ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುವ ಭೀತಿಯಲ್ಲಿ ಕೋರಮಂಡಲ ಆಸ್ಪತ್ರೆ

Last Updated 4 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಕೆಜಿಎಫ್: ಮಳೆ ಬಿದ್ದರೆ ಸಾಕು. ನಗರದ ಕೋರಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜೀವಭಯದಿಂದ ಆಸ್ಪತ್ರೆಯ ಹೊರಗಡೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಆಸ್ಪತ್ರೆ ಮುಂಭಾಗದಲ್ಲಿಯೇ ರೋಗಿಗಳನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳಿಸುತ್ತಾರೆ.

ಜನಸಂಖ್ಯೆಯನ್ನು ಆಧರಿಸಿ ಪ್ರಾರಂಭಿಸಲಾಗಿದ್ದ ಕೋರಮಂಡಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ಸಂಪೂರ್ಣವಾಗಿ ಶಿಥಿಲಗೊಂಡು, ಹೆಚ್ಚಿನ ಮಳೆ ಬಂದರೆ ಕುಸಿದು ಬೀಳುವುದೇನೋ ಎಂಬ ಆತಂಕ ಉಂಟಾಗಿದೆ.
ಚಿನ್ನದ ಗಣಿ (ಬಿಜಿಎಂಎಲ್) ಕಾರ್ಯನಿರ್ವಹಿಸುತ್ತಿದ್ದಾಗ ಉತ್ತಮವಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಈ ಆರೋಗ್ಯ ಕೇಂದ್ರ, ಗಣಿ ಮುಚ್ಚಿದ ನಂತರ ಅವ್ಯವಸ್ಥೆಗಳ ಗೂಡಾಗಿ ಪರಿಣಮಿಸಿದೆ.

ಸರ್ಕಾರದ ಅನುದಾನ ಈ ಅಸ್ಪತ್ರೆಗೆ ಬರುತ್ತಲೇ ಇದೆ. ಆದರೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈಚೆಗೆ ಆರೋಗ್ಯ ರಕ್ಷಣಾ ಸಮಿತಿ ನಿರ್ಣಯದಂತೆ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಆ ಹಣ ಎಲ್ಲಿ ಖರ್ಚಾಗಿದೆಯೋ ತಿಳಿದಿಲ್ಲ ಎಂದು ಸಮಿತಿಯ ಸದಸ್ಯ ಅನ್ಬರಸನ್ ಹೇಳುತ್ತಾರೆ.

ಸದರಿ ಆಸ್ಪತ್ರೆಯಲ್ಲಿ ಓರ್ವ ವೈದ್ಯೆ, ಪ್ರಯೋಗಾಲಯ ತಜ್ಞ ಸೇರಿದಂತೆ ಒಟ್ಟು ಒಂಬತ್ತು ಸಿಬ್ಬಂದಿ ಇದ್ದಾರೆ. ಆಸ್ಪತ್ರೆಯಲ್ಲಿ ಪ್ರಯೋಗಾಲಯ ಇಲ್ಲದ ಕಾರಣ ಪ್ರಯೋಗಾಲಯ ತಜ್ಞರು ಕೆಲಸವಿಲ್ಲದೆ ಕುಳಿತಿದ್ದಾರೆ.

ಆಸ್ಪತ್ರೆಯ ಮೇಲ್ಫಾವಣಿ ಅಲ್ಲಲ್ಲಿ ಕಿತ್ತು ಬಂದು ಶೇಖರವಾಗಿರುವ ಮಳೆ ನೀರು, ತೊಟ್ಟಿಡುತ್ತಿರುವುದರಿಂದ, ನರ್ಸ್‌ಗಳು ಜೊತೆಗೆ ವೈದ್ಯೆ ಕೂಡ ಆಸ್ಪತ್ರೆಯ ಒಳಗೆ ಇಣುಕಿ ಹಾಕುವುದಿಲ್ಲ. ಆಸ್ಪತ್ರೆಯ ಒಳಗೆ ರೋಗಿಗಳು ಮಲಗುವ ಮಂಚದ ಮೇಲೆ, ಕೆಳಗೆ ನೀರು ಸಂಗ್ರಹವಾಗಿರುವುದರಿಂದ ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಪ್ರಮೇಯ ಕೂಡ ವೈದ್ಯರಿಗೆ ಬಂದಿಲ್ಲ. ಇಡಿ ಆಸ್ಪತ್ರೆಯ ವಾತಾವರಣ ಅಸಹನೀಯವಾಗಿದೆ.

ಆಸ್ಪತ್ರೆ ಆವರಣದಲ್ಲಿ ಬೆಳೆದು ನಿಂತಿರುವ ಕಸಕಡ್ಡಿಗಳನ್ನು, ಮುಳ್ಳು ಗಿಡಗಳನ್ನು ತೆಗೆದು ಆಸ್ಪತ್ರೆಯಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ ಆಸಕ್ತಿ ತೋರುತ್ತಿಲ್ಲ. ಅದಕ್ಕೆ ತಗಲುವ ಅಲ್ಪ ವೆಚ್ಚವನ್ನೂ ಸರ್ಕಾರದಿಂದ ಎದುರು ನೋಡುತ್ತಿದ್ದಾರೆ. ಆಸ್ಪತ್ರೆಯ ವೈಖರಿ ಕಂಡು ರೋಗಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ.
ಸಣ್ಣಪುಟ್ಟ ಕಾಯಿಲೆಗಳಿಗೆ ಸಹ ರಾಬರ್ಟ್‌ಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಾಗಿದೆ.

ಈ ಆಸ್ಪತ್ರೆ ವ್ಯಾಪ್ತಿಗೆ ಎನ್.ಟಿ.ಬ್ಲಾಕ್, ಹೆನ್ರೀಸ್, ಓರಿಯಂಟಲ್ ಲೈನ್, ಕೋರಮಂಡಲ್, ಕೆನಡೀಸ್, ಟ್ಯಾಂಕ್ ಬ್ಲಾಕ್, ಸ್ವಿಮ್ಮಿಂಗಬಾತ್ ಲೈನ್, ಪಾಲಗಾಟ್ ಲೈನ್, ಮಾಡೆಲ್ ಹೌಸ್ ಬಡಾವಣೆಗಳು ಬರುತ್ತದೆ.

ಇಷ್ಟೂ ಬಡಾವಣೆಗಳ ನಾಗರಿಕರಿಗೆ ಹಲವಾರು ದಶಕಗಳಿಂದ ಆರೋಗ್ಯ ಸೇವೆ ನೀಡುತ್ತ ಬಂದಿರುವ ಈ ಆಸ್ಪತ್ರೆಗೆ ಕಾಯಕಲ್ಪ ಕೊಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ ಎಂದು ಮೈನಿಂಗ್ ಪ್ರದೇಶದ ನಾಗರಿಕರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT