ಟ್ರೊಬ್ಬರು ವಿದೇಶಿ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದರು, ನಾನು ನಿರಾಕರಿಸಿದೆ. ‘ಆಕ್ರಮಣ’ ಚಿತ್ರದ ಸಂದರ್ಭದಲ್ಲಿ ಹಿಂದಿ ನಿರ್ಮಾಪಕರ ಪರಿಚಯವಾಗಿ ಅವರು ಬಾ ಎಂದರು, ನಾನು ಒಲ್ಲೆ ಎಂದೆ. ‘ಮನೆ’ ಚಿತ್ರದ ಕತೆಯನ್ನು ಕಮಲಹಾಸನ್ ಅವರಿಗೆ ಹೇಳಿ ಮಾಡಲು ಕೇಳಿಕೊಂಡಾಗ, ಅವರು- ‘ಚಿತ್ರದ ಬಜೆಟ್‌ನಷ್ಟೇ ಸಂಭಾವನೆಯನ್ನು ನಿಮಗೆ ನೀಡುವೆ. ಈ ಚಿತ್ರವನ್ನು ತಮಿಳಿನಲ್ಲಿ ಮಾಡೋಣ’ ಎಂದರು. ನಾನು ಒಪ್ಪಲಿಲ್ಲ. ಹೀಗೆ ಎಲ್ಲಿಗೋ ಹೋಗಿ ಅಲೆಮಾರಿಯಾಗಿ, ಪರದೇಸಿಯಾಗಲಾರೆ ಎಂದುಕೊಂಡು ಕನ್ನಡ ಚಿತ್ರರಂಗಕ್ಕೆ ನಾನು ಬದ್ಧನಾಗಿದ್ದು ಈ ರೀತಿ ಫಲ ನೀಡಿದೆ’.

‘ಕನ್ನಡದಲ್ಲಿ ವೈರತ್ವ ಇಲ್ಲ, ಸಹಾಯ ಮಾಡದಿದ್ದರೂ ಪರಸ್ಪರ ಗೌರವ ಇದೆ. ಎಲ್ಲರಲ್ಲೂ ಗ್ರಹಿಸುವ ದೃಷ್ಟಿಕೋನ ಬೇರೆ ಬೇರೆ ಇರುತ್ತದೆ. ಹೊಸ ನೋಟ ಚರ್ಚೆಗಳಿಂದ ಉದ್ಭವವಾಗಲು ಸಾಧ್ಯ’.

‘ನನಗೆ ವ್ಯಾಪಾರಿ ಚಿತ್ರಗಳ ಬಗ್ಗೆ ಟೀಕೆ ಇಲ್ಲ. ಹಾಕಿದ ಬಂಡವಾಳ ವಾಪಸ್ಸು ಬರಬೇಕೆಂಬಾಸೆ ನನಗೂ ಇದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಬಳಸುವ ನುಡಿಗಟ್ಟು ನನಗೆ ಇಷ್ಟವಾಗುವುದಿಲ್ಲ. ಅವರ ಹಾಡು ತೆಗೆಯುವ ರೀತಿ, ದೃಷ್ಟಿಕೋನ ನನಗೆ ಬರುವುದಿಲ್ಲ. ಆದರೆ ಅವರ ಪಾಲಿಟಿಕ್ಸ್ ನನಗಿಷ್ಟವಿಲ್ಲ. ಹಿಂದಿ, ತಮಿಳನ್ನು ಮಾದರಿಯಾಗಿ ಇರಿಸಿಕೊಳ್ಳದೇ ನಮ್ಮ ಪೂರ್ವಿಕರು ನಡೆದ ದಾರಿ ನಮಗೆ ಮಾದರಿಯಾಗಬೇಕು. ಸಾಹಿತ್ಯ ಮತ್ತು ಕನ್ನಡ ಚಳವಳಿಗಳನ್ನು ತಿರುಗಿ ನೋಡಬೇಕು’.

‘ನಾನು ಅಲ್ಪತೃಪ್ತ. ಜಾಸ್ತಿ ಪ್ರಯೋಗ ಮಾಡಲ್ಲ. ನನಗೆ ಗೊತ್ತಿರುವುದನ್ನು ಮಾಡ್ತೀನಿ. ಸಣ್ಣ ಅಲೆಗಳನ್ನು ಹಿಡಿದು ಯಶಸ್ವಿಯಾಗುವವನು ನಾನು. ನನ್ನ ವೈಯಕ್ತಿಕ ಮಿತಿ, ಬಜೆಟ್ ಮಿತಿ ಆಧರಿಸಿ ಸಿನಿಮಾ ಮಾಡ್ತೇನೆ. ಸಬ್ಸಿಡಿಗಳಿಂದ ಪರ್ಯಾಯ ಸಿನಿಮಾಗಳು ಉಸಿರಾಡುತ್ತಿವೆ. ಸಬ್ಸಿಡಿಯಿಂದ ಮರಾಠಿ ಸಿನಿಮಾಗಳು ಅದ್ಭುತವಾಗಿ ಬೆಳೆದವು. ಗಡಿ ಭಾಗದ ಜನರಿಗೂ ಒಳ್ಳೆಯ ಸಿನಿಮಾಗಳನ್ನು ನೋಡಲು ಅವಕಾಶ ಮಾಡಿಕೊಡಬೇಕು’.

-ಹೀಗೆ, ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ ಉದ್ಯಮದ ವಿಶ್ಲೇಷಣೆಯೂ ಕಾಸರವಳ್ಳಿ ಅವರ ಮಾತುಗಳಲ್ಲಿತ್ತು. 

 ನಿರ್ದೇಶಕ ಟಿ.ಎಸ್.ನಾಗಾಭರಣ- ‘ದೇಶದ ಪ್ರತಿಷ್ಠಿತ ನಾಗರಿಕ ಗೌರವ ಕನ್ನಡ ಚಿತ್ರರಂಗದ ಒಂದು ಮುತ್ತಿಗೆ ಸಿಕ್ಕಿದೆ’ ಎಂದು ಮಾತು ಆರಂಭಿಸಿ, ತಮ್ಮದೇ ಬದ್ಧತೆ ಮತ್ತು ಸೃಜನಶೀಲತೆಗೆ ಒಗ್ಗಿಕೊಂಡು ಕೆಲಸ ಮಾಡಿದ ಗಿರೀಶ್ ತಮ್ಮ ಸಮಕಾಲೀನರು ಎಂದರು.

ಕನ್ನಡ ಚಲನಚಿತ್ರ ಕಾರ್ಮಿಕ ಸಂಘದ ಅಧ್ಯಕ್ಷ ಅಶೋಕ್- ‘ಗಿರೀಶ್ ಯಾವಾಗಲೂ ಮನಸ್ಸು ಅರಳಿಸುವ ಚಿತ್ರಗಳನ್ನು ಮಾಡಬೇಕು. ಕೆರಳಿಸುವಂಥ ಚಿತ್ರಗಳನ್ನಲ್ಲ ಎನ್ನುತ್ತಿದ್ದವರು. ಅದನ್ನೇ ನಂಬಿಕೊಂಡು ಮಾಡಿಕೊಂಡು ಬಂದಿದ್ದಾರೆ’ ಎಂದು ಮೆಚ್ಚಿಕೊಂಡರು.

ನಿರ್ದೇಶಕ ದ್ವಾರಕೀಶ್ ಮಾತನಾಡಿ, ‘ಅಂದು ಎಲ್ಲೋ ಇರುವ ಸತ್ಯಜಿತ್ ರೇ, ಮೃಣಾಲ್ ಸೇನ್ ಹೆಸರು ಕೇಳಿದ್ದೆವು. ಅವರ ಮಟ್ಟಕ್ಕೆ ಸಾಧನೆ ಮಾಡಿದ ಗಿರೀಶ್ ಅವರನ್ನು ಇಂದು ಹತ್ತಿರದಿಂದ ನೋಡುತ್ತಿದ್ದೇವೆ’ ಎಂದರು.

‘ಗಿರೀಶ್ ಅವರ ಸಿನಿಮಾ ಕಡೆಗಿನ ಪ್ಯಾಶನ್, ಪರ್ಪೆಕ್ಷನ್ ದೊಡ್ಡದು. ಸಬ್ಜೆಕ್ಟ್, ಸಂಭಾಷಣೆ, ಚಿತ್ರಕತೆ, ಮೌನ, ಸಂಗೀತ, ಪಾತ್ರಗಳು, ನಟನೆ, ಲೋಕೇಶನ್ ಎಲ್ಲದರಲ್ಲಿಯೂ ಅವರದೇ ಆದ ಬೆರಳಚ್ಚು ಇರುತ್ತದೆ. ಕತೆಯನ್ನು ಹಲವು ರೀತಿಯಲ್ಲಿ ಹೇಳುವವರಿದ್ದಾರೆ. ಅದು ಎಲ್ಲಾ ಕಾಲಕ್ಕೂ ಎಲ್ಲಾ ದೇಶಕ್ಕೂ ಮೆಚ್ಚುಗೆಯಾಗುವಂತೆ ಹೇಳುವುದು ಕೆಲವರಿಂದ ಮಾತ್ರ ಸಾಧ್ಯ. ಅದರಲ್ಲಿ ಗಿರೀಶ್ ಒಬ್ಬರು. ಇಷ್ಟೆಲ್ಲ ಸಾಧನೆ ಮಾಡಿದರೂ ಅವರು ಎಂದೂ ಕಮರ್ಷಿಯಲ್ ಚಿತ್ರಗಳ ಬಗ್ಗೆ ತಿರಸ್ಕಾರ ಮನೋಭಾವ ಬೆಳೆಸಿಕೊಂಡಿಲ್ಲ. ಅವರ ಆ ನಡವಳಿಕೆಗೆ ನನ್ನ ಸಲಾಮ್’ ಎಂದು ರಮೇಶ್ ಅರವಿಂದ್ ಹೇಳಿದರು.

‘ಬದುಕು ಒಂದು ಕೊಟ್ಟು ಒಂದನ್ನು ಕಿತ್ತುಕೊಂಡಿದೆ. ವೈಶಾಲಿಯನ್ನು ಕಿತ್ತುಕೊಂಡ ಬದುಕು, ಪದ್ಮಶ್ರೀಯನ್ನು ನೀಡಿದೆ. ನಾವು ಸ್ವಮೇಕ್, ಕಾದಂಬರಿ ಆಧಾರಿತ ಚಿತ್ರ ಎಂದು ಬೊಬ್ಬೆ ಹೊಡೆದುಕೊಳ್ಳುತ್ತೇವೆ. ಆದರೆ ಅವರು ಮಾಡಿದ 13 ಸಿನಿಮಾಗಳು ಸಾಹಿತ್ಯ ಕೃತಿ ಆಧರಿಸಿ ಬಂದಿವೆ’ ಎಂದವರು ನಾಗತಿಹಳ್ಳಿ ಚಂದ್ರಶೇಖರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT