ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತಕ್ಕೆ ಆಕ್ರೋಶ
Last Updated 3 ಸೆಪ್ಟೆಂಬರ್ 2013, 9:22 IST
ಅಕ್ಷರ ಗಾತ್ರ

ಹಾವೇರಿ: ಇಂಧನ ಹಾಗೂ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮವಣ್ಣ ಬೇವಿನಮರದ ಮಾತನಾಡಿ, `ಕೇಂದ್ರದ ಯುಪಿಎ ಸರ್ಕಾರ ನಿರಂತರ ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ' ಎಂದು ಆರೋಪಿಸಿದರು.

`ಡಾಲರ್ ಹಣದ ಮುಂದೆ ರೂಪಾಯಿ ಮೌಲ್ಯ ನಿರಂತರ ಕುಸಿಯುವುದಕ್ಕೆ ಕೇಂದ್ರ ಸರ್ಕಾರದ ಅಸರ್ಮಪಕ ಆರ್ಥಿಕ ನೀತಿಯೇ ಕಾರಣ. ರೂಪಾಯಿ ಮೌಲ್ಯ ಕುಸಿತ ತಡೆಯಲು ಹಾಗೂ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುವಲ್ಲಿ ಪ್ರಧಾನಮಂತ್ರಿ ಡಾ. ಮನಮೋಹನ್‌ಸಿಂಗ್ ಹಾಗೂ ಹಣಕಾಸು ಮಂತ್ರಿ ಪಿ.ಚಿದಂಬರಂ ಸಂಪೂರ್ಣ ವಿಫಲರಾಗಿದ್ದಾರೆ' ಎಂದು ಆಪಾದಿಸಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, `ಕಳೆದ ಎರಡು ತಿಂಗಳಲ್ಲಿ ಯುಪಿಎ ಸರ್ಕಾರ ಪೆಟ್ರೋಲ್ ದರವನ್ನು ಆರು ಸಲ, ಡಿಸೇಲ್ ಬೆಲೆ ಎಂಟು ಭಾರಿ ಹಾಗೂ ಗ್ಯಾಸ್ ಬೆಲೆ ಎಂಟು ಸಾರಿ ಏರಿಕೆ ಮಾಡಿದ್ದರ ಪರಿಣಾಮ ಪ್ರಯಾಣ ದರ ಸೇರಿದಂತೆ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕೇಂದ್ರದ ತಪ್ಪು ಆರ್ಥಿಕ ನೀತಿಯ ಪರಿಣಾಮದಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ' ಎಂದು ಹೇಳಿದರು.

`ಕೇಂದ್ರದ ಬಹುತೇಕ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿ ದೇಶದ ಆರ್ಥಿಕ ಸ್ಥಿತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಜನ ವಿರೋಧಿ ನೀತಿ ಅನುಸರಿಸುವ ಕೇಂದ್ರ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ಸರ್ಕಾರ ತೈಲ ಬೆಲೆ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದರು.

ನಂತರ ತಹಶೀಲ್ದಾರ್ ಶಿವಲಿಂಗು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮುಂಡರಾದ ಫಾಲಾಕ್ಷಗೌಡ ಪಾಟೀಲ, ಮಲ್ಲೇಶಪ್ಪ ಹರಿಜನ, ವಿರೂಪಾಕ್ಷಪ್ಪ ಬಳ್ಳಾರಿ, ನಾಗೇಂದ್ರ ಕಟಕೋಳ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜಂಬಗಿ, ಪ್ರಭು ಹಿಟ್ನಳ್ಳಿ, ಬಸವರಾಜ ಮಾಸೂರು, ಎಂ.ಎಸ್.ಅಕ್ಕಿ, ನಗರಸಭೆ ಸದಸ್ಯರಾದ ಹನುಮಂತ ನಾಯ್ಕ ಬದಾಮಿ, ಲಲಿತಾ ಗುಂಡೆನಹಳ್ಳಿ, ಕರಬಸಪ್ಪ ಹಳದೂರ,  ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT