ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಕಥೆಯಿಂದ ಶುರುವಾಗಿ...

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತ್ತೇ ನಿಮಿಷದಲ್ಲಿ ಪುಟ್ಟದಾಗಿ ಕಥೆ ಹೇಳುವ ಉತ್ಸಾಹದೊಂದಿಗೆ ಕ್ಯಾಮೆರಾ ಮತ್ತಿತರ ಸಲಕರಣೆಗಳನ್ನು ಜೋಡಿಸಿ ತಂದಿದ್ದ ಗೆಳೆಯರ ಬಳಗದಲ್ಲಿ ಹಣವಿರಲಿಲ್ಲ. ಆದರೆ ತುಂಬು ಉತ್ಸಾಹವಿತ್ತು. ಅದೇ ಅವರ ಬಂಡವಾಳ. ಹತ್ತು ನಿಮಿಷ ಸಾಲದು. ಅರ್ಧ ಗಂಟೆ ಮಾಡೋಣ ಎಂದು ತೀರ್ಮಾನವಾಯಿತು. ಕಥೆಯನ್ನು ಹಿಗ್ಗಿಸುತ್ತಿದ್ದಂತೆ ಅದು ಒಂದು ಗಂಟೆಯ ಅವಧಿಯಷ್ಟು ಬೆಳೆಯಿತು.

ಅಪ್ಪ ಜನ್ಮದಿನಕ್ಕೆಂದು ಕೊಡಿಸಿದ್ದ ಪುಟ್ಟ ಕ್ಯಾಮೆರಾ ಹಿಡಿದ ನಾಗಾರ್ಜುನ್‌ ಸಿನಿಮಾ ಕೃತಕ ಬೆಳಕಿನ ಶಿಷ್ಟಾಚಾರವನ್ನು ತಿರಸ್ಕರಿಸಿ ಹಗಲಿನ ಹೊತ್ತು ಸೂರ್ಯನ ಬೆಳಕಲ್ಲಿ ಕ್ಯಾಮೆರಾ ಕಣ್ಣಿಂದ ನೋಡಿದರೆ, ಸೂರ್ಯ ಮುಳುಗಿದ ಹೊತ್ತಲ್ಲಿ ಕಾರಿನ ದೀಪಗಳ ಬೆಳಕನ್ನೇ ಕಲಾವಿದರ ಮುಖದ ಮೇಲೆ ಚೆಲ್ಲಿ ದೃಶ್ಯಗಳನ್ನು ಸೆರೆಹಿಡಿದರು.

ತೆರೆಯ ಮೇಲೆ ಕಥೆ ಹೇಳಿದ ಬಗೆ ನೋಡಿ ಮೆಚ್ಚಿದ ಕೆಲ ಹಿರಿಯರು, ‘ಇದು ತುಂಬಾ ಚಿಕ್ಕದಾಯಿತು. ಎರಡು ಗಂಟೆಗೆ ಹಿಗ್ಗಿಸಿ. ದೊಡ್ಡ ಸಿನಿಮಾವನ್ನೇ ಮಾಡಿ’ ಎಂದು ಸಲಹೆಯಿತ್ತರು. ಮತ್ತೆ ಉಪಕರಣಗಳನ್ನು ಹೆಗಲಿಗೇರಿಸಿಕೊಂಡು ಅನುಮತಿ ಇಲ್ಲದ ತಾಣಗಳಲ್ಲಿಯೂ ಕದ್ದುಮುಚ್ಚಿ ಚಿತ್ರೀಕರಣ ನಡೆಸಿದರು. ಕಿರುಚಿತ್ರವೊಂದನ್ನು ತಯಾರಿಸಲು ಹೊರಟಿದ್ದ ಬಳಗ ಚಿಕ್ಕಾಸೂ ಖರ್ಚು ಮಾಡದೆ ಸಿದ್ಧಪಡಿಸಿದ್ದು 1 ಗಂಟೆ 55 ನಿಮಿಷದ ಅಪ್ಪಟ ಮನರಂಜನೆಯ ಕಮರ್ಷಿಯಲ್‌ ಚಿತ್ರವನ್ನು.

ನವೀನ್‌ ಕುಮಾರ್‌, ರೋಹಿತ್‌ ಪಡಕಿ, ಸುಹಾಸ್‌, ತೇಜಸ್‌, ಆದಿತ್ಯ, ಸುಮಯೇಂದ್ರ, ರವೀಶ್‌, ರಿಚರ್ಡ್‌ ಇಮ್ಯಾನುಯೆಲ್‌, ಅಪೇಕ್ಷಾ ಘಳಿಗಿ ಮುಂತಾದ ಸಮಾನ ಮನಸ್ಕರ ಬಳಗ ತಯಾರಿಸಿದ ಚಿತ್ರದ ಹೆಸರೂ ವಿಭಿನ್ನ, ‘ಅಷ್ಟ್ರಲ್ಲೇ ಜಸ್ಟ್‌ ಮಿಸ್‌’. ತಂಡದ ಒಬ್ಬೊಬ್ಬರದು ಒಂದೊಂದು ವೃತ್ತಿ. ಹೀಗಾಗಿ ಸಿನಿಮಾ ಬಗ್ಗೆ ಮಾತನಾಡಲು ಬಿಡುವು ಸಿಗುತ್ತಿದ್ದದ್ದೇ ವಾರಾಂತ್ಯದಲ್ಲಿ.

ಶನಿವಾರ ಮತ್ತು ಭಾನುವಾರದಂದು ಮಾತ್ರ ಸೇರುತ್ತಿದ್ದ ಈ ಬಳಗ ಚಿತ್ರೀಕರಣ ಪೂರ್ಣಗೊಳಿಸಲು ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿತು. ದಿನವೂ ಒಬ್ಬೊಬ್ಬರ ಮನೆಯಿಂದ ಊಟದ ಸರಬರಾಜು. ಊಟವಿಲ್ಲದೆಯೇ ಹಸಿವನ್ನೂ ಮರೆತು ಚಿತ್ರದ ಸೃಷ್ಟಿಯಲ್ಲಿ ಮಗ್ನರಾದ ದಿನಗಳಿದ್ದವು.

ಹಿರಿಯ ನಟಿ ಗಿರಿಜಾ ಲೋಕೇಶ್‌ ಸಂಭಾವನೆ ಪಡೆಯದೇ ಅಭಿನಯಿಸಿ ಹುಡುಗರ ಬೆನ್ನುತಟ್ಟಿದರು. ಫೇಸ್‌ಬುಕ್‌ನಲ್ಲಿ ಟ್ರೇಲರ್‌ ನೋಡಿದ ಯೋಗರಾಜ್‌ ಭಟ್ಟರ ಶಿಷ್ಯರೊಬ್ಬರು ಅದನ್ನು ಭಟ್ಟರಿಗೆ ತೋರಿಸಿದರು. ಕೂಡಲೇ ಈ ಹುಡುಗರನ್ನು ಕಚೇರಿಗೆ ಕರೆಯಿಸಿದ ಭಟ್ಟರು ಬ್ಯಾನರ್‌ ಇಲ್ಲದೆ, ಬಿಡುಗಡೆಗೆ ಹಣವಿಲ್ಲದೆ ಪರದಾಡುತ್ತಿದ್ದ ಅವರಿಗೆ ‘ಮಗು ಹೆತ್ತ ಮೇಲೆ ಗರ್ಭ ಧರಿಸುತ್ತಿರುವಂತಾಯಿತು ನಿಮ್ಮಕಥೆ’ ಎಂದು ತಮಾಷೆ ಮಾಡಿದ್ದಲ್ಲದೆ ಮೆಚ್ಚುಗೆ ಮಾತನ್ನಾಡಿದರು.

ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿರುವ ನವೀನ್‌ ಕುಮಾರ್‌, ಸಂಕಲನಕಾರನ ಹೊಣೆಯನ್ನೂ ನಿರ್ವಹಿಸಿದ್ದಾರೆ. ಸಾಧು ಕೋಕಿಲ ನಿರ್ದೇಶನದ ‘ಗೆರಿಲ್ಲಾ’ ಚಿತ್ರದ ನಾಲ್ವರು ನಾಯಕನಟರಲ್ಲಿ ಒಬ್ಬರಾದ ನವೀನ್‌, ನಿರ್ದೇಶನ ವಿಭಾಗದಲ್ಲಿ ಅನುಭವ ಹೊತ್ತವರು.

‘ಪಾಂಡುರಂಗ ವಿಠಲ’ ಧಾರಾವಾಹಿಯ ‘ಜಾಜಿ’ ಖ್ಯಾತಿಯ ಅಪೇಕ್ಷಾ ಘಳಿಗಿ ನಾಯಕಿ. ಜವಾಬ್ದಾರಿಯಿಲ್ಲದ ಯುವಕನೊಬ್ಬನ ಪ್ರೇಮ ಪ್ರಸಂಗದ ಕಥೆ ‘ಅಷ್ಟ್ರಲ್ಲೇ ಜಸ್ಟ್‌ ಮಿಸ್‌’ನದ್ದು. ಚಿತ್ರದಲ್ಲಿ ಸಂದೇಶವಿದೆ, ಹಾಸ್ಯವಿದೆ, ಪರಿಪೂರ್ಣ ಮನರಂಜನೆಯಿದೆ ಎನ್ನುತ್ತಾರೆ ನವೀನ್‌. ನಿರ್ದೇಶಕ ರೋಹಿತ್‌ ಪಡಕಿ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ನಿಭಾಯಿಸಿದ್ದರೆ, ರಿಚರ್ಡ್‌ ಇಮ್ಯಾನ್ಯುಯೆಲ್‌ ಮತ್ತು ತೇಜಸ್‌ ಐದು ಹಾಡುಗಳನ್ನು ಹೊಸೆದಿದ್ದಾರೆ.

‘ಭಾರತದ ಮೊಟ್ಟಮೊದಲ ಶೂನ್ಯ ಬಂಡವಾಳದ ಚಿತ್ರ’ ಎಂದು ಹೇಳಿಕೊಂಡಿರುವ ಚಿತ್ರತಂಡ ಈಗ, ಚಿತ್ರವನ್ನು ತೆರೆಗಾಣಿಸಲು ನಿರ್ಮಾಪಕರ ಹುಡುಕಾಟದಲ್ಲಿದೆ.
–ಎ.ಎಂ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT