ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ ಕೊರತೆ ನೀಗಿಸಲು ಆಗ್ರಹ

Last Updated 7 ಜನವರಿ 2012, 10:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಹಲವು ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದ್ದು, ಶಿಕ್ಷಣ ಸಚಿವರು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮನವಿ ಮಾಡಿದರು. ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರದ ಬಾಲಕರ ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೊಠಡಿಗಳ ಕೊರತೆ ಉಂಟಾಗಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ನಗರದಲ್ಲಿ ಇನ್ನೊಂದು ಬಾಲಕರ ಮತ್ತು ಬಾಲಕಿಯರ ಕಾಲೇಜು ಮಂಜೂರು ಮಾಡಬೇಕು ಎಂದು ಕೋರಿದರು.

ಜಿಲ್ಲೆಯಲ್ಲಿ ಶಿಕ್ಷಕರ ವೈದ್ಯಕೀಯ ಬಿಲ್‌ಗಳ ಮರುಪಾವತಿಯಾಗದೆ ಬಾಕಿ ಉಳಿದಿವೆ. ಬಿಲ್ ಮರುಪಾವತಿ ವಿಳಂಬವಾಗುತ್ತಿರುವುದರಿಂದ ಶಿಕ್ಷಕರು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸದಾ ಬರಪೀಡಿತ ತಾಲ್ಲೂಕುಗಳಾದ ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಶಿಕ್ಷಕರ ಕೊರತೆಯಿದೆ. ಈ ಸಮಸ್ಯೆಯನ್ನು ಸಚಿವರು ಬಗೆಹರಿಸಬೇಕು. ಜತೆಗೆ ನಗರ ಸಮೀಪದಲ್ಲೇ ಇರುವ ಮದಕರಿಪುರ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಭಾಗಗಳಲ್ಲಿ ಪ್ರೌಢಶಾಲೆಗಳೇ ಇಲ್ಲ. ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೋರಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ವಿದ್ಯಾರ್ಥಿಗಳು ಅಂಕಪಟ್ಟಿಗೆ ಮಾತ್ರ ಗಮನ ನೀಡಬಾರದು. ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡಬೇಕು ಮತ್ತು ಪ್ರತಿಭಾ ಕೌಶಲ ಪ್ರದರ್ಶಿಸಲು ವಿಶೇಷ ಆಕರ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇಂದು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಶೋಚನೀಯ ಸಂಗತಿ. ಆದರೆ, ಮುಚ್ಚುವ ಸ್ಥಿತಿ ಏಕೆ ಬಂತು ಎನ್ನುವ ಬಗ್ಗೆ ಚಿಂತನೆ ಮಾಡಬೇಕು. ಸರ್ಕಾರ ಕನ್ನಡ ಶಾಲೆ ಉಳಿಸುವ ಪ್ರಯತ್ನ ಮಾಡಬೇಕು ಮತ್ತು ಇಂಗ್ಲಿಷ್ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಎಂದು ಪ್ರತಿಪಾದಿಸಿದರು.

ಸರ್ಕಾರದ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಜಿ.ಪಂ. ಉಪಾಧ್ಯಕ್ಷೆ ವಿಜಯಮ್ಮ ಎಂ. ಜಯಣ್ಣ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ, ತಾ.ಪಂ. ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್, ಜಿ.ಪಂ. ಸಿಇಒ ಎನ್. ಜಯರಾಂ, ಡಿಡಿಪಿಐ ಎಚ್. ಮಂಜುನಾಥ್, ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಪಿ. ಹನುಮಂತರಾಯಪ್ಪ, ತಹಶೀಲ್ದಾರ್ ಕುಮಾರಸ್ವಾಮಿ, ಡಯೆಟ್ ಪ್ರಾಂಶುಪಾಲ ಎಂ. ಮಲ್ಲಣ್ಣ ಹಾಗೂ ಜಿ.ಪಂ. ಸದಸ್ಯರು ಮತ್ತಿತರರು ಹಾಜರಿದ್ದರು.

ದಿಢೀರ್ ವಿಷಯ ಬದಲು
ಸ್ಪರ್ಧೆಯಲ್ಲಿ ದಿಢೀರನೆ ವಿಷಯ ಬದಲಾಗಿರುವುದನ್ನು ಕಂಡು ವಿದ್ಯಾರ್ಥಿನಿಯೊಬ್ಬರು ಸಾಂಕೇತಿಕವಾಗಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯ ಸದ್ಗುರು ಪ್ರೌಢಶಾಲೆ ವಿದ್ಯಾರ್ಥಿನಿ ಲಲಿತಾ ಅಂಗಿರಸ ಅವರು ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದರು.  `ಸೌರಶಕ್ತಿ ಬಳಕೆಯ ಪ್ರಾಮುಖ್ಯತೆ~ ಕುರಿತು ಭಾಷಣ ಸಿದ್ಧಪಡಿಸಿಕೊಂಡಿದ್ದರು. ಇದೇ ವಿಷಯದ ಭಾಷಣ ಮಾಡುವಂತೆ ಶಿಕ್ಷಣಾಧಿಕಾರಿ ಸೂಚಿಸಿದ್ದರು. ಇದೇ ವಿಷಯದ ಬಗ್ಗೆ ಜಿಲ್ಲಾಮಟ್ಟದಲ್ಲಿ ಭಾಷಣ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಆದರೆ, ಶುಕ್ರವಾರ ವೇದಿಕೆ ಏರಿದಾಗ `ಪ್ರೌಢಶಾಲೆಗಳಲ್ಲಿ ಮೌಲ್ಯ ಶಿಕ್ಷಣ~ ವಿಷಯ ನಿಗದಿಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದಾಗ ಲಲಿತಾ ದಿಗ್ಭ್ರಮೆಗೊಂಡರು. ಈ ಬಗ್ಗೆ ಮಾಹಿತಿ ಇಲ್ಲ. ಭಾಷಣ ಮಾಡುವುದಿಲ್ಲ ಎಂದು ವೇದಿಕೆಯಿಂದ ಕೆಳಗಿಳಿದರು.

ಡಿ. 26ರಂದು ವಿಷಯ ಬದಲಾಗಿರುವ ಸುತ್ತೋಲೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ತಲುಪಿಲ್ಲ. ಇಲಾಖೆ ಅಧಿಕಾರಿ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಪೋಷಕರು ಅಸಮಾಧಾನ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT