ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿದ್ದು ಬೆಟ್ಟದಷ್ಟು, ಸಿಗುವುದು ಸಾಸಿವೆಯಷ್ಟು!

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದೊಂದು ವರ್ಷದಿಂದ ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಗೆ 300 ಕೋಟಿ ಬಿಡುಗಡೆ ಮಾಡುವಂತೆ `ಅಂತರ ಸಚಿವಾಲಯ ಸಮಿತಿ~ ಬುಧವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಅಂತರ ಸಚಿವಾಲಯ ಸಮಿತಿ ಸಭೆ, ಬರಗಾಲ ಪರಿಹಾರ ಕಾರ್ಯಗಳಿಗೆ 287 ಕೋಟಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 13ಕೋಟಿ ಸೇರಿದಂತೆ 300ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿತು.

ಮೇ ಎರಡರಂದು ದೆಹಲಿಗೆ ಧಾವಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನೇತೃತ್ವದ ಸರ್ವಪಕ್ಷ ನಿಯೋಗವು ಸುಮಾರು ಆರು ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿತ್ತು.

ಅಂತರ ಸಚಿವಾಲಯ ಸಮಿತಿ ಶಿಫಾರಸು ಗೃಹ ಸಚಿವಾಲಯಕ್ಕೆ ಹೋಗಿದೆ. ಹಣಕಾಸು, ಗೃಹ, ಕೃಷಿ ಮತ್ತಿತರ ಹಿರಿಯ ಸಚಿವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಸದ್ಯದಲ್ಲೇ ಸಭೆ ಸೇರಿ ಅಂತಿಮವಾಗಿ ಎಷ್ಟು ಹಣ ಬಿಡುಗಡೆ ಮಾಡಬೇಕೆಂಬ ತೀರ್ಮಾನ ಕೈಗೊಳ್ಳಲಿದೆ.

ಉನ್ನತಾಧಿಕಾರ ಸಮಿತಿಯು ಈ ಶಿಫಾರಸು ಒಪ್ಪಿಕೊಂಡು 300 ಕೋಟಿ ಬಿಡುಗಡೆ ಮಾಡಬಹುದು ಅಥವಾ ಪರಿಹಾರದ ಮೊತ್ತವನ್ನು ಇನ್ನೂ ಕಡಿಮೆ ಮಾಡಬಹುದು ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ. ಮಹಾರಾಷ್ಟ್ರ ಬರಗಾಲ ನಿರ್ವಹಣೆಗೆ 3500 ಕೋಟಿ ಕೇಳಿತ್ತು. ಕೇಂದ್ರ ಸರ್ಕಾರ 525 ಕೋಟಿ ಬಿಡುಗಡೆ ಮಾಡಿದೆ.

ಕರ್ನಾಟಕಕ್ಕೆ ಕಡಿಮೆ ಹಣ ಬಿಡುಗಡೆ ಮಾಡಲು ಕಾರಣವಿದೆ. `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗ) ಯೋಜನೆ~ಗೆ ಬಿಡಗಡೆ ಮಾಡಿರುವ 400 ಕೋಟಿ ಹಣ ಖರ್ಚಾಗದೆ ಉಳಿದಿದೆ. ಅಲ್ಲದೆ, ಕೇಂದ್ರದ ನೆರವಿಗೆ ರಾಜ್ಯ ಮನವಿ ಮಾಡಿದ್ದೇ ಬಹಳ ತಡವಾಗಿ. ಬಿಜೆಪಿ ಸರ್ಕಾರ ಆಂತರಿಕ ಕಿತ್ತಾಟದಲ್ಲಿ ಜನರನ್ನು ಮರೆತಿದೆ.
 
ರಾಜ್ಯದ ಅಧಿಕೃತ ಪ್ರಸ್ತಾವನೆ ಬಂದ ತಕ್ಷಣ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಪರಿಣಿತ ತಂಡ ಕಳುಹಿಸಲಾಗಿದೆ. ತಂಡದ ಪ್ರವಾಸದ ವೇಳೆಗೆ ಬಹುತೇಕ ಕಡೆಗಳಲ್ಲಿ ಮಳೆ ಆಗಿದೆ. ಕೆಲ ಭಾಗಗಳಲ್ಲಿ ಮಾತ್ರ ಬರಗಾಲವಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ತಂಡ ಹೋಗಿದ್ದರೆ ಹೆಚ್ಚು ನೆರವು ಸಿಗುತಿತ್ತು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಜ್ಯ ಕಳೆದ ನವೆಂಬರ್‌ನಲ್ಲಿ ಮೊದಲ ಬಾರಿಗೆ ಬರಗಾಲ ಪರಿಸ್ಥಿತಿ ಕುರಿತು ಕೇಂದ್ರದ ಗಮನ ಸೆಳೆದಿತ್ತು. ಡಿಸೆಂಬರ್ 12ರಿಂದ 15ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡಿದ್ದ ಮೊದಲ ಕೇಂದ್ರ ತಂಡಕ್ಕೆ 2609 ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಮನವಿ ಸಲ್ಲಿಸಿದ ಬಿಜೆಪಿ ಸರ್ಕಾರ, 700 ಕೋಟಿ ನೆರವು ಕೇಳಿತ್ತು.

ಆದರೆ, ಪರಿಣತ ತಂಡ 296 ಕೋಟಿ ಬಿಡುಗಡೆಗೆ ಶಿಫಾರಸು ಮಾಡಿತ್ತು. ಅಂತಿಮವಾಗಿ ಕೇಂದ್ರ ಸರ್ಕಾರ 186 ಕೋಟಿ ಬಿಡುಗಡೆಗೆ ನಿರ್ಧರಿಸಿ, ತಕ್ಷಣ 70 ಕೋಟಿ ಬಿಡುಗಡೆ ಮಾಡಿತು. ಉಳಿದ 116 ಕೋಟಿ ಹಣವನ್ನು `ರಾಜ್ಯ ಸಂಕಷ್ಟ ಪರಿಹಾರ ನಿಧಿ~ (ಎಸ್‌ಡಿಆರ್‌ಎಫ್) ಬಾಕಿಗೆ ಹೊಂದಾಣಿಕೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT