ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಗೆ ಜಾಮೀನು ತಿರಸ್ಕಾರ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್‌ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.

ಗುರುವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು  ಅರ್ಜಿ ವಜಾಗೊಳಿಸಿದರು. ಈ ಹಿನ್ನೆಲೆಯಲ್ಲಿ, ಆರೋಪಿಯನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

`ಕೆಪಿಎಸ್‌ಸಿಯ ಅಕ್ರಮ ನೇಮಕಾತಿ ಹಗರಣ ಗಂಭೀರ ಸ್ವರೂಪದ್ದಾಗಿದೆ, ನೂರಾರು ಮಂದಿಗೆ ಹಗರಣದಿಂದ ಅನ್ಯಾಯವಾಗಿದೆ. ಈ ಪ್ರಕರಣ ಇಡೀ ಸಮಾಜದ ಮೇಲೆಯೇ ಪರಿಣಾಮ ಬೀರುವಂತದ್ದಾಗಿದೆ. ಕೃಷ್ಣ ಅವರು ಕೆಪಿಎಸ್‌ಸಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಒಟ್ಟು ಹನ್ನೆರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದರು.

ಆದ್ದರಿಂದ ಅಲ್ಲಿನ ಅಧಿಕಾರಿಗಳ ಮೇಲೆ ಅವರು ಪ್ರಭಾವ ಬೀರಿ ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ತಿದ್ದುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು~ ಎಂದು ಸಿಐಡಿ ಪೊಲೀಸರ ಪರ ವಕೀಲರಾದ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಅರುಂಧತಿ ಕುಲಕರ್ಣಿ ವಾದ ಮಂಡಿಸಿದರು.

ಈ ರೀತಿಯ ಪ್ರಕರಣಗಳಲ್ಲಿ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಸೂಚನೆಗಳನ್ನು ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

`ಕೃಷ್ಣ ಅವರ ವಿರುದ್ಧ ಸಿಐಡಿ ಪೊಲೀಸರು ಯಾವುದೇ ಮಹತ್ವದ ಸಾಕ್ಷ್ಯಗಳನ್ನು ನೀಡಿಲ್ಲ. ಅವರ ಮೇಲಿನ ಆರೋಪಗಳು ಗಂಭೀರ ಸ್ವರೂಪದಲ್ಲ. ಜೀವಾವಧಿ ಶಿಕ್ಷೆ ಆಗುವಂತಹ ಯಾವುದೇ ಆರೋಪಗಳು ಇಲ್ಲ~. ಈ ಕಾರಣದಿಂದ ಜಾಮೀನು ನೀಡಬೇಕೆಂದು ಕೃಷ್ಣ ಪರ ವಕೀಲರು ವಾದಿಸಿದರು.

  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರುಂಧತಿ `ಪ್ರಕರಣವು ತನಿಖೆ ಹಂತದಲ್ಲಿರುವ ಕಾರಣ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಈಗಲೇ ಹೇಳುವುದು ಸರಿಯಲ್ಲ. ಆರೋಪಿಗೆ ಜಾಮೀನು ಕೊಡಬಾರದು ಎಂದು ಮನವಿ ಮಾಡುತ್ತಿದ್ದೇವೆ, ಶಿಕ್ಷೆ ನೀಡಿ ಎಂದು ವಾದಿಸುತ್ತಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT