ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ದಂಡದ ಹಣ ಶೌಚಾಲಯ ನಿರ್ಮಾಣಕ್ಕೆ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಕೊಪ್ಪಳ: ಮದ್ಯಪಾನ ಮಾಡಿ ಗಲಾಟೆ ಮಾಡುವವರಿಗೆ, ಅದರಲ್ಲೂ ಮಕ್ಕಳು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಆ ಗ್ರಾಮದಲ್ಲಿ ದಂಡ ವಿಧಿಸಲಾಗುತ್ತದೆ. ಮದ್ಯ ಮಾರಾಟ ಮಾಡುವವರಿಗೂ ದಂಡ ವಿಧಿಸಲಾಗಿದ್ದು, ಗ್ರಾಮದಲ್ಲಿ ಮದ್ಯ ಮಾರಾಟವೂ ನಿಂತಿದೆ.

ಇದರಲ್ಲೇನು ವಿಶೇಷ ಎನ್ನಬಹುದು. ಆದರೆ, ಈ ರೀತಿ ಸಂಗ್ರಹಗೊಳ್ಳುವ ದಂಡದ ಹಣದಲ್ಲಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಧನಸಹಾಯ ಮಾಡುವ ಮೂಲಕ ಗ್ರಾಮಸ್ಥರು ಮಾದರಿಯಾಗಿದ್ದಾರೆ.

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗಾವರಾಳ ಇಂತಹ ಮಾದರಿ ಕಾರ್ಯಕ್ಕೆ ಸಾಕ್ಷಿಯಾಗಿರುವ ಗ್ರಾಮ.
ಮದ್ಯ ಸೇವಿಸಿ ಬಂದು ಮಕ್ಕಳಿಗೆ, ಮಹಿಳೆಯರಿಗೆ ಕಿರುಕುಳ ನೀಡುವವರಿಂದ ಸಂಗ್ರಹಿಸಿ ದಂಡ ಮೊತ್ತ ರೂ 1.50 ಲಕ್ಷ  ದಾಟಿರುವುದು ಮತ್ತೊಂದು ವಿಶೇಷ.

ಈ ರೀತಿ ಸಂಗ್ರಹವಾಗಿರುವ ಹಣದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ಸಾಲ ನೀಡಲಾಗುತ್ತದೆ. ಶೌಚಾಲಯ ಪೂರ್ಣಗೊಂಡ ನಂತರ ಸಾಲವನ್ನು ಮರುಪಾವತಿ ಮಾಡುವುದು ಕಡ್ಡಾಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರಪ್ಪ ಮಾಳೆಕೊಪ್ಪ ಹೇಳುತ್ತಾರೆ.

ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿ ಜತೆ ಮಾತನಾಡಿದ ಗ್ರಾಮದ ಹಿರಿಯರು, 2008ರಿಂದ ಈ ರೀತಿ ದಂಡ ಹಾಕಲು ಆರಂಭಿಸಿದ್ದಾಗಿ ತಿಳಿಸಿದರು. ದಂಡ ಹಾಕುವುದನ್ನು ಆರಂಭಿಸಿದ ನಂತರ ಕುಡಿದು ಬಂದು ಗಲಾಟೆ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿವೆುಯಾಗಿದೆ ಎಂದೂ ಹೆಮ್ಮೆಯಿಂದ ಹೇಳಿದರು.

`ಕುಡಿದು ಬಂದು ಕಿರುಕುಳ ನೀಡುವವರಿಗೆ ಮೊದಲು ಎಚ್ಚರಿಕೆ ನೀಡುತ್ತೇವೆ. ವರ್ತನೆ ಸುಧಾರಿಸಿಕೊಳ್ಳಲು ಅವಕಾಶವನ್ನೂ ನೀಡಲಾಗುತ್ತದೆ. ಆದರೆ, ಮತ್ತೆ ಕುಡಿದು ಬಂದು ಕಿರುಕುಳ ನೀಡುವುದನ್ನು ಮುಂದುವರಿಸಿದವರಿಗೆ ರೂ 2,500 ದಂಡ ವಿಧಿಸಲಾಗುತ್ತದೆ~ ಎಂದು ಶಂಕ್ರಪ್ಪ ಮಾಳೆಕೊಪ್ಪ ವಿವರಿಸಿದರು.

`ದಂಡ ರೂಪದಲ್ಲಿ ಸಂಗ್ರಹವಾಗಿರುವ ಹಣದಿಂದ 11 ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸಾಲ ನೀಡಲಾಗಿದೆ. ಈ ಪೈಕಿ ನಾಲ್ಕು ಶೌಚಾಲಯಗಳು ಪೂರ್ಣಗೊಂಡಿವೆ~ ಎಂದೂ ಹೇಳುತ್ತಾರೆ.

ಸಾಲ ಪಡೆದವರು ಕಡ್ಡಾಯವಾಗಿ ಮರುಪಾವತಿ ಮಾಡಬೇಕು. ಮರುಪಾವತಿಗೂ ಸಾಕಷ್ಟು ಸಮಯ ನೀಡಲಾಗುತ್ತದೆ. ಈ ರೀತಿ ಪಡೆದ ಸಾಲಕ್ಕೆ ವಾರ್ಷಿಕ ಶೇ 2ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಪುನಃ ಈ ಹಣವನ್ನು ಹೆಚ್ಚು ಜನರಿಗೆ ಸಾಲ ನೀಡಲು ಬಳಸಲು ಸಾಧ್ಯವಾಗಲಿ ಎಂಬುದೇ ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.

`ಕುಡಿದು ಬಂದು ಗಲಾಟೆ ಮಾಡಿದ ನಮ್ಮ ಅಣ್ಣ-ತಮ್ಮಂದಿರಿಂದಲೂ ದಂಡ ಕಟ್ಟಿಸಿದ್ದೇವೆ. ಯಾರು ಮಾಡಿದರೂ ತಪ್ಪು-ತಪ್ಪೇ ಅಲ್ಲವೇ~ ಎಂದು ಗ್ರಾಮದ ಹಿರಿಯ ದೊಡ್ಡವೀರಪ್ಪ ಪ್ರತಿಪಾದಿಸಿದರು.

ಮದ್ಯ ಮಾರಾಟ ಮಾಡದಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಇಬ್ಬರು ಯುವಕರು ಕೇಳಲಿಲ್ಲ. ನಂತರ ಇಬ್ಬರಿಗೂ ತಲಾ ರೂ 7 ಸಾವಿರ  ದಂಡ ವಿಧಿಸಿದ ನಂತರ ಈಗ ಅವರು ಮದ್ಯ ಮಾರಾಟದ ಗೊಡವೆಗೇ ಹೋಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಅಲ್ಲದೇ, ಒಬ್ಬನೇ ವ್ಯಕ್ತಿ ರೂ 2,500 ಗಳಂತೆ ಐದು ಬಾರಿ ದಂಡ ಕಟ್ಟಿದ ನಂತರ ಈಗ ಕುಡಿಯುವುದನ್ನು ಬಿಟ್ಟಿದ್ದಾನೆ ಎಂದು ಹೇಳಲೂ ಮರೆಯಲಿಲ್ಲ.

ಒಂದೆಡೆ ಗ್ರಾಮದ ಜನರು ಕುಡಿಯುವುದನ್ನು ಬಿಡುತ್ತಾರೆ. ಮತ್ತೊಂದೆಡೆ ಈ ಹಣದಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಲು ಅನುಕೂಲವಾಗುತ್ತದೆ. ಆದರೆ, ಶೌಚಾಲಯ ನಿರ್ಮಿಸಿಕೊಳ್ಳುವ ಅಗತ್ಯದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿಯ ಕೊರತೆ ಇರುವುದೂ  ಇದೆ.

ಸ್ವಚ್ಛ ಗ್ರಾಮ ನಿರ್ಮಾಣದತ್ತ ಇದು ನಮ್ಮ ಸಣ್ಣ ಹೆಜ್ಜೆ ಎಂದೂ ಗ್ರಾಮದ ಮುಖಂಡ ಮಾರುತಿ ಅಭಿಪ್ರಾಯಪಡುತ್ತಾರೆ.

ರೂ. 2500 ದಂಡ

2008ರಿಂದ ಈ ರೀತಿ ದಂಡ ಹಾಕಲು ಆರಂಭಿಸಲಾಗಿದೆ. ಕುಡಿತ ಬಿಡದವರಿಗೆ ರೂ 2,500 ದಂಡ ವಿಧಿಸಲಾಗುತ್ತಿದೆ. ಇದುವರೆಗೆ ಸಂಗ್ರಹವಾಗಿರುವ ದಂಡ ಮೊತ್ತ ರೂ 1.50 ಲಕ್ಷ  ದಾಟಿದೆ. ದಂಡ ರೂಪದಲ್ಲಿ ಸಂಗ್ರಹವಾಗಿರುವ ಹಣದಿಂದ ಶೌಚಾಲಯ ನಿರ್ಮಾಣಕ್ಕೆ 11 ಜನರಿಗೆ ಸಹಾಯ ಧನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT