ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕೊ ಬೆಳೆಯತ್ತ ಶಿರಸಿ ರೈತರ ಚಿತ್ತ

Last Updated 1 ಜುಲೈ 2013, 8:19 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ಬೆಲೆ ನೆಲಕಚ್ಚಿದಾಗ ರೈತರಲ್ಲಿ ಭರವಸೆ ಮೂಡಿಸಿದ್ದು ಉಪಬೆಳೆಯಾದ ಕೊಕೊ. ಕೊಕೊ ಕೃಷಿಕರ ನಿರೀಕ್ಷೆಯನ್ನು ಹುಸಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಕೊಕೊ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಕೃಷಿಕರು ಅಡಿಕೆ ಮರಗಳಿಗೆ ಸಂಗಾತಿಯಾಗಿ ತೋಟದಲ್ಲಿ ಕೊಕೊ ಗಿಡ ಬೆಳೆಸಿದ್ದಾರೆ.

ಇದು ಕೊಕೊ ಬೆಳೆಯ ಹಂಗಾಮು. ಮೇ ನಿಂದ ಪ್ರಾರಂಭವಾಗುವ ಕೊಕೊ ಕೊಯ್ಲು ನವೆಂಬರ್ ವರೆಗೂ ಮುಂದುವರೆಯುತ್ತದೆ. ಕಾಯಿ ಬಲಿತ ಹಾಗೆ ರೈತರು ಮಾರುಕಟ್ಟೆ ತರುತ್ತಾರೆ. ಎಪಿಎಂಸಿ ಆವರಣದಲ್ಲಿರುವ ಕದಂಬ ಮಾರ್ಕೆಟಿಂಗ್ ಕೋ ಆಪರೇಟಿವ್ ಹಾಗೂ ಕ್ಯಾಡ್ಬರಿ ಸಂಸ್ಥೆ ಘಟಕದ ಮೇಲಿನ ಭಾಗದಲ್ಲಿ ಕೊಕೊ ಖರೀದಿಸುತ್ತವೆ.

ನಾಲ್ಕಾರು ವರ್ಷಗಳ ಈಚೆಗೆ ರೈತರು ಕೊಕೊ ಕೃಷಿಯಲ್ಲಿ ಉತ್ಸುಕರಾಗಿದ್ದಾರೆ. ಹೀಗಾಗಿ ಕೊಕೊ ಬೆಳೆಯ ಪ್ರದೇಶ ವಿಸ್ತರಣೆಯಾಗಿ ದೊಡ್ಡ ಪ್ರಮಾಣದಲ್ಲಿ ಕೊಕೊ ಬೀಜ ಮಾರುಕಟ್ಟೆಗೆ ಬರುತ್ತಿದೆ.

ಒಂದು ಎಕರೆ ಅಡಿಕೆ ತೋಟದಲ್ಲಿ 200 ಕೊಕೊ ಸಸಿ ನಾಟಿ ಮಾಡಿದರೆ ನಾಲ್ಕು ವರ್ಷಗಳಲ್ಲಿ ಗಿಡ ತುಂಬ ಕಾಯಿ ಬಿಡುತ್ತದೆ. ಒಂದು ಹಂಗಾಮಿನಲ್ಲಿ ಇದರಿಂದ ಕನಿಷ್ಠ 35,000 ರೂಪಾಯಿ ಆದಾಯ ಪಡೆಯಬಹುದು. ಪ್ರಸ್ತುತ ಹಂಗಾಮಿನಲ್ಲಿ ಒಂದು ಕೆ.ಜಿ. ಕೊಕೊ ಬೀಜಕ್ಕೆ 34ರಿಂದ 35ರೂಪಾಯಿ ಬೆಲೆ ಇದೆ.

ಕದಂಬ ಮಾರ್ಕೆಟಿಂಗ್ ದೊಡ್ಡ ಪ್ರಮಾಣದಲ್ಲಿ ಕೊಕೊ ಖರೀದಿಸುತ್ತಿದೆ. ಆದರೆ ಸಣ್ಣ ಪ್ರಮಾಣದ 100 ಗ್ರಾಂ ಬೀಜವನ್ನು ರೈತರು ಮಾರಾಟಕ್ಕೆ ತಂದರೂ ಅವರನ್ನು ವಾಪಸ್ ಕಳುಹಿಸುವುದಿಲ್ಲ. ಹಿಂದಿನ ವರ್ಷ 600ರಷ್ಟು ರೈತರಿಂದ 1200 ಕ್ವಿಂಟಾಲ್ ಬೀಜ ಖರೀದಿಸಿದ್ದ ಕದಂಬ ಪ್ರಸಕ್ತ ಸಾಲಿನಲ್ಲಿ 2000 ಕ್ವಿಂಟಾಲ್ ಗುರಿ ತಲುಪುವ ನಿರೀಕ್ಷೆಯಲ್ಲಿದೆ. ಇಲ್ಲಿನ ಕ್ಯಾಡ್ಬರಿ ಖರೀದಿ ಘಟಕದಲ್ಲಿ ಹಿಂದಿನ ವರ್ಷ 500 ಕ್ವಿಂ. ಕೊಕೊ ಬೀಜ ಖರೀದಿಯಾಗಿದ್ದರೆ ಈ ವರ್ಷ ಇಲ್ಲಿಯ ತನಕ ಸುಮಾರು 300ಕ್ವಿಂಟಲ್ ಖರೀದಿಯಾಗಿದೆ.

`2010ರ ವರೆಗೆ ಕೆಲವೇ ರೈತರ ತೋಟದಲ್ಲಿ ಮಾತ್ರ ಕೊಕೊ ಬೆಳೆ ಇತ್ತು. ಇಂದು ಕೊಕೊ ಬಹುತೇಕ ಎಲ್ಲ ಅಡಿಕೆ ತೋಟಗಳಲ್ಲೂ ಸ್ಥಾನ ಪಡೆದಿದೆ. ಕದಂಬ ಮಾರ್ಕೆಟಿಂಗ್ ಎಂಟು ವರ್ಷಗಳಿಂದ ಕೊಕೊ ಬೆಳೆ ಪ್ರೋತ್ಸಾಹಿಸುತ್ತ ಬಂದಿದ್ದು, ಸುಮಾರು 3.70 ಲಕ್ಷ ಸಸಿಗಳನ್ನು ರೈತರಿಗೆ ನೀಡಿದೆ. ಹಿಂದಿನ ವರ್ಷ 20ಸಾವಿರ ಸಸಿಯನ್ನು ಕಡಿಮೆ ದರದಲ್ಲಿ ರೈತರಿಗೆ ಒದಗಿಸಿದ್ದು, ಈ ಬಾರಿ ಈಗಾಗಲೇ 10ಸಾವಿರ ಸಸಿ ಖರೀದಿಯಾಗಿವೆ. ರೈತರು ಸಸಿಗಳನ್ನು ಮುಂಗಡ ಕಾಯ್ದಿಡುತ್ತಾರೆ. ಸಸಿಗಳು ಎರಡೇ ದಿನಗಳಲ್ಲಿ ಖಾಲಿಯಾಗಿ ಬಿಡುತ್ತವೆ' ಎನ್ನುತ್ತಾರೆ ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ.

ಚಾಕಲೇಟ್ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವ ಕೊಕೊಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆ ಇದೆ. ಹೀಗಾಗಿ ಕೊಕೊ ಬೆಳೆಯ ಬೇಡಿಕೆ ಕಡಿಮೆಯಾಗಲಾರದು. ಕೊಕೊ ರೈತರಿಗೆ ಉಪ ಆದಾಯ ತರುವ ಉತ್ತಮ ಬೆಳೆಯಾಗಿದೆ. ರೈತರಿಂದ ಖರೀದಿಸಿದ ಕೊಕೊ ಬೀಜವನ್ನು ಕದಂಬ ಮಾರ್ಕೆಟಿಂಗ್ ಕ್ಯಾಂಪ್ಕೋ ಸಂಸ್ಥೆಗೆ ಪೂರೈಕೆ ಮಾಡುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT