ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಿರುವೆ ನಿಯಂತ್ರಣಕ್ಕೆ ಕಪ್ಪಿರುವೆ!

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಡಿಕೆ, ತೆಂಗು, ಮಾವು ಇನ್ನಿತರ ಗಿಡಗಳ ಬಳಿ ಹೋದರೆ ನಿಮ್ಮ ಮೈಯೆಲ್ಲ ಕೆಂಪಗಾಗುವುದು ಖಂಡಿತ. ಏಕೆಂದರೆ ಈ ಗಿಡಗಳಲ್ಲಿ ಕೆಂಪು ಇರುವ ಭಾದೆ ಸಾಮಾನ್ಯ.

`ಇಕೊಫಿಲ್ಲ ಸ್ಮರಾಗ್ಡಿನ' ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುವ ಈ ಇರುವೆಯು ಮಲೆನಾಡು ಭಾಗಗಳಲ್ಲಿ ಚಗುಳಿ ಅಂತಲೂ ಹಾಗೂ ಬಯಲು ಸೀಮೆಯಲ್ಲಿ ಕೆಂಜಿಗ ಅಂತಲೂ ಕರೆಸಿಕೊಳ್ಳುತ್ತದೆ. ಮರದ ಎಲೆಗಳಿಂದ ಹೆಣೆದ ಸೊಗಸಾದ ಗೂಡುಗಳನ್ನು ರಚಿಸಿಕೊಳ್ಳುವಲ್ಲಿ ಇವುಗಳದ್ದು ಎತ್ತಿದ ಕೈ. ಹಾಗೆಂದು ಗೂಡಿನ ಅಂದ ನೋಡಲು ಕೈ ಹಾಕಿದರೆ ಮುಗಿದೇ ಹೋಯ್ತು. ತನ್ನ ಶತ್ರುಗಳನ್ನು ಕಚ್ಚಿ ಗಾಯ ಗೊಳಿಸಿದ ನಂತರ ಆ ಜಾಗಕ್ಕೆ `ಫಾರ್ಮಿಕ್ ಆಸಿಡ್' ಅನ್ನು ಸಿಂಪಡಿಸುತ್ತದೆ. ಅದರ ನೋವು ಅನುಭವಿಸಿದವರಿಗೇ ಗೊತ್ತು!

ಇದು ಅಡಿಕೆ ಬೆಳೆಗಾರರಿಗೆ ತುಂಬಾ ತಲೆನೋವಾಗಿ ಪರಿಣಮಿಸಿದೆ. ರಾಸಾಯನಿಕ ಕ್ರಮಗಳಿಂದ  ಈ ಇರುವೆಗಳನ್ನು ನಿಯಂತ್ರಿಸುವುದೂ ಕಷ್ಟ. ಏಕೆಂದರೆ ಎತ್ತರದಲ್ಲಿರುವ ಮರಗಳಿಗೆ ರಾಸಾಯನಿಕ ಸಿಂಪಡಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ.
ಹಾಗಿದ್ದರೆ ಸಮಸ್ಯೆ ಪರಿಹಾರಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಿರುವ ಬೆಳೆಗಾರರಿಗೆ ಇಲ್ಲಿದೆ ಪರಿಹಾರ. ಅದೇ ಇರುವೆ!
ಹೌದು. ಕೆಂಪು ಇರುವೆಯನ್ನು ಹಿಮ್ಮೆಟ್ಟಲು ನಿಮ್ಮ ನೆರವಿಗೆ ಬರುವುದೇ ಮಳ್ಳು ಇರುವೆ. ಮಲೆನಾಡಿನ ಕಾಡುಗಳಲ್ಲಿ ಹಾಗೂ ಅಡಿಕೆ ತೋಟದ ತಂಪಾದ ಪ್ರದೇಶಗಳಲ್ಲಿ ಇವುಗಳ ವಾಸ. ವೈಜ್ಞಾನಿಕವಾಗಿ `ಅನಾಪೊಲ್ಲೆಪಿಸ್ ಗ್ರಾಸಿಲಿಪಸ್' ಎಂದು ಇದನ್ನು ಕರೆಯಲಾಗುವುದು.

ಈ ಇರುವೆ ಕಂದು ಬಣ್ಣ ಹೊಂದಿದ್ದು, ಕೆಂಪು ಇರುವೆಗಿಂತ ಚಿಕ್ಕದಾಗಿದೆ. `ಮಳ್ಳು' ಎಂದರೆ ಪೆದ್ದು ಎಂದೂ ಅರ್ಥ. ಕೆಂಪು ಇರುವೆಯ ಬದ್ಧ ವೈರಿ ಇದು. ಅದೇ ರೀತಿ ಈ ಇರುವೆ ಮನುಷ್ಯನಿಗೆ ನೋವನ್ನೂ ಉಂಟು ಮಾಡುವುದಿಲ್ಲ.ಕೆಂಪು ಇರುವೆಗಳಿಂದ ಬಾಧಿತವಾದ ಪ್ರದೇಶದಲ್ಲಿ ಈ ಇರುವೆಗಳನ್ನು ತಂದು ಬೆಳೆಸಿದರೆ ಸಾಕು. ಆ ಇಡೀ ಪ್ರದೇಶ ಕೆಂಪು ಇರುವೆಗಳಿಂದ ಮುಕ್ತವಾಗುತ್ತದೆ. ಯಾವುದೇ ರಾಸಾಯನಿಕ ಬಳಸದೆ  ಖರ್ಚು ಇಲ್ಲದೆಯೇ ಕೆಂಪು ಇರುವೆಗಳ ನಿಯಂತ್ರಣ ಸಾಧ್ಯ!

ಹಿಡಿಯುವುದು ಸುಲಭ
ಈ ಮಳ್ಳು ಇರುವೆಗಳನ್ನು ಒಂದು ಹೊಸ ಪ್ರದೇಶಕ್ಕೆ ಪರಿಚಯಿಸುವುದು ಕೂಡ ತುಂಬ ಸುಲಭ. ಈ ಇರುವೆಗಳು ಸಿಹಿ ಪದಾರ್ಥಗಳಿಂದ ಆಕರ್ಷಣೆಗೊಳಗಾಗುತ್ತವೆ. ಆದ್ದರಿಂದ ಒಂದು ಚಿಕ್ಕ ಬಾಯಿ ಇರುವ ಪಾತ್ರೆ ಅಥವಾ ಮಣ್ಣಿನ ಕೊಡಗಳಿಗೆ (ಬೆಲ್ಲದ ಕೊಡ) ಸ್ವಲ್ಪ ಸಕ್ಕರೆ ಅಥವ ಬೆಲ್ಲದ ನೀರು ಹಾಕಿ ಮಳ್ಳು ಇರುವೆಗಳು ಹೆಚ್ಚಾಗಿ ಕಂಡುಬರುವ ಪ್ರದೇಶದಲ್ಲಿ ಒಂದು ರಾತ್ರಿ ಇಟ್ಟರೆ ಸಾಕು. ಬೆಳಗಾಗುವುದರಲ್ಲಿಯೇ ಆ ಪಾತ್ರೆಯ ತುಂಬಾ ಮಳ್ಳು ಇರುವೆಗಳು ಬಂದು ಸೇರಿಕೊಂಡಿರುತ್ತವೆ. ಇದರಿಂದ ನಮಗೆ ಬೇಕಾದ ಸ್ಥಳಕ್ಕೆ ಮಳ್ಳು ಇರುವೆಗಳನ್ನು ಸುಲಭವಾಗಿ ಸ್ಥಳಾಂತರಿಸಬಹುದು.

ಈ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಕೆಂಪು ಇರುವೆಗಳಿಂದ ಭಾದಿತವಾದ ಪ್ರದೇಶದಲ್ಲಿ ತಂದು ಇಟ್ಟರೆ ಸಾಕು. ಈ ಇರುವೆಗಳು ನಿಧಾನವಾಗಿ ಆ ಪ್ರದೇಶಕ್ಕೆ ಹೊಂದಿಕೊಳ್ಳುತ್ತ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಕೆಂಪು ಇರುವೆಗಳ ಸಂಪೂರ್ಣ ನಿರ್ಮೂಲನೆ ಮಾಡುತ್ತವೆ. ಈ ಮೂಲಕ ಪರಿಸರಕ್ಕೂ ಹಾನಿ ಇಲ್ಲದೆಯೇ ಹೆಚ್ಚಿನ ಖರ್ಚು ಇಲ್ಲದೆಯೇ ಕೆಂಪು ಇರುವೆಗಳನ್ನು ನಿಯಂತ್ರಿಸಬಹುದು. ಈ ಪ್ರಯೋಗ ಮಲೆನಾಡಿನ ಹಲವು ಅಡಿಕೆ ತೋಟಗಳಲ್ಲಿ ಯಶಸ್ವಿಯಾಗಿದೆ ಕೂಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT