ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ಜೀವತುಂಬಿದ `ಅಂತರಗಂಗೆ'!

Last Updated 14 ಏಪ್ರಿಲ್ 2013, 20:00 IST
ಅಕ್ಷರ ಗಾತ್ರ

ಬೆಂಗಳೂರು:  ನಂದಿಬೆಟ್ಟದ ನೈರುತ್ಯ ಭಾಗದಲ್ಲಿ ಜನಿಸುವ `ಅರ್ಕಾವತಿ' ದೇಶದ ಇತರ ನದಿಗಳಂತಲ್ಲದೆ ಬಲು ವಿಶಿಷ್ಟ ಕಾರಣಗಳಿಗಾಗಿ ತನ್ನತನ ಕಾಯ್ದುಕೊಂಡವಳು. ನಂದಿಬೆಟ್ಟವಲ್ಲದೆ ಚೆನ್ನಗಿರಿ ಬೆಟ್ಟ, ಹುಲುಕುಡಿ ಬೆಟ್ಟ, ಮಧುರೆ ಮತ್ತು ಸೊಣ್ಣೇನಹಳ್ಳಿ ದಿಬ್ಬಗಳು ಸಹ ಈ ನದಿಯ ಮೂಲಗಳಾಗಿವೆ. ಹೆಸರುಘಟ್ಟದವರೆಗೆ ಗುಪ್ತಗಾಮಿನಿಯಾಗಿ ಹರಿಯುವ ಈ ನದಿಗೆ `ಕಳ್ಳಹೊಳೆ' ಎನ್ನುವ ಅಡ್ಡಹೆಸರೂ ಉಂಟು.

ಉಗಮ ಸ್ಥಾನದಿಂದ ಹೆಸರುಘಟ್ಟದವರೆಗೆ ಬಾಯ್ದೆರೆದು ನಿಂತ ಸಾವಿರಾರು ಸಾಲು, ಸಾಲು ಕೆರೆಗಳ ಒಡಲು ತುಂಬಿಸುತ್ತಾ, ಅವುಗಳಲ್ಲೇ ತನ್ನ ಅಸ್ತಿತ್ವ ಕಂಡುಕೊಂಡವಳು ಅರ್ಕಾವತಿ. ಹೆಸರುಘಟ್ಟದಿಂದ ಹೊಳೆಯಾಗಿ ಹರಿದು, ತನ್ನ ಸೋದರಿಯರಾದ ಕುಮುದ್ವತಿ ಮತ್ತು ವೃಷಭಾವತಿ ಅವರನ್ನು ಜತೆಯಲ್ಲಿ ಕರೆದುಕೊಂಡು ಕನಕಪುರ ತಾಲ್ಲೂಕಿನ ಸಂಗಮದವರೆಗೆ ಆಯಾಸವಿಲ್ಲದೆ ಓಡುವ ಆಕೆ, ಕೊನೆಗೆ ಕಾವೇರಿಯಲ್ಲಿ ಲೀನವಾಗುತ್ತಾಳೆ.

ದೊಡ್ಡಬಳ್ಳಾಪುರದಲ್ಲಿ ದೊಡ್ಡ ಮಳೆಯಾದರೆ ನೆಲಮಂಗಲ ತೋಟಗಳಲ್ಲಿ ಬೆಳೆದ ಹಣ್ಣುಗಳು ಪ್ರವಾಹಕ್ಕೆ ಕೊಚ್ಚಿಹೋಗಿ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ತೇಲುತ್ತಿದ್ದ ಕಾಲವೊಂದಿತ್ತು. ಏನೂ ಅರಿಯದ ಮುಗ್ಧೆಯಂತೆ ಸುಮ್ಮನಿದ್ದು ಇದ್ದಕ್ಕಿದ್ದಂತೆ ರಭಸದ ಹರಿವು ಕಾಣುತ್ತಿದ್ದ ಅರ್ಕಾವತಿಯನ್ನು ಇದೇ ಕಾರಣದಿಂದ ಸ್ಥಳೀಯರು `ಕಳ್ಳಹೊಳೆ' ಎಂದು ಛೇಡಿಸುತ್ತಿದ್ದರು.

ನಂದಿಬೆಟ್ಟದಿಂದ ಸಂಗಮದವರೆಗೆ ಅರ್ಕಾವತಿ 190 ಕಿ.ಮೀ. ಉದ್ದ ಚಲಿಸುತ್ತಾಳೆ. ಆಗಿನ ದಿನಗಳಲ್ಲಿ ಈ ನದಿಯ ಮೂಲ ಪ್ರದೇಶದ ದೊಡ್ಡರಾಯಪ್ಪನಹಳ್ಳಿ, ಚಿಕ್ಕರಾಯಪ್ಪನಹಳ್ಳಿ, ಚೆನ್ನಾಪುರ, ಸೀಗೆಹಳ್ಳಿ, ಹೆಗ್ಗಡಿಹಳ್ಳಿ ಗ್ರಾಮಗಳು ಮಲೆನಾಡಿನ ಪ್ರತಿಬಿಂಬದಂತೆ ಗೋಚರಿಸುತ್ತಿದ್ದವು. ಕಾಡು ತೊರೆಗಳು, ಪುಟ್ಟ ಜಲಪಾತಗಳು, ಹಸಿರು ಮುಕ್ಕಳಿಸುವ ಮರಗಳು ತುಂಬಿ ತುಳುಕುತ್ತಿದ್ದವು. ಶಿವಮೊಗ್ಗದ ಚಳಿಯನ್ನು ಹೆಗ್ಗಡಿಹಳ್ಳಿಯಲ್ಲೇ ಆಸ್ವಾದಿಸಬಹುದಿತ್ತು. ನವಿಲುಗಳು ಸಹ ಇಲ್ಲಿ ಹೇರಳವಾಗಿದ್ದವು. ಕಾಡುಪ್ರಾಣಿಗಳಿಗೂ ಅರ್ಕಾವತಿ `ತಾವು' ಒದಗಿಸಿದ್ದಳು.

`ಮಾಕಳಿ ತೊರೆಛತ್ರದ ಬಳಿ ಅರ್ಕಾವತಿ ನದಿಯಲ್ಲಿ ಪ್ರತಿದಿನ ಈಜಾಡಿ, ಈಚಲ ಮರದ ನೀರಾ ಕುಡಿದ ನಾನೇ ಧನ್ಯ' ಎಂದು ಈ ನದಿಯ ಇತಿಹಾಸದ ಬಗೆಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಸದ್ಗುರು ಯೋಗಿ ನಾರಾಯಣ ಟ್ರಸ್ಟ್ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಹೇಳುತ್ತಾರೆ. ಮೂಲತಃ ದೊಡ್ಡಬಳ್ಳಾಪುರದ ಅವರು ನದಿ ಅಂಗಳದಲ್ಲಿಯೇ ಬಾಲ್ಯವನ್ನು ಕಳೆದಿದ್ದಾರೆ.

`ಗಲಿಬಿಲಿಕೋಟೆ, ಬೊಮ್ಮನಹಳ್ಳಿ, ವಾಣಿಗರಹಳ್ಳಿ, ತಿಪ್ಪೂರು, ಚೀಲೇನಹಳ್ಳಿ, ಕಮಲೂರು, ತುತ್ತಹಳ್ಳಿ, ಹಣಬೆ, ಕೆಸ್ತೂರು, ಅರಳುಮಲ್ಲಿಗೆ, ಮಧುರೆ, ಹೆಜ್ಜಾಜಿ, ಗುಳ್ಯಾ, ಇಸ್ತೂರು, ಹೆಸರುಘಟ್ಟ... ನಮ್ಮ ಅರ್ಕಾವತಿ ತಾಯಿ ಕೆರೆಗಳಿಂದ ಹರಿಸಿದ ಎಷ್ಟು ಊರುಗಳ ಹೆಸರು ಬೇಕು ನಿಮಗೆ' ಎಂದು ಅವರು ಪ್ರಶ್ನೆ ಹಾಕುತ್ತಾರೆ. `ನದಿ ದಂಡೆಯ ಸುತ್ತ ಬೆಳೆಯುತ್ತಿದ್ದ ವೀಳ್ಯದೆಲೆ ರುಚಿಯನ್ನು ಬಲ್ಲವನೇ ಬಲ್ಲ' ಎಂದು ಹೇಳುವಾಗ ನಾರಾಯಣಸ್ವಾಮಿ ಅವರ ಬಾಯಲ್ಲಿ ಲಾಲಾರಸ ಉಕ್ಕಿ ಹರಿಯುತ್ತದೆ.

`ಆಗಿನ ದಿನಗಳಲ್ಲಿ ಮನೆಗೊಬ್ಬ ಸದಸ್ಯರು ಕಾಲುವೆ, ಕೆರೆ, ಕುಂಟೆ, ಬಾವಡಿ ಮತ್ತು ಕಲ್ಯಾಣಿಗಳ ದುರಸ್ತಿಗೆ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಹೀಗಾಗಿ ಅವುಗಳೆಲ್ಲ ನೀರಿನಿಂದ ಸದಾ ತುಂಬಿರುತ್ತಿದ್ದವು. ನೀರಿನ ಸದ್ಬಳಕೆಗೆ ಸರಪಂಚರು ನೇಮಿಸಿದ ತಂಡ ಇರುತ್ತಿತ್ತು' ಎಂದು ಅವರು ವಿವರಿಸುತ್ತಾರೆ.

`ಕೆರೆಯ ನೀರನ್ನು ವ್ಯರ್ಥಗೊಳಿಸದೆ ಸಮಯವರಿತು, ಸಮಾನವಾಗಿ ಹಂಚಿಕೊಳ್ಳುತ್ತಿದ್ದ ಕ್ರಮಬದ್ಧ ನೀರಾವರಿ ಪದ್ಧತಿ ಆಗಿನ ದಿನಗಳಲ್ಲಿ ಜಾರಿಯಲ್ಲಿತ್ತು. ಹೀಗಾಗಿ ಅಂದಿನ ಪರಿಸರ ಹಸಿರಿನಿಂದ ನಳನಳಿಸುತ್ತಿತ್ತು. ಆ ನೋಟವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದದ ಕೆಲಸವಾಗಿತ್ತು' ಎಂದು ಅವರು ಹೇಳುವಾಗ ದಶಕಗಳ ಹಿಂದಿನ ಇತಿಹಾಸ ಕಣ್ಮುಂದೆ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ.

`ನಂದಿಬೆಟ್ಟದ ಭಾಗದಲ್ಲಿ ಮೇಯುತ್ತಿದ್ದ ಕುರಿ-ಮೇಕೆಗಳ ಹಿಕ್ಕೆಗಳು ನೆಲಮಂಗಲ ತಾಲ್ಲೂಕಿನ ತೆರೆದ ಬಾವಿಗಳ ತೊರೆಗಳಲ್ಲಿ ತೇಲುತ್ತಿದ್ದವು. ಅಂತರ್ಗಾಮಿನಿಯಾಗಿ ಹರಿಯುತ್ತಿದ್ದ ಅರ್ಕಾವತಿಗೆ ಇದೇ ಸಾಕ್ಷಿಯಾಗಿತ್ತು. ಬಾವಿಗಳನ್ನು ಶುಚಿಗೊಳಿಸಲು ಎರಡೆರಡು ಯಂತ್ರ ಬಳಸಿ ನೀರು ತೆಗೆದರೂ ಅವು ಖಾಲಿ ಆಗುತ್ತಿರಲಿಲ್ಲ. ಅಂತಹ ಒಳಹರಿವು ಇರುತ್ತಿತ್ತು' ಎಂದು ಅವರು ನೆನೆಯುತ್ತಾರೆ.

ದಕ್ಷಿಣದ ಪ್ರಸ್ಥ ಭೂಮಿಯಲ್ಲೇ ಎತ್ತರವಾಗಿರುವ (ಸಮುದ್ರ ಮಟ್ಟದಿಂದ 4,851 ಮೀಟರ್ ಎತ್ತರ) ಪಂಚಗಿರಿ ಶ್ರೇಣಿಗಳಲ್ಲಿ ಜನಿಸುವ ಈ ನದಿ ಉತ್ತರ-ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಆಂಧ್ರ ಪ್ರದೇಶದ ಪಾಲಾರ್ ಮತ್ತು ಪೆನ್ನಾರ್ ನದಿಗಳಿಗೂ ಈ ಗಿರಿಶ್ರೇಣಿಯೇ ಮೂಲವಾಗಿದೆ.

ಅರ್ಕಾವತಿ ನದಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈ ನಾಲ್ಕೂ ಜಿಲ್ಲೆಗಳ ನಾಗರಿಕತೆ ಮತ್ತು ಸಂಸ್ಕೃತಿಗಳ ಉತ್ಥಾನಕ್ಕೆ ಆಕೆ ನೀರೆರೆದು ಕರುಣಿಸಿದ್ದಾಳೆ.

`ನದಿ ದಂಡೆ ಮೇಲಿರುವ ಒಂದೊಂದು ಹಳ್ಳಿಯಲ್ಲೂ ಒಂದೊಂದು ವಿಶಿಷ್ಟ ಸಂಸ್ಕೃತಿ ಮೇಳೈಸಿದೆ. ಜನ-ಜಾನುವಾರುಗಳಿಗೆ ಕುಡಿಯಲು ಮತ್ತು ಭೂಮಿಗೆ ಒಳ್ಳೆಯ ಫಸಲು ತೆಗೆಯಲು ಜೀವಾಮೃತ ಕೊಟ್ಟು ಹರಿಸಿದವಳು ಅರ್ಕಾವತಿ. ತನ್ನ ದಂಡೆ ಮೇಲೆ ರಸಭರಿತ ಹಣ್ಣುಗಳನ್ನು ನೀಡುವ ಮರಗಳಿಗೆ ಆಶ್ರಯ ನೀಡುವ ಮೂಲಕ ಸಮುದಾಯದ ಮೇಲೆ ಪ್ರೀತಿಯ ಮಳೆ ಸುರಿಸಿದವಳು ಆಕೆ. ಆದರೆ, ಅವಳನ್ನು ನಾವು ನಡೆಸಿಕೊಂಡಿದ್ದು ಹೇಗೆ' ಎನ್ನುವ ಪ್ರಶ್ನೆ ಹಾಕುತ್ತ ವಿಷಾದದ ನಿಟ್ಟುಸಿರೊಂದನ್ನು ಬಿಡುತ್ತಾರೆ, ನದಿ ಪುನಶ್ಚೇತನ ಹೋರಾಟ ಸಮಿತಿ ಸದಸ್ಯ ದೊಡ್ಡಿ ಶಿವರಾಂ.
(ನಾಳಿನ ಸಂಚಿಕೆ: ವಿಷವಾದ ನೀರು; ನದಿ ಮೇಲೆ ಸಮಾಧಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT