ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಕಾರರ ವೇತನಕ್ಕೆ ಆಗ್ರಹಿಸಿ ಮನವಿ

Last Updated 5 ಏಪ್ರಿಲ್ 2013, 7:08 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಅಜಲಾಪುರ ಹಾಗೂ ಶಹಾಪುರ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದ ಕೂಲಿಕಾರರಿಗೆ ವೇತನ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಅಜಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ದೇಪಲ್ಲಿ ಮತ್ತು ಅಜಲಾಪುರ ಗ್ರಾಮದಲ್ಲಿ ರೂ. 4 ಲಕ್ಷ, ಹಾಗೂ ಶಹಾಪುರ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಿದ ಕೂಲಿಕಾರರ ಒಟ್ಟು ಮೊತ್ತ ರೂ.15 ಲಕ್ಷ ಕೂಲಿ ಪಾವತಿ ಮಾಡಿಲ್ಲ. ಈ ಕೂಲಿಕಾರರ ವೇತನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಜಲಾಪೂರ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಕಾಮಗಾರಿಗಳನ್ನು ಜೆಸಿಬಿ ಯಂತ್ರದಿಂದ ನಿರ್ವಹಿಸುತ್ತಿರುವುದನ್ನು ಮನಗಂಡು ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತಪ್ಪಿತಸ್ಥರನ್ನು ಅಮಾನತು ಮಾಡಬೇಕು. ಈ ಕಾಮಗಾರಿಗಳ ಬಿಲ್ ಪಾವತಿ ಮಾಡಬಾರದು ಎಂದು ಆಗ್ರಹಿಸಿದರು.

ಶಹಾಪೂರ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯಿತಿ ಬಸವ ವಸತಿ ಯೋಜನೆಯಡಿ ಆರಂಭಿಸಲಾಗಿರುವ ಮನೆಗಳನ್ನು ರದ್ದುಪಡಿಸಿದ್ದು, ಅವುಗಳನ್ನು ಮತ್ತೆ ಆರಂಭಿಸಬೇಕು.

ಈಗಾಗಲೇ ಫಲಾನುಭವಿಗಳು ಬುನಾದಿ ಹಾಕಿ ಮನೆ ಕಟ್ಟಿಸಿಕೊಳ್ಳಲು ಮುಂದಾಗಿದ್ದು, ಬೇಸ್ ಮೆಂಟ್ ಹಂತ ತಲುಪಿದ ಮನೆಗಳನ್ನು ಏಕಾಏಕಿ ರದ್ದು ಮಾಡಲಾಗಿದೆ. ಇದರಿಂದ ಬಡ ಜನತೆಗೆ ಸಮಸ್ಯೆಯಾಗಿದೆ. ಇದನ್ನು ಕೂಡಲೇ ತಡೆ ಹಿಡಿದು ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಯಾದಗಿರಿ ತಾಲ್ಲೂಕಿನ ಅಜಲಾಪುರ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ, ಎನ್‌ಎಂಆರ್ ತೆಗೆದಿಲ್ಲ. ಅದನ್ನು ಮುಂದುವರಿದ ಕಾಮಗಾರಿಗಳ ಪಟ್ಟಿಯಲ್ಲಿ ಸೇರಿಸಿ ಹಣ ಲೂಟಿ ಮಾಡಲು ಹೊಂಚು ಹಾಕಲಾಗಿದೆ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ಕಡೇಚೂರು ಪಂಚಾಯಿತಿ ವ್ಯಾಪ್ತಿಯ ದುಪ್ಪಲ್ಲಿ ಗ್ರಾಮದಲ್ಲಿ ಬದು ನಿರ್ಮಾಣ ಪೂರ್ಣಗೊಂಡಿದ್ದರೂ, ದುಡಿದ ಕಾರ್ಮಿಕರಿಗೆ ಕೂಲಿ ವೇತನ ಇನ್ನುವರೆಗೂ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದು, ಇದನ್ನು ಕೂಡಲೇ ಬಿಡುಗಡೆ ಮಡಬೇಕು. ಎಲ್ಲ ಕಾಮಗಾರಿಗಳ ಖುದ್ದು ತನಿಖೆ ನಡೆಸಿ, ಅವ್ಯವಹಾರ ನಡೆಸಿರುವುದನ್ನು ಪತ್ತೆ ಹಚ್ಚಬೇಕು. ಸರ್ಕಾರಕ್ಕೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಅಶೋಕ ಕಲಾಲ್, ಹಣಮಂತ ಗೋನಾಲ, ಸಿದ್ದನಗೌಡ ಪೊಲೀಸ್‌ಪಾಟೀಲ, ಮಾಳಪ್ಪ ಪ್ರಜಾರಿ, ಪ್ರಕಾಶ ಸುಗೂರು, ಬಸಲಿಂಗಪ್ಪ, ಬಾಷಾ ಪಟೇಲ್ ಮುಂತಾದವರುಮುಂತಾದವರು ಮನವಿ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT