ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಅಂತರ ಕೇರಿ ಮೇಳ ಸಂಭ್ರಮ

Last Updated 14 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಡಿಕೇರಿ: ಸಂಘಟನೆ ಜೊತೆಗೆ, ಕೊಡವರ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ನಡೆದ ನಾಲ್ಕನೇ ಕೊಡವ ಅಂತರ ಕೇರಿ ಮೇಳದಲ್ಲಿ ‘ಮಂಜಿನ ನಗರಿ’ಯ ವಿವಿಧ ಬಡಾವಣೆಗಳಲ್ಲಿ ನೆಲೆಸಿರುವ ಕೊಡವರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಸುದರ್ಶನ ಕೊಡವ ಕೇರಿ, ಇಗ್ಗುತಪ್ಪ ಕೊಡವ ಕೇರಿ, ಗಣಪತಿ ಕೊಡವ ಕೇರಿ, ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘ, ರಾಣಿಪೇಟೆ ಕೊಡವ ಕೇರಿ, ಸುಬ್ರಹ್ಮಣ್ಯ ಕೊಡವ ಕೇರಿ, ಕಾವೇರಿ ಕೊಡವ ಕೇರಿ, ದೇಚೂರು ಕೊಡವ ಕೇರಿ ಸಂಘ, ಮುತ್ತಪ್ಪ ಕೊಡವ ಸಂಘ, ವಿನಾಯಕ ಕೊಡವ ಕೇರಿ, ಎಫ್‌ಎಂಸಿ ಕೊಡವ ಕೇರಿಗಳ ಸಂಯುಕ್ತ ಆಶ್ರಯದಲ್ಲಿ ಈ ಅಂತರ ಕೇರಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಸಮಾಜ ಬಾಂಧವರು ಸಾಂಪ್ರದಾಯಿಕ ಉಡುಗೆಯಲ್ಲಿ ಕೊಡವ ಸಮಾಜದ ಬಳಿ ಸೇರಿ, ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಪುರುಷರು ಕೋವಿ ಹಿಡಿದು ಸಾಗಿದರೆ, ಮಹಿಳೆಯರು ವಿಶಿಷ್ಟ ದಿರಿಸಿನಲ್ಲಿ ಗಮನ ಸೆಳೆದರು. ಮೆರವಣಿಗೆಯ ನಂತರ ಕೊಡವ ಸಮಾಜದಲ್ಲಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿವಿಧ ಕೇರಿಗಳ ಕೊಡವ ಬಾಂಧವರು ಖುಷಿಯಿಂದ ಪಾಲ್ಗೊಂಡಿದ್ದರು. ಬೊಳಕಾಟ್, ಕೋಲಾಟ್, ಪರೆಯಕಳಿ, ಉಮ್ಮತ್ತಾಟ್, ಕಪ್ಪೆಯಾಟ್, ವಾಲಗತಾಟ್, ಕೊಡವ ಪಾಟ್ ಮತ್ತಿತರ ಸ್ಪರ್ಧೆಗಳು ಜರುಗಿದವು.

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಪ್ರಮೀಳಾ ಅಯ್ಯಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸುರೇಶ್ ಚಂಗಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಸದಸ್ಯೆ ಬಾಚರಣಿಯಂಡ ರಾಣು ಅಪ್ಪಣ್ಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT