ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಭೂಮಿಗೆ ರಿಯಲ್ ಎಸ್ಟೇಟ್ ವೈರಿ!

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ಕ್ರಿಯೆಯಲ್ಲಿ ರಿಯಲ್ ಎಸ್ಟೇಟ್ ದಂಧೆಯೇ ವೈರಿಯಾಗಿ ಪರಿಣಮಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಕೈಗಾರಿಕೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ರಿಯಲ್ ಎಸ್ಟೇಟ್‌ನವರು ತೊಂದರೆಯನ್ನು ಕೊಟ್ಟರೆ ಇನ್ನು ಕೆಲವು ಪ್ರಸಂಗಗಳಲ್ಲಿ ಕೈಗಾರಿಕೆಯ ಹೆಸರಿನಲ್ಲಿ ಭೂಮಿಯನ್ನು ಪಡೆದ ಕಂಪೆನಿಗಳೇ ರಿಯಲ್ ಎಸ್ಟೇಟ್ ದಂಧೆ ಮಾಡುತ್ತವೆ.

ರಿಯಲ್ ಎಸ್ಟೇಟ್ ಎನ್ನುವುದೂ ಈಗ ಉದ್ಯಮವಾಗಿ ಬೆಳೆದಿರುವುದರಿಂದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಮುಂತಾದ ಪ್ರಮುಖ ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಬೆಲೆ ವಿಪರೀತ ಏರಿಕೆಯಾಗಿದೆ. ಇದರಿಂದ ರೈತರು ಕೈಗಾರಿಕೆಗಳಿಗೆ ಭೂಮಿಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ.

ಒಂದು ಕೈಗಾರಿಕೆಗೆ 300 ಎಕರೆ ಭೂಮಿ ಬೇಕು ಎಂದಾಗಿದ್ದರೆ ಅಷ್ಟು ಪ್ರಮಾಣದ ಭೂಮಿ ಈಗ ಯಾವುದೇ ನಗರ ಪ್ರದೇಶದಲ್ಲಿ ಸಿಗುವುದು ಕಷ್ಟ. ಅಲ್ಲದೆ 300 ಎಕರೆಯ ಮಧ್ಯೆಯೇ ರಿಯಲ್ ಎಸ್ಟೇಟ್‌ನವರು 50 ಎಕರೆಯನ್ನು ಪಡೆದುಕೊಂಡು ಭೂ ಪರಿವರ್ತನೆ ಮಾಡಿಕೊಂಡಿರುತ್ತಾರೆ. ಆಗ ಕೈಗಾರಿಕೆಗಳಿಗೆ ಭೂಮಿ ಪಡೆಯುವುದು ಕಷ್ಟವಾಗುತ್ತದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತಗಳ ನಡುವೆ ಹೊಂದಾಣಿಕೆ ಇಲ್ಲದಿರುವುದೂ ಭೂಮಿ ಪಡೆಯಲು ಕಷ್ಟವಾಗಿದೆ.

ಕೆಐಎಡಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕುಳಿತು ನಕ್ಷೆ ನೋಡಿಯೇ ಕೈಗಾರಿಕೆಗಳಿಗೆ ಭೂಮಿಯನ್ನು ಗುರುತಿಸುತ್ತಾರೆ. ಅವರು ಭೂಮಿಯನ್ನು ಗುರುತಿಸಿರುವುದು ಗೊತ್ತಿಲ್ಲದೆ ಬೇರೆ ಉದ್ದೇಶಕ್ಕೆ ಅದೇ ಭೂಮಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುತ್ತದೆ. ಇದು ಯಾವುದೂ ಗೊತ್ತಿಲ್ಲದ ಜಿಲ್ಲಾಧಿಕಾರಿ ಭೂಮಿ ಪರಿವರ್ತನೆ ಮಾಡಿಕೊಡುತ್ತಾರೆ.

ಮೂಲ ಸೌಕರ್ಯಗಳ ಕೊರತೆಯೂ ಭೂಸ್ವಾಧೀನಕ್ಕೆ ಅಡ್ಡಿಯಾಗುತ್ತದೆ. ಕೈಗಾರಿಕೆ ಸ್ಥಾಪಿಸುವ ಬಂಡವಾಳಗಾರರು ರಾಜ್ಯದ ಯಾವುದಾದರೊಂದು ಮೂಲೆಯಲ್ಲಿ ಉದ್ಯಮ ಸ್ಥಾಪಿಸಲು ಬಯಸುವುದಿಲ್ಲ. ರಸ್ತೆ, ನೀರು, ರೈಲು, ವಿಮಾನ ಸಂಪರ್ಕ ಇರುವ ಕಡೆಯೇ ಅವರಿಗೆ ಭೂಮಿ ಬೇಕು. ಉದಾಹರಣೆಗೆ ಇತ್ತೀಚೆಗೆ ಗದಗದಿಂದ ಪೋಸ್ಕೊ ಕಂಪೆನಿ ಕಾಲು ಕಿತ್ತಿತು.

ಇದಕ್ಕೆ ಮುಖ್ಯವಾದ ಕಾರಣ ನೀರು ಮತ್ತು ರೈಲು ಸಂಪರ್ಕ ಇಲ್ಲದೇ ಇರುವುದು. ಬೀದರ್, ಗುಲ್ಬರ್ಗ, ಯಾದಗಿರಿ, ವಿಜಾಪುರ ಮುಂತಾದ ಕಡೆ ಭೂಮಿ ಲಭ್ಯ ಇದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅಲ್ಲಿಗೆ ಹೋಗಲು ಯಾವುದೇ ಕಂಪೆನಿ ಬಯಸುವುದಿಲ್ಲ. ಗುಜರಾತ್‌ನಲ್ಲಿ ಯಾವುದೇ ಮೂಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ಮುಂದಾದರೂ ಅವರಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನೂ ಅಲ್ಲಿನ ಸರ್ಕಾರ ಒದಗಿಸುತ್ತದೆ. ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ.

ಕೆಲವು ಕಡೆ ಭೂಮಿಯನ್ನು ಕೊಡಲು ರೈತರು ಸಿದ್ಧರಿದ್ದಾರೆ. ಆದರೆ ಅವರು ಕೇಳಿದಷ್ಟು ಹಣವನ್ನು ನೀಡಲು ಸರ್ಕಾರ ಸಿದ್ಧವಿಲ್ಲ. ಭೂಸ್ವಾಧೀನ ನಿರ್ಧಾರವನ್ನು ಸರ್ಕಾರ ಶೀಘ್ರವಾಗಿ ಜಾರಿಗೊಳಿಸದೇ ಇರುವುದು ಕೂಡ ತೊಂದರೆಗೆ ಕಾರಣವಾಗುತ್ತಿದೆ. ಕೆಐಎಡಿಬಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕೈಗಾರಿಕೆಗಳಿಗೆ ಯೋಗ್ಯವಾದ ಭೂಮಿಯನ್ನು ಗುರುತಿಸುವುದಿಲ್ಲ. ಫಲವತ್ತಾದ ನೀರಾವರಿ ಜಮೀನುಗಳನ್ನೇ ಗುರುತಿಸುವುದರಿಂದ ಸಹಜವಾಗಿಯೇ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.

ಕೆಲವು ಕಡೆ ಚಳವಳಿಗಳೂ ನಡೆಯುತ್ತವೆ. ನ್ಯಾಯಾಲಯಕ್ಕೂ ಪ್ರಕರಣ ಹೋಗುತ್ತದೆ. ರೈತ ಸಂಘಟನೆಗಳೂ ಸಕ್ರಿಯವಾಗುತ್ತವೆ. ರೈತರ ಕನಸು ನನಸು ಮಾಡಲೆಂದು ವರುಣಾ ಕಾಲುವೆ ಮಾಡಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಈಗ ಅದೇ ಭೂಮಿಯನ್ನು ವಶಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಹೀಗಾದರೆ ರೈತರು ರೊಚ್ಚಿಗೇಳದೆ ಏನು ಮಾಡಿಯಾರು?

ಬಂಜರು ಭೂಮಿಯನ್ನು ಕೈಗಾರಿಕೆಗಳಿಗೆ ಕೊಟ್ಟರೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ. ಕೃಷಿ ಭೂಮಿ ನಾಶವಾಗುವುದು ತಪ್ಪುತ್ತದೆ. ಆಹಾರಧಾನ್ಯಗಳ ಉತ್ಪಾದನೆಗಳ ಮೇಲೂ ಪರಿಣಾಮ ಬೀರುವುದಿಲ್ಲ ಎಂದೂ ಹೇಳುವವರಿದ್ದಾರೆ. ಆದರೆ ಕೃಷಿಗೆ ಹೇಗೆ ನೀರು ಅಗತ್ಯವೋ ಹಾಗೆಯೇ ಕೈಗಾರಿಕೆಗೂ ಭಾರೀ ಪ್ರಮಾಣದ ನೀರು ಬೇಕು. ನೀರಿಲ್ಲದ ಬರಪೀಡಿತ ಪ್ರದೇಶಕ್ಕೆ ಹೋಗಲು ಯಾವುದೇ ಕೈಗಾರಿಕೋದ್ಯಮಿ ಬಯಸುವುದಿಲ್ಲ. ಬರಡು ಭೂಮಿಯಲ್ಲಿ ಕೈಗಾರಿಕೆಗಳಿಗೆ ಭೂಮಿ ಕೊಟ್ಟರೆ ಅಗತ್ಯ ಸೌಲಭ್ಯಗಳನ್ನು ನೀಡುವುದೂ ಸರ್ಕಾರದ ಜವಾಬ್ದಾರಿಯಾಗುತ್ತದೆ.

ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ರೈತ ಸ್ನೇಹಿಯೂ ಆಗಿರುವ ಮತ್ತು ಉದ್ಯಮಿಗಳಿಗೂ ಹಿತಕರವಾದ ಮಾರ್ಗಗಳನ್ನು ಹುಡುಕಬೇಕು. ಅವುಗಳಲ್ಲಿ ಕೆಲವು ಉಪಾಯಗಳೆಂದರೆ

* ನಗರಾಭಿವೃದ್ಧಿಗೆ ಭೂಸ್ವಾಧೀನ ಮಾಡಿ ಕೊಳ್ಳಲು 60:40 ಅನುಪಾತದ ಮಾದರಿಯನ್ನು ಅನುಸರಿಸಲು 2009ರಲ್ಲಿ ನಿರ್ಧರಿಸಲಾಯಿತು. ಇದೇ ಮಾದರಿಯನ್ನು ಕೈಗಾರಿಕಾ ಭೂ ಸ್ವಾಧೀನಕ್ಕೂ ವಿಸ್ತರಿಸಬೇಕು.

* ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ರೈತರನ್ನು ಒಳಗೊಂಡ  ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕು.
* ಕೈಗಾರಿಕೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವಾಗ ರೈತರಿಗೆ ಮಾರುಕಟ್ಟೆ ದರವನ್ನೇ ನೀಡಬೇಕು.

* ಜಮೀನು ಕಳೆದುಕೊಳ್ಳುವ ರೈತನಿಗೆ ಅಥವಾ ಆತನ ಕುಟುಂಬದ ಸದಸ್ಯರಿಗೆ ಕೈಗಾರಿಕೆಯಲ್ಲಿ ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಬೇಕು.

* ಕೈಗಾರಿಕೆಗೆ ಎಂದು ಭೂಮಿಯನ್ನು ಪಡೆದುಕೊಂಡರೆ ಅದನ್ನು ಕೈಗಾರಿಕೆಗೇ ಬಳಸಬೇಕು. ಅನ್ಯ ಉದ್ದೇಶಕ್ಕೆ ಬಳಸಿದರೆ ಭೂಮಿಯನ್ನು ವಾಪಸು ಪಡೆದುಕೊಂಡು ರೈತರಿಗೇ ನೀಡಬೇಕು.

* ಕೈಗಾರಿಕೆಗೆ ಬೇಕಾಗುವಷ್ಟು ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬೇಕು. ಭೂ ಬ್ಯಾಂಕ್ ಪದ್ಧತಿಯನ್ನು ರದ್ದು ಮಾಡಬೇಕು. ಕೈಗಾರಿಕೆಗಳು ಎಂದೋ ಬರುತ್ತವೆ ಎಂದು ಈಗಲೇ ಭೂಮಿ ವಶಪಡಿಸಿಕೊಂಡು ಅತ್ತ ಬೇಸಾಯವೂ ಇಲ್ಲ ಇತ್ತ ಕೈಗಾರಿಕೆಯೂ ಇಲ್ಲ ಎನ್ನುವಂತಾಗಬಾರದು.

* ಆಯಾ ಪ್ರದೇಶಗಳ ಸೌಲಭ್ಯ, ಕಚ್ಚಾ ವಸ್ತು ಲಭ್ಯತೆಯನ್ನು ನೋಡಿಕೊಂಡು ಕೈಗಾರಿಕೆಗಳಿಗೆ ಅನುಮತಿ ನೀಡಬೇಕು. ಕರಾವಳಿಯಲ್ಲಿ ಹಡಗು ನಿಲ್ದಾಣಗಳಿವೆ. ಈ ಸೌಲಭ್ಯ ಬಳಸಿಕೊಳ್ಳುವ ಕೈಗಾರಿಕೆಗಳಿಗೆ ಮಾತ್ರ ಅಲ್ಲಿ ಅವಕಾಶ ನೀಡಬೇಕು. ಉತ್ತರ ಕರ್ನಾಟಕದಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಆದ್ಯತೆ ನೀಡಬೇಕು. ಬೆಂಗಳೂರಿನಲ್ಲಿ ಐ.ಟಿ, ಬಿ.ಟಿ ಕಂಪೆನಿಗಳಿಗೆ ಅವಕಾಶ ನೀಡಬಹುದು.

* ಬಂಡವಾಳ ಆಕರ್ಷಣೆಗೆ ಮೇಳಗಳನ್ನು ನಡೆಸುವುದನ್ನು ಬಿಟ್ಟು ನಿಜವಾಗಿಯೂ ಕೈಗಾರಿಕೆಗಳನ್ನು ಸ್ಥಾಪಿಸಿ ತಾವೂ ಉದ್ಧಾರವಾಗುವುದರ ಜೊತೆಗೆ ಆಯಾ ಪ್ರದೇಶದ ಜನರನ್ನೂ ಉದ್ಧಾರ ಮಾಡುವ ಕಂಪೆನಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
(ಲೇಖಕರು  ಕಾಳಜಿಯುಳ್ಳ ಮತ್ತು ಪ್ರಜ್ಞಾವಂತ ನಾಗರಿಕರ ಸಂಘದ (ಎಸಿಐಸಿಎಂ) ಸಂಚಾಲಕ,  ಮೈಸೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT