ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಅವಧಿ ಗಣಿಗಾರಿಕೆ: ಲೋಕಾಯುಕ್ತ ತನಿಖೆಗೆ?

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣಗಳಲ್ಲಿ ಸಾಕಷ್ಟು ಬಿಸಿ ಅನುಭವಿಸಿರುವ ಆಡಳಿತಾರೂಢ ಬಿಜೆಪಿ ಸರ್ಕಾರ, ಎಸ್.ಎಂ. ಕೃಷ್ಣ ಅವರ ಆಡಳಿತ ಅವಧಿಯಲ್ಲಿ (1999ರಿಂದ 2004ರವರೆಗೆ) ರಾಜ್ಯದಲ್ಲಿ ನಡೆದ ಗಣಿಗಾರಿಕೆ ಕುರಿತೂ ತನಿಖೆ ನಡೆಸುವಂತೆ ಲೋಕಾಯುಕ್ತ ಸಂಸ್ಥೆಯನ್ನು ಕೋರಲಿದೆ.

ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಸ್ಥಾನವನ್ನು ಶೀಘ್ರದಲ್ಲೇ ತುಂಬಲು ಉತ್ಸುಕವಾಗಿರುವ ಬಿಜೆಪಿ ಸರ್ಕಾರ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆದ ಗಣಿಗಾರಿಕೆಯ ಕುರಿತೂ ವಿಸ್ತೃತ ತನಿಖೆ ನಡೆಸಲು ಆಸಕ್ತಿ ತೋರಿದೆ.
 
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಂತಿಮ ವರದಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಎಂಬುದು ಬಿಜೆಪಿ ವಾದ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ಮೊದಲ ವರದಿಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ಅಂತಿಮ ವರದಿಯಲ್ಲಿ ಸಿಂಗ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಬಿಜೆಪಿ ಮುಖಂಡರು ದೂರುತ್ತಿದ್ದಾರೆ.
 
ಅಲ್ಲದೆ, ಕೃಷ್ಣ ಆಡಳಿತಾವಧಿಯಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಯಾವುದೇ ಕಾಂಗ್ರೆಸ್ ಮುಖಂಡರ ಹೆಸರು ಅಂತಿಮ ವರದಿಯಲ್ಲಿ ಇಲ್ಲ. ಹೀಗಾಗಿ ಲೋಕಾಯುಕ್ತರ ಅಂತಿಮ ವರದಿ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ನೀಡಿದಂತಿದೆ ಎಂಬುದು ಅವರ ಅಳಲು.

ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸೂಚನೆಯ ಮೇರೆಗೆ 2000ರಿಂದ 2008ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿತ್ತು.

ಇದಕ್ಕೂ ಮುನ್ನ ಲೋಕಾಯುಕ್ತ 2004ರ ನಂತರ ನಡೆದ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿತ್ತು. 2000ನೇ ಇಸವಿಯ ಆರಂಭದಲ್ಲಿ ಕೃಷ್ಣ ಸರ್ಕಾರ ತೆಗೆದುಕೊಂಡ ಕೆಲವು ನಿರ್ಣಯಗಳ ಬಗ್ಗೆ ಲೋಕಾಯುಕ್ತರ ವರದಿಯಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗಿದೆ.

ಆದರೆ ಲೋಕಾಯುಕ್ತ ಸಂಸ್ಥೆಯು 1999ರಿಂದ 2004 ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಣಯಗಳು ಅಥವಾ ಈ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತೆಗೆದುಕೊಂಡ ನಿರ್ಣಯಗಳ ಕುರಿತು ತನಿಖೆ ನಡೆಸಿಲ್ಲ.
 
2004ರಲ್ಲಿ ಗಣಿ ಸಚಿವರಾಗಿದ್ದ ವಿ. ಮುನಿಯಪ್ಪ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಪರವಾನಗಿಯನ್ನು 10 ವರ್ಷಗಳ ಅವಧಿಗೆ ನಿಯಮಬಾಹಿರವಾಗಿ ನವೀಕರಿಸಿದ್ದರು ಎಂದು ಲೋಕಾಯುಕ್ತರ ಮೊದಲನೆಯ ವರದಿಯಲ್ಲಿ ಹೇಳಲಾಗಿದೆ.

ಬೇಲೆಕೇರಿ ಮೀನುಗಾರಿಕಾ ಬಂದರನ್ನು ಸರ್ಕಾರ 2001ರಲ್ಲಿ ಅಧಿಕೃತ ಬಂದರು ಎಂದು ಪರಿವರ್ತಿಸಿತು. ಈ ಬಂದರಿನ ಮಾಲೀಕತ್ವವನ್ನು ಮೂರು ಕಂಪೆನಿಗಳಿಗೆ ನೀಡಿತು. ಬೇಲೆಕೇರಿ ಬಂದರಿನ ಸ್ಥಿತಿಯಲ್ಲಿ ತಂದ ಪರಿವರ್ತನೆ ಅದಿರನ್ನು ಅಕ್ರಮವಾಗಿ ಸಾಗಿಸಲು ನೆರವಾಯಿತು ಎಂದು ಮೂಲಗಳು ಹೇಳುತ್ತವೆ.

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಆರ್. ಬನ್ನೂರುಮಠ ಅವರು ನೂತನ ಲೋಕಾಯುಕ್ತರಾಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಗಣಿಗಾರಿಕೆ ಕುರಿತ ತನಿಖೆಯನ್ನು ಸರ್ಕಾರ ನೂತನ ಲೋಕಾಯುಕ್ತರು ಅಧಿಕಾರ ಸ್ವೀಕರಿಸಿದ ತಕ್ಷಣ ಅವರಿಗೆ ವಹಿಸುವ ಸಾಧ್ಯತೆ ಇದೆ. ಇದರ ಜೊತೆಗೆ, ಕೆಲವು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ ಎನ್ನಲಾದ ಗ್ರಾನೈಟ್ ಗಣಿಗಾರಿಕೆ ಕೂಡ ಲೋಕಾಯುಕ್ತ ತನಿಖೆಗೆ ಒಳಪಡುವ ಸಂಭವ ಇದೆ ಎಂದು ತಿಳಿದುಬಂದಿದೆ.

ವಿಧಾನಸಭಾ ಚುನಾವಣೆ 2013ರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಆಡಳಿತಾವಧಿಯ ಗಣಿಗಾರಿಕೆ ಕುರಿತ ತನಿಖಾ ವರದಿಯನ್ನು ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಸಲ್ಲಿಸುವಂತೆ ನೂತನ ಲೋಕಾಯುಕ್ತರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್ ಪ್ರಚಾರಾಂದೋಲನಕ್ಕೆ ತಡೆಹಾಕಲು ಆಗ ಲೋಕಾಯುಕ್ತ ವರದಿಯನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT